AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮುರಿಯಿತು ಅರೆಸಿಬೊ ರೇಡಿಯೊ ಟೆಲಿಸ್ಕೋಪ್​ನ ಆ್ಯಂಟೆನಾ; ದೃಶ್ಯ ಬಿಡುಗಡೆ ಮಾಡಿದ ನ್ಯಾಷನಲ್ ಸೈನ್ಸ್​ ಫೌಂಡೇಷನ್

ವಿಶ್ವದ ಅತೀ ದೊಡ್ಡ ದೂರದರ್ಶಕದ ಪೈಕಿ ಎರಡನೇ ಸ್ಥಾನದಲ್ಲಿದ್ದ ಅರೆಸಿಬೊ ಹಲವಾರು ಗ್ರಹಗಳನ್ನು ಪತ್ತೆ ಹಚ್ಚಲು ಸಹಾಯ ಮಾಡಿದೆ.

ಮುರಿಯಿತು ಅರೆಸಿಬೊ ರೇಡಿಯೊ ಟೆಲಿಸ್ಕೋಪ್​ನ ಆ್ಯಂಟೆನಾ; ದೃಶ್ಯ ಬಿಡುಗಡೆ ಮಾಡಿದ ನ್ಯಾಷನಲ್ ಸೈನ್ಸ್​ ಫೌಂಡೇಷನ್
ಅರೆಸಿಬೊ ರೇಡಿಯೊ ಟೆಲಿಸ್ಕೋಪ್
Ghanashyam D M | ಡಿ.ಎಂ.ಘನಶ್ಯಾಮ
|

Updated on: Dec 06, 2020 | 11:02 AM

Share

ಬರೋಬ್ಬರಿ 900 ಟನ್ ತೂಕವಿರುವ ಅರೆಸಿಬೊ ರೇಡಿಯೊ ಟೆಲಿಸ್ಕೋಪ್​ನ ಬೃಹತ್ ಆ್ಯಂಟೆನಾ ಮುರಿದು ಬಿದ್ದಿದೆ. ಈ ಹಿಂದೆಯೇ ಅದರ ಕೇಬಲ್​​ಗಳು ಮುರಿದು ಬಿದ್ದಿದ್ದು ಡಿಸೆಂಬರ್ 1ರಂದು ಡಿಶ್ ಆ್ಯಂಟೆನಾ ನೆಲಕ್ಕೆ ಬಿದ್ದಿದೆ.

‘ನಮಗೆ ತುಂಬಾ ದುಃಖವಾಗಿದೆ. ಈ ಘಟನೆಯಿಂದ ಯಾವುದೇ ಸಾವು-ನೋವು ಸಂಭವಿಸಿಲ್ಲ. ಜನರ ಸುರಕ್ಷತೆಯೇ ನಮ್ಮ ಆದ್ಯತೆ’ ಎಂದು ನ್ಯಾಷನಲ್ ಸೈನ್ಸ್​ ಫೌಂಡೇಷನ್​ನ ಖಗೋಳ ವಿಜ್ಞಾನ ವಿಭಾಗದ ನಿರ್ದೇಶಕ ರಾಲ್ಫ್ ಗೌಮ್ ಹೇಳಿದ್ದಾರೆ.

ಅರೆಸಿಬೊ ಟೆಲಿಸ್ಕೋಪ್​ನ ಕಾರ್ಯಾಚರಣೆಯನ್ನು ದಿ ನ್ಯಾಷನಲ್ ಸೈನ್ಸ್ ಫೌಂಡೇಷನ್ ನಿರ್ವಹಿಸುತ್ತಿದ್ದು. ಟೆಲಿಸ್ಕೋಪ್​ನ ಬೃಹತ್ ಆ್ಯಂಟೆನಾ ಮುರಿದು ಬೀಳುತ್ತಿರುವ ವಿಡಿಯೊ ದೃಶ್ಯವನ್ನು ಗುರುವಾರ ಬಿಡುಗಡೆ ಮಾಡಿದೆ.

ಖಗೋಲ ವೀಕ್ಷಣೆ ನಿರ್ವಹಣೆ ಕೇಂದ್ರದ ಛಾವಣಿ ಮೇಲಿರುವ ಕ್ಯಾಮೆರಾದಲ್ಲಿ ಸೆರೆಯಾದ ದೃಶ್ಯದಲ್ಲಿ ಆ್ಯಂಟೆನಾ ನೆಲಕ್ಕೆ ಅಪ್ಪಳಿಸುತ್ತಿರುವುದು ಕಾಣುತ್ತದೆ. ಜೊತೆಗೆ ಎರಡು ಕೇಬಲ್ 60 ಅಡಿ ಎತ್ತರದ ಟವರ್​​ನಿಂದ ಕಿತ್ತು ಬೀಳುತ್ತಿರುವುದು ಕಾಣಿಸುತ್ತದೆ. ಆಗಸ್ಟ್ 10 ಮತ್ತು ನವೆಂಬರ್ 6 ರಂದು ಎರಡು ಕೇಬಲ್‌ಗಳು ಟವರ್​ನಿಂದ ಕಳಚಿಕೊಂಡಿರುವುದನ್ನು ಡ್ರೋನ್ ಕ್ಯಾಮೆರಾ ಸೆರೆಹಿಡಿದಿತ್ತು.  1,000 ಅಡಿ ಗಾತ್ರದ ಡಿಶ್ ಆ್ಯಂಟೆನಾ ಹೊಂದಿರುವ ಅರೆಸಿಬೊ ಟೆಲಿಸ್ಕೋಪ್ ಕಳೆದ 50 ವರ್ಷಗಳಿಂದ ಖಗೋಳ ವಿಜ್ಞಾನದಲ್ಲಿ ಮಹತ್ತರ ಪಾತ್ರ ವಹಿಸಿದೆ.

ಅರೆಸಿಬೊ ದೂರದರ್ಶಕದ ವೈಶಿಷ್ಟ್ಯ ವಿಶ್ವದ ಅತೀ ದೊಡ್ಡ ದೂರದರ್ಶಕದ ಪೈಕಿ ಎರಡನೇ ಸ್ಥಾನದಲ್ಲಿದ್ದ ಅರೆಸಿಬೊ ಹಲವಾರು ಗ್ರಹಗಳನ್ನು ಪತ್ತೆ ಹಚ್ಚಲು ಸಹಾಯ ಮಾಡಿದೆ. ಇದು ಪೋರ್ಟ್​ರಿಕೊದಲ್ಲಿದೆ. 1960ರಲ್ಲಿ ಇದರ ನಿರ್ಮಾಣ ಆರಂಭವಾಗಿದ್ದು 1963ರಲ್ಲಿ ಪೂರ್ಣಗೊಂಡಿತ್ತು. 2016ರ ಜುಲೈ ತಿಂಗಳಲ್ಲಿ ಚೀನಾದಲ್ಲಿ ಫಾಸ್ಟ್ ಟೆಲಿಸ್ಕೋಪ್ ನಿರ್ಮಾಣವಾಗುವವರೆಗೆ ಅತೀ ದೊಡ್ಡ ಟೆಲಿಸ್ಕೋಪ್ ಎಂಬ ಹೆಗ್ಗಳಿಕೆ ಅರೆಸಿಬೊಗೆ ಇತ್ತು.

ಅರೆಸಿಬೊ ಟೆಲಿಸ್ಕೋಪ್ ಮೂಲಕ 1974ರಲ್ಲಿ ಮೊದಲ ಬಾರಿಗೆ ಪಲ್ಸರ್ ನಕ್ಷತ್ರಗಳನ್ನು ಪತ್ತೆ ಹಚ್ಚಲಾಗಿತ್ತು. ತಿರುಗುವ ಸಣ್ಣ ಗಾತ್ರದ ನಕ್ಷತ್ರಗಳಾಗಿವೆ ಪಲ್ಸರ್ ನಕ್ಷತ್ರಗಳು. ತಿರುಗತ್ತಲೇ ಇರುವ ಈ ನಕ್ಷತ್ರಗಳು ಸೂಸುವ ವಿಕಿರಣಗಳು ಭೂಮಿಯ ದಿಶೆಯಲ್ಲಿ ಬಂದಾಗ ಮಾತ್ರ ಅವು ನಮಗೆ ಗೋಚರಿಸುತ್ತದೆ.

#WhatAreciboMeansToMe ಹ್ಯಾಷ್ ಟ್ಯಾಗ್ ಬಳಸಿ ನೆನಪು ಹಂಚಿಕೊಂಡ ಜನರು

#WhatAreciboMeansToMe ಬಳಸಿ ಜನರು ಅರೆಸಿಬೊ ದೂರದರ್ಶಕದ ಬಗ್ಗೆ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ. ವಿಜ್ಞಾನಿಗಳಿಗೆ ಮಾತ್ರವಲ್ಲ ಜನ ಸಾಮಾನ್ಯರ ವಿನೋದ- ವಿಜ್ಞಾನ ಪ್ರವಾಸಿ ಕೇಂದ್ರವೂ ಆಗಿತ್ತು ಇದು. ಜೇಮ್ಸ್ ಬಾಂಡ್ ಚಿತ್ರವಾದ ಗೋಲ್ಡನ್ ಐ ಸೇರಿದಂತೆ ಹಲವಾರು ಸಿನಿಮಾಗಳನ್ನು ಇಲ್ಲಿ ಚಿತ್ರೀಕರಿಸಲಾಗಿದೆ.