ಭಾರತ ಕ್ರಿಕೆಟ್ ತಂಡದ ಲೆಗ್ ಸ್ಪಿನ್ನರ್ ಯಜುವೇಂದ್ರ ಚಹಲ್ ಇತ್ತೀಚೆಗಷ್ಟೇ ಧನಶ್ರೀ ವರ್ಮಾ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಹೊಸ ಬದುಕಿಗೆ ಕಾಲಿರಿಸಿದ ನವ ಜೋಡಿಗಳಿಗೆ ಸಾಮಾಜಿಕ ಜಾಲತಾಣಗಳಲ್ಲಿ BCCI ಸೇರಿದಂತೆ ಹಲವು ಗಣ್ಯರು ಸಹ ಶುಭಾಶಯ ಕೋರಿದ್ದರು. ಈಗ ಹೊಸ ಬದುಕು ಆರಂಭಿಸಿರುವ ಚಹಲ್ ಜೋಡಿ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಮದುವೆ ಸಂಭ್ರಮದ ವಿಡಿಯೋ ಟೀಸರ್ ಬಿಡುಗಡೆಗೊಳಿಸಿದ್ದಾರೆ. ಈ ನವ ಜೋಡಿಗಳು ಬಿಡುಗಡೆಗೊಳಿಸಿರುವ ಟೀಸರ್ನಲ್ಲಿ ನೃತ್ಯ, ಕ್ರಿಕೆಟ್, ಅವರ ವಿವಾಹ ಪೂರ್ವದ ಕಾರ್ಯಗಳ ಸುಳಿವು ಮತ್ತು ನಗೆಗಡಲಲ್ಲಿ ತೇಲಿರುವ ಕುಟುಂಬಸ್ಥರು ಇದ್ದಾರೆ. ಕಳೆದ ವರ್ಷ ಡಿಸೆಂಬರ್‌ನಲ್ಲಿ ವಿವಾಹವಾದ ಈ ದಂಪತಿ ತಮ್ಮ ವಿವಾಹ ಚಿತ್ರದ ಟೀಸರ್ ಅನ್ನು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಬಿಡುಗಡೆಗೊಳಿಸಿದ್ದಾರೆ. ಈ ಜೋಡಿಗಳ ವಿವಾಹದ ವಿಡಿಯೋ ಮಾರ್ಚ್ 27 ರ ಶನಿವಾರ ಬಿಡುಗಡೆಯಾಗಲಿದೆ.
ಹಲ್ಡಿ ಮತ್ತು ಸಂಗೀತ ಕಾರ್ಯಕ್ರಮದ ತುಣುಕುಗಳಿವೆ
ದಿ ನಾರ್ಮ್ ವೂಸ್ಟರ್ ಸಿಂಗರ್ಸ್ ಅವರ ಇಟ್ಸ್ ಲವಿನ್ ಯು ಲಾಟ್ಸ್ ಅಂಡ್ ಲಾಟ್ಸ್ ರಾಗದೊಂದಿಗೆ ಸಂಯೋಜಿಸಲಾಗಿರುವ ಈ ವಿವಾಹ ಚಲನಚಿತ್ರದ ಟೀಸರ್ ಯಜ್ವೇಂದ್ರ ಚಹಲ್ ಮತ್ತು ಧನಶ್ರೀ ವರ್ಮಾ ಅವರ ವಿವಾಹ ಸಮಾರಂಭಗಳ ತುಣುಕುಗಳ ಸಂಗ್ರಹವನ್ನು ಒಳಗೊಂಡಿದೆ. ಈ ಟೀಸರ್ನಲ್ಲಿ ನವಜೋಡಿಗಳ ಹಲ್ಡಿ ಮತ್ತು ಸಂಗೀತ ಕಾರ್ಯಕ್ರಮದ ತುಣುಕುಗಳಿವೆ. ನೃತ್ಯ ಸಂಯೋಜಕಿ ಮತ್ತು ಯೂಟ್ಯೂಬರ್ ಆಗಿರುವ ಧನಶ್ರೀ ಕೂಡ ಕೆಲವು ತುಣುಕುಗಳಲ್ಲಿ ನೃತ್ಯ ಮಾಡುತ್ತಿರುವುದು ಕಂಡುಬಂದಿದೆ.
ನೀವು ನಮ್ಮವರು, ನಾನು ನಿಮ್ಮವನು
ಈ ಟೀಸರನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿರುವ ಯಜ್ವೇಂದ್ರ ಚಹಲ್, ನೀವು ನಮ್ಮವರು, ನಾನು ನಿಮ್ಮವನು ಮತ್ತು ನಾನು ನಿಮ್ಮನ್ನು ತುಂಬಾ ಪ್ರೀತಿಸುತ್ತಿದ್ದೇನೆ ಎಂದು ರಾಮಾಚಾರಿ ಸಿನಿಮಾದಲ್ಲಿ ರಾಧಿಕಾಗೆ ಯಶ್ ಹೊಡೆದ ಡೈಲಾಗ್ ರೀತಿಯಲ್ಲಿ ಬರೆದುಕೊಂಡಿದ್ದಾರೆ. ಧನಶ್ರೀ ಕೂಡ ಟೀಸರ್ ಅನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದು, ನೀವು ನನ್ನನ್ನು ಗಂಟುಗಳಲ್ಲಿ ಕಟ್ಟಿಹಾಕಿದ್ದೀರಿ, ನಾನು ನಿಮ್ಮನ್ನು ಬಹಳಷ್ಟು ಪ್ರೀತಿಸುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ.
ಭಾನುವಾರ ಪೋಸ್ಟ್ ಹರಿಬಿಟ್ಟಿದಾಗಿನಿಂದ, ಯಜ್ವೇಂದ್ರ ಮತ್ತು ಧನಶ್ರೀ ಅವರ ವಿವಾಹದ ಚಿತ್ರ ಟೀಸರ್ ಅನ್ನು ಇನ್ಸ್ಟಾಗ್ರಾಮ್ ಖಾತೆಯಲ್ಲಿ 1.8 ಮಿಲಿಯನ್ ಬಾರಿ ವೀಕ್ಷಿಸಲಾಗಿದೆ. ಧನಶ್ರೀ ಅವರ ಇನ್‌ಸ್ಟಾಗ್ರಾಂನಲ್ಲಿ ಖಾತೆಯಲ್ಲಿ 1.4 ಮಿಲಿಯನ್ ವೀಕ್ಷಣೆಗಳನ್ನು ಕಂಡಿದೆ. ಜೊತೆಗೆ ಸಾವಿರಾರು ಕಾಮೆಂಟ್‌ಗಳು ಮತ್ತು ಅಭಿನಂದನಾ ಸಂದೇಶಗಳು ಸಹ ಈ ಜೋಡಿಗಳ ಮದುವೆಯ ಟೀಸರ್ಗೆ ಬಂದಿವೆ.
ಇದನ್ನೂ ಓದಿ: ಸಂಗೀತ ಸಂಜೆಯಲ್ಲಿ ಮಿಂದೆದ್ದ ಜೋಡಿ ಹಕ್ಕಿಗಳು; ಮೀಟ್ ಮೈ ಕ್ವೀನ್ ಎಂದ ಗೂಗ್ಲಿ ಮಾಸ್ಟರ್ ಚಹಲ್