ಬಹುನಿರೀಕ್ಷಿತ ಫಿಫಾ ವಿಶ್ವಕಪ್ 2022 ಫುಟ್ಬಾಲ್ (FIFA World Cup 2022) ಪಂದ್ಯಾವಳಿಗೆ ಕ್ಷಣಗಣನೆ ಶುರುವಾಗಿದೆ. ಫುಟ್ಬಾಲ್ ಇತಿಹಾಸದಲ್ಲಿ ಮೊದಲ ಬಾರಿಗೆ ಕತಾರ್ (Qatar) ವಿಶ್ವಕಪ್ ಅನ್ನು ಆಯೋಜಿಸಲು ಸಿದ್ಧವಾಗಿ ನಿಂತಿದೆ. ಫುಟ್ಬಾಲ್ (Football) ಫೀವರ್ಗೆ ನವೆಂಬರ್ 20ಕ್ಕೆ ಚಾಲನೆ ಸಿಗಲಿದ್ದು ಡಿಸೆಂಬರ್ 18 ರಂದು ಕೊನೆಗೊಳ್ಳುತ್ತದೆ. ಇದರ ನಡುವೆ ಸರ್ಚ್ ಇಂಜಿನ್ ದೈತ್ಯ ಗೂಗಲ್ ಡೂಡಲ್ ರಚಿಸುವ ಮೂಲಕ ವಿಶೇಷವಾಗಿ ಫಿಫಾ ವಿಶ್ವಕಪ್ ಅನ್ನು ಸಂಭ್ರಮಿಸಿದೆ. ಗೂಗಲ್ ಸರ್ಚ್ ತೆರೆದ ತಕ್ಷಣ ಅನಿಮೇಟೆಡ್ ಮಾದರಿಯಲ್ಲಿ ಡೂಡಲ್ ರಚಿಸಲಾಗಿದ್ದು, ಇದರ ಮೇಲೆ ಕ್ಲಿಕ್ ಕೊಟ್ಟ ತಕ್ಷಣ ಫಿಫಾ ವಿಶ್ವಕಪ್ ಕುರಿತ ಸುದ್ದಿಗಳ ಪೇಜ್ ತೆರೆಯುತ್ತದೆ.
ಇಂದು ಫಿಫಾ ಫುಟ್ಬಾಲ್ ವಿಶ್ವಕಪ್ ಉದ್ಘಾಟನಾ ಪಂದ್ಯವು ಭಾರತೀಯ ಕಾಲಮಾನದ ಪ್ರಕಾರ ರಾತ್ರಿ 7:30ಕ್ಕೆ ಪ್ರಾರಂಭವಾಗುತ್ತದೆ. ಮಧ್ಯಾಹ್ನ 3.30ಕ್ಕೆ ಮೊದಲ ಪಂದ್ಯ, ಎರಡನೇ ಪಂದ್ಯ ಸಂಜೆ 6.30ಕ್ಕೆ, ಮೂರನೇ ಪಂದ್ಯ 9.30ಕ್ಕೆ ಹಾಗೂ ಮಧ್ಯರಾತ್ರಿ ನಾಲ್ಕನೇ ಪಂದ್ಯ 12.30ಕ್ಕೆ ನಡೆಯಲಿದೆ. ಡಿಸೆಂಬರ್ 18 ರಂದು ಫೈನಲ್ ಏರ್ಪಡಿಸಲಾಗಿದೆ. ಈ ಪಂದ್ಯಗಳನ್ನು ಭಾರತದಲ್ಲಿ ಸ್ಪೋರ್ಟ್ಸ್ 18 ಚಾನೆಲ್‌ನಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ. ಅದೇ ಸಮಯದಲ್ಲಿ Voot ಅಪ್ಲಿಕೇಶನ್ ಡಿಜಿಟಲ್‌ನಲ್ಲಿ ನೇರ ಪ್ರಸಾರವಾಗುತ್ತದೆ.
ಕಾಲ್ಚೆಂಡಿನ ಕಾದಾಟಕ್ಕೆ 32 ತಂಡಗಳು ಸಿದ್ಧವಾಗಿ ನಿಂತಿದೆ. ಪ್ರತಿ ಗುಂಪಿನಲ್ಲಿ ಅಗ್ರ 2 ಸ್ಥಾನಗಳನ್ನು ಪಡೆಯುವ ತಂಡಗಳು ನಾಕೌಟ್ ಹಂತಕ್ಕೆ ಪ್ರವೇಶಿಸಲಿವೆ. 8 ಪ್ರಿ ಕ್ವಾರ್ಟರ್ ಫೈನಲ್, 4 ಕ್ವಾರ್ಟರ್ ಫೈನಲ್, 2 ಸೆಮಿಫೈನಲ್‌ಗಳ ಬಳಿಕ ಫೈನಲ್‌ಗೇರುವ ತಂಡಗಳು ಯಾವುವು ಎನ್ನುವುದು ನಿರ್ಧಾರವಾಗಲಿದೆ. ಅಲ್ ಬೇತ್ ಸ್ಟೇಡಿಯಂನಲ್ಲಿ ಅದ್ಧೂರಿ ಉದ್ಘಾಟನಾ ಸಮಾರಂಭ ಆಯೋಜಿಸಲಾಗಿದೆ. ಇಲ್ಲಿ ಸುಮಾರು 60,000 ಆಸನ ಸಾಮರ್ಥ್ಯವನ್ನು ಏರ್ಪಡಿಸಲಾಗಿದೆ. ಉದ್ಘಾಟನಾ ಸಮಾರಂಭಕ್ಕಾಗಿ ಪ್ರಸಿದ್ಧ ಬಾಯ್ ಬ್ಯಾಂಡ್‌ನ ಏಳು ಸದಸ್ಯರಲ್ಲಿ ಒಬ್ಬರಾದ ಜಂಗ್‌ಕುಕ್ ಪ್ರದರ್ಶನ ನೀಡಲಿದ್ದಾರೆ ಎಂದು ದಕ್ಷಿಣ ಕೊರಿಯಾದ ಬಿಟಿಎಸ್ ಹೇಳಿದೆ.
ಕತಾರ್ ಈ ಬಾರಿಯ ವಿಶ್ವಕಪ್‌ಗಾಗಿ ಒಟ್ಟು 7 ಅತ್ಯಾಧುನಿಕ ಸ್ಟೇಡಿಯಂಗಳನ್ನು ನಿರ್ಮಿಸಿದೆ. 64 ಪಂದ್ಯಗಳು ಅಲ್ ಬೇತ್ ಸ್ಟೇಡಿಯಂ, ಖಲೀಫಾ ಇಂಟರ್ನ್ಯಾಷನಲ್ ಸ್ಟೇಡಿಯಂ, ಅಲ್ ಥುಮಾಮಾ ಸ್ಟೇಡಿಯಂ, ಅಹ್ಮದ್ ಬಿನ್ ಅಲಿ ಸ್ಟೇಡಿಯಂ, ಲುಸೈಲ್ ಸ್ಟೇಡಿಯಂ, ಸ್ಟೇಡಿಯಂ 974, ಎಜುಕೇಶನ್ ಸಿಟಿ ಸ್ಟೇಡಿಯಂ ಮತ್ತು ಅಲ್ ಜನೌಬ್ ಸ್ಟೇಡಿಯಂನಲ್ಲಿ ಪಂದ್ಯಗಳು ನಡೆಯಲಿವೆ.
ಟಿಕೆಟ್ ಬೆಲೆ ದುಬಾರಿ:
ನಾಲ್ಕು ವರ್ಷಗಳ ಹಿಂದೆ ರಷ್ಯಾದಲ್ಲಿ ನಡೆದ ವಿಶ್ವಕಪ್ ಫುಟ್ಬಾಲ್ ವೇಳೆಯಿದ್ದ ಟಿಕೆಟ್ ದರಕ್ಕಿಂತ ಈ ಬಾರಿ ಶೇ. 40 ರಷ್ಟು ಏರಿಕೆಯಾಗಿದೆ. ಅಂದು ಸರಾಸರಿ 214 ಪೌಂಡ್‌ಗಳಾಗಿದ್ದರೆ (20 ಸಾವಿರ ರೂ.) ಕತಾರ್‌ನಲ್ಲಿ ಇದು 286 ಪೌಂಡ್‌ಗಳಿಗೆ ಏರಿದೆ (28 ಸಾವಿರ ರೂ.). 2018ರ ವಿಶ್ವಕಪ್ ಫೈನಲ್ ಪಂದ್ಯದ ಟಿಕೆಟ್ ದರದೊಂದಿಗೆ ಹೋಲಿಸಿದರೆ ಈ ಸಲದ ದರದಲ್ಲಿ ಶೇ. 59ರಷ್ಟು ಏರಿಕೆ ಆಗಿದೆ. ಅಲ್ಲದೆ ಫೈನಲ್ ಪಂದ್ಯದ ಅತ್ಯಂತ ದುಬಾರಿ ಟಿಕೆಟ್ ಬೆಲೆ 686 ಪೌಂಡ್ (66,689 ರೂ.) ಆಗಿದೆ. ಇದು ಕಳೆದ 20 ವರ್ಷಗಳ ವಿಶ್ವಕಪ್ ಫುಟ್ಬಾಲ್ ಇತಿಹಾಸದಲ್ಲೇ ಅತ್ಯಂತ ದುಬಾರಿ ಎಂಬುದಾಗಿ ಸಮೀಕ್ಷೆಯೊಂದು ತಿಳಿಸಿದೆ.
Published On - 12:10 pm, Sun, 20 November 22