ಚೆನ್ನೈ: ಗೂಗಲ್ ಟ್ರಾನ್ಸ್ಲೇಟ್ (Google Translate) 8 ಹೊಸ ಭಾರತೀಯ ಭಾಷೆಗಳನ್ನು ಒಳಗೊಂಡಂತೆ 24 ಹೊಸ ಭಾಷೆಗಳನ್ನು ಸೇರಿಸುತ್ತಿದೆ. ಇಂಟರ್ನೆಟ್ (Internet) ದೈತ್ಯವಾದ ಗೂಗಲ್ ಬೇರೆ ಭಾಷೆಗಳ ಪದಗಳನ್ನು ನಮಗೆ ಬೇಕಾದ ಭಾಷೆಯಲ್ಲಿ ಅರ್ಥ ಮಾಡಿಕೊಳ್ಳಲು ಅನುಕೂಲವಾಗುವಂತೆ ಅನುವಾದ ಮಾಡಿಕೊಡುವ ಸೇವೆಯನ್ನು ಒದಗಿಸುತ್ತದೆ. ಇದೀಗ ಈ ಗೂಗಲ್ ಅನುವಾದದ ಪಟ್ಟಿಗೆ ಸಂಸ್ಕೃತ (Sanskrit), ಕೊಂಕಣಿ (Konkani) ಸೇರಿದಂತೆ 8 ಭಾರತೀಯ ಭಾಷೆಗಳು ಸೇರ್ಪಡೆಯಾಗಿವೆ.
ಮೇ 11 ರಂದು ನಡೆದ ವಾರ್ಷಿಕ ಡೆವಲಪರ್ ಕಾನ್ಪರೆನ್ಸ್ ಗೂಗಲ್ ಐ/ಓ 2022 ಈ ಬಗ್ಗೆ ಘೋಷಿಸಿದೆ. ಹೊಸ ಭಾರತೀಯ ಭಾಷೆಗಳಲ್ಲಿ ಅಸ್ಸಾಮಿ, ಭೋಜ್‌ಪುರಿ, ಸಂಸ್ಕೃತ, ಡೋಗ್ರಿ, ಕೊಂಕಣಿ, ಮೈಥಿಲಿ, ಮೈಟಿಲೋನ್ (ಮಣಿಪುರಿ) ಮತ್ತು ಮಿಜೋ ಕೂಡ ಸೇರಿವೆ. ಗೂಗಲ್ ಟ್ರಾನ್ಸ್ಲೇಟ್ನಲ್ಲಿ ಸಂಸ್ಕೃತ ಭಾಷೆಯನ್ನು ಸೇರಿಸಲು ಬಹಳ ಬೇಡಿಕೆ ಬಂದಿತ್ತು. ಹೀಗಾಗಿ, ಕೊನೆಗೂ ಈ ಸಂಸ್ಕೃತ ಭಾಷೆಯನ್ನು ಗೂಗಲ್ ಅನುವಾದದ ಪಟ್ಟಿಗೆ ಸೇರಿಸುತ್ತಿದ್ದೇವೆ ಎಂದು ಗೂಗಲ್ ರಿಸರ್ಚ್ನ ಸೀನಿಯರ್ ಸಾಫ್ಟ್ವೇರ್ ಇಂಜಿನಿಯರ್ ಇಸಾಕ್ ಕ್ಯಾಸ್ವೆಲ್ ಮಾಹಿತಿ ನೀಡಿದ್ದಾರೆ.
ಕ್ವೆಚುವಾ (ಪೆರು, ಬೊಲಿವಿಯಾ, ಈಕ್ವೆಡಾರ್), ಗ್ವಾರಾನಿ (ಪರಾಗ್ವೆ ಮತ್ತು ಬೊಲಿವಿಯಾ, ಅರ್ಜೆಂಟೀನಾ ಮತ್ತು ಬ್ರೆಜಿಲ್) ಮತ್ತು ಅಯ್ಮಾರಾ (ಬೊಲಿವಿಯಾ, ಚಿಲಿ ಮತ್ತು ಪೆರು) ಮತ್ತು ಇಂಗ್ಲಿಷ್ ಮೂಲದ ಉಪಭಾಷೆ ಕ್ರಿಯೊ (ಸಿಯೆರಾ)ನಂತಹ ಅಮೆರಿಕದ ಸ್ಥಳೀಯ ಭಾಷೆಗಳನ್ನು ಕೂಡ ಸೇರಿಸಲಾಗುತ್ತಿದೆ ಎಂದು ಗೂಗಲ್ ಹೇಳಿದೆ.
ಗೂಗಲ್ ಅನುವಾದದ ಭಾಷೆಗಳ ಪಟ್ಟಿಯಲ್ಲಿ ಲಿಂಗಾಲಾ (ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋ), ಲುಗಾಂಡಾ (ಉಗಾಂಡಾ ಮತ್ತು ರುವಾಂಡಾ), ಬಂಬಾರಾ (ಮಾಲಿ), ಧಿವೇಹಿ (ಮಾಲ್ಡೀವ್ಸ್), ಇವ್ (ಘಾನಾ ಮತ್ತು ಟೋಗೊ), ಗ್ವಾರಾನಿ (ಪರಾಗ್ವೆ ಮತ್ತು ಬೊಲಿವಿಯಾ, ಅರ್ಜೆಂಟೀನಾ ಮತ್ತು ಬ್ರೆಜಿಲ್), ಇಲೊಕಾನೊ ಕೂಡ ಸೇರಿವೆ. (ಉತ್ತರ ಫಿಲಿಪೈನ್ಸ್), ಕುರ್ದಿಶ್ (ಇರಾಕ್), ಒರೊಮೊ (ಇಥಿಯೋಪಿಯಾ ಮತ್ತು ಕೀನ್ಯಾ), ಸೆಪೆಡಿ (ದಕ್ಷಿಣ ಆಫ್ರಿಕಾ), ಟಿಗ್ರಿನ್ಯಾ (ಎರಿಟ್ರಿಯಾ ಮತ್ತು ಇಥಿಯೋಪಿಯಾ), ಸೋಂಗಾ (ಇಸ್ವಾಟಿನಿ, ಮೊಜಾಂಬಿಕ್, ದಕ್ಷಿಣ ಆಫ್ರಿಕಾ ಮತ್ತು ಜಿಂಬಾಬ್ವೆ) ಮತ್ತು ಟ್ವಿ (ಘಾನಾ) ಸೇರಿದಂತೆ 300 ಮಿಲಿಯನ್ ಜನರು ಈ 24 ಭಾಷೆಗಳನ್ನು ತಮ್ಮ ಮೊದಲ ಅಥವಾ ಎರಡನೇ ಭಾಷೆಯಾಗಿ ಬಳಸುತ್ತಾರೆ ಎಂದು ಕಂಪನಿ ಹೇಳಿದೆ.
ಈ ಹೊಸ ಭಾಷೆಗಳು ಮೇ 11ರಂದು ಗೂಗಲ್ ಅನುವಾದದಲ್ಲಿ ಸ್ಥಾನ ಪಡೆದಿವೆ. ಈ ವಾರದ ಅಂತ್ಯದ ವೇಳೆಗೆ ಇದು ಎಲ್ಲಾ ಬಳಕೆದಾರರಿಗೆ ಲಭ್ಯವಿರುತ್ತದೆ. ಅಂದಹಾಗೆ ಗೂಗಲ್ ಸಾಕಷ್ಟು ಭಾಷೆಗಳನ್ನು ಅನುವಾದಿಸಿ ಕೊಡುತ್ತದೆ. 100ಕ್ಕೂ ಅಧಿಕ ಭಾಷೆಗಳು ಗೂಗಲ್ ಟ್ರಾನ್ಸ್ಲೇಟ್ನಲ್ಲಿದೆ. ಭಾರತೀಯ ಭಾಷೆಗಳಿಗೂ ಗೂಗಲ್ ಮಾನ್ಯತೆ ನೀಡಿದೆ. ಮಾತ್ರವಲ್ಲದೆ, ಈ ಸೌಲಭ್ಯವನ್ನು ಬಳಕೆ ಮಾಡುವವರು ಭಾರತದಲ್ಲಿ ಅನೇಕರಿದ್ದಾರೆ. ಕನ್ನಡ ಸೇರಿದಂತೆ, ಹಿಂದಿ, ಇಂಗ್ಲಿಷ್, ತಮಿಳು, ತೆಲುಗು, ಬೆಂಗಾಲಿ ಹೀಗೆ ನಾನಾ ಭಾಷೆಯನ್ನು 1 ಸೆಕೆಂಡ್ನಲ್ಲಿ ಅನುವಾದಿಸಿ ಕೊಡುವ ಕೆಲಸವನ್ನು ಗೂಗಲ್ ಟ್ರಾನ್ಸ್ಲೇಟ್ ಮಾಡುತ್ತಾ ಬಂದಿದೆ.
ಇದೀಗ ಇದಕ್ಕೆ ಹೊಸ ಸೇರ್ಪಡೆ ಎಂಬಂತೆ ಭಾರತೀಯ ಹೊಸ ಎಂಟು ಭಾಷೆಗಳನ್ನು ಒಳಗೊಂಡತೆ ಗೂಗಲ್ ಸುಮಾರು 24 ಹೊಸ ಭಾಷೆಗಳಿಗೆ ಬೆಂಬಲವನ್ನು ನೀಡುತ್ತಿದೆ. ಗೂಗಲ್ ಟ್ರಾನ್ಸ್ಲೇಟ್ನಲ್ಲಿ ಹೊಸದಾಗಿ ಭಾರತೀಯ ಭಾಷೆಗಳಾದ ಅಸ್ಸಾಮಿ, ಭೋಜ್‌ಪುರಿ, ಡೋಗ್ರ, ಕೊಂಕಣಿ, ಮೈಥಿಲಿ, ಮಣಿಪುರಿ ಮತ್ತು ಮಿಜೋ ಭಾಷೆಗಳು ಸೇರಲಿವೆ.
ಇತರೆ ದೇಶೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:11 pm, Thu, 12 May 22