ಅಸ್ಕಿ vs ಯುನಿಕೋಡ್: ಕನ್ನಡ ಫಾಂಟ್​ಗಳ ಬಗ್ಗೆ ಕಾವೇರಿದ ಚರ್ಚೆ; ಇಲ್ಲಿದೆ ಕೃಷ್ಣಭಟ್, ಪವನಜ, ಕುಂಟಾಡಿ ನಿತೇಶ್, ವಸುಧೇಂದ್ರ ಅಭಿಪ್ರಾಯ

ಅಡೋಬ್, ಗೂಗಲ್, ಮೈಕ್ರೊಸಾಫ್ಟ್​, ಲಿನಕ್ಸ್, ಆ್ಯಪಲ್ ಕಂಪನಿಗಳ ಗ್ಯಾಜೆಟ್​ ಹಾಗೂ ಸಾಫ್ಟ್​ವೇರ್​ಗಳಲ್ಲಿರುವ ಕನ್ನಡ ಬಳಕೆಯ ಸಾಧ್ಯತೆ ಮತ್ತು ಸಮಸ್ಯೆಗಳನ್ನು ಹಲವರು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸ್ತಾಪಿಸುತ್ತಿದ್ದಾರೆ. ಈ ಆಸಕ್ತಿಕರ ಸಂವಾದದ ಪರಿಚಯ ಇಲ್ಲಿದೆ.

ಅಸ್ಕಿ vs ಯುನಿಕೋಡ್: ಕನ್ನಡ ಫಾಂಟ್​ಗಳ ಬಗ್ಗೆ ಕಾವೇರಿದ ಚರ್ಚೆ; ಇಲ್ಲಿದೆ ಕೃಷ್ಣಭಟ್, ಪವನಜ, ಕುಂಟಾಡಿ ನಿತೇಶ್, ವಸುಧೇಂದ್ರ ಅಭಿಪ್ರಾಯ
ಕಂಪ್ಯೂಟರ್​ನಲ್ಲಿ ಕನ್ನಡ ಬಳಕೆ (ಪ್ರಾತಿನಿಧಿಕ ಚಿತ್ರ)Image Credit source: www.karnatakaeducation.org.in
Follow us
Ghanashyam D M | ಡಿ.ಎಂ.ಘನಶ್ಯಾಮ
|

Updated on:Nov 17, 2022 | 11:44 AM

ಕನ್ನಡದ ಫಾಂಟ್ ಸಮಸ್ಯೆ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಚರ್ಚೆಯಾಗುತ್ತಿದೆ. ಇದಕ್ಕೆ ಕಾರಣವಾಗಿದ್ದು ಕೃಷ್ಣಭಟ್ ಅವರು ‘ಪ್ರಜಾವಾಣಿ’ಯಲ್ಲಿ ಬರೆದ ‘ಯೂನಿಕೋಡ್​​ನ ಏಕಮುಖ’ ಶೀರ್ಷಿಕೆಯ ಲೇಖನ. ಈ ಲೇಖನದ ಬಗ್ಗೆ ಹಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಲೇಖನದಲ್ಲಿ ಪ್ರಸ್ತಾಪಿಸಿರುವ ಅಂಶಗಳನ್ನು ಪ್ರಶ್ನಿಸಿ ಯು.ಬಿ.ಪವನಜ ಅವರು ಸುದೀರ್ಘ ಬರಹವನ್ನು ತಮ್ಮ ಫೇಸ್​ಬುಕ್ ಪುಟದಲ್ಲಿ ಪ್ರಕಟಿಸಿದ್ದರು. ತಂತ್ರಜ್ಞಾನದಲ್ಲಿ ಕನ್ನಡ ಬಳಕೆ ಹೆಚ್ಚಾಗಬೇಕು ಎಂಬ ಆಶಯ ಹೊಂದಿರುವ ಹಲವರು ಈ ಎರಡೂ ಬರಹಗಳಿಗೆ ಪ್ರತಿಕ್ರಿಯಿಸಿದ್ದು, ಅಡೋಬ್, ಗೂಗಲ್, ಮೈಕ್ರೊಸಾಫ್ಟ್​, ಲಿನಕ್ಸ್, ಆ್ಯಪಲ್ ಕಂಪನಿಗಳ ಗ್ಯಾಜೆಟ್​ ಹಾಗೂ ಸಾಫ್ಟ್​ವೇರ್​ಗಳಲ್ಲಿರುವ ಕನ್ನಡ ಬಳಕೆಯ ಸಾಧ್ಯತೆ ಮತ್ತು ಸಮಸ್ಯೆಗಳನ್ನು ಪ್ರಸ್ತಾಪಿಸುತ್ತಿದ್ದಾರೆ. ಈ ಆಸಕ್ತಿಕರ ಸಂವಾದದ ಪರಿಚಯ ಇಲ್ಲಿದೆ.

ಕೃಷ್ಣಭಟ್ ಅವರು ತಮ್ಮ ಲೇಖನದಲ್ಲಿ, ‘ASCIIನಲ್ಲಿ (ಶ್ರೀಲಿಪಿ, ಬರಹ ಇತ್ಯಾದಿ) ಎಷ್ಟು ಫಾಂಟ್‌ಗಳಿವೆ ಎಂಬುದೇ ಮುಖ್ಯವಾಗುತ್ತವೆ ಮತ್ತು ಅವುಗಳ ಆಧಾರದಲ್ಲೇ ಸಾಫ್ಟ್‌ವೇರ್‌ ಮಾರಾಟವೂ ನಡೆಯುತ್ತದೆ. ಹೀಗಾಗಿ ಸಹಜವಾಗಿಯೇ, ಫಾಂಟ್‌ಗಳನ್ನೂ, ಬರವಣಿಗೆಗೆ ಅನುಕೂಲವಾಗುವ ಇತರ ಸೌಲಭ್ಯಗಳನ್ನೂ ಮಾಡುತ್ತವೆ. ಆದರೆ, ಯುನಿಕೋಡ್ ಕನ್ಸಾರ್ಶಿಯಂ ಹಾಗಲ್ಲ, ಅದು ನಡೆಯುವುದು ಕಾರ್ಪೊರೇಟ್‌ ದಾನಿಗಳಿಂದ. ನಾವು ಎರಡನ್ನೂ ಬಳಸುವುದು ಎಲ್ಲ ದೃಷ್ಟಿಯಿಂದಲೂ ಅನುಕೂಲಕರ’ ಎಂದು ಪ್ರತಿಪಾದಿಸಿದ್ದರು.

ಕೃಷ್ಣಭಟ್ ಬರಹದಲ್ಲಿ ಪ್ರಸ್ತಾಪಿಸಿದ್ದ ಹಲವು ಅಂಶಗಳನ್ನು ಪ್ರಶ್ನಿಸಿದ್ದ ಯು.ಬಿ.ಪವನಜ, ‘ಫಾಂಟ್ ಸಮಸ್ಯೆಯನ್ನು ಯುನಿಕೋಡ್ ಸಮಸ್ಯೆ ಎಂದು ಪ್ರತಿಬಿಂಬಿಸಲಾಗಿದೆ. ಯುನಿಕೋಡ್ ಎಂಬುದು ಮಾಹಿತಿ ತಂತ್ರಜ್ಞಾನದಲ್ಲಿ ಅಕ್ಷರಗಳ ಸಂಕೇತೀಕರಣದ ಒಂದು ಜಾಗತಿಕ ಶಿಷ್ಟತೆ. ಅದು ಯಾವ ಅಕ್ಷರಕ್ಕೆ ಯಾವ ಸಂಕೇತ ಎಂದು ತೀರ್ಮಾನಿಸುತ್ತದೆಯೇ ವಿನಾ ಅದನ್ನು ಯಾವ ರೂಪದಲ್ಲಿ ಪರದೆಯಲ್ಲಿ ಪ್ರದರ್ಶಿಸಬೇಕು ಅಥವಾ ಯಾವ ರೂಪದಲ್ಲಿ ಮುದ್ರಿಸಬೇಕು ಎಂದು ನಿಗದಿಪಡಿಸುವುದಿಲ್ಲ’ ಎಂದು ಹೇಳಿದ್ದರು. ತಮ್ಮ ಮಾತಿಗೆ ಪೂರಕವಾಗಿ ಯುನಿಕೋಡ್​ನ ಲಾಭಗಳು ಹಾಗೂ ಅಸ್ಕಿ (ASCII) ತಂತ್ರಜ್ಞಾನದ ಮಿತಿಗಳನ್ನೂ ಪ್ರಸ್ತಾಪಿಸಿದ್ದರು.

ಈ ಕುರಿತು ತಮ್ಮ ಫೇಸ್​ಬುಕ್​ ಪೋಸ್ಟ್​ನಲ್ಲಿ ಪ್ರತಿಕ್ರಿಯಿಸಿರುವ ಸಾಫ್ಟ್​ವೇರ್ ತಂತ್ರಜ್ಞ ಕುಂಟಾಡಿ ನಿತೀಶ್, ‘ಕನ್ನಡ ಯುನಿಕೋಡ್ ಫಾಂಟ್​ಗಳಿಗೆ ಸಾಫ್​​ವೇರ್ ಸಪೋರ್ಟ್ ಮಾಡೊಲ್ಲ ಅನ್ನೊದು ಪೊಳ್ಳುವಾದ. ಜಸ್ಟಿಫೈ ಮಾಡುವಾಗ ಉಂಟಾಗುವ ರಿವರಿಂಗ್ ಎಫೆಕ್ಟ್ ಸಹಾ ನಾವು ಸಾಫ್ಟ್​ವೇರ್​ಗಳಲ್ಲೇ ತೆಗೆದಿದ್ದೇವೆ. ಆಡೋಬ್ ಇಂಡಿಸೈನ್, ಇಲಸ್ಟ್ರೇಟರ್, ಸ್ಕ್ರಿಬಸ್ ಮುಂತಾದ ಎಲ್ಲಾ ಸಾಫ್ಟ್​ವೇರ್​ಗಳು ಈಗ ಕನ್ನಡ ಯುನಿಕೋಡ್ ಫಾಂಟ್ ಸಪೋಟ್ ಮಾಡುತ್ತವೆ. ಕನ್ನಡದ ಯುನಿಕೋಡ್ ಫಾಂಟುಗಳು ಈಗಾಗಲೇ 30-40 ರ ಆಸುಪಾಸಿನಲ್ಲಿವೆ. ನುಡಿ ಪಾರಿಜಾತ, ಬಾಲೂ ತಮ್ಮ, ಗೂಗಲ್​ನ ನೋಟೋ, ಆನೆಕ್, ಹೀಗೆ ಹಲವು ಸುಂದರ ಫಾಂಟ್​ಗಳು ಲಭ್ಯ’ ಎಂದು ಹೇಳಿದ್ದಾರೆ. ‘ಋತುಮಾನ’ ಪುಸ್ತಕಗಳಿಗೆ ಯೂನಿಕೋಡ್ ಬಳಕೆಯ ಬಗ್ಗೆಯೂ ವಿವರಿಸಿದ್ದಾರೆ.

ಕುಂಟಾಡಿ ನಿತೀಶ್ ಅವರ ಮಾತಿಗೆ ಆಕ್ಷೇಪ ವ್ಯಕ್ತಪಡಿಸಿರುವ ಕನ್ನಡ ಬರಹಗಾರ ಮತ್ತು ಪ್ರಕಾಶಕ ವಸುಧೇಂದ್ರ, ‘ಅಡೋಬಿ ಹೊಸ ಆವೃತ್ತಿ ಅತ್ಯಂತ ದುಬಾರಿ. ಕನ್ನಡ ಪ್ರಕಾಶಕರಿಗೆ ಕೊಳ್ಳಲು ಸಾಧ್ಯವಿಲ್ಲ. ನಾನು ಹಣ ಕೊಟ್ಟು CS6 ಕೊಂಡಿದ್ದೇನೆ. ಆದರೆ ಅದರಲ್ಲಿ ಈ ಸೌಲಭ್ಯವಿಲ್ಲ. ಇನ್ನು MS word ನಲ್ಲಿ ಪುಸ್ತಕ ಮಾಡುವುದು ಸಾಧ್ಯವಿಲ್ಲ. ಆದ್ದರಿಂದ ಯೂನಿಕೋಡ್ ಬಳಸಿ ಪುಸ್ತಕ ಮಾಡುವುದು ಈಗಲೂ ಸುಲಭ ಸಾಧ್ಯವಿಲ್ಲ’ ಎಂದು ತಮ್ಮ ಅನುಭವ ಹಂಚಿಕೊಂಡಿದ್ದಾರೆ.

Vasudhendra

ಯುನಿಕೋಡ್ ಸಂವಾದದಲ್ಲಿ ಸಾಹಿತಿ ಮತ್ತು ಪ್ರಕಾಶಕ ವಸುಧೇಂದ್ರ ಪ್ರತಿಕ್ರಿಯೆ

ಈ ಸಂವಾದದಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿರುವ ಕಲಾ ನಿರ್ದೇಶಕ ಯೋಜನ್ ಎ.ಶೆಟ್ಟಿ, ‘ಫೋಟೊಶಾಪ್​ನಲ್ಲಿ ಅಸ್ಕಿ (ASCII) ಫಾಂಟ್​ಗಳ ಬಳಕೆಯೇ ಸುಲಭ. ಯುನಿಕೋಡ್ ಫಾಂಟ್​ಗಳು ಬಹುತೇಕ ಸಂದರ್ಭದಲ್ಲಿ ತಪ್ಪಾಗಿ ತೋರಿಸುತ್ತವೆ. ಗ್ರಾಫಿಕ್ ವಿನ್ಯಾಸಕಾರರ ಬಳಕೆಗೆ ಇದು ಸವಾಲು ಒಡ್ಡುತ್ತದೆ’ ಎಂದು ಹೇಳಿದ್ದಾರೆ. ‘ಯುನಿಕೋಡ್ ವ್ಯವಸ್ಥೆ ಚೆನ್ನಾಗಿದೆ. ಆದರೆ ವಿನ್ಯಾಸದ ವಿಚಾರದಲ್ಲಿ ಸಾಕಷ್ಟು ಸುಧಾರಣೆಗಳು ಆಗಬೇಕಿವೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.

ಸ್ಮಾರ್ಟ್​ಫೋನ್ ಹಾಗೂ ಕಂಪ್ಯೂಟರ್​ಗೆ ಕನ್ನಡ ಅಳವಡಿಸುವಲ್ಲಿ ನಡೆದ ಪ್ರಯತ್ನಗಳನ್ನು ಜೆ.ಬಾಲಕೃಷ್ಣ ಎನ್ನುವವರು ನೆನಪಿಸಿಕೊಂಡಿದ್ದಾರೆ. ಸಂವಾದದಲ್ಲಿ ಅವರ ಪ್ರತಿಕ್ರಿಯೆಯು ಹಲವರ ಗಮನ ಸೆಳೆದಿದೆ. ‘2003ರಲ್ಲಿ ಸ್ಮಾರ್ಟ್​ಫೋನ್​ಗಳು ಇಲ್ಲದಿದ್ದ ಕಾಲದಲ್ಲಿ Nokia ಭಾರತದಲ್ಲಿ ಮೊಟ್ಟಮೊದಲಿಗೆ ಸ್ಥಳೀಯ ಭಾಷೆಗಳ OS ತರಲು ಪ್ರಯತ್ನಿಸಿದಾಗ ಅದಕ್ಕೆ ಕನ್ನಡ ಕೊಟ್ಟವನು ನಾನು. Windows 2000 Unicode support ಮಾಡುತ್ತಿರಲಿಲ್ಲ, ಯುನಿಕೋಡ್​ಗಾಗಿ ಹೊಸ ಕಂಪ್ಯೂಟರ್ ಹಾಗೂ Windows XP ಕೊಳ್ಳಬೇಕಾಗಿತ್ತು. ಆಗ ನುಡಿ ಇರಲಿಲ್ಲ. Windows keyboard ನಲ್ಲಿ ಕನ್ನಡ ಆಯ್ಕೆ ಮಾಡಿಕೊಂಡು (qwerty format ಸಾಧ್ಯವಾಗುತ್ತಿರಲಿಲ್ಲ) ಅತ್ಯಂತ ಕಷ್ಟದಿಂದ ಪದಗಳನ್ನು ರೂಪಿಸಬೇಕಾಗಿತ್ತು. ಈಗ ಯುನಿಕೋಡ್​ನ ಸಾಧ್ಯತೆಗಳು ಅಪಾರ’ ಎಂದು ಅವರು ಹೇಳಿದ್ದಾರೆ.

Published On - 11:39 am, Thu, 17 November 22

Daily Horoscope: ಈ ರಾಶಿಯವರಿಗೆ ಇಂದು ಐದು ಗ್ರಹಗಳ ಶುಭ ಫಲವಿದೆ
Daily Horoscope: ಈ ರಾಶಿಯವರಿಗೆ ಇಂದು ಐದು ಗ್ರಹಗಳ ಶುಭ ಫಲವಿದೆ
ಕೊಟ್ಟ ಮಾತು ಉಳಿಸಿಕೊಂಡ ಸುರೇಶ್, ಧನರಾಜ್ ಮಗಳಿಗೆ ಉಡುಗೊರೆ
ಕೊಟ್ಟ ಮಾತು ಉಳಿಸಿಕೊಂಡ ಸುರೇಶ್, ಧನರಾಜ್ ಮಗಳಿಗೆ ಉಡುಗೊರೆ
ಬಿಗ್​ಬಾಸ್: ಫ್ಯಾಮಿಲಿ ವಿಸಿಟ್ ಬಳಿಕ ಗೆಳೆತನಗಳೆಲ್ಲ ಪೀಸ್-ಪೀಸ್
ಬಿಗ್​ಬಾಸ್: ಫ್ಯಾಮಿಲಿ ವಿಸಿಟ್ ಬಳಿಕ ಗೆಳೆತನಗಳೆಲ್ಲ ಪೀಸ್-ಪೀಸ್
ಬಳ್ಳಾರಿಯ ಕಂಪ್ಲಿಯಿಂದ ವಕ್ಫ್ ವಿರುದ್ಧ ಹೋರಾಟ ಪುನರಾರಂಭಿಸಿದ ಯತ್ನಾಳ್ ತಂಡ
ಬಳ್ಳಾರಿಯ ಕಂಪ್ಲಿಯಿಂದ ವಕ್ಫ್ ವಿರುದ್ಧ ಹೋರಾಟ ಪುನರಾರಂಭಿಸಿದ ಯತ್ನಾಳ್ ತಂಡ
ಕುಟುಂಬದ ಅರಣ್ಯರೋದನೆ; ಗೋಗರೆದರೂ ಕಿವಿಗೆ ಹಾಕಿಕೊಳ್ಳದ ಪೊಲೀಸರು
ಕುಟುಂಬದ ಅರಣ್ಯರೋದನೆ; ಗೋಗರೆದರೂ ಕಿವಿಗೆ ಹಾಕಿಕೊಳ್ಳದ ಪೊಲೀಸರು
ಹಿರಿಯ ನಾಯಕರನ್ನು ಪೊಲೀಸ್ ವಶಕ್ಕೆ ಪಡೆದರೂ ಎದೆಗುಂದದ ಕಾರ್ಯಕರ್ತರು
ಹಿರಿಯ ನಾಯಕರನ್ನು ಪೊಲೀಸ್ ವಶಕ್ಕೆ ಪಡೆದರೂ ಎದೆಗುಂದದ ಕಾರ್ಯಕರ್ತರು
ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ