Android Phones: ಭಾರತದಲ್ಲಿ ಭಿನ್ನವಾಗಿರಲಿವೆ ಆ್ಯಂಡ್ರಾಯ್ಡ್ ಫೋನ್ಗಳು; ಕಾರಣ ಇಲ್ಲಿದೆ
ಡಿಫಾಲ್ಟ್ ವೆಬ್ ಬ್ರೌಸರ್ಗಳನ್ನು ಆಯ್ಕೆ ಮಾಡಲು ಬಳಕೆದಾರರಿಗೆ ಅವಕಾಶ, ಆ್ಯಪ್ ಡೆವಲಪರ್ಗಳಿಗೆ ಪಾವತಿ ಮಾಡಲು ಗೂಗಲ್ ಪಾವತಿ ವ್ಯವಸ್ಥೆಗೆ ಪರ್ಯಾಯವಾಗಿ ಬೇರೆ ಆಯ್ಕೆ ಬಳಸಲು ಅವಕಾಶ ನೀಡುವುದು ಪ್ರಮುಖ ಬದಲಾವಣೆಗಳಾಗಿರಲಿವೆ. ಉಳಿದ ಬದಲಾವಣೆಗಳ ಬಗ್ಗೆ ಇಲ್ಲಿದೆ ವಿವರ.
ನವದೆಹಲಿ: ಗೂಗಲ್ನ (Google) ಭಾರತ ಘಟಕವು ಶೀಘ್ರದಲ್ಲೇ ಆ್ಯಂಡ್ರಾಯ್ಡ್ ಮೊಬೈಲ್ ಆಪರೇಟಿಂಗ್ ಸಿಸ್ಟಂ ಮತ್ತು ಗೂಗಲ್ ಪ್ಲೇ ಆ್ಯಪ್ ಸ್ಟೋರ್ನಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡಲಿದೆ. ಪರಿಣಾಮವಾಗಿ ಆ್ಯಂಡ್ರಾಯ್ಡ್ ಫೋನ್ಗಳಲ್ಲಿ ತುಸು ಭಿನ್ನತೆ ಕಂಡುಬರಲಿದೆ. ಸರ್ಕಾರದ ಆದೇಶ, ನಿಯಮಗಳನ್ನು ಪಾಲಿಸುವುದಾಗಿ ಇತ್ತೀಚೆಗೆ ಸುಪ್ರೀಂ ಕೋರ್ಟ್ಗೆ ಗೂಗಲ್ ತಿಳಿಸಿತ್ತು. ಇದರ ಬೆನ್ನಲ್ಲೇ ಬದಲಾವಣೆಗೆ ಮುಂದಾಗಿದೆ ಎನ್ನಲಾಗಿದೆ. 2022ರಲ್ಲಿ ಭಾರತೀಯ ಸ್ಪರ್ಧಾ ಆಯೋಗವು (CCI) ಗೂಗಲ್ಗೆ ಭಾರೀ ದಂಡ ವಿಧಿಸಿತ್ತು. ಆ್ಯಂಡ್ರಾಯ್ಡ್ ಆ್ಯಪ್ಗಳಿಗೆ ಸಂಬಂಧಿಸಿ ಸ್ಪರ್ಧಾ ನಿಯಮಗಳನ್ನು ಉಲ್ಲಂಘಿಸಿದ ಆರೋಪದಲ್ಲಿ ದಂಡ ವಿಧಿಸಲಾಗಿತ್ತಲ್ಲದೆ, ಲೋಪಗಳನ್ನು ಸರಿಪಡಿಸುವಂತೆ ಸೂಚಿಸಲಾಗಿತ್ತು. ಇದರ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದ ಗೂಗಲ್ಗೆ ಅಲ್ಲಿ ಹಿನ್ನಡೆಯಾಗಿತ್ತು. ಭಾರತವು ಆ್ಯಂಡ್ರಾಯ್ಡ್ ಸ್ಮಾರ್ಟ್ಫೋನ್ ಮಾರುಕಟ್ಟೆಯಲ್ಲಿ ಶೇ 97ರಷ್ಟು ಪಾಲು ಹೊಂದಿದ್ದು, ಇತ್ತೀಚಿನ ನಿಯಮದಿಂದಾಗಿ ಆ್ಯಂಡ್ರಾಯ್ಡ್ ಆ್ಯಪ್ ಡೆವಲಪರ್ಗಳಿಗೆ ಪ್ರಯೋಜನವಾಗಲಿದೆ ಎಂದು ನಿರೀಕ್ಷಿಸಲಾಗಿದೆ.
ಡಿಫಾಲ್ಟ್ ವೆಬ್ ಬ್ರೌಸರ್ಗಳನ್ನು ಆಯ್ಕೆ ಮಾಡಲು ಬಳಕೆದಾರರಿಗೆ ಅವಕಾಶ, ಆ್ಯಪ್ ಡೆವಲಪರ್ಗಳಿಗೆ ಪಾವತಿ ಮಾಡಲು ಗೂಗಲ್ ಪಾವತಿ ವ್ಯವಸ್ಥೆಗೆ ಪರ್ಯಾಯವಾಗಿ ಬೇರೆ ಆಯ್ಕೆ ಬಳಸಲು ಅವಕಾಶ ನೀಡುವುದು ಪ್ರಮುಖ ಬದಲಾವಣೆಗಳಾಗಿರಲಿವೆ. ಸಿಸಿಐ ನಿರ್ದೇಶನಗಳಿಗೆ ಅನುಗುಣವಾಗಿ ನಡೆದುಕೊಳ್ಳಲು ಬದ್ಧವಾಗಿದ್ದೇವೆ. ಆ ನಿಟ್ಟಿನಲ್ಲಿ ಬದಲಾವಣೆಗಳನ್ನು ಕಾರ್ಯರೂಪಕ್ಕೆ ತರಲಾಗುವುದು ಎಂದು ಪತ್ರಿಕಾ ಪ್ರಕಟಣೆ ಮೂಲಕ ಗೂಗಲ್ ಇತ್ತೀಚೆಗೆ ತಿಳಿಸಿತ್ತು.
ಒರಿಜಿನಲ್ ಈಕ್ವಿಪ್ಮೆಂಟ್ ತಯಾರಕರು ಈಗ ವೈಯಕ್ತಿಕ ಗೂಗಲ್ ಆ್ಯಪ್ಗಳ ಪ್ರಿ ಇನ್ಸ್ಟಾಲೇಷನ್ಗೆ ಪರವಾನಗಿ ನೀಡಬಹುದಾಗಿದೆ. ಈ ಹಿಂದೆ ಗೂಗಲ್ ಅಭಿವೃದ್ಧಿಪಡಿಸಿದ ಆ್ಯಪ್ಗಳಾದ ಯೂಟ್ಯೂಬ್, ಮೀಟ್, ಜಿಮೇಲ್ ಅನ್ನು ಪ್ರಿ ಇನ್ಸ್ಟಾಲ್ ಮಾಡಬೇಕೆಂದು ಆ್ಯಂಡ್ರಾಯ್ಡ್ ಪರವಾನಗಿ ಒಪ್ಪಂದದಲ್ಲಿ ಹೇಳಲಾಗಿತ್ತು.
ಡಿಫಾಲ್ಟ್ ಸರ್ಚ್ ಎಂಜಿನ್, ಹೆಚ್ಚುವರಿ ಬಿಲ್ಲಿಂಗ್ ಆಯ್ಕೆಗೆ ಅವಕಾಶ
ಭಾರತದ ಬಳಕೆದಾರರಿಗೆ ಇನ್ನು ಮುಂದೆ ತಮಗೆ ಬೇಕಾದ ಡಿಫಾಲ್ಟ್ ಸರ್ಚ್ ಎಂಜಿನ್ ಅನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶ ದೊರೆಯಲಿದೆ. ಚಾಯ್ಸ್ ಸ್ಕ್ರೀನ್ ಮೂಲಕ ಈ ಆಯ್ಕೆ ಮಾಡಬಹುದಾಗಿದ್ದು, ಬಳಕೆದಾರರು ಹೊಸ ಆ್ಯಂಡ್ರಾಯ್ಡ್ ಸ್ಮಾರ್ಟ್ಫೋನ್ ಅಥವಾ ಟ್ಯಾಬ್ಲೆಟ್ ಅನ್ನು ಸೆಟಪ್ ಮಾಡುವಾಗ ಆಯ್ಕೆ ದೊರೆಯಲಿದೆ. ಮೈಕ್ರೋಸಾಫ್ಟ್ ಬಿಂಗ್ ಅಥವಾ ಡಕ್ಡಕ್ಗೋದಂಥ ಹೆಚ್ಚು ಸರ್ಚ್ ಎಂಜಿನ್ಗಳನ್ನು ಹೊಂದಲೂ ಬಳಕೆದಾರರಿಗೆ ಅವಕಾಶ ದೊರೆಯಲಿದೆ. ಹೆಚ್ಚಿನ ಬಿಲ್ಲಿಂಗ್ ಆಯ್ಕೆಗಳನ್ನೂ ಗ್ರಾಹಕರಿಗೆ ನೀಡುವುದಾಗಿಯೂ ಗೂಗಲ್ ಹೇಳಿದೆ.
ಇದನ್ನೂ ಓದಿ: Google: ಗೂಗಲ್ಗೆ ಮತ್ತೆ ಹಿನ್ನಡೆ; ಶೇ 10 ದಂಡ ಪಾವತಿಸಲು ಎನ್ಸಿಎಲ್ಎಟಿ ಸೂಚನೆ
ಗೂಗಲ್ ಪ್ಲೇ ಹೊರತುಪಡಿಸಿ ವಿವಿಧ ಮೂಲಗಳಿಂದ ಆ್ಯಪ್ಗಳನ್ನು ಡೌನ್ಲೋಡ್ ಮಾಡಿಕೊಳ್ಳಲೂ ಅವಕಾಶ ದೊರೆಯಲಿದೆ. ಆದರೆ, ವೈರಸ್ ದಾಳಿಯ ಅಪಾಯದ ಬಗ್ಗೆ ಎಚ್ಚರಿಕೆ ವಹಿಸಬೇಕಾಗಲಿದೆ. ಮುಂದಿನ ಕೆಲವೇ ತಿಂಗಳುಗಳಲ್ಲಿ ಬದಲಾವಣೆಗಳು ಜಾರಿಗೆ ಬರಲಿವೆ ಎಂದು ಗೂಗಲ್ ಹೇಳಿದೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:35 pm, Thu, 26 January 23