‘ಭಾರತ ಔಟ್’ ಅಭಿಯಾನದಿಂದ ಮೋದಿಗೆ ರೆಡ್ ಕಾರ್ಪೆಟ್ವರೆಗೆ; ಮಾಲ್ಡೀವ್ಸ್ ಅಧ್ಯಕ್ಷ ಮುಯಿಝು 2 ಮುಖಗಳು
ಭಾರತ ಮತ್ತು ಮಾಲ್ಡೀವ್ಸ್ ನಡುವಿನ ಸಂಬಂಧ ಸ್ವಲ್ಪ ಹಳಸಿತ್ತು. ಲಕ್ಷದ್ವೀಪವನ್ನು ಪ್ರಧಾನಿ ನರೇಂದ್ರ ಮೋದಿ ಪ್ರವಾಸೋದ್ಯಮದ ಕೇಂದ್ರವಾಗಿ ಪ್ರಚಾರ ಮಾಡಿದ ಸಂದರ್ಭದಲ್ಲಿ ಮಾಲ್ಡೀವ್ಸ್ ಮೇಲೆ ತೀವ್ರ ಹೊಡೆತ ಬಿದ್ದಿತ್ತು. ಇದೀಗ ಎರಡೂ ದೇಶಗಳ ನಡುವಿನ ಸ್ನೇಹ ಸಂಬಂಧ ಗಟ್ಟಿಯಾಗಿದ್ದು, ಮಾಲ್ಡೀವ್ಸ್‌ಗೆ ಭೇಟಿ ನೀಡಿದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಎರಡು ರಾಷ್ಟ್ರಗಳ ನಡುವಿನ ಆಳವಾದ ಐತಿಹಾಸಿಕ ಮತ್ತು ಕಾರ್ಯತಂತ್ರದ ಸಂಬಂಧಗಳನ್ನು ಪುನರುಚ್ಚರಿಸಿದ್ದಾರೆ. ಅಲ್ಲದೆ, ಮಾಲ್ಡೀವ್ಸ್‌ಗೆ 4,850 ಕೋಟಿ ರೂ. ಸಾಲವನ್ನು ಘೋಷಿಸಿದ್ದಾರೆ.

ನವದೆಹಲಿ, ಜುಲೈ 26: ಭಾರತದ ಪ್ರಧಾನಿ ನರೇಂದ್ರ ಮೋದಿ (PM Narendra Modi) ಇಂದು (ಜುಲೈ 25) ಮಾಲ್ಡೀವ್ಸ್‌ಗೆ (Maldives) ಭೇಟಿ ನೀಡಿದ್ದು, ‘ಭಾರತ ಔಟ್’ ಅಭಿಯಾನದ ಬಳಿಕ ಮೊಹಮ್ಮದ್ ಮುಯಿಝು ಅಧಿಕಾರಕ್ಕೆ ಬಂದಿದ್ದರು. ಇದೀಗ ಮಾಲ್ಡೀವ್ಸ್ ಅಧ್ಯಕ್ಷರಾಗಿರುವ ಮೊಹಮ್ಮದ್ ಮುಯಿಝು 2023ರಲ್ಲಿ “ಇಂಡಿಯಾ ಔಟ್” ಅಭಿಯಾನವನ್ನು ಬೆಂಬಲಿಸುವ ಮೂಲಕ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಂಡಿದ್ದರು. ಆ ಭಾರತ ವಿರೋಧಿ ಚಳುವಳಿಗೆ ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಝು ನೇತೃತ್ವ ವಹಿಸಿದ್ದರು. ಆದರೆ, ನಿನ್ನೆ ಅದೇ ಮೊಹಮ್ಮದ್ ಮುಯಿಝು ಅವರು ಮಾಲೆಯಲ್ಲಿ ಭಾರತೀಯ ನಾಯಕ ಮೋದಿಗೆ ರೆಡ್ ಕಾರ್ಪೆಟ್ ಮೂಲಕ ಸ್ವಾಗತ ಕೋರಿದ್ದಾರೆ.
ಭಾರತದ ವಿರೋಧಿಯಾಗಿದ್ದ ಮುಯಿಝು ಭಾರತವನ್ನು ಪ್ರೀತಿಸುವ ಅಧ್ಯಕ್ಷರಾಗಿ ಬದಲಾದ ನಂತರದ ಎರಡು ಮುಖಗಳ ಬಗ್ಗೆ ಮಾಹಿತಿ ಇಲ್ಲಿದೆ. ಮುಯಿಝು ಹೇಗೆ ರೂಪಾಂತರಗೊಂಡರು ಎಂಬುದರ ಮಾಹಿತಿ ಇಲ್ಲಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ದ್ವೀಪ ರಾಷ್ಟ್ರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಭಾರತ ಮತ್ತು ಮಾಲ್ಡೀವ್ಸ್ ನಡುವಿನ ಐತಿಹಾಸಿಕ ಮತ್ತು ಕಾರ್ಯತಂತ್ರದ ಸಂಬಂಧಗಳನ್ನು ಪುನರುಚ್ಚರಿಸಿದ್ದಾರೆ. “ನಮ್ಮ ಸಂಬಂಧಗಳ ಬೇರುಗಳು ಇತಿಹಾಸಕ್ಕಿಂತ ಹಳೆಯವು ಮತ್ತು ಸಾಗರದಷ್ಟು ಆಳವಾಗಿವೆ” ಎಂದು ಅವರು ಹೇಳಿದ್ದಾರೆ. ಭಾರತದ ವಿರುದ್ಧ ಹರಿಹಾಯುತ್ತಿದ್ದ ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಝು ಭಾರತವನ್ನು ಮಾಲ್ಡೀವ್ಸ್‌ನ ಅತ್ಯಂತ ವಿಶ್ವಾಸಾರ್ಹ ಅಭಿವೃದ್ಧಿ ಪಾಲುದಾರ ಎಂದು ಬಣ್ಣಿಸಿದ್ದಾರೆ. ಇದು ದ್ವಿಪಕ್ಷೀಯ ಸಂಬಂಧಗಳಲ್ಲಿ ಸಕಾರಾತ್ಮಕ ತಿರುವು ನೀಡುತ್ತದೆ.
ಇದನ್ನೂ ಓದಿ: ನಮಗೆ ಸ್ನೇಹವೇ ಮೊದಲು ಎಂದ ಮೋದಿ; ಮಾಲ್ಡೀವ್ಸ್‌ಗೆ ಭಾರತದಿಂದ 4,850 ಕೋಟಿ ರೂ. ಸಾಲ ಘೋಷಣೆ
ಪ್ರಧಾನಿ ಮೋದಿ ಅವರು ವ್ಯಾಪಾರ, ರಕ್ಷಣೆ ಮತ್ತು ಕಡಲ ಭದ್ರತೆಯಂತಹ ಪ್ರಮುಖ ಕ್ಷೇತ್ರಗಳಲ್ಲಿ ಸಹಕಾರವನ್ನು ಹೆಚ್ಚಿಸಲು ಮುಯಿಝು ಅವರೊಂದಿಗೆ ವ್ಯಾಪಕ ಮಾತುಕತೆ ನಡೆಸಿದರು. “ಭಾರತವು ತನ್ನ ರಕ್ಷಣಾ ಸಾಮರ್ಥ್ಯಗಳ ಅಭಿವೃದ್ಧಿಯಲ್ಲಿ ಮಾಲ್ಡೀವ್ಸ್‌ಗೆ ಬೆಂಬಲ ನೀಡುವುದನ್ನು ಮುಂದುವರಿಸುತ್ತದೆ. ಹಿಂದೂ ಮಹಾಸಾಗರ ಪ್ರದೇಶದಲ್ಲಿ ಶಾಂತಿ, ಸ್ಥಿರತೆ ಮತ್ತು ಸಮೃದ್ಧಿ ನಮ್ಮ ಸಾಮಾನ್ಯ ಗುರಿಯಾಗಿದೆ” ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಇದನ್ನೂ ಓದಿ: ಭಾರತದಲ್ಲಿ ಪ್ರಧಾನಿಯಾಗಿ ಇಂದಿರಾ ಗಾಂಧಿಯ ದಾಖಲೆ ಮುರಿದ ಮೋದಿಗೆ ಮಾಲ್ಡೀವ್ಸ್ ಅಧ್ಯಕ್ಷ ಮುಯಿಝು ಅಭಿನಂದನೆ
ಭಾರತ- ಮಾಲ್ಡೀವ್ಸ್ ನಡುವಿನ ಸಂಬಂಧದ ಟೈಮ್ಸ್ಲೈನ್ ಇಲ್ಲಿದೆ:
- ಮುಯಿಝು 2023ರಲ್ಲಿ ‘ಇಂಡಿಯಾ ಔಟ್’ ಅಭಿಯಾನವನ್ನು ಚುನಾವಣಾ ಪ್ರಚಾರಕ್ಕೆ ಬಳಸಿಕೊಂಡು ಅಧಿಕಾರಕ್ಕೆ ಬಂದಿದ್ದರು. ಇದೇ ಅವರ ಅಧಿಕಾರಕ್ಕೆ ಮೆಟ್ಟಿಲಾಯಿತು.
- ಭಾರತ ವಿರೋಧಿ ಅಭಿಯಾನವು 2020ರಲ್ಲಿ ಪ್ರಾರಂಭವಾಯಿತು. ಇದನ್ನು PPM ಮತ್ತು PNC ಪಕ್ಷಗಳಲ್ಲಿನ ಮುಯಿಝು ಅವರ ಮಿತ್ರಪಕ್ಷಗಳು ವರ್ಧಿಸಿ, 2023ರವರೆಗೂ ಮುಂದುವರಿಸಿದವು. ಆಗ ಮಾಲ್ಡೀವ್ಸ್ ರಾಜಧಾನಿ ಮಾಲೆಯ ಮೇಯರ್ ಆಗಿದ್ದ ಮುಯಿಝು ಭಾರತೀಯ ಮಿಲಿಟರಿ ಉಪಸ್ಥಿತಿಯು ದ್ವೀಪಸಮೂಹದ ಸಾರ್ವಭೌಮತ್ವಕ್ಕೆ ಬೆದರಿಕೆ ಹಾಕುತ್ತದೆ ಎಂಬ ಅಭಿಪ್ರಾಯವನ್ನು ಬೆಂಬಲಿಸಿದರು.
- ಮುಯಿಝು ಅಧ್ಯಕ್ಷತೆಯ ಆರಂಭಿಕ ವರ್ಷಗಳಲ್ಲಿ ಬಲವಾದ ಭಾರತ ವಿರೋಧಿ ನಿಲುವು ಕಂಡುಬಂದಿತು. ಅಧ್ಯಕ್ಷ ಸ್ಥಾನವನ್ನು ಗೆದ್ದ ನಂತರ ಮುಯಿಝು ನವೆಂಬರ್ 2023ರಲ್ಲಿ 80 ಭಾರತೀಯ ಮಿಲಿಟರಿ ಸಿಬ್ಬಂದಿ ಮಾಲ್ಡೀವ್ಸ್ ದ್ವೀಪ ತೊರೆಯಬೇಕೆಂದು ಒತ್ತಾಯಿಸಿದರು. ಇದು ರಾಜತಾಂತ್ರಿಕ ಒತ್ತಡಗಳಿಗೆ ಕಾರಣವಾಯಿತು.
- ಆದರೆ ಡಿಸೆಂಬರ್ 2023ರಲ್ಲಿ ಮುಯಿಝು ಮತ್ತು ಭಾರತದ ಪ್ರಧಾನಿ ಮೋದಿ ದುಬೈನಲ್ಲಿ ನಡೆದ ಹವಾಮಾನ ಶೃಂಗಸಭೆ, COP28ರಲ್ಲಿ ಭೇಟಿಯಾದರು. ಅಲ್ಲಿ ನಾಯಕರು ಸಂವಾದದ ಮೂಲಕ ಸಮಸ್ಯೆಗಳನ್ನು ಪರಿಹರಿಸಲು ಒಪ್ಪಿಕೊಂಡರು.
- ಜನವರಿ 2024ರಲ್ಲಿ ಮಾಲ್ಡೀವ್ಸ್ ಅಧ್ಯಕ್ಷ ಮುಯಿಝು ಚೀನಾಕ್ಕೆ ಭೇಟಿ ನೀಡಿದರು. ಇದು ಹೊಸ ಮಾಲ್ಡೀವ್ಸ್ ಅಧ್ಯಕ್ಷರು ಮೊದಲು ಭಾರತಕ್ಕೆ ಭೇಟಿ ನೀಡುವ ಸಂಪ್ರದಾಯವನ್ನು ಹಿಂದಿಕ್ಕಿತು. ಇದರಿಂದ ಭಾರತ ಮತ್ತು ಮಾಲ್ಡೀವ್ಸ್ ನಡುವಿನ ರಾಜತಾಂತ್ರಿಕ ಸಂಬಂಧ ಹಳಸಿತು.
- ಇದರ ಬೆನ್ನಲ್ಲೇ ಮಾಲ್ಡೀವ್ಸ್ ಅಧ್ಯಕ್ಷ ಮುಯಿಝು ಚೀನಾಗೆ ಭೇಟಿ ನೀಡಿದ ತಿಂಗಳಲ್ಲೇ ನರೇಂದ್ರ ಮೋದಿ ಲಕ್ಷದ್ವೀಪಕ್ಕೆ ಭೇಟಿ ನೀಡಿ, ಭಾರತೀಯ ದ್ವೀಪದ ಕಡಲತೀರದ ಅದ್ಭುತ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದರು. ಇದನ್ನು ಅನೇಕ ಭಾರತೀಯರು ಮಾಲ್ಡೀವ್ಸ್‌ಗೆ ಹೋಗುವ ಬದಲು ಲಕ್ಷದ್ವೀಪಕ್ಕೆ ಹೋಗಬೇಕು ಎಂದು ಮೋದಿ ನೀಡಿದ ಸಂದೇಶವೆಂದು ಪರಿಗಣಿಸಿದರು.
- ಇದರಿಂದ ಮಾಲ್ಡೀವ್ಸ್ ಪ್ರವಾಸೋದ್ಯಮಕ್ಕೆ ಹೊಡೆತ ಬೀಳುತ್ತದೆ ಎಂದು ಹಲವಾರು ಕಟ್ಟಾ ಮಾಲ್ಡೀವಿಯನ್ ರಾಜಕಾರಣಿಗಳು ಕೋಪಗೊಂಡರು. ಆನ್‌ಲೈನ್‌ನಲ್ಲಿ ಮೋದಿಯನ್ನು ಟೀಕಿಸಲು ಪ್ರಾರಂಭಿಸಿದರು. ಇದು ಭಾರತೀಯ ನೆಟಿಜನ್‌ಗಳಿಂದ ಕೋಪಗೊಂಡ ಪ್ರತಿಕ್ರಿಯೆಗಳಿಗೆ ಕಾರಣವಾಯಿತು. ಇದೇ ಹಠಕ್ಕೆ ಅನೇಕರು ಮಾಲ್ಡೀವ್ಸ್ ಪ್ರವಾಸಕ್ಕೆ ಬುಕ್ ಮಾಡಿದ್ದ ಟಿಕೆಟ್ ಅನ್ನು ಕ್ಯಾನ್ಸಲ್ ಮಾಡಿದರು. ಲಕ್ಷದ್ವೀಪವನ್ನೇ ಪ್ರವಾಸೋದ್ಯಮದ ಕೇಂದ್ರವಾಗಿ ಮಾಡಬೇಕೆಂದು ಅಭಿಯಾನ ಆರಂಭಿಸಿದರು.
- ಇದಾದ ನಂತರ ಭಾರತೀಯ ಪ್ರವಾಸ ನಿರ್ವಾಹಕರು ಮತ್ತು ವಿಮಾನಯಾನ ಸಂಸ್ಥೆಗಳು #BoycottMaldives ಅಭಿಯಾನಕ್ಕೆ ಸೇರಿಕೊಂಡವು. ಭಾರತೀಯ ಪ್ರವಾಸಿಗರ ಸಂಖ್ಯೆ ಕುಸಿದು, ಪ್ರವಾಸೋದ್ಯಮ-ಅವಲಂಬಿತ ಮಾಲ್ಡೀವ್ಸ್ ಆರ್ಥಿಕತೆಗೆ ತೀವ್ರ ಹೊಡೆತ ಬಿದ್ದಿತು.
- ಇದರಿಂದ ಎಚ್ಚೆತ್ತುಕೊಂಡು, ಭಾರತದ ವಿರುದ್ಧ ಹೇಳಿಕೆ ನೀಡಿದ ಅಧಿಕಾರಿಗಳನ್ನು ಅಮಾನತುಗೊಳಿಸಿದ ಮುಯಿಝು ರಾಷ್ಟ್ರೀಯ ಸಾರ್ವಭೌಮತ್ವವನ್ನು ಸಮರ್ಥಿಸಿಕೊಂಡರು.
- ಇದಾದ ನಂತರ ಭಾರತವು ಮಾಲ್ಡೀವ್ಸ್‌ನಿಂದ ಮಿಲಿಟರಿ ಸಿಬ್ಬಂದಿಯನ್ನು ತೆಗೆದುಹಾಕಿತು. ಮೇ 2024ರ ಹೊತ್ತಿಗೆ ಭಾರತವು ತನ್ನ ಸೈನ್ಯವನ್ನು ಹಿಂತೆಗೆದುಕೊಳ್ಳಲು ಮತ್ತು ಅವರ ಬದಲಿಗೆ ನಾಗರಿಕರನ್ನು ನೇಮಿಸಲು ಒಪ್ಪಿಕೊಂಡಿತು.
- ಜೂನ್ 2024ರಲ್ಲಿ ಭಾರತದ ಪ್ರಧಾನಿಯಾಗಿ ಮೂರನೇ ಅವಧಿಗೆ ನರೇಂದ್ರ ಮೋದಿ ಅವರ ಪ್ರಮಾಣವಚನ ಸಮಾರಂಭಕ್ಕೆ ಮಾಲ್ಡೀವ್ಸ್ ಅಧ್ಯಕ್ಷ ಮುಯಿಝು ಅವರನ್ನು ಆಹ್ವಾನಿಸಲಾಯಿತು. ಭಾರತದ ವಿದೇಶಾಂಗ ಸಚಿವ ಎಸ್ ಜೈಶಂಕರ್ ಆಗಸ್ಟ್‌ನಲ್ಲಿ ಮಾಲೆಗೆ ಭೇಟಿ ನೀಡಿದರು ಮತ್ತು ಭಾರತದ “ನೆರೆಹೊರೆ ಮೊದಲು” ನೀತಿಯನ್ನು ಪುನರುಚ್ಚರಿಸಿದರು.
- ಅಕ್ಟೋಬರ್ 2024ರಲ್ಲಿ ಮುಯಿಝು ತಮ್ಮ ಮೊದಲ ಅಧಿಕೃತ ರಾಜ್ಯ ಭೇಟಿಯಾಗಿ ಭಾರತಕ್ಕೆ ಆಗಮಿಸಿದರು. ಎರಡೂ ದೇಶಗಳು ಸಮಗ್ರ ಆರ್ಥಿಕ ಮತ್ತು ಕಡಲ ಭದ್ರತಾ ಪಾಲುದಾರಿಕೆಗೆ ಒಪ್ಪಿಕೊಂಡವು. ಮಾಲ್ಡೀವ್ಸ್‌ನ ಆರ್ಥಿಕತೆಗೆ ಸಹಾಯ ಮಾಡಲು ಭಾರತವು 400 ಮಿಲಿಯನ್ ಡಾಲರ್ ಕರೆನ್ಸಿ ವಿನಿಮಯ, 100 ಮಿಲಿಯನ್ ಡಾಲರ್ ಖಜಾನೆ ಬಿಲ್‌ಗಳು ಮತ್ತು ಅಭಿವೃದ್ಧಿ ಬೆಂಬಲವನ್ನು ವಿಸ್ತರಿಸಿತು.
- ಇದಾದ ನಂತರ ಮುಯಿಝು ಮಾಲ್ಡೀವ್ ದೇಶದ 60ನೇ ಸ್ವಾತಂತ್ರ್ಯ ದಿನಾಚರಣೆಗೆ ಮಾಲ್ಡೀವ್ಸ್‌ಗೆ ಗೌರವ ಅತಿಥಿಯಾಗಿ ಆಗಮಿಸಲು ನರೇಂದ್ರ ಮೋದಿಯನ್ನು ಆಹ್ವಾನಿಸಿದರು. ಅದರಂತೆ, ನಿನ್ನೆ ಪ್ರಧಾನಿ ನರೇಂದ್ರ ಮೋದಿ ಮಾಲ್ಡೀವ್ಸ್‌ಗೆ ಭೇಟಿ ನೀಡಿದ್ದಾರೆ.
- ಮೋದಿ ಭೇಟಿಯ ಸಮಯದಲ್ಲಿ ಎರಡೂ ದೇಶಗಳು ಮೂಲಸೌಕರ್ಯ, ಸಾಮರ್ಥ್ಯ ವೃದ್ಧಿ ಮತ್ತು ಸಂಭಾವ್ಯ ಮುಕ್ತ ವ್ಯಾಪಾರ ಒಪ್ಪಂದದ ಕುರಿತು ಒಪ್ಪಂದಗಳಿಗೆ ಸಹಿ ಹಾಕಿವೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:15 pm, Sat, 26 July 25