ಎಲಾನ್ ಮಸ್ಕ್ (Elon Muck) ಟ್ವಿಟರ್ (Twitter) ಕಂಪನಿಯನ್ನು ತನ್ನ ತೆಕ್ಕೆಗೆ ಪಡೆದುಕೊಂಡ ಬಳಿಕ ಮಹತ್ವದ ಬೆಳವಣಿಗೆಗಳು ನಡೆಯುತ್ತಿದೆ. ಇತ್ತೀಚೆಗಷ್ಟೆ ಮಸ್ಕ್ ಅನೇಕ ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕಿದ್ದು ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಅಲ್ಲದೆ ಹಾರ್ಡ್ ಕೋರ್ ಆಗಿ ಕೆಲಸ ಮಾಡುವುದಿದ್ದರೆ ಇರಿ ಇಲ್ಲದಿದ್ದರೆ ಕೆಲಸ ಬಿಟ್ಟು ಹೋಗಿ ಎಂದಿದ್ದಕ್ಕೆ ಸುಮಾರು 3,000 ಉದ್ಯೋಗಿಗಳು ಟ್ವಿಟರ್ ತೊರೆದಿದ್ದರು. ಇದೀಗ ಹೀಗೆ ಟ್ವಿಟರ್ಗೆ ಗುಡ್ ಬೈ ಹೇಳಿದ ಉದ್ಯೋಗಿಗಳನ್ನು ಶೀಘ್ರದಲ್ಲೇ ನಾವು ನೇಮಿಸಿಕೊಳ್ಳುತ್ತೇವೆ ಎಂದು ಭಾರತದ ಮೈಕ್ರೋಬ್ಲಾಗಿಂಗ್ ಪ್ಲಾಟ್‌ಫಾರ್ಮ್ ಕೂ (Koo App) ಹೇಳಿದೆ. ಕೂ ಸಹ-ಸಂಸ್ಥಾಪಕ ಮಯಾಂಕ್ ಬಿಡವಟ್ಕ ಟ್ವೀಟ್ ಮಾಡುವ ಮೂಲಕ ಟ್ವಿಟರ್‌ನ ಮಾಜಿ ಉದ್ಯೋಗಿಗಳನ್ನು ನೇಮಿಸಿಕೊಳ್ಳಲು ಮುಂದಾಗಿದ್ದೇವೆ ಎಂದು ಹೇಳಿದ್ದಾರೆ.
“#RIPTwitter ಹಾಗೂ ಇದಕ್ಕೆ ಸಂಬಂಧಿಸಿದ ಹ್ಯಾಶ್ಟ್ಯಾಗ್ ಅನ್ನು ನೋಡುವುದಕ್ಕೆ ತುಂಬಾ ಬೇಸರವಾಗುತ್ತದೆ. ನಾವು ಟ್ವಿಟರ್‌ನ ಮಾಜಿ ಉದ್ಯೋಗಿಗಳಲ್ಲಿ ಕೆಲವರನ್ನು ನೇಮಿಸಿಕೊಳ್ಳಲು ಮುಂದಾಗಿದ್ದೇವೆ. ನಮ್ಮ ವ್ಯಾಪ್ತಿಯನ್ನು ಇನ್ನಷ್ಟು ವಿಸ್ತರಿಸಲು ಶ್ರಮವಹಿಸುತ್ತೇವೆ. ಇವರು ತಮ್ಮ ಪ್ರತಿಭೆಯನ್ನು ಗೌರವಿಸುವ ಸ್ಥಳದಲ್ಲಿ ಕೆಲಸ ಮಾಡಲು ಅರ್ಹರಾಗಿದ್ದಾರೆ. ಮೈಕ್ರೋ-ಬ್ಲಾಗಿಂಗ್ ಜನರ ಶಕ್ತಿಗೆ ಸಂಬಂಧಿಸಿದ್ದಾಗಿದೆ,” ಎಂದು ಬಿಡವಟ್ಕ ಟ್ವೀಟ್ ಮಾಡಿದ್ದಾರೆ.
ಕೂ ಇಂದು ವಿಶ್ವದಲ್ಲಿ ಲಭ್ಯವಿರುವ ಎರಡನೇ ಅತಿದೊಡ್ಡ ಮೈಕ್ರೋಬ್ಲಾಗ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಮಾರ್ಚ್ 2020 ರಲ್ಲಿ ಪ್ರಾರಂಭವಾದ ಈ ಪ್ಲಾಟ್‌ಫಾರ್ಮ್ 50 ಮಿಲಿಯನ್ಗೂ ಅಧಿಕ ಡೌನ್‌ಲೋಡ್ ಕಂಡಿದೆ.
2 ಗಂಟೆ ಕೆಲಸ ಮಾಡುವಂತೆ ಆದೇಶ:
ಎಲಾನ್ ಮಸ್ಕ್ ಟ್ವಿಟರ್‌ನಲ್ಲಿ ದಿನಕ್ಕೆ ಕನಿಷ್ಠ 12 ಗಂಟೆ ಕೆಲಸ ಮಾಡುವಂತೆ ಉದ್ಯೋಗಿಗಳಿಗೆ ನಿರ್ದೇಶನ ನೀಡಿದ್ದಾರೆ. ಹಾರ್ಡ್ ಕೋರ್ ಆಗಿ ಕೆಲಸ ಮಾಡುವುದಿದ್ದರೆ ಇರಿ ಇಲ್ಲದಿದ್ದರೆ ಕೆಲಸ ಬಿಟ್ಟು ಹೋಗಿ ಎಂಬ ಮಾತನ್ನು ಹೇಳಿದ್ದರು ಎನ್ನಲಾಗಿದೆ. ಅಲ್ಲದೆ ಮಸ್ಕ್ ತನ್ನ ಅರ್ಧದಷ್ಟು ಉದ್ಯೋಗಿಗಳನ್ನು ವಜಾಗೊಳಿಸಿದ್ದಾರೆ. ಬಿಬಿಸಿ ವರದಿಯೊಂದರ ಪ್ರಕಾರ, ಟ್ವಿಟರ್‌ನಲ್ಲಿ ಸದ್ಯಕ್ಕೆ ಉಳಿಯಲಿರುವುದು ಎರಡು ಸಾವಿರ ಉದ್ಯೋಗಿಗಳು ಮಾತ್ರ. ಎಲಾನ್ ಮಸ್ಕ್ ಬರುವ ಮುನ್ನ ಟ್ವಿಟ್ಟರ್‌ನಲ್ಲಿ 7,500 ಉದ್ಯೋಗಿಗಳಿದ್ದರು. ಮಸ್ಕ್ ಬಂದಾಗಲೇ ಶೇ. 50ರಷ್ಟು ಉದ್ಯೋಗಿಗಳನ್ನು ಮನೆಗೆ ಕಳುಹಿಸಲಾಗಿದೆಯಂತೆ. ಈ ಎಲ್ಲ ಬೆಳವಣಿಗೆ ಜೊತೆಗೆ ಟ್ವಿಟರ್‌ನ ಎಲ್ಲಾ ಕಚೇರಿಗಳು ತಾತ್ಕಾಲಿಕವಾಗಿ ಬಂದ್ ಅಗಿದೆ.
ಟ್ವಿಟರ್‌ನಲ್ಲಿ ಹೊಸ ನಿಯಮ:
ಟ್ವಿಟರ್‌ನ ಇತ್ತೀಚಿನ ನೀತಿ, ನಿಯಮಗಳ ಬಗ್ಗೆ ಅವರು ಸರಣಿ ಟ್ವೀಟ್ ಮೂಲಕ ಎಲಾನ್ ಮಸ್ಕ್ ಮಾಹಿತಿ ನೀಡಿದ್ದಾರೆ. ನಕಾರಾತ್ಮಕ ಹಾಗೂ ದ್ವೇಷ ಹರಡುವ ಸಂದೇಶಗಳಿಗೆ ಟ್ವಿಟರ್ ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದಾರೆ. ”ನಕಾರಾತ್ಮಕ ಹಾಗೂ ದ್ವೇಷದ ಸಂದೇಶ ಹೊಂದಿರುವ ಟ್ವೀಟ್ಗಳನ್ನು ಗರಿಷ್ಠ ಮಟ್ಟದಲ್ಲಿ ಡಿಬೂಸ್ಟ್ ಹಾಗೂ ಡಿಮಾನಿಟೈಸ್ ಮಾಡಲಾಗುವುದು. ಆದ್ದರಿಂದ ಟ್ವಿಟರ್ಗೆ ಯಾವುದೇ ಜಾಹೀರಾತು ಅಥವಾ ಆದಾಯ ಇರುವುದಿಲ್ಲ. ನೀವು ನಿರ್ದಿಷ್ಟವಾಗಿ ಹುಡುಕಿ ನೋಡದ ಹೊರತು ಅಂಥ ಟ್ವೀಟ್ಗಳು ಕಾಣಿಸಲಾರವು. ಇದು ಆಯಾ ಟ್ವೀಟ್ಗೆ ಅನ್ವಯಿಸುತ್ತದೆಯೇ ವಿನಃ ಇಡೀ ಟ್ವಿಟರ್ ಖಾತೆಗೆ ಅಲ್ಲ,” ಎಂದು ಮಸ್ಕ್ ತಿಳಿಸಿದ್ದಾರೆ.
Published On - 2:38 pm, Tue, 22 November 22