Breaking: ಬ್ರಿಜ್‌ಭೂಷಣ್ ಆಪ್ತನಿಗೆ ಅಧ್ಯಕ್ಷಗಿರಿ; ಕುಸ್ತಿಗೆ ವಿದಾಯ ಹೇಳಿದ ಸಾಕ್ಷಿ ಮಲಿಕ್

|

Updated on: Dec 21, 2023 | 5:47 PM

Wrestler Sakshi Malik Retired: ಕುಸ್ತಿ ಒಕ್ಕೂಟದ ಮುಖ್ಯಸ್ಥ ಹುದ್ದೆಗೆ ನಡೆದ ಚುನಾವಣೆಯಲ್ಲಿ ಬ್ರಿಜ್ ಭೂಷಣ್ ಅವರ ನಿಕಟವರ್ತಿ ಎಂದು ಪರಿಗಣಿಸಲ್ಪಟ್ಟಿರುವ ಸಂಜಯ್ ಅವರು ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದ ಅನಿತಾ ಶೆರಾನ್ ಅವರನ್ನು ಮಣಿಸಿ ಬಂಪರ್ ಗೆಲುವು ಸಾಧಿಸಿದ್ದಾರೆ. ಸಂಜಯ್ ಸಿಂಗ್ ಚುನಾವಣೆಯಲ್ಲಿ ಗೆದ್ದ ತಕ್ಷಣ ಅಸಮಾಧಾನಗೊಂಡಿರುವ ಮಹಿಳಾ ಕುಸ್ತಿಪಟು ಸಾಕ್ಷಿ ಮಲಿಕ್ ಕುಸ್ತಿ ತೊರೆಯುವ ಮಾತುಗಳನ್ನಾಡಿದ್ದಾರೆ.

Breaking: ಬ್ರಿಜ್‌ಭೂಷಣ್ ಆಪ್ತನಿಗೆ ಅಧ್ಯಕ್ಷಗಿರಿ; ಕುಸ್ತಿಗೆ ವಿದಾಯ ಹೇಳಿದ ಸಾಕ್ಷಿ ಮಲಿಕ್
ಸಾಕ್ಷಿ ಮಲಿಕ್
Follow us on

ಭಾರತದ ಕುಸ್ತಿ ಒಕ್ಕೂಟದ ನೂತನ ಮುಖ್ಯಸ್ಥರಾಗಿ (WFI chief elections) ಸಂಜಯ್ ಸಿಂಗ್ ಆಯ್ಕೆಯಾಗಿದ್ದಾರೆ. ಈ ಹಿಂದೆ ಡಬ್ಲ್ಯುಎಫ್‌ಐ ಅಧ್ಯಕ್ಷರಾಗಿದ್ದ ಬ್ರಿಜ್ ಭೂಷಣ್ ಶರಣ್ ಸಿಂಗ್ (Brij Bhushan Singh) ಅವರ ರಾಜೀನಾಮೆಯಿಂದ ತೆರವಾದ ಜಾಗಕ್ಕೆ ಅವರ ನಿಕಟವರ್ತಿಯಾದ ಸಂಜಯ್ ಸಿಂಗ್ (Sanjay Singh) ಆಯ್ಕೆಯಾಗಿದ್ದಾರೆ. ವಾಸ್ತವವಾಗಿ ಸಾಕ್ಷಿ ಮಲಿಕ್, ವಿನೇಶ್ ಫೋಗಟ್ ಮತ್ತು ಬಜರಂಗ್ ಪುನಿಯಾ ಸೇರಿದಂತೆ ಹಲವು ಕುಸ್ತಿಪಟುಗಳು ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಲೈಂಗಿಕ ಆರೋಪಗಳನ್ನು ಮಾಡಿದ್ದರು. ಈ ಕಾರಣಕ್ಕಾಗಿಯೇ ಬ್ರಿಜ್ ಭೂಷಣ್ ಅವರು ತಮ್ಮ ಸ್ಥಾನದಿಂದ ಕೆಳಗಿಳಿಯಬೇಕಾಯಿತು. ಇದೀಗ ಕುಸ್ತಿ ಒಕ್ಕೂಟದ ಮುಖ್ಯಸ್ಥ ಹುದ್ದೆಗೆ ನಡೆದ ಚುನಾವಣೆಯಲ್ಲಿ ಬ್ರಿಜ್ ಭೂಷಣ್ ಅವರ ನಿಕಟವರ್ತಿ ಎಂದು ಪರಿಗಣಿಸಲ್ಪಟ್ಟಿರುವ ಸಂಜಯ್ ಅವರು ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದ ಅನಿತಾ ಶೆರಾನ್ ಅವರನ್ನು ಮಣಿಸಿ ಬಂಪರ್ ಗೆಲುವು ಸಾಧಿಸಿದ್ದಾರೆ. ಸಂಜಯ್ ಸಿಂಗ್ ಚುನಾವಣೆಯಲ್ಲಿ ಗೆದ್ದ ತಕ್ಷಣ ಅಸಮಾಧಾನಗೊಂಡಿರುವ ಮಹಿಳಾ ಕುಸ್ತಿಪಟು ಸಾಕ್ಷಿ ಮಲಿಕ್ (Sakshi Malik) ಕುಸ್ತಿ ತೊರೆಯುವ ಮಾತುಗಳನ್ನಾಡಿದ್ದಾರೆ.

ಸಾಕ್ಷಿ ಮಲಿಕ್ ಹೇಳಿದ್ದೇನು?

ಭಾರತದ ಕುಸ್ತಿ ಒಕ್ಕೂಟದ ನೂತನ ಮುಖ್ಯಸ್ಥರಾಗಿ ಸಂಜಯ್ ಸಿಂಗ್ ಆಯ್ಕೆಯಾದ ಕೂಡಲೇ ತಮ್ಮ ಅಸಮಾಧಾನ ಹೊರಹಾಕಿರುವ ಸಾಕ್ಷಿ ಮಲಿಕ್, ‘ಹೆಣ್ಣು ಮಕ್ಕಳ ನೈತಿಕ ಸ್ಥೈರ್ಯ ಒಡೆಯುವ ಕೆಲಸ ಇನ್ನೂ ಮುಂದುವರೆದಿದೆ. ಮಹಿಳೆಯನ್ನು ಅಧ್ಯಕ್ಷರನ್ನಾಗಿ ಮಾಡುವಂತೆ ಬೇಡಿಕೆ ಇಟ್ಟಿದ್ದೆವು. ಆದರೆ ಈಗ ಬ್ರಿಜ್‌ಭೂಷಣ್ ಶರಣ್ ಸಿಂಗ್ ಅವರ ಬಲಗೈ ಬಂಟ ಅಧ್ಯಕ್ಷರಾಗಿದ್ದಾರೆ. ಸಂಜಯ್ ಸಿಂಗ್, ಬ್ರಿಜ್‌ಭೂಷಣ್ ಅವರಿಗೆ ಅವರ ಮಗನಿಗಿಂತ ಹೆಚ್ಚು ಪ್ರಿಯ. ಮಹಿಳೆಗೆ ಯಾವುದೇ ಭಾಗವಹಿಸುವಿಕೆಯನ್ನು ನೀಡಲಾಗಿಲ್ಲ. ಹೀಗಾಗಿ ನಾನು ನನ್ನ ಕುಸ್ತಿಯನ್ನು ಬಿಟ್ಟುಬಿಡುತ್ತೇನೆ’ ಎಂದಿದ್ದಾರೆ.

‘ಲೈಂಗಿಕ ಕಿರುಕುಳದ ಆರೋಪ ಹೊತ್ತಿರುವ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರ ಕುಟುಂಬ ಮತ್ತು ಆಪ್ತರಿಗೆ ಚುನಾವಣೆಯಲ್ಲಿ ಅವಕಾಶ ನೀಡುವುದಿಲ್ಲ ಎಂದು ಕ್ರೀಡಾ ಸಚಿವಾಲಯವು ಕುಸ್ತಿಪಟುಗಳಿಗೆ ನೀಡಿದ ಭರವಸೆಗಳನ್ನು ಈಡೇರಿಸಿಲ್ಲ. ಉತ್ತರ ಪ್ರದೇಶ ಕುಸ್ತಿ ಫೆಡರೇಶನ್‌ನ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ ಸಂಜಯ್ ಸಿಂಗ್ ಅವರು ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರ ಬಲಗೈ ಬಂಟರಾಗಿದ್ದರು. ಅವರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಿ, ಅವರಿಗೆ ಮುಖ್ಯಸ್ಥ ಸಿಗುವಂತೆ ಮಾಡಿದೆ’ ಎಂದು ಸಾಕ್ಷಿ ಹೇಳಿಕೊಂಡಿದ್ದಾರೆ.

ನಾವು ಎಲ್ಲೆಡೆ ನ್ಯಾಯ ಕೇಳಿದ್ದೇವೆ

‘ನಾವು ಎಲ್ಲ ರೀತಿಯಲ್ಲಿ ಪ್ರಯತ್ನಿಸಿದೆವು. ನಂತರ ದೆಹಲಿಯ ಬೀದಿಗಳಲ್ಲಿ ಕುಳಿತು ನ್ಯಾಯಕ್ಕಾಗಿ ಹೋರಾಡಿದೆವು. ಆ ಬಳಿಕ ಮೂರು-ನಾಲ್ಕು ತಿಂಗಳು ಕಾಯುವಂತೆ ಸಚಿವಾಲಯ ನಮಗೆ ಹೇಳಿತ್ತು. ಆದರೆ ಅದರಿಂದ ಏನೂ ಆಗಲಿಲ್ಲ. ಸಂಜಯ್ ಸಿಂಗ್ ಅವರನ್ನು ಇಂದು ಅಧ್ಯಕ್ಷರನ್ನಾಗಿ ಮಾಡಲಾಯಿತು. ಅವರನ್ನು ಅಧ್ಯಕ್ಷರನ್ನಾಗಿ ಮಾಡಿದರೆ ಕ್ರೀಡಾ ಹುಡುಗಿಯರು ಮತ್ತೆ ಬಲಿಪಶುಗಳಾಗಬೇಕಾಗುತ್ತದೆ. ದೇಶದಲ್ಲಿ ನಮಗೆ ಹೇಗೆ ನ್ಯಾಯ ಸಿಗುತ್ತೋ ಗೊತ್ತಿಲ್ಲ?. ಕುಸ್ತಿಯ ಭವಿಷ್ಯ ಅಂಧಕಾರದಲ್ಲಿರುವುದು ಅತ್ಯಂತ ದುಃಖದ ಸಂಗತಿ. ನಮ್ಮ ದುಃಖವನ್ನು ಯಾರೊಂದಿಗೆ ಹಂಚಿಕೊಳ್ಳಬೇಕೆಂದು ನಮಗೆ ತಿಳಿದಿಲ್ಲ’ ಎಂದು ತಮ್ಮ ಅಳಲನ್ನು ತೊಡಿಕೊಂಡಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:41 pm, Thu, 21 December 23