ವಿಂಬಲ್ಡನ್​ನಲ್ಲಿ ಸಚಿನ್ ತೆಂಡೂಲ್ಕರ್​ಗೆ ಭವ್ಯ ಸ್ವಾಗತ

ವಿಂಬಲ್ಡನ್​ನಲ್ಲಿ ಸಚಿನ್ ತೆಂಡೂಲ್ಕರ್​ಗೆ ಭವ್ಯ ಸ್ವಾಗತ

ಝಾಹಿರ್ ಯೂಸುಫ್
|

Updated on: Jul 07, 2024 | 11:54 AM

Sachin Tendulkar: ಕ್ರಿಕೆಟ್ ಅಲ್ಲದೆ ಸಚಿನ್ ತೆಂಡೂಲ್ಕರ್ ಟೆನಿಸ್ ಮತ್ತು ಫುಟ್​ಬಾಲ್​ ಆಟವನ್ನು ತುಂಬಾ ಇಷ್ಟಪಡುತ್ತಾರೆ. ಅದರಲ್ಲೂ ಟೆನಿಸ್ ಅಂಗಳದ ಪಂದ್ಯಗಳನ್ನು ಸ್ಟೇಡಿಯಂಗೆ ತೆರಳಿ ವೀಕ್ಷಿಸುವ ಅಭ್ಯಾಸ ಹೊಂದಿದ್ದಾರೆ. ಈ ಹಿಂದಿನಿಂದಲೂ ಪ್ರತಿಷ್ಠಿತ ವಿಂಬಲ್ಡನ್ ಟೆನಿಸ್ ಟೂರ್ನಿಯ ಅಭಿಮಾನಿಯಾಗಿರುವ ಸಚಿನ್ ಈ ಬಾರಿ ಕೂಡ ಪಂದ್ಯಾವಳಿಯನ್ನು ವೀಕ್ಷಿಸಲು ಲಂಡನ್​ಗೆ ತೆರಳಿದ್ದಾರೆ.

ಲಂಡನ್​ನಲ್ಲಿ ನಡೆಯುತ್ತಿರುವ ವಿಂಬಲ್ಡನ್ ಟೆನಿಸ್ ಪಂದ್ಯಾವಳಿಗೆ ವೀಕ್ಷಿಸಲು ಆಗಮಿಸಿದ ಸಚಿನ್ ತೆಂಡೂಲ್ಕರ್ ಅವರಿಗೆ ಭವ್ಯ ಸ್ವಾಗತ ಕೋರಲಾಗಿದೆ. ಆಲ್ ಇಂಗ್ಲೆಂಡ್ ಲಾನ್ ಟೆನಿಸ್ ಮತ್ತು ಕ್ರೋಕೆಟ್ ಕ್ಲಬ್ ಕೋರ್ಟ್​ನಲ್ಲಿ ನಡೆದ ಪಂದ್ಯಗಳನ್ನು ವೀಕ್ಷಿಸಲು ಸಚಿನ್ ಆಗಮಿಸಿದ್ದರು. ಇದನ್ನು ಗಮನಿಸಿದ ವಿಂಬಲ್ಡನ್ ಆಯೋಜಕರು ಸಚಿನ್ ತೆಂಡೂಲ್ಕರ್ ಅವರ ಸಾಧನೆಯನ್ನು ವರ್ಣಿಸುತ್ತಾ, ಭವ್ಯವಾಗಿ ಸ್ವಾಗತಿಸಿದರು.

ಭಾರತದ ಕ್ರೀಡಾ ದಂತಕಥೆ, ವಿಶ್ವಕಪ್ ವಿಜೇತ ಮತ್ತು ಕ್ರಿಕೆಟ್ ಇತಿಹಾಸದಲ್ಲಿ ಸಾರ್ವಕಾಲಿಕ ರನ್ ಸ್ಕೋರರ್… ಸಚಿನ್ ತೆಂಡೂಲ್ಕರ್ ಅವರಿಗೆ ಸ್ವಾಗತ.. ಎನ್ನುತ್ತಿದ್ದಂತೆ ಎಲ್ಲರೂ ಚಪ್ಪಾಳೆ ತಟ್ಟುತ್ತಾ ಕ್ರಿಕೆಟ್​ ದೇವರಿಗೆ ಸ್ವಾಗತ ನೀಡಲಾಯಿತು. ಇದೇ ವೇಳೆ ಎದ್ದು ನಿಂತ ಸಚಿನ್ ತೆಂಡೂಲ್ಕರ್ ಎಲ್ಲರಿಗೂ ಕೈ ಮುಗಿಯುತ್ತಾ ಧನ್ಯವಾದ ತಿಳಿಸಿದರು. ಈ ಕ್ಷಣಗಳ ವಿಡಿಯೋವನ್ನು ವಿಂಬಲ್ಡನ್​ನ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.

ವಿಶೇಷ ಎಂದರೆ ಇದೇ ಪಂದ್ಯದ ವೇಳೆ ಸಚಿನ್ ತೆಂಡೂಲ್ಕರ್ ಅವರಿದ್ದ ಗ್ಯಾಲರಿಯಲ್ಲೇ ಇಂಗ್ಲೆಂಡ್ ಕ್ರಿಕೆಟ್ ಆಟಗಾರರಾದ ಬೆನ್ ಸ್ಟೋಕ್ಸ್, ಜೋ ರೂಟ್, ಜೋಸ್ ಬಟ್ಲರ್ ಕೂಡ ಕಾಣಿಸಿಕೊಂಡಿದ್ದರು. ಅಲ್ಲದೆ ಇಂಗ್ಲೆಂಡ್ ಫುಟ್​ಬಾಲ್ ಕ್ಲಬ್ ಮ್ಯಾಂಚೆಸ್ಟರ್ ಸಿಟಿ ತಂಡದ ಮ್ಯಾನೇಜರ್ ಪೆಪ್ ಗಾರ್ಡಿಯೋಲಾ ಕೂಡ ಉಪಸ್ಥಿತರಿದ್ದರು.

ಈ ಪಂದ್ಯದ ಬಳಿಕ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಟೆನಿಸ್ ಅಂಗಳದ ಸರ್ವಶ್ರೇಷ್ಠ ಆಟಗಾರ ರೋಜರ್ ಫೆಡರರ್ ಅವರೊಂದಿಗೆ ಕಾಣಿಸಿಕೊಂಡಿದ್ದರು. ಈ ಫೋಟೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಇಬ್ಬರು ದಿಗ್ಗಜರ ಸಮಾಗಮ ಎಂದು ಈ ಫೋಟೋವನ್ನು ವರ್ಣಿಸಲಾಗುತ್ತಿದೆ.