ನವದೆಹಲಿ: ಮೈಕ್ರೋಸಾಫ್ಟ್ (Microsoft) ಸೇವೆಗಳಾದ ಎಂಎಸ್ ಟೀಮ್ಸ್, ಔಟ್ಲುಕ್, ಅಜೂರ್ ಹಾಗೂ ಮೈಕ್ರೋಸಾಫ್ಟ್ 365 ಸರ್ವರ್ ಡೌನ್ ಆಗಿದ್ದು, ಭಾರತದ ಬಳಕೆದಾರರಿಗೆ ತೊಂದರೆಯಾಗಿದೆ. ಟೀಮ್ಸ್ ಸರ್ವರ್ ಡೌನ್ ಆಗಿರುವ ಬಗ್ಗೆ ಡೌನ್ಡಿಟೆಕ್ಟರ್ (Downdetector) ತಾಣದಲ್ಲಿ ಸುಮಾರು 3,500ರಷ್ಟು ಮಂದಿ ವರದಿ ಮಾಡಿದ್ದಾರೆ. ಲಿಂಕ್ಡ್ಇನ್ ಸರ್ವರ್ ಕೂಡ ಡೌನ್ ಆಗಿದೆ ಎಂದು ವರದಿಯಾಗಿದೆ. ಭಾರತದಲ್ಲಿನ ಸುಮಾರು 3,000 ಮಂದಿ ಔಟ್ಲುಕ್ ಬಳಕೆದಾರರೂ ಸರ್ವರ್ ಡೌನ್ ಬಗ್ಗೆ ರಿಪೋರ್ಟ್ ಮಾಡಿದ್ದಾರೆ. ಸಮಸ್ಯೆ ಇರುವುದನ್ನು ಮೈಕ್ರೋಸಾಫ್ಟ್ ಒಪ್ಪಿಕೊಂಡಿದೆ. ಮೈಕ್ರೋಸಾಫ್ಟ್ 365ನ ವಿವಿಧ ಸೇವೆಗಳಲ್ಲಿ ವ್ಯತ್ಯಯವಾಗಿರುವ ಬಗ್ಗೆ ಪರಿಶೀಲಿಸುತ್ತಿದ್ದೇವೆ ಎಂದು ಕಂಪನಿ ಟ್ವೀಟ್ ಮಾಡಿದೆ. ಮೈಕ್ರೋಸಾಫ್ಟ್ ಅಜೂರ್ ಪಬ್ಲಿಕ್ ಕ್ಲೌಡ್ ಪ್ಲಾಟ್ಫಾರ್ಮ್ ಸರ್ವರ್ ಕೂಡ ಡೌನ್ ಆಗಿದೆ. ಮೈಕ್ರೋಸಾಫ್ಟ್ನ ಅನೇಕ ಬಳಕೆದಾರರಿಗೆ ಸಂದೇಶಗಳನ್ನು ಕಳುಹಿಸಲು ಮತ್ತು ಸ್ವೀಕರಿಸಲು ಸಾಧ್ಯವಾಗುತ್ತಿಲ್ಲ. ನಿಗದಿಯಾಗಿರುವ ಕರೆಗಳನ್ನು ಸ್ವೀಕರಿಸಲೂ ಸಾಧ್ಯವಾಗುತ್ತಿಲ್ಲ ಎನ್ನಲಾಗಿದೆ.
We’re investigating issues impacting multiple Microsoft 365 services. More info can be found in the admin center under MO502273.
— Microsoft 365 Status (@MSFT365Status) January 25, 2023
ಈ ಮಧ್ಯೆ, ಮೈಕ್ರೋಸಾಫ್ಟ್ ಸೇವೆಗಳು ಡೌನ್ ಆಗಿರುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅನೇಕ ಸಂದೇಶಗಳು ಹರಿದಾಡುತ್ತಿವೆ. ಮೈಕ್ರೋಸಾಫ್ಟ್ ಅನ್ನು ಹಾಸ್ಯ ಮಾಡಿರುವ ಸಂದೇಶಗಳೂ ಟ್ವಿಟರ್ನಲ್ಲಿ ಪ್ರಕಟಗೊಂಡಿವೆ. ಮೈಕ್ರೋಸಾಫ್ಟ್ ತಪ್ಪಾಗಿ ಉದ್ಯೋಗಿಗಳನ್ನು ವಜಾಗೊಳಿಸಿದೆಯೇ ಎಂದು ಕೆಲವರು ಪ್ರಶ್ನಿಸಿದ್ದಾರೆ. ‘ಮೈಕ್ರೋಸಾಫ್ಟ್ ಡೌನ್ ಆಗಿದೆ. ನನ್ನ ಕೆಲವು ಸಹೋದ್ಯೋಗಿಗಳು ಕೆಲಸದಿಂದ ವಜಾಗೊಂಡೆವೇ’ ಎಂದು ಭಾವಿಸಿದರು ಎಂದು ವ್ಯಕ್ತಿಯೊಬ್ಬರು ಟ್ವೀಟ್ ಮಾಡಿದ್ದಾರೆ. ‘ರಾಷ್ಟ್ರಮಟ್ಟದ ರಜಾ ದಿನದ ಹಿಂದಿನ ದಿನವೇ ಮೈಕ್ರೋಸಾಫ್ಟ್ ಡೌನ್ ಆಗಿದೆ. ಇದು ಬೇಗನೇ ಲಾಗೌಟ್ ಆಗಿ ಎಂದು ದೇವರು ನೀಡಿರುವ ಸಂದೇಶವೇ’ ಎಂದು ಮತ್ತೊಬ್ಬರು ಟ್ವೀಟ್ ಮಾಡಿದ್ದಾರೆ.
ಭಾರತ ಮಾತ್ರವಲ್ಲದೆ ಇತರ ಕೆಲವು ದೇಶಗಳಲ್ಲಿಯೂ ಮೈಕ್ರೋಸಾಫ್ಟ್ ಸರ್ವರ್ ಡೌನ್ ಆಗಿದೆ. ಜಪಾನ್ನಲ್ಲಿ ಸುಮಾರು 900 ಮಂದಿ ಸರ್ವರ್ ಡೌನ್ ಆಗಿರುವ ಬಗ್ಗೆ ರಿಪೋರ್ಟ್ ಮಾಡಿದ್ದಾರೆ. ಉಳಿದಂತೆ ಆಸ್ಟ್ರೇಲಿಯಾ, ಬ್ರಿಟನ್, ಯುಎಇಯಲ್ಲಿ ಕೂಡ ಮೈಕ್ರೋಸಾಫ್ಟ್ ಸರ್ವರ್ ಡೌನ್ ಆಗಿದೆ ಎಂದು ವರದಿಯಾಗಿದೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:09 pm, Wed, 25 January 23