ಕೆಲವರ ಡೆಸ್ಕ್‌ಟಾಪ್ (DeskTop) ಅಥವಾ ಲ್ಯಾಪ್‌ಟಾಪ್ (Laptop) ನೋಡಿದ್ದೇನೆ. ರಾಶಿ ರಾಶಿ ಫೈಲುಗಳು ಆವರಿಸಿಕೊಂಡಿರುತ್ತವೆ! ಮತ್ತು ಇಂಥವರು ‘ನನ್ನ ಕಂಪ್ಯೂಟರ್ ಸ್ಲೋ ಆಗಿದೆ, ಒಂದು ಫೈಲ್ ಕ್ಲಿಕ್ ಮಾಡಿದರೆ, ಓಪನ್ ಆಗಲು ಐದಾರು ನಿಮಿಷಗಳೇ ಬೇಕು’ ಅಂತೆಲ್ಲಾ ದೂರುವುದೂ ಉಂಟು. ಹೀಗಾದಾಗ ಇದ್ದಕ್ಕಿದ್ದಂತೆ ಸಿಸ್ಟಂ ಶಟ್‌ಡೌನ್ ಆಗಿಬಿಡುತ್ತದೆ. ಯಾವುದಾದರೂ ವಿಡಿಯೋ ಮೇಲೆ ಕ್ಲಿಕ್ ಮಾಡುತ್ತೀರಿ, Rendering ಆಗುತ್ತಿರುವಾಗಲೇ ಪಿಸಿ ಸ್ವಿಚ್ ಆಫ್ ಆಗುತ್ತದೆ. ಈ ರೀತಿಯ ಸಮಸ್ಯೆಗಳು ಪದೇ ಪದೇ ಕಾಣಿಸಿಕೊಳ್ಳುತ್ತಿವೆಯೇ? ಹಾಗಾದರೆ ಕಂಪ್ಯೂಟರ್ overheating ಸಮಸ್ಯೆ ಎದುರಿಸುತ್ತಿದೆ ಎಂದರ್ಥ.
ಸಿಸ್ಟಂನಲ್ಲಿರುವ ಚಿಪ್ ಮತ್ತು ಹಾರ್ಡ್ ಡ್ರೈವ್‌ಗಳು ವಿದ್ಯುತ್ ಬಳಸಿಕೊಳ್ಳುತ್ತವೆ. ಇದರಿಂದ ಶಾಖ ಉತ್ಪತ್ತಿಯಾಗುತ್ತದೆ. ಹೀಗಾಗಿ ಕಂಪ್ಯೂಟರ್ ಬಿಸಿಯಾಗುವುದು ಸಹಜ. ಈ ಶಾಖವನ್ನು ತಣಿಸಲು ಒಳಗೆ ಫ್ಯಾನ್‌ಗಳಿರುತ್ತವೆ. ಆದರೆ, ಒಮ್ಮೊಮ್ಮೆ ಈ ಪಂಖದ ರೆಕ್ಕೆಗಳಿಗೆ ಸಿಕ್ಕಾಪಟ್ಟೆ ದೂಳು ಅಡರಿಕೊಂಡು ಕಂಪ್ಯೂಟರ್‌ನ ventilation ವ್ಯವಸ್ಥೆ ಸಂಪೂರ್ಣ ಸ್ಥಗಿತಗೊಂಡಿರುತ್ತದೆ. ಗಾಳಿಯಾಡಲು ಸಾಧ್ಯವೇ ಇಲ್ಲ ಎನ್ನುವಂತಾಗಿರುತ್ತದೆ. ಹೀಗಾಗಿ ಕಂಪ್ಯೂಟರ್ ಸಿಕ್ಕಾಪಟ್ಟೆ ಬಿಸಿಯಾಗುತ್ತಿರುತ್ತದೆ. ಕೆಲವು ಪಿಸಿಗಳು overheat ಆಗುತ್ತಿದ್ದಂತೆ ಸ್ವಯಂಚಾಲಿತವಾಗಿ ಶಟ್‌ಡೌನ್ ಆಗುತ್ತವೆ.
ಪಿಸಿ ನಿಗದಿತ ಪ್ರಮಾಣಕ್ಕಿಂತ ಹೆಚ್ಚು ಬಿಸಿಯಾಗುತ್ತಿದೆ ಎನ್ನುವುದು ಗಮನಕ್ಕೆ ಬಂದ ಕೂಡಲೇ ventilation ವ್ಯವಸ್ಥೆ block ಆಗಿದೆಯೇ ಎಂದು ಪರೀಕ್ಷಿಸಿಕೊಳ್ಳಬೇಕು. ಡೆಸ್ಕ್‌ಟಾಪ್ ಮತ್ತು ಲ್ಯಾಪ್‌ಟಾಪ್‌ನಲ್ಲಿ ventilation ವ್ಯವಸ್ಥೆಯಲ್ಲಿ ವ್ಯತ್ಯಾಸ ಇರುತ್ತದೆ.
ನೀವು ಡೆಸ್ಕ್‌ಟಾಪ್ ಪಿಸಿಗಳನ್ನು ಬಳಸುತ್ತಿದ್ದಲ್ಲಿ ವೆಂಟಿಲೇಷನ್ ವ್ಯವಸ್ಥೆ ಹಿಂಬದಿಯಲ್ಲಿರುತ್ತದೆ. ಸಿಪಿಯುವಿನ ಹಿಂಬದಿ ಗೋಡೆಗೆ ತಾಗುವಂತೆ ಇಡಬಾರದು. ಇದರಿಂದ ಗಾಳಿ ಸಂಚಾರಕ್ಕೆ ಅಡ್ಡಿಯಾಗಿ ಬೇಗನೆ ದೂಳು ಹಿಡಿಯುವ ಸಾಧ್ಯತೆ ಇರುತ್ತದೆ. ಮೊದಲು ಪಿಸಿಯನ್ನು ಶಟ್‌ಡೌನ್ ಮಾಡಿ, ನಂತರ ಸಿಪಿಯು ಹಿಂಬದಿಯಲ್ಲಿ ದೂಳು ಹಿಡಿದಿದೆಯೇ ಎಂದು ಪರೀಕ್ಷಿಸಿಕೊಳ್ಳಿ. ಹೊರಗಿನಿಂದ ಏನೂ ಕಾಣಿಸುತ್ತಿಲ್ಲವಾದರೆ, ಸೈಡ್ ಕವರ್ ಬಿಚ್ಚಿ ಒಳಗಡೆ ನೋಡಿ.
ಫ್ಯಾನ್‌ನ ರೆಕ್ಕೆಗಳಿಗೆ, vents ಮತ್ತು heat sinks ಮೇಲೆ ದೂಳು ಹಿಡಿದಿರುತ್ತದೆ. ಒಮ್ಮೊಮ್ಮೆ ಸಿಪಿಯುವಿನ ಒಳಗಿರುವ ಕೇಬಲ್‌ಗಳು ವೆಂಟಿಲೇಷನ್ ಕಿಂಡಿಗೆ ಅಡ್ಡವಾಗಿ ಕುಳಿತಿರುತ್ತವೆ. ಇವನ್ನು ಒಳಬದಿಗೆ ಸರಿಸಿಡಬೇಕು. ತುಂಬಾ ದಿನಗಳ ಕಾಲ ಪಿಸಿಯನ್ನು ಬಳಸದೆ ಮೂಲೆಯಲ್ಲಿಟ್ಟಿದ್ದರೂ ದೂಳು ಹಿಡಿದು, ಜೇಡರ ಬಲೆ ಕಟ್ಟುವ ಸಾಧ್ಯತೆಗಳಿರುತ್ತವೆ. ದೂಳು ಇದೆ ಎಂದು ಬಟ್ಟೆಯನ್ನು ನೀರಿನಲ್ಲಿ ಅದ್ದಿ ಫ್ಯಾನಿನ ರೆಕ್ಕೆಗಳನ್ನು ಸ್ವಚ್ಛಗೊಳಿಸುವಂತಹ ಮೂರ್ಖತನಕ್ಕೆ ಕೈ ಹಾಕಬೇಡಿ. ಅದಕ್ಕೆಂದೇ ‘compressed air’ ಎಂಬ ಸ್ಪ್ರೇ ಸಿಗುತ್ತದೆ. ‘Gas duster’ ಅಥವಾ ‘Canned air’ ಅಂತಲೂ ಇದಕ್ಕೆ ಕರೆಯುತ್ತಾರೆ. ಕಂಪ್ಯೂಟರ್/ಎಲೆಕ್ಟ್ರಾನಿಕ್ಸ್ ಉಪಕರಣಗಳನ್ನು ಮಾರುವ ಯಾವುದೇ ಅಂಗಡಿಯಲ್ಲಿ ವಿಚಾರಿಸಿದರೂ ಇದು ಸಿಗುತ್ತದೆ. ಇದನ್ನು ತೆಗೆದುಕೊಂಡು ಮುಖಗವುಸು ಹಾಕಿಕೊಂಡು ಸ್ವಲ್ಪ ಅಂತರ ಕಾಯ್ದುಕೊಂಡು ಸ್ಪ್ರೇ ಮಾಡುತ್ತಾ ದೂಳು ತೆಗೆಯಬಹುದು.
ಡೆಸ್ಕ್‌ಟಾಪ್‌ಗೆ ಹೋಲಿಸಿದರೆ ಲ್ಯಾಪ್‌ಟಾಪ್‌ನಲ್ಲಿ ದೂಳು ಸ್ವಚ್ಛಗೊಳಿಸುವುದು ಕಷ್ಟ. ಅದರಲ್ಲೂ ಅಲ್ಟ್ರಾಥಿನ್ ಲ್ಯಾಪ್‌ಟಾಪ್‌ಗಳಲ್ಲಿ ventilation ಸಮಸ್ಯೆ ಹೆಚ್ಚಿರುತ್ತದೆ. ಲ್ಯಾಪ್‌ಟಾಪ್‌ನ ಮೂಲೆಯಲ್ಲಿ ventilation ಇರುತ್ತದೆ. ಲ್ಯಾಪ್‌ಟಾಪ್ ಬಗೆಗೆ ಸ್ವಲ್ಪ ತಾಂತ್ರಿಕ ಜ್ಞಾನ ಇದ್ದರೆ ಸ್ಕ್ರೂ ಬಿಚ್ಚಿ ಎಚ್ಚರಿಕೆಯಿಂದ ಒಳಭಾಗವನ್ನು ಸ್ವಚ್ಛಗೊಳಿಸಬಹುದು. ರ್‍ಯಾಮ್ ಮತ್ತು ಹಾರ್ಡ್‌ಡ್ರೈವ್ ಕೂಡ ಕಾಣುವ ಹಾಗಿರುತ್ತದೆ. ಆದ್ದರಿಂದ ಸ್ವಚ್ಛಗೊಳಿಸುವಾಗ ಎಚ್ಚರಿಕೆ ಅಗತ್ಯ. ನಿಧಾನವಾಗಿ ದೂಳು ತೆಗೆಯಬೇಕು. ಆದರೆ, ಯಾವುದೇ ಕಾರಣಕ್ಕೂ ಲ್ಯಾಪ್‌ಟಾಪ್ ಸ್ವಿಚ್‌ಆನ್ ಮಾಡಿ ತಲೆದಿಂಬು, ಗಾದಿ, ಉಣ್ಣೆಯ ಬಟ್ಟೆ ಅಥವಾ ಬ್ಯಾಗ್‌ನಲ್ಲಿಡಬಾರದು. ನಿಷ್ಕ್ರಿಯವಾಗಿದ್ದಾಗ ಅಥವಾ sleep mode ನಲ್ಲಿದ್ದಾಗ ಮಾತ್ರ ದೂಳು ಸ್ವಚ್ಛಗೊಳಿಸಬಹುದು. ಸಿಕ್ಕಾಪಟ್ಟೆ ಬಿಸಿಯಾಗುತ್ತಿದ್ದರೆ laptop cooling pad ಖರೀದಿಸಬಹುದು. ದೂಳು ಹೆಚ್ಚಿದ್ದರೆ, ರೆಕ್ಕೆಗಳಿಗೆ ಗಟ್ಟಿಯಾಗಿ ಅಂಟಿಕೊಂಡಿದ್ದರೆ ಅದನ್ನು ತೆಗೆಯಲು ಚಿಕ್ಕ PC vaccum Cleaner ಬಳಸಬಹುದು.
ಇನ್ನೂ ಕಂಪ್ಯೂಟರ್ ಕಾರ್ಯನಿರ್ವಹಣೆ ಸ್ಲೋ ಆಗದಂತಿರಲು ಹಾಗೂ ಕಂಪ್ಯೂಟರ್ ಬಳಕೆಯ ಮೂಲಭೂತ ರೂಲ್‌ಗಳಲ್ಲೊಂದು ಎಂದರೆ, ಯಾವುದೇ ಫೈಲ್‌ಗಳನ್ನು ‘ಸಿ’ ಡ್ರೈವ್‌ನಲ್ಲಿ ಸೇವ್ ಮಾಡಬಾರದು. ಡೆಸ್ಕ್‌ಟಾಪ್, ಮೈ ಡಾಕ್ಯುಮೆಂಟ್ಸ್, ಮೈ ಪಿಕ್ಚರ್ಸ್, ಮೈ ಮ್ಯೂಸಿಕ್, ಮೈ ವಿಡಿಯೋ …ಮುಂತಾಗಿ ಡೀಫಾಲ್ಟ್ ಆಗಿ ಸೇವ್ ಆಗುವ ಸ್ಥಳಗಳೆಲ್ಲವೂ ಇರುವುದು ಸಿ ಡ್ರೈವ್‌ನಲ್ಲೇ ಎಂಬುದು ನೆನಪಿನಲ್ಲಿರಲಿ.
ಕಂಪ್ಯೂಟರಿಗೇನಾದರೂ ಹಾನಿಯಾದರೆ (ಕರಪ್ಟ್ ಆದರೆ) ಅಥವಾ ವೈರಸ್ ದಾಳಿಯಾದರೆ, ಮೊದಲು ಬಲಿಯಾಗುವುದು ಸಿ ಡ್ರೈವ್. ಅದರಲ್ಲಿರುವ ಚಿತ್ರ, ಹಾಡು, ಡಾಕ್ಯುಮೆಂಟ್ ಮತ್ತಿತರ ಫೈಲುಗಳೆಲ್ಲವೂ ಮರಳಿ ದೊರೆಯದಷ್ಟು ಹಾನಿಗೀಡಾಗಬಹುದು. ಆದರೆ, ಬೇರೆ ಡ್ರೈವ್‌ಗಳಲ್ಲಿ (ಉದಾಹರಣೆಗೆ ಡಿ ಅಥವಾ ಇ ಡ್ರೈವ್) ಸೇವ್ ಆಗಿರುವವು ಸುರಕ್ಷಿತವಾಗಿರುತ್ತವೆ. ಅನಿವಾರ್ಯವೆಂದಾದರೆ ಮಾತ್ರ, ಡೆಸ್ಕ್‌ಟಾಪ್‌ನಲ್ಲಿ ತಾತ್ಕಾಲಿಕವಾಗಿ ಸೇವ್ ಮಾಡಿಕೊಂಡು, ಕೆಲಸ ಪೂರ್ಣಗೊಳಿಸಿದ ಬಳಿಕ ಅದನ್ನು ಬೇರೆ ಡ್ರೈವ್‌ಗೆ ವರ್ಗಾಯಿಸುವುದು ಒಳ್ಳೆಯ ಆಯ್ಕೆ.
ಅಂತೆಯೆ ಕಂಪ್ಯೂಟರ್ ಕೆಟ್ಟಾಗ ಅದನ್ನು ‘ಫಾರ್ಮ್ಯಾಟ್ ಮಾಡಬೇಕು’ ಅಂತ ಹೇಳೋದನ್ನು ಕೇಳಿರುತ್ತೀರಿ. ಇದನ್ನು ಸರಳವಾಗಿ ಹೇಳುವುದಾದರೆ, ಎಲ್ಲ ಫೈಲುಗಳನ್ನು ಡಿಲೀಟ್ ಮಾಡಿ, ಕಂಪ್ಯೂಟರಿನ ಕಾರ್ಯಾಚರಣಾ ತಂತ್ರಾಂಶವನ್ನು ಹೊಚ್ಚ ಹೊಸದರಂತೆ ಆಗಿಸುವ ಕ್ರಿಯೆ. ಹೆಚ್ಚಿನ ಸಂದರ್ಭಗಳಲ್ಲಿ, ಸಿ ಡ್ರೈವ್ ಮಾತ್ರ ಫಾರ್ಮ್ಯಾಟ್ ಮಾಡಿದರೂ ಸಾಕಾಗುತ್ತದೆ. ಹೀಗಾಗಿ ಬೇರೆ ಡ್ರೈವ್‌ಗಳಲ್ಲಿರುವ ನಿಮ್ಮ ಫೈಲ್‌ಗಳು ಸುರಕ್ಷಿತವಾಗಿರುತ್ತವೆ.
ಕಷ್ಟಪಟ್ಟು ನೀವು ಯಾವುದೋ ಲೇಖನ ಸಿದ್ಧ ಮಾಡುತ್ತಿರುವಾಗ, ಅದು ಇನ್ನೇನು ಪೂರ್ಣಗೊಳ್ಳುವ ಹಂತದಲ್ಲಿದ್ದಾಗ ಕಂಪ್ಯೂಟರ್ ಹ್ಯಾಂಗ್ ಆಗಿ, ಕೊನೆಗೆ ಫಾರ್ಮ್ಯಾಟ್ ಮಾಡಬೇಕಾಗಿ ಬಂದರೆ, ನಿಮ್ಮ ಫೈಲ್ ಮತ್ತೆ ಸಿಗಲಾರದು. ಮುನ್ನೆಚ್ಚರಿಕೆಯಾಗಿ ಯಾವತ್ತೂ ಫೈಲ್‌ಗಳನ್ನು ಸಿ ಡ್ರೈವ್‌ಗೆ ಹೊರತಾದ ಸ್ಥಳಗಳಲ್ಲೇ ಸೇವ್ ಮಾಡಿಕೊಳ್ಳುವುದು ಅಗತ್ಯ.
Computer Tips Part 1: ಮೌಸ್ ಬಳಸುವಾಗ ಈ ತಪ್ಪನ್ನು ಮಾಡದಿರಿ, ಆರೋಗ್ಯಕ್ಕೆ ತೊಂದರೆಯಾದೀತು
Smartphone Tips 4: ನಿಮ್ಮ ಸ್ಮಾರ್ಟ್ಫೋನ್ ಹ್ಯಾಕ್ ಆಗದಂತೆ ಎಚ್ಚರ ವಹಿಸಿ
(Computer Tips: Solutions to PC Personal Computer Overheating and running slow Here is the steps to fix it )