ನವದೆಹಲಿ: ಮುಂದಿನ ಕೆಲವೇ ವಾರಗಳಲ್ಲಿ ಟ್ವಿಟರ್ನಲ್ಲಿ (Twitter) ವಿವ್ಸ್ ಕೌಂಟ್ ಕಾಣಿಸುವ ಹೊಸ ಫೀಚರ್ ಆರಂಭವಾಗಲಿದೆ ಎಂದು ಮೈಕ್ರೋ ಬ್ಲಾಗಿಂಗ್ ತಾಣದ ಮಾಲೀಕ ಎಲಾನ್ ಮಸ್ಕ್ (Elon Musk) ಶುಕ್ರವಾರ ಘೋಷಿಸಿದ್ದಾರೆ. ಬಳಕೆದಾರರೊಬ್ಬರ ಟ್ವೀಟ್ಗೆ ಪ್ರತಿಕ್ರಿಯಿಸಿದ ಅವರು, ಹೊಸ ಫೀಚರ್ ಆರಂಭಿಸುವ ಬಗ್ಗೆ ಮಾಹಿತಿ ನೀಡಿದ್ದಾರೆ.
‘ಕೆಲವು ವಾರಗಳಲ್ಲಿ ಟ್ವೀಟ್ಗಳಿಗೆ ವಿವ್ಸ್ ಕೌಂಟ್ ಕಾಣಿಸಲಿದೆ. ಟ್ವಿಟರ್ ಈಗ ಜನರು ಯೋಚಿಸುತ್ತಿರುವುದಕ್ಕಿಂತಲೂ ಹೆಚ್ಚು ಸಕ್ರಿಯವಾಗಿದೆ’ ಎಂದು ಮಸ್ಕ್ ಟ್ವೀಟ್ ಮಾಡಿದ್ದಾರೆ.
Twitter will start showing view count for all tweets, just as view count is shown for all videos. The system is far more alive than it would seem.
— Elon Musk (@elonmusk) December 1, 2022
ಅನೇಕ ಬಳಕೆದಾರರು ಟ್ವಿಟರ್ ತಾಣಕ್ಕೆ ಭೇಟಿ ನೀಡಿ ಸಂದೇಶಗಳನ್ನು ಓದುತ್ತಾರೆ. ಆದರೆ ಸಂವಹನ ನಡೆಸುವುದಾಗಲೀ ಟ್ವೀಟ್ ಮಾಡುವುದಾಗಲೀ ಇಲ್ಲ. ಪ್ರತಿ ದಿನ ಟ್ವೀಟ್ಗಳನ್ನು ಓದುವ ಅನೇಕರನ್ನು ನಾನು ಭೇಟಿಯಾಗುತ್ತೇನೆ. ಆದರೆ ಅವರೆಲ್ಲ ಟ್ವೀಟ್ ಮಾಡುವುದಿಲ್ಲ. ದಯವಿಟ್ಟು ಸಾರ್ವಜನಿಕ ಸಂವಾದಕ್ಕೆ ನೀವೂ ದನಿಗೂಡಿಸಿ ಎಂದು ಮಸ್ಕ್ ಗುರುವಾರ ಟ್ವೀಟ್ ಮಾಡಿದ್ದರು.
I meet so many people who read twitter every day, but almost never tweet.
If I may beg your indulgence, please add your voice to the public dialogue!
— Elon Musk (@elonmusk) December 1, 2022
ಬಳಕೆದಾರರನ್ನು ಸೆಳೆಯಲು ಮಸ್ಕ್ ತಂತ್ರ
ಮಾಡಿರುವ ಟ್ವೀಟ್ ಅನ್ನು ಎಷ್ಟು ಜನ ವೀಕ್ಷಿಸಿದ್ದಾರೆ ಎಂಬುದು ತಿಳಿಯುವಂತಿದ್ದರೆ ಜನ ಹೆಚ್ಚೆಚ್ಚು ಟ್ವೀಟ್ ಮಾಡಬಹುದು ಮತ್ತು ಟ್ವಿಟರ್ನಲ್ಲಿ ಹೆಚ್ಚು ತೊಡಗಿಸಿಕೊಳ್ಳಬಹುದು ಎಂಬುದು ಮಸ್ಕ್ ಲೆಕ್ಕಾಚಾರ. ಇದಕ್ಕಾಗಿಯೇ ವಿವ್ಸ್ ಕೌಂಟ್ ತೋರಿಸುವ ಫೀಚರ್ ಆರಂಭಿಸಲು ನಿರ್ಧರಿಸಿದ್ದಾರೆ ಎಂದು ಮೂಲಗಳು ಹೇಳಿವೆ.
ಇದನ್ನೂ ಓದಿ: Twitter Layoffs: ಸ್ತ್ರೀಯರನ್ನೇ ಗುರಿ ಮಾಡುತ್ತಾರೆ; ಎಲಾನ್ ಮಸ್ಕ್ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ಮಹಿಳೆಯರು
ಟ್ವಿಟರ್ ಮಾಲೀಕತ್ವ ವಹಿಸಿಕೊಂಡ ಬೆನ್ನಲ್ಲೇ ಮಸ್ಕ್ ಅವರು ಬ್ಲೂಟಿಕ್ಗೆ ಶುಲ್ಕ ವಿಧಿಸುವ ಬಗ್ಗೆ ಘೋಷಿಸಿದ್ದರು. ಬಳಿಕ ಅದನ್ನು ಜಾರಿಗೆ ತಂದಿದ್ದರು. ಆದರೆ, ನಕಲಿ ಖಾತೆಗಳ ಹಾವಳಿ ತಡೆಯುವಲ್ಲಿ ವಿಫಲವಾದ ಕಾರಣ ಅದನ್ನು ತಾತ್ಕಾಲಿಕವಾಗಿ ಹಿಂಪಡೆದಿದ್ದರು. ಇದೀಗ ಮತ್ತೆ ದೃಢೀಕರಣಕ್ಕೆ ಶುಲ್ಕ ಆರಂಭಿಸುವ ಸುಳಿವು ನೀಡಿದ್ದಾರೆ. ಈ ಮಧ್ಯೆ, . ಟ್ವಿಟರ್ನ ಅಕ್ಷರ ಮಿತಿಯನ್ನು 280ರಿಂದ 1000ಕ್ಕೆ ಹೆಚ್ಚಿಸುವ ಬಗ್ಗೆಯೂ ಇತ್ತೀಚೆಗೆ ಸುಳಿವು ನೀಡಿದ್ದಾರೆ. ಟ್ವಿಟರ್ನಲ್ಲಿ ಸ್ಕ್ಯಾಮ್ ಹಾಗೂ ಸ್ಪ್ಯಾಮ್ ಖಾತೆಗಳ ಕಡಿವಾಣಕ್ಕೆ ಮುಂದಾಗಿರುವುದಾಗಿ ತಿಳಿಸಿದ್ದ ಅವರು, ನಿಮ್ಮ ಫಾಲೋರ್ಸ್ ಸಂಖ್ಯೆ ಕುಸಿಯಬಹುದು ಎಂದು ಬಳಕೆದಾರರಿಗೆ ತಿಳಿಸಿದ್ದರು.
ಹಲವು ಕಾರಣಗಳಿಗೆ ಸುದ್ದಿಯಾಗುತ್ತಿದ್ದಾರೆ ಮಸ್ಕ್
ಎಲಾನ್ ಮಸ್ಕ್ ಅವರು ಟ್ವಿಟರ್ ಅನ್ನು ಖರೀದಿಸಿದ ಬಳಿಕ ಹಲವು ಕಾರಣಗಳಿಂದಾಗಿ ಪದೇಪದೇ ಸುದ್ದಿಯಾಗುತ್ತಿದ್ದಾರೆ. ಉದ್ಯೋಗಿಗಳ ವಜಾ, ಬ್ಲೂಟಿಕ್, ಟ್ವಿಟರ್ ಖಾತೆಗಳ ಬ್ಲಾಕ್ ಸೇರಿದಂತೆ ಅನೇಕ ಕಾರಣಗಳಿಗೆ ಸುದ್ದಿಯಾಗಿದ್ದಾರೆ. ಮಸ್ಕ್ ನಡೆಗಳು ಜಾಗತಿಕವಾಗಿ ಚರ್ಚೆಗೆ ಗ್ರಾಸವಾಗಿವೆ. ಈ ಮಧ್ಯೆ, ಟ್ವಿಟರ್ನಲ್ಲಿ ವಜಾ ಪ್ರಕ್ರಿಯೆ ನಡೆಸುವಾಗ ಸ್ತ್ರೀಯರನ್ನೇ ಗುರಿಯಾಗಿಸಲಾಗಿದೆ ಎಂದು ಆರೋಪಿಸಿರುವ ಇಬ್ಬರು ಮಹಿಳೆಯರು ಸ್ಯಾನ್ ಫ್ರಾನ್ಸಿಸ್ಕೊ ಫೆಡರಲ್ ಕೋರ್ಟ್ನಲ್ಲಿ ಮೊಕದ್ದಮೆ ಹೂಡಿದ್ದಾರೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ