Wimbledon Women’s Final: ಬಾರ್ಬೊರಾ ಕ್ರೆಚಿಕೋವಾಗೆ ವಿಂಬಲ್ಡನ್ ಕಿರೀಟ
Barbora Krejcikova: ಬಾರ್ಬೊರಾ ಕ್ರೆಚಿಕೋವಾ ಚೊಚ್ಚಲ ವಿಂಬಲ್ಡನ್ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ. ಈ ಮೂಲಕ ಒಟ್ಟು 12 ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಗಳನ್ನು ಗೆದ್ದ ವಿಶೇಷ ಸಾಧನೆ ಮಾಡಿದ್ದಾರೆ. ಆದರೆ ಈ ಹನ್ನೆರಡು ಪ್ರಶಸ್ತಿಗಳಲ್ಲಿ ಸಿಂಗಲ್ಸ್ ವಿಭಾಗದಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದ್ದು ಕೇವಲ 2 ಬಾರಿ ಮಾತ್ರ. ಇದಕ್ಕೂ ಮುನ್ನ ಫ್ರೆಂಚ್ ಓಪನ್ನಲ್ಲಿ ಪ್ರಶಸ್ತಿ ಗೆದ್ದಿದ್ದರು.
ಲಂಡನ್ನ ಸೆಂಟರ್ ಕೋರ್ಟ್ ಅಂಗಳದಲ್ಲಿ ನಡೆದ ವಿಂಬಲ್ಡನ್ (Wimbledon) ಮಹಿಳಾ ಸಿಂಗಲ್ಸ್ ಫೈನಲ್ನಲ್ಲಿ ಜೆಕ್ ಗಣರಾಜ್ಯದ ಬಾರ್ಬೊರಾ ಕ್ರೆಚಿಕೋವಾ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಉತ್ತಮ ಹೋರಾಟಕ್ಕೆ ಸಾಕ್ಷಿಯಾಗಿದ್ದ ಈ ಪಂದ್ಯದಲ್ಲಿ ಇಟಲಿಯ ಜಾಸ್ಮಿನ್ ಪಾವೊಲಿನಿ ಅವರನ್ನು ಸೋಲಿಸಿ ಚೊಚ್ಚಲ ವಿಂಬಲ್ಡನ್ ಕಿರೀಟ ಮುಡಿಗೇರಿಸಿಕೊಂಡರು.
ಈ ಪಂದ್ಯದ ಮೊದಲ ಸುತ್ತಿನಲ್ಲಿ ಬಾರ್ಬೊರಾ ಕ್ರೆಚಿಕೋವಾ ಉತ್ತಮ ಸರ್ವ್ಗಳ ಮೂಲಕ ಆರಂಭದಲ್ಲೇ ಪಂದ್ಯದ ಮೇಲೆ ಹಿಡಿತ ಸಾಧಿಸಿದ್ದರು. ಪರಿಣಾಮ ಜಾಸ್ಮಿನ್ 2 ಪಾಯಿಂಟ್ಸ್ ಕಲೆಹಾಕುವಲಷ್ಟರಲ್ಲಿ ಬಾರ್ಬೊರಾ 6 ಅಂಕಗಳನ್ನು ಗಳಿಸಿದ್ದರು. ಅದರಂತೆ ಮೊದಲ ಸೆಟ್ ಅನ್ನು 6-2 ಅಂತರದಿಂದ ಗೆದ್ದ ಬಾರ್ಬೊರಾ ಕ್ರೆಚಿಕೋವಾಗೆ ದ್ವಿತೀಯ ಸುತ್ತಿನಲ್ಲಿ ಅಂಕಗಳಿಸಲು ಬೆವರಿಳಿಸಬೇಕಾಯಿತು.
ದಿಟ್ಟ ಹೋರಾಟ ಪ್ರದರ್ಶಿಸಿದ ಜಾಸ್ಮಿನ್ ಪಾವೊಲಿನಿ ಬ್ಯಾಕ್ ಟು ಬ್ಯಾಕ್ ಪಾಯಿಂಟ್ಸ್ ಗಳಿಸಿದರೆ, ಬಾರ್ಬೊರಾ 2 ಅಂಕದಲ್ಲೇ ಉಳಿದರು. ಈ ಮೂಲಕ ಜಾಸ್ಮಿನ್ 2ನೇ ಸುತ್ತನ್ನು 6-2 ಅಂತರದಿಂದ ಗೆದ್ದುಕೊಂಡರು.
ಆದರೆ ಅಂತಿಮ ಸುತ್ತಿನಲ್ಲಿ ಕಂಬ್ಯಾಕ್ ಮಾಡಿದ ಬಾರ್ಬೊರಾ ಕ್ರೆಚಿಕೋವಾ ದ್ವಿತೀಯ ಸುತ್ತಿನಲ್ಲಿ ಮಾಡಿದ ತಪ್ಪುಗಳನ್ನು ಸರಿಪಡಿಸಿಕೊಂಡರು. ಅಲ್ಲದೆ ಚಾಣಾಕ್ಷ ಆಟದೊಂದಿಗೆ ಜಾಸ್ಮಿನ್ ಮೇಲೆ ಒತ್ತಡ ಹೇರುವಲ್ಲಿ ಯಶಸ್ವಿಯಾದರು. ಇದಾಗ್ಯೂ ಒಂದು ಹಂತದಲ್ಲಿ ಉಭಯರು 4-4 ಅಂತರದಿಂದ ಸಮಬಲ ಸಾಧಿಸಿದ್ದರಿಂದ ಪಂದ್ಯವು ರಣರೋಚಕ ಹೋರಾಟಕ್ಕೆ ಸಾಕ್ಷಿಯಾಯಿತು. ಆದರೆ ತಮ್ಮೆಲ್ಲಾ ಅನುಭವನ್ನು ಧಾರೆಯೆರೆದ ಬಾರ್ಬೊರಾ ಕ್ರೆಚಿಕೋವಾಗೆ ಅಂತಿಮವಾಗಿ 6-4 ಅಂತರದಿಂದ ಗೆಲ್ಲುವ ಮೂಲಕ ಚಾಂಪಿಯನ್ ಪಟ್ಟಕ್ಕೇರಿದರು.
ಗೆಲುವಿನ ಸಂಭ್ರಮ:
The moment a dream became reality ✨#Wimbledon | @BKrejcikova pic.twitter.com/38xPz9pCin
— Wimbledon (@Wimbledon) July 13, 2024
2ನೇ ಸಿಂಗಲ್ಸ್ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿ:
ಬಾರ್ಬೊರಾ ಕ್ರೆಚಿಕೋವಾಗೆ ಇದು 2ನೇ ಸಿಂಗಲ್ಸ್ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿ. ಇದಕ್ಕೂ ಮುನ್ನ 2021 ರಲ್ಲಿ ಫ್ರೆಂಚ್ ಓಪನ್ ಪ್ರಶಸ್ತಿ ಗೆದ್ದಿದ್ದರು. ಹಾಗೆಯೇ 7 ಬಾರಿ ಡಬಲ್ಸ್ ಹಾಗೂ ಮೂರು ಬಾರಿ ಮಿಶ್ರ ಡಬಲ್ಸ್ನಲ್ಲಿ ಚಾಂಪಿಯನ್ಸ್ ಪಟ್ಟವನ್ನು ಅಲಂಕರಿಸಿದ್ದರು.
ಬಾರ್ಬೊರಾ ಕ್ರೆಚಿಕೋವಾ ಅವರ ಗ್ರ್ಯಾಂಡ್ ಸ್ಲಾಮ್ಸ್ ಪ್ರಶಸ್ತಿ ಪಟ್ಟಿ:
- ಫ್ರೆಂಚ್ ಓಪನ್ ಸಿಂಗಲ್ಸ್ (2021)
- ವಿಂಬಲ್ಡನ್ ಸಿಂಗಲ್ಸ್ (2024)
- ಆಸ್ಟ್ರೇಲಿಯನ್ ಓಪನ್ ಡಬಲ್ಸ್ (2022, 2023)
- ಫ್ರೆಂಚ್ ಓಪನ್ ಡಬಲ್ಸ್ (2018, 2021)
- ವಿಂಬಲ್ಡನ್ ಡಬಲ್ಸ್ (2018, 2022)
- ಯುಎಸ್ ಓಪನ್ ಡಬಲ್ಸ್ (2022)
- ಆಸ್ಟ್ರೇಲಿಯನ್ ಓಪನ್ ಮಿಶ್ರ ಡಬಲ್ಸ್ (2019, 2020, ಮತ್ತು 2021).
ಇದನ್ನೂ ಓದಿ: ಎಲ್ಲವನ್ನೂ ತ್ಯಾಗ ಮಾಡಿದ ಐಶ್ವರ್ಯಾಗೆ, ಬಚ್ಚನ್ ಕುಟುಂಬದಿಂದ ಸಿಕ್ಕಿದ್ದೇನು?
ಬ್ಯಾಕ್ ಟು ಬ್ಯಾಕ್ ಫೈನಲ್ ಸೋಲು:
ಒಂದೆಡೆ ಬಾರ್ಬೊರಾ ಕ್ರೆಚಿಕೋವಾ ಚೊಚ್ಚಲ ವಿಂಬಲ್ಡನ್ ಕಿರೀಟ ಮುಡಿಗೇರಿಸಿಕೊಂಡರೆ ಮತ್ತೊಂದೆಡೆ ಜಾಸ್ಮಿನ್ ಪಾವೊಲಿನಿ ಬ್ಯಾಕ್ ಟು ಬ್ಯಾಕ್ ಫೈನಲ್ ಸೋಲಿನಿಂದ ನಿರಾಸೆ ಅನುಭವಿಸಿದರು. ಏಕೆಂದರೆ ಇದೇ ವರ್ಷ ನಡೆದ ಫ್ರೆಂಚ್ ಓಪನ್ ಫೈನಲ್ನಲ್ಲಿ ಇಗಾ ಶ್ವಿಯಾಮ್ಟೆಕ್ ವಿರುದ್ಧ ಜಾಸ್ಮಿನ್ ಸೋಲನುಭವಿಸಿದ್ದರು. ಇದೀಗ ಮತ್ತೊಮ್ಮೆ ಗ್ರ್ಯಾಂಡ್ ಸ್ಲಾಮ್ ಗೆಲ್ಲುವ ಅವಕಾಶವನ್ನು ಕೈಚೆಲ್ಲಿಕೊಂಡಿದ್ದಾರೆ.