BharOS: ಬಂದಿದೆ ದೇಶೀಯ ಆಪರೇಟಿಂಗ್ ಸಿಸ್ಟಂ; ಐಐಟಿ ಮದ್ರಾಸ್ ಅಭಿವೃದ್ಧಿಪಡಿಸಿದ ಭರೋಸ್ ಪರಿಶೀಲಿಸಿದ ಧರ್ಮೇಂದ್ರ ಪ್ರಧಾನ್
BharOS ಎಂಬುದು ಹೊಸ ಮೊಬೈಲ್ ಆಪರೇಟಿಂಗ್ ಸಿಸ್ಟಂ. ಖಾಸಗೀತನ ಮತ್ತು ಸುರಕ್ಷತೆಯ ಮೇಲೆ ಹೆಚ್ಚು ಒತ್ತು ನೀಡುವುದು ಇದರ ವಿಶೇಷ. ಗೂಗಲ್ನ ಆ್ಯಂಡ್ರಾಯ್ಡ್ ಹಾಗೂ ಐಒಎಸ್ ಮಾದರಿಯಲ್ಲಿಯೇ ಕಾರ್ಯನಿರ್ವಹಿಸಲಿದೆ.
ನವದೆಹಲಿ: ಆ್ಯಂಡ್ರಾಯ್ಡ್ ಮತ್ತು ಐಒಎಸ್ ಆಪರೇಟಿಂಗ್ ಸಿಸ್ಟಂಗಳಂತೆಯೇ (Operating System) ಭಾರತಕ್ಕೆ ಶೀಘ್ರದಲ್ಲೇ ದೇಶೀಯ ಆಪರೇಟಿಂಗ್ ಸಿಸ್ಟಂ ದೊರೆಯಲಿದೆ. ಸಂಪೂರ್ಣ ಸ್ವದೇಶಿ ಆಪರೇಟಿಂಗ್ ಸಿಸ್ಟಂ ಭರೋಸ್ ಒಎಸ್ (BharOS) ಅನ್ನು ಮದ್ರಾಸ್ ಐಐಟಿ (Madras IIT) ಅಭಿವೃದ್ಧಿಪಡಿಸಿದ್ದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಪರಿಶೀಲನೆ ನಡೆಸಿದರು. ದೇಶೀಯ ಆಪರೇಟಿಂಗ್ ಸಿಸ್ಟಂ ಅಭಿವೃದ್ಧಿಪಡಿಸುವಲ್ಲಿ ಶ್ರಮಿಸಿದ ಎಲ್ಲರಿಗೂ ಅಭಿನಂದನೆಗಳು. ಎಂಟು ವರ್ಷಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರು ಡಿಜಿಟಲ್ ಇಂಡಿಯಾದ ಬಗ್ಗೆ ಮಾತನಾಡಿದ್ದಾಗ ಕೆಲವರು ಅವರನ್ನು ಹಾಸ್ಯ ಮಾಡಿದ್ದರು. ಆದರೆ ತಂತ್ರಜ್ಞರು, ಅನ್ವೇಷಕರು, ಕೈಗಾರಿಕೆಗಳು ಹಾಗೂ ಸಂಸ್ಥೆಗಳು ಅವರ ದೃಷ್ಟಿಕೋನವನ್ನು ಒಪ್ಪಿಕೊಂಡು ಇಂದು ಅನುಷ್ಠಾನಗೊಳಿಸುತ್ತಿದ್ದಾರೆ ಎಂದು ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ. ಆಪರೇಟಿಂಗ್ ಸಿಸ್ಟಂ ಪರಿಶೀಲನೆ ವೇಳೆ ಮತ್ತೊಬ್ಬರ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಕೂಡ ಹಾಜರಿದ್ದರು.
ಈ ಸಾಧನೆಯ ಹಿಂದೆ ಅನೇಕ ಅಡೆತಡೆಗಳಿರುತ್ತವೆ. ಅನೇಕರು ಇಂಥ ಪ್ರಯತ್ನಗಳು ಯಶಸ್ವಿಯಾಗಬೇಕೆಂದು ಬಯಸುವುದಿಲ್ಲ ಮತ್ತು ಅಡೆತಡೆಗಳನ್ನು ಒಡ್ಡುತ್ತಿರುತ್ತಾರೆ ಎಂದು ಅಶ್ವಿನಿ ವೈಷ್ಣವ್ ಹೇಳಿದ್ದಾರೆ.
ಏನಿದು ಭರೋಸ್ (BharOS)?
ಭರೋಸ್ ಎಂಬುದು ಹೊಸ ಮೊಬೈಲ್ ಆಪರೇಟಿಂಗ್ ಸಿಸ್ಟಂ. ಖಾಸಗೀತನ ಮತ್ತು ಸುರಕ್ಷತೆಯ ಮೇಲೆ ಹೆಚ್ಚು ಒತ್ತು ನೀಡುವುದು ಇದರ ವಿಶೇಷ. ಗೂಗಲ್ನ ಆ್ಯಂಡ್ರಾಯ್ಡ್ ಹಾಗೂ ಐಒಎಸ್ ಮಾದರಿಯಲ್ಲಿಯೇ ಇರಲಿದೆ. ಸರ್ಕಾರೀ ವ್ಯವಸ್ಥೆಗಳಿಗೆ ಮತ್ತು ಸಾರ್ವಜನಿಕರಿಗಾಗಿ ಮಕ್ತ ಆಪರೇಟಿಂಗ್ ಸಿಸ್ಟಂ ಅಭಿವೃದ್ಧಿಪಡಿಸಲು ಕೇಂದ್ರ ಸರ್ಕಾರದ ಅನುದಾನ ಘೋಷಿಸಿತ್ತು. ಇದರಡಿಯಲ್ಲಿ ಮದ್ರಾಸ್ ಐಐಟಿ BharOS ಅಭಿವೃದ್ಧಿಪಡಿಸಿದೆ. ಸ್ಮಾರ್ಟ್ಫೋನ್ಗಳಿಗಾಗಿ ವಿದೇಶಿ ಆಪರೇಟಿಂಗ್ ಸಿಸ್ಟಂ ಬಳಸುವ ಬದಲು ದೇಶೀಯವಾಗಿ ಅಭಿವೃದ್ಧಿಪಡಿಸಿದ ತಂತ್ರಜ್ಞಾನವನ್ನು ಬಳಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಅನುದಾನ ಘೋಷಿಸಿತ್ತು.
ಆ್ಯಂಡ್ರಾಯ್ಡ್ಗಿಂತ ಹೇಗೆ ಭಿನ್ನ BharOS?
BharOS ಆ್ಯಂಡ್ರಾಯ್ಡ್ಗಿಂತ ತುಸು ಭಿನ್ನವಾಗಿದೆ. ಇದರಲ್ಲಿ ಡಿಫಾಲ್ಟ್ ಗೂಗಲ್ ಆ್ಯಪ್, ಸೇವೆಗಳು ಇರುವುದಿಲ್ಲ. ಬಳಕೆದಾರರನ್ನು ನಿರ್ದಿಷ್ಟ, ಅಪರಿಚಿತ ಆ್ಯಪ್ಗಳನ್ನು ಡೌನ್ಲೋಡ್ ಮಾಡುವಂತೆ ಪ್ರಭಾವ ಬೀರುವುದಿಲ್ಲ. ಐಐಟಿ ಮದ್ರಾಸ್ ಐಐಟಿ ಸ್ಥಾಪಿಸಿರುವ ಐಐಟಿ ಮದ್ರಾಸ್ ಪ್ರವರ್ತಕ್ ಟೆಕ್ನಾಲಜೀಸ್ ಫೌಂಡೇಶನ್ನ ಅಧೀನದಲ್ಲಿ ಕಾರ್ಯ ನಿರ್ವಹಿಸುವ ಜಂದ್ಕೆ ಆಪರೇಷನ್ಸ್ ಪ್ರೈವೇಟ್ ಲಿಮಿಟೆಡ್ ಅಭಿವೃದ್ಧಿಪಡಿಸಿದೆ. ಈ ಫೌಂಡೇಶನ್ಗೆ ಕೇಂದ್ರ ಸರ್ಕಾರ ಹಣಕಾಸು ನೆರವು ಒದಗಿಸಿದೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:18 pm, Tue, 24 January 23