AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊಹ್ಲಿಯನ್ನು ಔಟ್ ಮಾಡುವುದಷ್ಟೇ ನಮ್ಮ ಉದ್ದೇಶ, ಮೂದಲಿಕೆ ಸರ್ವಥಾ ಮಾಡುವುದಿಲ್ಲ: ಲ್ಯಾಂಗರ್

ಆಸ್ಟ್ರೇಲಿಯ ಟೀಮಿನ ಕೋಚ್ ಜಸ್ಟಿನ್ ಲ್ಯಾಂಗರ್ ಪ್ರಸಕ್ತ ಟೆಸ್ಟ್ ಸರಣಿಯಲ್ಲಿ, ಅಸ್ಟ್ರೇಲಿಯಾದ ಬೌಲರ್​ಗಳು ವಿರಾಟ್​ ಕೊಹ್ಲಿಯನ್ನು ಸ್ಲೆಡ್ಜಿಂಗ್ ಮೂಲಕ ಏಕಾಗ್ರತೆ ವಿಚಲಿತಗೊಳಿಸುವ ಬದಲು ಅವರನ್ನು ರನ್ ಗಳಿಸದಂತೆ ಕಟ್ಟಿಹಾಕುವ ಬಗ್ಗೆ ಯೋಚಿಸಲಿದ್ದಾರೆಂದು ಹೇಳಿದ್ದಾರೆ.

ಕೊಹ್ಲಿಯನ್ನು ಔಟ್ ಮಾಡುವುದಷ್ಟೇ ನಮ್ಮ ಉದ್ದೇಶ, ಮೂದಲಿಕೆ ಸರ್ವಥಾ ಮಾಡುವುದಿಲ್ಲ: ಲ್ಯಾಂಗರ್
ಶತಕ ಬಾರಿಸಿ ವಿಜೃಂಭಿಸುತ್ತಿರುವ ವಿರಾಟ್​ ಕೊಹ್ಲಿ
ಅರುಣ್​ ಕುಮಾರ್​ ಬೆಳ್ಳಿ
| Updated By: Ghanashyam D M | ಡಿ.ಎಂ.ಘನಶ್ಯಾಮ|

Updated on: Dec 15, 2020 | 7:34 PM

Share

ಎದುರಾಳಿ ತಂಡದ ಪ್ರಮುಖ ಆಟಗಾರರನ್ನು ಆಟಗಾರರನ್ನು ಮೂದಲಿಸಿ (ಸ್ಲೆಡ್ಜಿಂಗ್) ಅವರ ಏಕಾಗ್ರತೆಗೆ ಭಂಗವನ್ನುಂಟು ಮಾಡುವುದು ಆಸ್ಟ್ರೇಲಿಯ ಕ್ರಿಕೆಟ್​ನ ಅವಿಭಾಜ್ಯ ಅಂಗ. ಭಾರತೀಯರ ಪೈಕಿ ಸುನಿಲ್ ಗವಾಸ್ಕರ್, ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ ಮೊದಲಾದವರನ್ನು ಅಸ್ಟ್ರೇಲಿಯನ್​ ಆಟಗಾರರು ಟಾರ್ಗೆಟ್ ಮಾಡಿದ್ದಾರೆ. ಆದರೆ, ಫಾರ್ ಅ ಚೇಂಜ್, ಅವರು ಈ ಬಾರಿ ತಮ್ಮ ವರಸೆಯನ್ನು ಬಿಟ್ಟುಬಿಡಬೇಕೆಂದುಕೊಂಡಿದ್ದಾರಂತೆ!

ಮಂಗಳವಾರದಂದು, ಅಡಿಲೇಡ್​ನಲ್ಲಿ ಸುದ್ದಿಗಾರರೊಂದಿಗೆ ಮಾತಾಡಿದ ಅಸ್ಟ್ರೇಲಿಯ ಟೀಮಿನ ಕೋಚ್ ಜಸ್ಟಿನ್ ಲ್ಯಾಂಗರ್, ವಿರಾಟ್​ ಕೊಹ್ಲಿಯನ್ನು ಮೂದಲಿಸುವ ಗೋಜಿಗೆ ಹೋಗುವುದಿಲ್ಲ, ಅದಕ್ಕೆ ಬದಲಾಗಿ ಅವರು ಔಟ್​ ಮಾಡುವ ಬಗ್ಗೆ ಯೋಚಿಸಲಿದ್ದೇವೆ ಎಂದಿದ್ದಾರೆ.

‘ವಿರಾಟ್, ಒಬ್ಬ ಶ್ರೇಷ್ಠ ಆಟಗಾರ, ಅವರನ್ನು ಮೂದಲಿಸಿ ಅವರ ಏಕಾಗ್ರತೆ ಭಂಗ ತರುವ ಉದ್ದೇಶ ನಮಗಿಲ್ಲ. ಆಟ ನಡೆಯುವಾಗ ಎದುರಾಳಿ ಆಟಗಾರನನ್ನು ಮೂದಲಿಸುವುದು ಹೇವರಿಕೆ ಹುಟ್ಟಿಸುವ ಸಂಗತಿ. ನಮ್ಮ ಆಟಗಾರರು ಭಾವನೆಗಳ ಮೇಲೆ ಆತುಕೊಳ್ಳದೆ, ಕೊಹ್ಲಿಯನ್ನು ಔಟ್​ ಮಾಡುವ ವಿಧಾನದ ಬಗ್ಗೆ ಯೋಚಿಸಲಿದ್ದಾರೆ. ಆಡುವಾಗ ಭಾವನೆಗಳ ಮೇಲೆ ನಿಯಂತ್ರಣವಿಟ್ಟುಕೊಳ್ಳಬೇಕೆಂದು ನಮ್ಮ ಆಟಗಾರರರಿಗೆ ಹೇಳಿದ್ದೇನೆ. ಕೊಹ್ಲಿ ಶ್ರೇಷ್ಠ ಬ್ಯಾಟ್ಸ್​ಮನ್ ಆಗಿರುವಂತೆಯೇ ಶ್ರೇಷ್ಠ ನಾಯಕನೂ ಆಗಿದ್ದಾರೆ. ಅವರ ಆಟದ ಬಗ್ಗೆ ನನಗೆ ಅಪಾರ ಗೌರವವಿದೆ. ಅವರನ್ನು ಔಟ್​ ಮಾಡುವ ವಿಧಾನಗಳ ಹೊರತು ನಾವು ಬೇರೆ ಏನನ್ನೂ ಮಾಡುವುದಿಲ್ಲ. ಆ ಯೋಜನೆಗಳನ್ನು ನಾವು ಈಗಾಗಲೇ ಮಾಡಿಕೊಂಡಿದ್ದೇವೆ’ ಎಂದು ಲ್ಯಾಂಗರ್ ಹೇಳಿದರು.

ಆಸ್ಟ್ರೇಲಿಯ ಕೋಚ್ ಜಸ್ನ್ಟಿನ್ ಲ್ಯಾಂಗರ್

‘ಕೊಹ್ಲಿಯಂಥ ಆಟಗಾರನಿಗೆ ಬೌಲ್ ಮಾಡುವಾಗ ಕೇವಲ ಯೋಜನೆಗಳನ್ನು ಮಾಡಿಕೊಂಡರೆ ಸಾಕಾಗದು. ಅವುಗಳನ್ನು ನಾವು ಯಶಸ್ವೀಯಾಗಿ ಕಾರ್ಯರೂಪಕ್ಕೆ ತರಬೇಕಾಗುತ್ತದೆ. ಅವರ ಬಗ್ಗೆ ನಮಗೆ ಚೆನ್ನಾಗಿ ಗೊತ್ತಿದೆ ಮತ್ತು ಅವರು ಸಹ ನಮ್ಮನ್ನು ಚೆನ್ನಾಗಿ ಅರ್ಥಮಾಡಿಕೊಂಡಿದ್ದಾರೆ. ಅವರು ರನ್ ಗಳಿಸದಂತೆ ಕಟ್ಟಿಹಾಕುವುದು ನಮ್ಮ ಉದ್ದೇಶವಾಗಿರಲಿದೆ. ನಮ್ಮ ವೇಗದ ಬೌಲರ್​ಗಳು ಮತ್ತು ಕೊಹ್ಲಿ ನಡುವೆ ಭರ್ಜರಿ ಹಣಾಹಣಿ ನಡೆಯಲಿದೆ. ಹಾಗೆಯೇ, ಭಾರತದ ವೇಗದ ಬೌಲರ್​ಗಳು ಮತ್ತು ಆಸ್ಟ್ರೇಲಿಯಾದ ಬ್ಯಾಟ್ಸ್​ಮನ್​ಗಳ ನಡುವೆಯೂ ರೋಚಕ ಸೆಣಸಾಟ ನಡೆಯಲಿದೆ’ ಎಂದು ಲ್ಯಾಂಗರ್ ಹೇಳಿದರು.

ಅಡಿಲೇಡ್​ನಲ್ಲಿ ನಡೆಯುವ ಮೊದಲ ಟೆಸ್ಟ್ ಮುಕ್ತಾಯಗೊಂಡ ನಂತರ ಕೊಹ್ಲಿ ಸ್ವದೇಶಕ್ಕೆ ಮರಳಲಿದ್ದು ಅವರ ಸ್ಥಾನದಲ್ಲಿ ಅಜಿಂಕ್ಯಾ ರಹಾನೆ ಟೀಮಿನ ನಾಯಕತ್ವ ವಹಿಸಲಿದ್ದಾರೆ.