ನವದೆಹಲಿ: ಮುಂದಿನ ವಾರದಿಂದ ಐಫೋನ್ (APPLE iPhone) ‘ಐಒಎಸ್ (iOS) 16 ಬೀಟಾ’ ಸಾಫ್ಟ್ವೇರ್ನಲ್ಲಿ ಆಯ್ದ ಗ್ರಾಹಕರಿಗೆ 5ಜಿ ನೆಟ್‌ವರ್ಕ್ ಸೇವೆ ದೊರೆಯಲಿದೆ ಎಂದು ಆ್ಯಪಲ್ ತಿಳಿಸಿದೆ. ‘ಐಒಎಸ್ 16 ಬೀಟಾ’ ಸಾಫ್ಟ್ವೇರ್ನಲ್ಲಿ ಇರುವ ಆ್ಯಪಲ್ನ ಏರ್ಟೆಲ್ (Airtel) ಮತ್ತು ಜಿಯೋ (Jio) ಗ್ರಾಹಕರಿಗೆ 5ಜಿ ಸೇವೆ ದೊರೆಯಲಿದೆ. ಡಿಸೆಂಬರ್ನಿಂದ ಸಾರ್ವಜನಿಕವಾಗಿ ಸೇವೆ ಲಭ್ಯವಿದೆ ಎಂದು ಕಂಪನಿ ತಿಳಿಸಿದೆ.
ಬೀಟಾ ಪ್ರೋಗ್ರಾಂ ಬಳಕೆದಾರರಿಗೆ ಸಾಫ್ಟ್ವೇರ್ ಅನ್ನು ಮೊದಲು ಬಿಡುಗಡೆ ಮಾಡಲಾಗುತ್ತದೆ. ಅವರ ಬಳಕೆಯ ಅನುಭವದ ಆಧಾರದಲ್ಲಿ ವೈಶಿಷ್ಟ್ಯಗಳಲ್ಲಿ ಸುಧಾರಣೆ ಮಾಡಿಕೊಂಡು ಸಾರ್ವಜನಿಕರಿಗೆ ಸಾಫ್ಟ್ವೇರ್ ಲಭ್ಯವಾಗುವಂತೆ ಮಾಡಲಾಗುತ್ತದೆ.
ಬಳಕೆದಾರರ ಪ್ರತಿಕ್ರಿಯೆಗೆ ಆ್ಯಪಲ್ ಮನವಿ
5ಜಿ ಸೇವೆಯ ಗುಣಮಟ್ಟ ಹಾಗೂ ಕಾರ್ಯಕ್ಷಮತೆ ಬಗ್ಗೆ ಪ್ರತಿಕ್ರಿಯೆ ನೀಡುವಂತೆ ಬೀಟಾ ಪ್ರೋಗ್ರಾಂ ಬಳಕೆದಾರರನ್ನು ಆ್ಯಪಲ್ ಮನವಿ ಮಾಡಿದೆ. ಬಳಕೆದಾರರು ನೀಡುವ ಸಲಹೆ, ಸೂಚನೆ ಮತ್ತು ಬಳಕೆಯ ಅನುಭವದ ಪ್ರತಿಕ್ರಿಯೆಯನ್ನು ಗಣನೆಗೆ ತೆಗೆದುಕೊಂಡು ಸಾಫ್ಟ್ವೇರ್ ಅಪ್ಡೇಟ್ ಮಾಡಲಾಗುವುದು ಎಂದು ಕಂಪನಿ ತಿಳಿಸಿದೆ.
ನೆಟ್‌ವರ್ಕ್ ದೃಢೀಕರಣ, ಗುಣಮಟ್ಟ ಮತ್ತು ಕಾರ್ಯಕ್ಷಮತೆಗಾಗಿ ನಡಸುವ ಪರೀಕ್ಷೆಗಳು ಪೂರ್ಣಗೊಂಡ ತಕ್ಷಣ ಐಫೋನ್ ಬಳಕೆದಾರರಿಗೆ ಅತ್ಯುತ್ತಮ 5ಜಿ ಅನುಭವವನ್ನು ಒದಗಿಸಿಕೊಡಲು ಭಾರತದಲ್ಲಿನ ಪಾಲುದಾರರೊಂದಿಗೆ ಕೆಲಸ ಮಾಡಲಾಗುತ್ತಿದೆ ಎಂದು ಕಳೆದ ತಿಂಗಳು ಆ್ಯಪಲ್ ತಿಳಿಸಿತ್ತು.
ಇದನ್ನೂ ಓದಿ: Airtel 5G: ಕೇವಲ 30 ದಿನಗಳಲ್ಲಿ 10 ಲಕ್ಷ ಗ್ರಾಹಕರ ಸಂಪಾದಿಸಿದ ಏರ್ಟೆಲ್ 5ಜಿ
ಸಾಫ್ಟ್ವೇರ್ ಅಪ್ಡೇಟ್ ಮಾಡುವ ಮೂಲಕ ಡಿಸೆಂಬರ್ ವೇಳೆಗೆ ಭಾರತದ ಎಲ್ಲ ಗ್ರಾಹಕರಿಗೆ 5ಜಿ ಎನೇಬಲ್ ಮಾಡಲಾಗುವುದು ಎಂದೂ ಆ್ಯಪಲ್ ತಿಳಿಸಿದೆ. ಬಳಕೆದಾರರು ಐಫೋನ್ನಲ್ಲಿ ಆ್ಯಪಲ್ನ ಬೀಟಾ ಸಾಫ್ಟ್ವೇರ್ ಪ್ರೋಗ್ರಾಂ ಅನ್ನು ಎನ್ರೋಲ್ ಮಾಡಿಕೊಂಡು, ಇತರ ಅಗತ್ಯ ಅಪ್ಡೇಟ್ಗಳನ್ನು ಮಾಡಿಕೊಂಡು 5ಜಿ ಸೇವೆ ಪಡೆಯಬಹುದಾಗಿದೆ. ಏರ್ಟೆಲ್ ಮತ್ತು ಜಿಯೋ ಗ್ರಾಹಕರಿಗೆ ಇದು ಅನ್ವಯವಾಗಲಿದೆ ಎಂದು ಆ್ಯಪಲ್ ಮಾಹಿತಿ ನೀಡಿದೆ.
ದೇಶದಲ್ಲಿ ಅಕ್ಟೋಬರ್ 1ರಂದು 5ಜಿ ಸೇವೆಗೆ ಚಾಲನೆ ನೀಡಲಾಗಿತ್ತು. ಏರ್ಟೆಲ್, ಜಿಯೋ, ವೊಡಾಫೋನ್ 5ಜಿ ನೆಟ್ವರ್ಕ್ಗೆ ಅಪ್ಗ್ರೇಡ್ ಆಗುತ್ತಿದ್ದು, ಬೆಂಗಳೂರು ಸೇರಿದಂತೆ 13 ನಗರಗಳಲ್ಲಿ ಆರಂಭದ ಹಂತದಲ್ಲಿ 5G ಇಂಟರ್ನೆಟ್ ಸೇವೆ ಒದಗಿಸಲಾಗುತ್ತಿದೆ. ಸೇವೆಗೆ ಚಾಲನೆ ನೀಡಿದ ಒಂದೇ ತಿಂಗಳಲ್ಲಿ 10 ಲಕ್ಷ ಗ್ರಾಹಕರನ್ನು ಹೊಂದಿರುವುದಾಗಿ ಭಾರ್ತಿ ಏರ್ಟೆಲ್ ಬುಧವಾರ ಹೇಳಿಕೊಂಡಿತ್ತು.