Twitter Layoffs: ಸ್ತ್ರೀಯರನ್ನೇ ಗುರಿ ಮಾಡುತ್ತಾರೆ; ಎಲಾನ್ ಮಸ್ಕ್ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ಮಹಿಳೆಯರು
ಸ್ಯಾನ್ ಫ್ರಾನ್ಸಿಸ್ಕೊ ಫೆಡರಲ್ ಕೋರ್ಟ್ ಮೆಟ್ಟಿಲೇರಿರುವ ಮಹಿಳೆಯರು, ಟ್ವಿಟರ್ನಿಂದ ವಜಾಗೊಂಡಿರುವ ಉದ್ಯೋಗಿಗಳಲ್ಲಿ ಶೇಕಡಾ 57ರಷ್ಟು ಮಂದಿ ಮಹಿಳೆಯರು ಎಂದು ಆರೋಪಿಸಿದ್ದಾರೆ.
ಸ್ಯಾನ್ ಫ್ರಾನ್ಸಿಸ್ಕೊ: ಟ್ವಿಟರ್ನಿಂದ (Twitter) ವಜಾಗೊಂಡಿರುವ ಇಬ್ಬರು ಮಹಿಳೆಯರು ಕಂಪನಿ ಮಾಲೀಕ ಎಲಾನ್ ಮಸ್ಕ್ (Elon Musk) ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದಾರೆ. ಟ್ವಿಟರ್ ಸಾಮೂಹಿಕ ವಜಾ (Mass Layoffs) ಪ್ರಕ್ರಿಯೆಯಿಂದ ಮಹಿಳಾ ಉದ್ಯೋಗಿಗಳೇ ಹೆಚ್ಚು ತೊಂದರೆಗೆ ಒಳಗಾಗಿದ್ದಾರೆ. ವಜಾ ಪ್ರಕ್ರಿಯೆ ನಡೆಸುವಾಗ ಸ್ತ್ರೀಯರನ್ನೇ ಗುರಿಯಾಗಿಸಲಾಗಿದೆ ಎಂದು ಮಹಿಳೆಯರು ಆರೋಪಿಸಿದ್ದಾರೆ. ಎಲಾನ್ ಮಸ್ಕ್ ಅವರು 44 ಶತಕೋಟಿ ಡಾಲರ್ ಮೊತ್ತಕ್ಕೆ ಟ್ವಿಟರ್ ಅನ್ನು ಖರೀದಿಸಿದ ಬೆನ್ನಲ್ಲೇ ಮೈಕ್ರೋ ಬ್ಲಾಗಿಂಗ್ ತಾಣ ಉದ್ಯೋಗಿಗಳ ಸಾಮೂಹಿಕ ವಜಾ ಆರಂಭಿಸಿತ್ತು. ಇನ್ನು ಮುಂದೆ ನಿಮಗೆ ಕಂಪನಿಯಲ್ಲಿ ಉದ್ಯೋಗ ಇರುವುದಿಲ್ಲ. ಮೂರು ತಿಂಗಳ ವೇತನವನ್ನು ಪರಿಹಾರವಾಗಿ ನೀಡಲಾಗುವುದು ಎಂದು ನವೆಂಬರ್ 4ರಂದು ಅರ್ಧದಷ್ಟು ಉದ್ಯೋಗಿಗಳಿಗೆ ಟ್ವಿಟರ್ ತಿಳಿಸಿತ್ತು.
ಸ್ಯಾನ್ ಫ್ರಾನ್ಸಿಸ್ಕೊ ಫೆಡರಲ್ ಕೋರ್ಟ್ ಮೆಟ್ಟಿಲೇರಿರುವ ಮಹಿಳೆಯರು, ಟ್ವಿಟರ್ನಿಂದ ವಜಾಗೊಂಡಿರುವ ಉದ್ಯೋಗಿಗಳಲ್ಲಿ ಶೇಕಡಾ 57ರಷ್ಟು ಮಂದಿ ಮಹಿಳೆಯರು ಎಂದು ಆರೋಪಿಸಿದ್ದಾರೆ. ವಜಾ ಪ್ರಕ್ರಿಯೆಗೂ ಮುನ್ನ ಟ್ವಿಟರ್‌ನಲ್ಲಿ ಪುರುಷರೇ ಹೆಚ್ಚು ಸಂಖ್ಯೆಯಲ್ಲಿದ್ದರು ಎಂದು ಅವರು ದೂರಿದ್ದಾರೆ.
ಇದನ್ನೂ ಓದಿ: Koo App: ಟ್ವಿಟರ್ಗೆ ಗುಡ್ ಬೈ ಹೇಳಿದ ಉದ್ಯೋಗಿಗಳಿಗೆ ಕೂ ಯಿಂದ ಭರ್ಜರಿ ಆಫರ್
ಟ್ವಿಟರ್ ಕ್ರಮದಿಂದಾಗಿ ಮಹಿಳೆಯರಿಗೆ ತೊಂದರೆಯಾಗಿದೆ. ಮಹಿಳೆಯರನ್ನು ಉದ್ಯೋಗದಿಂದ ವಜಾಗೊಳಿಸಿರುವುದು ಮಕ್ಕಳು, ಕುಟುಂಬದವರ ಮೇಲೆ ಹೆಚ್ಚು ಕಾಳಜಿ ವಹಿಸುವ ಅವರ ಮೇಲೆ ಪರಿಣಾಮ ಬೀರಿದೆ ಎಂದು ‘ಎಪಿ’ ಸುದ್ದಿಸಂಸ್ಥೆ ವರದಿ ಮಾಡಿದೆ. ವಜಾಗೊಂಡ ಮಹಿಳಾ ಉದ್ಯೋಗಿಗಳ ಪರವಾಗಿ ಕೆರೊಲಿನಾ ಬರ್ನಾಲ್ ಸ್ಟ್ರಿಫ್ಲಿಂಗ್ ಹಾಗೂ ವಿಲೋ ರೆನ್ ಟರ್ಕಲ್ ಎಂಬವರು ಕೋರ್ಟ್ನಲ್ಲಿ ದಾವೆ ಹೂಡಿದ್ದಾರೆ ಎಂದು ವರದಿ ತಿಳಿಸಿದೆ.
ಟ್ವಿಟರ್‌ನಲ್ಲಿ ಉದ್ಯೋಗಿಗಳ ಸಾಮೂಹಿಕ ವಜಾಗೊಳಿಸುವಿಕೆಯು ಪುರುಷ ಉದ್ಯೋಗಿಗಳಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಮಹಿಳಾ ಉದ್ಯೋಗಿಗಳ ಮೇಲೆ ಪರಿಣಾಮ ಬೀರಿದೆ. ಇಷ್ಟೇ ಅಲ್ಲದೆ, ಎಲಾನ್ ಮಸ್ಕ್ ಅವರು ಮಹಿಳೆಯರ ಬಗ್ಗೆ ಹಲವಾರು ಬಾರಿ ಸಾರ್ವಜನಿಕವಾಗಿ ತಾರತಮ್ಯದ ಮಾತುಗಳನ್ನಾಡಿದ್ದಾರೆ. ಇದು ಸಾಮೂಹಿಕ ವಜಾಗೊಳಿಸುವಿಕೆಯ ವೇಳೆ ಮಹಿಳಾ ಉದ್ಯೋಗಿಗಳ ಮೇಲೆ ಹೆಚ್ಚಿನ ಪ್ರಭಾವ ಬೀರಿದೆ ಎಂದು ದೂರುದಾರರು ಉಲ್ಲೇಖಿಸಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ