ಮೈಕ್ರೋಸಾಫ್ಟ್ ಸಹ-ಸಂಸ್ಥಾಪಕ ಬಿಲ್ ಗೇಟ್ಸ್ (Bill Gates) ಅವರು ತಮ್ಮ ಎಲ್ಲಾ ಸಂಪತ್ತನ್ನು ಬಿಟ್ಟುಕೊಡಲು ಮತ್ತು ವಿಶ್ವದ ಶ್ರೀಮಂತರ ಪಟ್ಟಿಯಿಂದ ಹೊರಗುಳಿಯಲು ಸಿದ್ಧನಿದ್ದೇನೆ ಎಂದು ಹೇಳಿದ್ದಾರೆ. ಟ್ವಿಟ್ಟರ್‌ನಲ್ಲಿ (Twitter) ಈ ಬಗ್ಗೆ ಟ್ವೀಟ್ಗಳನ್ನು ಮಾಡಿರುವ ಬಿಲ್ ಗೇಟ್ಸ್, ತೊಂದರೆಯನ್ನು ನಿವಾರಣೆ ಮಾಡಲು ಮತ್ತು ಜೀವನವನ್ನು ಸುಧಾರಿಸುವ ನಿಟ್ಟಿನಲ್ಲಿ ಈ ನಿರ್ಧಾರ ಕೈಗೊಂಡಿದ್ದೇನೆ ಎಂದು ಹೇಳಿದ್ದಾರೆ. ಇದರ ಜೊತೆಗೆ 2000 ನೇ ಇಸವಿಯಲ್ಲಿ ಮಾಜಿ ಪತ್ನಿ ಮೆಲಿಂಡಾ ಫ್ರೆಂಚ್ ಗೇಟ್ಸ್ ಅವರೊಂದಿಗೆ ಸ್ಥಾಪಿಸಿದ ಅವರ ಗೇಟ್ಸ್ ಫೌಂಡೇಶನ್‌ಗೆ (Gates Foundation) ದೇಣಿಗೆಗಳನ್ನು ಹೆಚ್ಚಿಸುವ ಯೋಜನೆ ಕೂಡ ಇದೆ ಎಂಬ ವಿಚಾರವನ್ನು ಬಹಿರಂಗ ಪಡಿಸಿದ್ದಾರೆ. ಬಿಲ್ ಗೇಟ್ಸ್ ಸದ್ಯ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದ್ದಾರೆ.
ಗೇಟ್ಸ್ ಅವರು ತಾವು ಮಾಡಿರುವ ಟ್ವೀಟ್ನಲ್ಲಿ, COVID-19 ಸಾಂಕ್ರಾಮಿಕ ಮತ್ತು ರಷ್ಯಾ-ಉಕ್ರೇನ್ ಯುದ್ಧವು ಇಡೀ ಜಗತ್ತಿಗೆ ಘೋರ ದುರಂತಗಳು ಎಂದು ಬರೆದಿದ್ದಾರೆ. ಯುಎಸ್ ತನ್ನ ಹೊಸ ಕಾನೂನುಗಳನ್ನು ಅನುಸರಿಸಿ ಆಧುನಿಕ ಸಮಾಜದಿಂದ ಹಿಂದೆ ಸರಿದಿದೆ. ಆದ್ದರಿಂದ, ಸಮಾನತೆಗಾಗಿ ಹೋರಾಡಲು ಗೇಟ್ಸ್ ತಮ್ಮ ಫೌಂಡೇಶನ್ನ ಮಂಡಳಿಯ ಸದಸ್ಯರ ಬೆಂಬಲದೊಂದಿಗೆ 2026 ರ ವೇಳೆಗೆ ಸುಮಾರು $6 ಶತಕೋಟಿಯಿಂದ ವರ್ಷಕ್ಕೆ $9 ಶತಕೋಟಿಗೆ ಖರ್ಚು ಮಾಡುವ ಬಗ್ಗೆ ಯೋಜನೆ ಹಾಕಿಕೊಂಡಿದ್ದಾರಂತೆ.
ಗೇಟ್ಸ್ ಫೌಂಡೇಶನ್ ಬಗ್ಗೆ ಹೇಳಿರುವ ಬಿಲ್, ಬಾಲ್ಯ ಮರಣಗಳನ್ನು ಕಡಿಮೆ ಮಾಡುವಲ್ಲಿ ನಾವು ಮುಖ್ಯ ಪಾತ್ರ ವಹಿಸಿದ್ದೇವೆ. ಜೊತೆಗೆ ರೋಗಗಳನ್ನು ನಿರ್ಮೂಲನೆ ಮಾಡುವಲ್ಲಿ, ಆಹಾರ ಭದ್ರತೆ ಮತ್ತು ಹವಾಮಾನ ಹೊಂದಾಣಿಕೆಯನ್ನು ಸುಧಾರಿಸುವಲ್ಲಿ, ಲಿಂಗ ಸಮಾನತೆಯನ್ನು ಸಾಧಿಸುವಲ್ಲಿ ಮತ್ತು ಶೈಕ್ಷಣಿಕ ಫಲಿತಾಂಶಗಳನ್ನು ಸುಧಾರಿಸುವಲ್ಲಿ ಗೇಟ್ಸ್ ಫೌಂಡೇಶನ್ ಪಾತ್ರ ಮಹತ್ವದ್ದಾಗಿದೆ. COVID-19 ಸಾಂಕ್ರಾಮಿಕ ರೋಗವನ್ನು ಎದುರಿಸಲೂ ಕೆಲಸ ಮಾಡಿದೆ ಎಂದು ಬರೆದುಕೊಂಡಿದ್ದಾರೆ.
ವಿಶ್ವದ ಶ್ರೀಮಂತ ವ್ಯಕ್ತಿಗಳ ಪಟ್ಟಿಗೆ ಸಂಬಂಧಿಸಿದಂತೆ, ಗೇಟ್ಸ್ 1995 ಮತ್ತು 2010 ರ ನಡುವೆ ಮತ್ತು 2013 ರಿಂದ 2017 ರವರೆಗೆ ಅಗ್ರ ಸ್ಥಾನವನ್ನು ಪಡೆದುಕೊಂಡಿದ್ದರು. ಪ್ರಸ್ತುತ ಐದನೇ ಸ್ಥಾನದಲ್ಲಿದ್ದಾರೆ. ಫೋರ್ಬ್ಸ್ ಟ್ರ್ಯಾಕರ್ ಪ್ರಕಾರ, ಈಗ ಈ ಪಟ್ಟಿಯಲ್ಲಿ ಎಲೋನ್ ಮಸ್ಕ್ ಅಗ್ರಸ್ಥಾನದಲ್ಲಿದ್ದಾರೆ. ನಂತರ ಬರ್ನಾರ್ಡ್ ಅರ್ನಾಲ್ಟ್ ಮತ್ತು ಕುಟುಂಬ, ಜೆಫ್ ಬೆಜೋಸ್, ಮತ್ತು ಗೌತಮ್ ಅದಾನಿ ಮತ್ತು ಕುಟುಂಬ ಇದೆ ಎನ್ನಲಾಗಿದೆ.
Published On - 11:55 am, Fri, 15 July 22