Apple iPhone: ಬುಲೆಟ್ ತಾಗಿದ್ದು ಕಿಸೆಯಲ್ಲಿದ್ದ ಐಫೋನ್ಗೆ: ಸೈನಿಕನ ಪ್ರಾಣ ಉಳಿಸಿದ ಐಫೋನ್ 11 ಪ್ರೊ
iPhone 11 Pro: ಆ್ಯಪಲ್ ಕಂಪನಿಯ ಐಫೋನ್ 11 ಪ್ರೊ ಮೊಬೈಲ್ ಉಕ್ರೇನ್ ಸೈನಿಕರೊಬ್ಬರ ಜೀವ ಉಳಿಸಿದೆ ಎಂದು ವರದಿಯಾಗಿದೆ. ಯೋಧನಿಗೆ ಬೀಳಬೇಕಿದ್ದ ಗುಂಡನ್ನು ಐಫೋನ್ ತಡೆದಿದ್ದು, ಈ ಕುರಿತ ವಿಡಿಯೋ ವೈರಲ್ ಆಗುತ್ತಿದೆ.
ಮೊಬೈಲ್ಗಳು (Mobile) ಮನುಷ್ಯನ ಪ್ರಾಣ ತೆಗೆದಂತಹ ಅನೇಕ ಉದಾಹರಣೆಗಳು ನಮ್ಮ ಕಣ್ಣ ಮುಂದಿದೆ. ಆದರೆ, ಇಲ್ಲೊಂದು ಅಚ್ಚರಿ ಎಂಬಂತೆ ಮೊಬೈಲ್ ಯೋಧರೊಬ್ಬರ ಪ್ರಾಣ ಉಳಿಸಿದೆ ಎಂದರೆ ನಂಬಲೇ ಬೇಕು. ಹೌದು, ಈ ಘಟನೆ ನಡೆದಿರುವುದು ಉಕ್ರೇನ್ನಲ್ಲಿ (Ukraine). ಆ್ಯಪಲ್ ಕಂಪನಿಯ ಐಫೋನ್ 11 ಪ್ರೊ (iPhone 13 Pro) ಮೊಬೈಲ್ ಉಕ್ರೇನ್ ಸೈನಿಕರೊಬ್ಬರ ಜೀವ ಉಳಿಸಿದೆ ಎಂದು ವರದಿಯಾಗಿದೆ. ಯೋಧನಿಗೆ ಬೀಳಬೇಕಿದ್ದ ಗುಂಡನ್ನು ಐಫೋನ್ ತಡೆದಿದ್ದು, ಈ ಕುರಿತ ವಿಡಿಯೋ ವೈರಲ್ ಆಗುತ್ತಿದೆ. ಯೋಧನ ಕಿಸೆಗೆ ಬುಲೆಟ್ ಬಂದು ಬಡೆದಿದೆ. ಆದರೆ, ಅಲ್ಲಿ ಐಫೋನ್ ಇದ್ದ ಕಾರಣ ಬುಲೆಟ್ ಫೋನ್ಗೆ ಬಡಿದು ಸೈನಿಕನ ಪ್ರಾಣ ಉಳಿದಿದೆ. ಐಫೋನ್ ಅಂತೂ ನಜ್ಜು ಗುಜ್ಜಾಗಿದೆ. ಈ ಬಗ್ಗೆ ಅನೇಕರು ಟ್ವೀಟ್ ಮಾಡಿದ್ದು, ‘ಆ್ಯಪಲ್ ಕೊನೆಗೂ ಒಂದು ಒಳ್ಳೆ ಕಾರ್ಯಕ್ಕೆ ಉಪಯೋಗವಾಗಿದೆ’ ಎಂದು ಬರೆದಿದ್ದಾರೆ. ಇನ್ನೊಬ್ಬರು, ‘ತುಂಬಾ ಒಳ್ಳೆಯ ವಿಚಾರ, ಐಫೋನ್ ಉತ್ತಮವಾದದ್ದು,’ ಎಂದಿದ್ದಾರೆ.
ಐಫೋನ್ 11 ಪ್ರೊ ಮೂರು ವರ್ಷಗಳ ಹಿಂದೆ ಬಿಡುಗಡೆ ಆಗಿತ್ತು. ಇದರ ಜೊತೆಗೆ ಐಫೋನ್ 11, ಐಫೋನ್ XR ಮತ್ತು ಐಫೋನ್ 11 ಪ್ರೊ ಮ್ಯಾಕ್ಸ್ ಸ್ಮಾರ್ಟ್ಫೋನ್ ಕೂಡ ಲಾಂಚ್ ಆಗಿತ್ತು. ಇದಾದ ಬಳಿಕ ಅನೇಕ ಐಫೋನ್ ಸರಣಿಗಳು ಅನಾವರಣಗೊಂಡಿವೆ. ಈ ವರ್ಷ ಐಫೋನ್ 14 ಸರಣಿ ಕೂಡ ಬಿಡುಗಡೆ ಆಗಲಿದೆ ಎಂದು ಹೇಳಲಾಗಿದೆ.
ಇನ್ನು ಇತ್ತೀಚೆಗಷ್ಟೆ ಆ್ಯಪಲ್ ವಾಚ್ನಲ್ಲಿರುವ ECG ಫೀಚರ್ ವ್ಯಕ್ತಿಯೊಬ್ಬರ ಜೀವ ಉಳಿಸಲು ಸಹಾಯಕವಾಗಿತ್ತು. ಈ ಘಟನೆ ಹರಿಯಾಣದಲ್ಲಿ ನಡೆದಿದ್ದು, 34 ವರ್ಷದ ನಿತೇಶ್ ಚೋಪ್ರಾ ತಮ್ಮ ವೈಯಕ್ತಿಕ ಅನುಭವವನ್ನು ಸಾಮಾಜಿಕ ತಾಣಗಳಲ್ಲಿ ಹಂಚಿಕೊಂಡಿದ್ದರು. ಮಾರ್ಚ್ 12 ರಂದು, ಚೋಪ್ರಾ ಅವರು ತಮ್ಮ ಎದೆಯಲ್ಲಿ ಅಸ್ವಸ್ಥತೆಯನ್ನು ಅನುಭವಿಸಿದರು. ಹೀಗಾಗಿ ತಕ್ಷಣವೆ ಆ್ಯಪಲ್ ವಾಚ್ ಮೂಲಕ ತಮ್ಮ ಇಸಿಜಿಯನ್ನು ಪರಿಶೀಲಿಸಿದ್ದಾರೆ. ಈ ವೇಳೆ ಆ್ಯಪಲ್ ವಾಚ್ ಅನಿಯಮಿತ ಹೃದಯದ ಲಯ (Afib) ಎಚ್ಚರಿಕೆಯನ್ನು ತೋರಿಸಿದೆ.
ಈ ಸಂದರ್ಭ ಹೆಚ್ಚು ಹೊತ್ತು ಮಾಡದೆ ನಿತೇಶ್ ಮತ್ತು ಅವರ ಹೆಂಡತಿ ನೇಹಾ ತಕ್ಷಣ ಹತ್ತಿರದ ಆಸ್ಪತ್ರೆಗೆ ತೆರಳಿ, ಅಲ್ಲಿ ಅವರು ತಮ್ಮ ಆ್ಯಪಲ್ ವಾಚ್‌ನಿಂದ ಪಡೆದ ಇಸಿಜಿ ವರದಿಯನ್ನು ವೈದ್ಯರಿಗೆ ತೋರಿಸಿದ್ದಾರೆ. ಇದನ್ನು ಗಮನಿಸಿದ ವೈದ್ಯರು ಇಸಿಜಿ ಮಾಡಿಸಿದ್ದಾರೆ. ವೈದ್ಯರು ನಡೆಸಿದ ಇಸಿಜಿ ಪರೀಕ್ಷೆಗಳು ಆ್ಯಪಲ್ ವಾಚ್ ನೀಡಿದ್ದ ಫಲಿತಾಂಶಗಳನ್ನು ದೃಢಪಡಿಸಿವೆ. ಅದೇ ಸಂಜೆ ವೈದ್ಯರು ಕಾರ್ಯಪ್ರವೃತ್ತರಾಗಿ ತುರ್ತು ಆಂಜಿಯೋಗ್ರಫಿಯನ್ನು ಮಾಡಿದ್ದಾರೆ. ಚಿಕಿತ್ಸೆ ವೇಳೆ ಚೋಪ್ರಾ ಅವರ ಮುಖ್ಯ ಪರಿಧಮನಿ ಸಂಪೂರ್ಣವಾಗಿ ಬ್ಲಾಕ್ ಆಗಿತ್ತು ಎಂದು ತಿಳಿದುಬಂದಿದ್ದು, ಇದು ಸಂಭಾವ್ಯ ಹೃದಯ ಸ್ತಂಭನಕ್ಕೆ ಕಾರಣವಾಗಬಹುದಿತ್ತು ಎಂದು ವೈದ್ಯರು ಹೇಳಿದ್ದರು.