70 ಮತ್ತು 80 ರ ದಶಕದಲ್ಲಿ ಕ್ರಿಕೆಟ್ ವಿಶ್ವವನ್ನು ಭೀತಿಗೊಳಪಡಿಸಿದ್ದ ವೆಸ್ಟ್ ಇಂಡೀಸ್, ನಂತರದ ದಿನಗಳಲ್ಲಿ ಬ್ರಿಯಾನ್ ಲಾರಾ, ಕರ್ಟ್ಲೀ ಆ್ಯಂಬ್ರೋಸ್, ಕರ್ಟ್ನೀ ವಾಲ್ಷ್, ಕ್ರಿಸ್ ಗೇಲ್, ಶಿವನಾರಾಯನ್ ಚಂದ್ರಪಾಲ್, ಮುಂತಾದ ಸೂಪರ್ ಸ್ಟಾರ್ ಬ್ಯಾಟ್ಸ್ಮನ್ ಮತ್ತು ಬೌಲರ್ಗಳನ್ನು ಸೃಷ್ಟಿಮಾಡಿದರೂ ಅದರ ಗತವೈಭವ ಪುನಃ ನೋಡಸಿಗುತ್ತಿಲ್ಲ. ಈಗಿನ ಟೀಮನ್ನು ಸೋಲಿಸುವುದು ದುರ್ಬಲ ತಂಡಗಳಿಗೂ ಸುಲಭವಾಗಿದೆ.
ಇದನ್ನ ಯಾಕೆ ಹೇಳಬೇಕಾಗಿದೆಯೆಂದರೆ, ನ್ಯೂಜಿಲೆಂಡ್ ಪ್ರವಾಸದಲ್ಲಿರುವ ವಿಂಡೀಸ್ ತಂಡ ಹ್ಯಾಮಿಲ್ಟನ್ನ ಸ್ನೆಡೆನ್ ಪಾರ್ಕ್ನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಅತಿಥೇಯರನ್ನು ಎದುರಿಸುತ್ತಿದೆ. ಪಂದ್ಯದ ಮೂರನೇ ದಿನವಾದ ಇಂದು ವಿಂಡೀಸ್ 16 ವಿಕೆಟ್ಗಳನ್ನು ಕಳೆದುಕೊಂಡಿದೆ. ಹೌದು ನೀವು ಓದಿದ್ದು ಸರಿ; ವಿಂಡೀಸ್ನ ಕೆಳ ಕ್ರಮಾಂಕದ ಬ್ಯಾಟ್ಸ್ಮನ್ ಜರ್ಮೈನ್ ಬ್ಲ್ಯಾಕ್ವುಡ್ (ಅಜೇಯ 80, 9X4 2×6) ವೇಗದ ಬೌಲರ್ ಅಲ್ಜರಿ ಜೊಸೆಫ್ (ಅಜೇಯ 59 9×4 1×6) ಮುರಿಯದ 7 ನೇ ವಿಕೆಟ್ಗೆ ಅವರು 110 ರನ್ಗಳನ್ನು ಸೇರಿಸದೆ ಹೋಗಿದ್ದರೆ ಮೊದಲ ಟೆಸ್ಟ್ ಇವತ್ತೇ ಮುಗಿದುಹೋಗುತ್ತಿತ್ತು.
ಹಾಗೆ ನೋಡಿದರೆ, ಸ್ನೆಡೆನ್ ಪಾರ್ಕ್ನಲ್ಲಿರುವ ಪಿಚ್ ಬೌಲರ್ಗಳ ಗಣಿಪ್ರದೇಶವೇನೂ ಅಲ್ಲ. ಇದೇ ಪಿಚ್ ಮೇಲೆ ಮೊದಲು ಬ್ಯಾಟ್ ಮಾಡಿದ ಅತಿಥೇಯರು ಕೇವಲ ಒಂದೂವರೆಗಳ ದಿನ ಆಟದಲ್ಲಿ 7/519 ಬೃಹತ್ ಮೊತ್ತ ಪೇರಿಸಿ ಡಿಕ್ಲೇರ್ ಮಾಡಿಕೊಂಡಿತು. ನಾಯಕ ಕೇನ್ ವಿಲಿಯಮ್ಸನ್ ತಮ್ಮ ಕರೀಯರ್-ಬೆಸ್ಟ್ 251 ರನ್ ಗಳಿಸಿ ಔಟಾದರೆ, ಓಪನರ್ ಟಾಮ್ ಲಾಥಮ್ 86 ರನ್ ಗಳಿಸಿದರು.
ಎರಡನೆ ದಿನದಾಟದಲ್ಲಿ ಅಂದರೆ ನಾಯಕ ವಿಲಿಯಮ್ಸನ್ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡ ನಂತರ ವಿಂಡೀಸ್ ಆರಂಭಿಕ ಬ್ಯಾಟ್ಸ್ಮನ್ಗಳು ಯಾವುದೆ ಅಳುಕಿಲ್ಲದೆ, ಆತ್ಮವಿಶ್ವಾಸದಿಂದ ಕಿವಿ ವೇಗದ ಬೌಲರ್ಗಳನ್ನು ಎದುರಿಸಿದರಲ್ಲದೆ ದಿನದಾಟ ಕೊನೆಗೊಳ್ಳುವವರೆಗೆ ಬೇರ್ಪಡಲಿಲ್ಲ. 24 ಓವರ್ಗಳನ್ನು ಅವರು ನಿರಾತಂಕದಿಂದ ಎದುರಿಸಿ ಮೊದಲ ವಿಕೆಟ್ಗೆ 53 ರನ್ ಸೇರಿಸಿದರು.
ಆದರೆ, ಮೂರನೆ ದಿನ ಮೋಡ ಮುಸುಕಿದ ವಾತಾವರಣದ ಸಂಫೂರ್ಣ ಲಾಭ ಪಡೆದ ನ್ಯೂಜಿಲೆಂಡ್ ವೇಗದ ಬೌಲರ್ಗಳು ಪಟಪಟನೆ ಪ್ರವಾಸಿ ತಂಡದ ಬ್ಯಾಟ್ಸ್ಮನ್ಗಳನ್ನು ಔಟ್ ಮಾಡಿದರು. ವಿಂಡೀಸ್ ಕೇವಲ 138ರನ್ ಗಳಿಸಿ ತನ್ನೆಲ್ಲ ವಿಕೆಟ್ ಕಳೆದುಕೊಂಡಿತು. ಓಪನರ್ಸ್ ಕ್ರೇಗ್ ಬ್ರಾಥ್ವೈಟ್ 21, ಮತ್ತು ಜಾನ್ ಕ್ಯಾಂಬೆಲ್, ಹಾಗೂ ಕೆಳ ಕ್ರಮಾಂಕದ ಆಟಗಾರರಾದ ಬ್ಲ್ಯಾಕ್ವುಡ್ 23 ಮತ್ತು ನಾಯಕ ಜೇಸನ್ ಹೋಲ್ಡರ್ 25 ಅವರನ್ನು ಹೊರತುಪಡಿಸಿದರೆ ಉಳಿದೆಲ್ಲ ಬ್ಯಾಟ್ಸ್ಮನ್ಗಳು ಕ್ರೀಸಿಗೆ ಭೇಟಿ ನೀಡಿ ಪೆವಿಲಿಯನ್ಗೆ ವಾಪಸ್ಸಾದರು. ಅತಿಥೇಯರ ಪರ ಟಿಮ್ ಸೌಥಿ 4/35, ಕೈಲ್ ಜೇಮಿಸನ್ 2/33, ನೀಲ್ ವ್ಯಾಗ್ನರ್ 2/33 ಮತ್ತು ಟ್ರೆಂಟ್ ಬೌಲ್ಟ್ 1/30 ಬೌಲಿಂಗ್ನಲ್ಲಿ ಮೆರೆದರು.
381 ರನ್ಗಳಿಂದ ಹಿಂದುಳಿದ ವಿಂಡೀಸ್ ಮೇಲೆ ವಿಲಿಯಮ್ಸನ್ ಫಾಲೋ-ಆನ್ ಹೇರಿದರು, ಆದರೆ ಎರಡನೇ ಇನ್ನಿಂಗ್ಸ್ನಲ್ಲಿ ಪ್ರವಾಸಿಗರ ಪ್ರದರ್ಶನ ಇನ್ನೂ ಕಳಪೆಯಾಗಿತ್ತ್ತು. 89 ರನ್ಗಳಾಗಿವುಷ್ಟರಲ್ಲಿ ಅದರ 6 ಪ್ರಮುಖ ಬ್ಯಾಟ್ಸ್ಮನ್ಗಳು ಔಟಾದರು. ಆದರೆ 7 ನೇ ವಿಕೆಟ್ಗೆ ಜೊತೆಗೂಡಿದ ಬ್ಲ್ಯಾಕ್ವುಡ್ ಮತ್ತು ಜೊಸೆಫ್ ಆಕ್ರಮಣಕಾರಿ ಆಟವಾಡತೊಡಗಿ ಕೇವಲ 20 ಓವರ್ಗಳಲ್ಲಿ 110 ರನ್ ಸೇರಿಸಿದರಲ್ಲದೆ ಪಂದ್ಯವನ್ನು ನಾಲ್ಕನೆ ದಿನಕ್ಕೆ ಒಯ್ದರು. ಇಂದಿನ ಆಟ ಕೊನೆಗೊಂಡಾಗ ವಿಂಡೀಸ್ ಸ್ಕೋರ್ 196/6 ಆಗಿತ್ತು.
ಇನ್ನಿಂಗ್ಸ್ ಸೋಲಿನಿಂದ ತಪ್ಪಿಸಿಕೊಳ್ಳಲು ವೆಸ್ಟ್ ಇಂಡೀಸ್ಗೆ ಇನ್ನೂ 185 ರನ್ಗಳ ಅವಶ್ಯಕತೆಯಿದೆ. ನಾಳೆ ಭೋಜನ ವಿರಾಮಕ್ಕೆ ಮೊದಲು ಅಥವಾ ಅದಕ್ಕೆ ಮೊದಲೇ ಟೆಸ್ಟ್ ಮುಗಿದರೆ ಆಶ್ಚರ್ಯಪಡಬೇಕಿಲ್ಲ. ಎರಡನೇ ಇನ್ನಿಂಗ್ಸ್ನಲ್ಲಿ ಸೌಥೀ, ಬೌಲ್ಟ್, ಜೇಮಿಸನ್, ಡೆರಿಲ್ ಮಿಚೆಲ್ ತಲಾ ಒಂದೊಂದು ವಿಕೆಟ್ ಪಡೆದಿದ್ದರೆ, ವ್ಯಾಗ್ನರ್ 2 ವಿಕೆಟ್ ಕಬಳಿಸಿದ್ದಾರೆ.