ಒಂದು ವಾಟ್ಸ್ಆ್ಯಪ್ (WhatsApp) ಖಾತೆಯನ್ನು ಮೊಬೈಲ್, ಲ್ಯಾಪ್ಟಾಪ್, ಡೆಸ್ಕ್ಟಾಪ್ಗಳಲ್ಲಿ ಬಳಸಲು ಅವಕಾಶವಿದ್ದರೆ ಒಂದಕ್ಕಿಂತ ಹೆಚ್ಚು ಸ್ಮಾರ್ಟ್ಫೋನ್ಗಳಲ್ಲಿ (Smartphone) ಬಳಸಲು ಈವರೆಗೆ ಅವಕಾಶವಿರಲಿಲ್ಲ. ಇದೀಗ ಮೆಸೇಜಿಂಗ್ ಆ್ಯಪ್ ಹೊಸ ಆಯ್ಕೆಯನ್ನು ಬಳಕೆದಾರರಿಗೆ ನೀಡಿದ್ದು, ಒಂದೇ ಬಾರಿಗೆ ನಾಲ್ಕು ಫೋನ್‌ಗಳಲ್ಲಿ ಒಂದೇ ವಾಟ್ಸ್ಆ್ಯಪ್ ಖಾತೆಯನ್ನು ಬಳಸಬಹುದಾಗಿದೆ. ಈ ವಿಚಾರವಾಗಿ ವಾಟ್ಸ್ಆ್ಯಪ್ ಒಡೆತನ ಹೊಂದಿರುವ ಮೆಟಾ ಸಿಇಒ ಮಾರ್ಕ್ ಝುಕರ್ಬರ್ಗ್ (Mark Zuckerberg) ಫೇಸ್ಬುಕ್ನಲ್ಲಿ ಮಾಹಿತಿ ನೀಡಿದ್ದಾರೆ. ಇಂದಿನಿಂದ, ನೀವು ನಾಲ್ಕು ಫೋನ್‌ಗಳಲ್ಲಿ ಒಂದೇ ವಾಟ್ಸ್ಆ್ಯಪ್ ಖಾತೆಗೆ ಲಾಗ್ ಇನ್ ಮಾಡಿಕೊಳ್ಳಬಹುದು ಎಂದು ಅವರು ಉಲ್ಲೇಖಿಸಿದ್ದಾರೆ.
ಬೇರೆ ಫೋನ್ನಲ್ಲಿ ವಾಟ್ಸ್ಆ್ಯಪ್ ಖಾತೆ ಬಳಸಬೇಕಿದ್ದರೆ ಹೊಸದಾಗಿ ಇನ್ಸ್ಟಾಲ್ ಮಾಡಿಕೊಳ್ಳಬೇಕು. ನಂತರ ಖಾತೆ ಸೆಟಪ್ ಮಾಡುವಾಗ ಫೋನ್ ನಂಬರ್ ನಮೂದಿಸುವ ಬದಲು ‘ಅಸ್ತಿತ್ವದಲ್ಲಿರುವ ಖಾತೆ (Existing Account)’ ಆಯ್ಕೆಯನ್ನು ಆಯ್ದುಕೊಳ್ಳಬೇಕು. ಆಗ ಕ್ಯುಆರ್ ಕೋಡ್ ಕಾಣಿಸುತ್ತದೆ. ನಂತರ ನೀವು ಈಗಾಗಲೇ ವಾಟ್ಸ್ಆ್ಯಪ್ ಖಾತೆ ಹೊಂದಿರುವ ಫೋನ್ನಿಂದ ಸ್ಕ್ಯಾನ್ ಮಾಡುವ ಮೂಲಕ ಲಾಗಿನ್ ಆಗಬಹುದು. ಹೊಸ ಆಯ್ಕೆಯು iOS ಮತ್ತು Android ಸ್ಮಾರ್ಟ್ಫೋನ್ಗಳಲ್ಲಿ ಲಭ್ಯವಿದೆ.
ಮೊದಲು ವಾಟ್ಸ್ಆ್ಯಪ್ ಲಾಗಿನ್ ಆಗಿರುವ ಮೊಬೈಲ್ಫೋನ್ ದೀರ್ಘಕಾಲದವರೆಗೆ ನಿಷ್ಕ್ರಿಯವಾಗಿದ್ದರೆ, ಆ ನಂತರ ವಾಟ್ಸ್ಆ್ಯಪ್ ಲಾಗಿನ್ ಆಗಿರುವ ಎಲ್ಲ ಫೋನ್ಗಳಿಂದ ಸ್ವಯಂಚಾಲಿತವಾಗಿ ಲಾಗೌಟ್ ಆಗಲಿದೆ. ಏಕ ಕಾಲಕ್ಕೆ ನಾಲ್ಕು ಫೋನ್‌ಗಳಲ್ಲಿ ವಾಟ್ಸ್ಆ್ಯಪ್ನ ಒಂದೇ ಖಾತೆ ಬಳಸುವ ಈ ಆಯ್ಕೆಯಿಂದ ಸಂದೇಶ ಕಳುಹಿಸುವ ಪ್ರಕ್ರಿಯೆ ಇನ್ನಷ್ಟು ಸರಳಗೊಳ್ಳಲಿದೆ. ಸೈನ್ ಔಟ್ ಮಾಡದೆಯೇ ಬೇರೆ ಫೋನ್ನಿಂದ ಮೆಸೇಜ್ ಕಳುಹಿಸುವುದು, ಅರ್ಧಕ್ಕೆ ನಿಲ್ಲಿಸಿದ್ದ ಚಾಟ್ಗಳನ್ನು ಮುಂದುವರಿಸಲು ಅನುಕೂಲವಾಗಲಿದೆ ಎಂದು ಕಂಪನಿ ತಿಳಿಸಿದೆ.
ಹೊಸ ಆಯ್ಕೆಯಿಂದ ಉದ್ಯಮ ಸಂಸ್ಥೆಗಳಿಗೆ, ವ್ಯಾಪಾರಿಗಳಿಗೆ ಪ್ರಯೋಜನವಾಗಲಿದೆ. ಉದ್ಯಮ ಸಂಸ್ಥೆಗಳ ಉದ್ಯೋಗಿಗಳು ಒಂದೇ ಖಾತೆಯನ್ನು ನಾಲ್ಕು ಮೊಬೈಲ್ಗಳಲ್ಲಿ ಬಳಸುವ ಮೂಲಕ ಗ್ರಾಹಕರ ಜತೆ ಸಂವಹನ ನಡೆಸಲು ಅನುಕೂಲವಾಗಲಿದೆ. ಮುಂದಿನ ಕೆಲವೇ ದಿನಗಳಲ್ಲಿ ಈ ಅಪ್ಡೇಟ್ ವಿಶ್ವದಾದ್ಯಂತ ಎಲ್ಲ ಬಳಕೆದಾರರಿಗೆ ದೊರೆಯಲಿದೆ ಎಂದು ಕಂಪನಿ ತಿಳಿಸಿದೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:57 pm, Tue, 25 April 23