ಎಲಾನ್ ಮಸ್ಕ್ (Elon Muck) ಮಾಲೀಕತ್ವದ ಟ್ವಿಟ್ಟರ್ (Twitter) ಕಂಪನಿ ಮುಳುಗುವ ಭೀತಿಯಲ್ಲಿದೆ. ನೂತನ ಬದಲಾವಣೆ ತರಲು ಮುಂದಾದ ಮಸ್ಕ್ಗೆ ಈಗ ಸಂಕಷ್ಟ ಎದುರಾಗಿದೆ. ನೂರಾರು ಟ್ವಿಟ್ಟರ್ ಉದ್ಯೋಗಿಗಳು ಸಾಮೂಹಿಕವಾಗಿ ರಾಜೀನಾಮೆ ನೀಡುತ್ತಿದ್ದಾರೆ. ಈ ಹಿನ್ನೆಲೆ ಎಲ್ಲೆಡೆ ಟ್ವಿಟ್ಟರ್ ಕಚೇರಿಗಳನ್ನು ಮುಚ್ಚಲಾಗುತ್ತಿದೆ. ಅಲ್ಲದೆ ಟ್ವಿಟ್ಟರ್‌ನಲ್ಲಿ #GoodByeTwitter, #RIPTwitter, #TwitterDown ಹ್ಯಾಶ್ಟ್ಯಾಗ್ಗಳು ಟ್ರೆಂಡಿಂಗ್ನಲ್ಲಿದೆ. ವರದಿಗಳ ಪ್ರಕಾರ, ಟ್ವಿಟ್ಟರ್ ಉದ್ಯೋಗಿಗಳಿಗೆ ಕಂಪನಿಯಲ್ಲಿ ಉಳಿಯಲು ಬಯಸುತ್ತೀರಾ ಎಂಬ ಪ್ರಶ್ನೆಗೆ ಗುರುವಾರ ಮಧ್ಯಾಹ್ನ 2 ಗಂಟೆಯ ವರೆಗೆ ಸಮಯಾವಕಾಶ ನೀಡಲಾಗಿತ್ತು. ಆದರೆ, ಉದ್ಯೋಗಿಗಳು ಸೆಲ್ಯೂಟ್ ಎಮೋಜಿಗಳನ್ನು ಕಳುಹಿಸಿ ವಿದಾಯ ಸಂದೇಶಗಳನ್ನು ಪೋಸ್ಟ್ ಮಾಡುತ್ತಿದ್ದಾರೆ.
ಈ ಬೆಳವಣಿಗೆ ಬೆನ್ನಲ್ಲೇ ಟ್ವಿಟ್ಟರ್‌ನ ಎಲ್ಲಾ ಕಚೇರಿಗಳು ತಾತ್ಕಾಲಿಕವಾಗಿ ಬಂದ್ ಅಗಿರುವುದು ತಿಳಿದುಬಂದಿದೆ. “ಕೂಡಲೇ ಜಾರಿಯಾಗುವಂತೆ ಕಚೇರಿ ಕಟ್ಟಡಗಳನ್ನು ತಾತ್ಕಾಲಿಕವಾಗಿ ಮುಚ್ಚುತ್ತಿದ್ದೇವೆ. ಎಲ್ಲಾ ಬ್ಯಾಡ್ಜ್ ಅಕ್ಸೆಸ್ ಅನ್ನು ರದ್ದು ಮಾಡಲಾಗಿದೆ. ನವೆಂಬರ್ 21, ಸೋಮವಾರ ಕಚೇರಿಗಳು ಮತ್ತೆ ಬಾಗಿಲು ತೆರೆಯುತ್ತವೆ. ನಿಮ್ಮ ಹೊಂದಾಣಿಕೆಗೆ ನಮ್ಮ ಧನ್ಯವಾದ. ಕಂಪನಿಯ ಗೌಪ್ಯ ಮಾಹಿತಿಯನ್ನು ಸೋಷಿಯಲ್ ಮೀಡಿಯಾದಲ್ಲಾಗಲೀ, ಮಾಧ್ಯಮದಲ್ಲಾಗಲೀ ಅಥವಾ ಬೇರೆಲ್ಲಿಯಾಗಲೀ ಚರ್ಚಿಸದೆ ಕಂಪನಿಯ ನೀತಿಗೆ ಬದ್ಧತೆಯನ್ನು ಮುಂದುವವರಿಸಿರಿ,” ಎಂದು ಟ್ವಿಟ್ಟರ್‌ನ ಮ್ಯಾನೇಜ್ಮೆಂಟ್ ತನ್ನ ಉದ್ಯೋಗಿಗಳಿಗೆ ಮೇಲ್ ಕಳುಹಿಸಿದೆ.
ಎಲಾನ್ ಮಸ್ಕ್ ಟ್ವಿಟ್ಟರ್‌ನಲ್ಲಿ ದಿನಕ್ಕೆ ಕನಿಷ್ಠ 12 ಗಂಟೆ ಕೆಲಸ ಮಾಡುವಂತೆ ಉದ್ಯೋಗಿಗಳಿಗೆ ನಿರ್ದೇಶನ ನೀಡಿದ್ದಾರೆ. ಹಾರ್ಡ್ ಕೋರ್ ಆಗಿ ಕೆಲಸ ಮಾಡುವುದಿದ್ದರೆ ಇರಿ ಇಲ್ಲದಿದ್ದರೆ ಕೆಲಸ ಬಿಟ್ಟು ಹೋಗಿ ಎಂಬ ಎರಡು ಆಯ್ಕೆಯನ್ನು ಮಸ್ಕ್ ನೀಡಿದ್ದರು ಎನ್ನಲಾಗಿದೆ. ಈಗಾಗಲೇ ಟ್ವಿಟ್ಟರ್ ಕಂಪನಿಯನ್ನು ಸ್ವಾಧೀನಪಡಿಸಿಕೊಂಡ ನಂತರ ಮಸ್ಕ್ ತನ್ನ ಅರ್ಧದಷ್ಟು ಉದ್ಯೋಗಿಗಳನ್ನು ವಜಾಗೊಳಿಸಿದ್ದಾರೆ. ಇದೀಗ ಸುಮಾರು 3,000 ಉದ್ಯೋಗಿಗಳು ಟ್ವಿಟ್ಟರ್ ತೊರೆದಿದ್ದಾರೆ.
ಬಿಬಿಸಿ ವರದಿಯೊಂದರ ಪ್ರಕಾರ, ಟ್ವಿಟ್ಟರ್‌ನಲ್ಲಿ ಸದ್ಯಕ್ಕೆ ಉಳಿಯಲಿರುವುದು ಎರಡು ಸಾವಿರ ಉದ್ಯೋಗಿಗಳು ಮಾತ್ರ. ಎಲಾನ್ ಮಸ್ಕ್ ಬರುವ ಮುನ್ನ ಟ್ವಿಟ್ಟರ್‌ನಲ್ಲಿ 7,500 ಉದ್ಯೋಗಿಗಳಿದ್ದರು. ಮಸ್ಕ್ ಬಂದಾಗಲೇ ಶೇ. 50ರಷ್ಟು ಉದ್ಯೋಗಿಗಳನ್ನು ಮನೆಗೆ ಕಳುಹಿಸಲಾಗುತ್ತದೆ ಎಂಬ ಸುದ್ದಿ ಇತ್ತು. ಆದರೀಗ ಶೇ. 70ರಷ್ಟು ಉದ್ಯೋಗಿಗಳು ಕೆಲಸ ಬಿಟ್ಟಿರುವಂತಿದೆ. ಒಟ್ಟಾರೆ ಟ್ವಿಟ್ಟರ್‌ನಲ್ಲಿ ಎಲಾನ್ ಮಸ್ಕ್ ಆಳ್ವಿಕೆ ಶುರುವಾದಾಗಿನಿಂದ ಭಾರೀ ಗೊಂದಲಮಯ ವಾತಾವರಣ ನಿರ್ಮಾಣವಾಗಿದೆ.
ಟ್ವಿಟ್ಟರ್‌ನ ಬ್ಲೂ ಸಬ್ಸ್ಕ್ರಿಪ್ಷನ್:
ಟ್ವಿಟ್ಟರ್ ಬ್ಲೂ ಶುಲ್ಕ ಚಂದಾದಾರಿಕೆ ಭಾರತದಲ್ಲಿ ಕೆಲವು ಜನರು ತಿಂಗಳಿಗೆ ರೂ. 719ಕ್ಕೆ, ಅಂದರೆ ಸುಮಾರು $8.9ಕ್ಕೆ ಸಮನಾಗಿ ಪಾವತಿಸಿ ಪಡೆಯುತ್ತಿದ್ದಾರೆ. ಇದನ್ನು ಪಡೆದ ಗ್ರಾಹಕರು 42 ನಿಮಿಷಗಳವರೆಗೆ ದೊಡ್ಡ ವಿಡಿಯೋಗಳನ್ನು ಅಪ್‌ಲೋಡ್ ಮಾಡಲು ಸಾಧ್ಯವಾಗುತ್ತದೆ. ಜೊತೆಗೆ ಇವರು ಹಂಚಿಕೊಂಡ ಪೋಸ್ಟ್‌ಗಳು ಹೆಚ್ಚು ಆದ್ಯತೆಯ ಶ್ರೇಯಾಂಕವನ್ನು ಪಡೆಯಲಿವೆ. ಮತ್ತು ಟ್ವಿಟ್ಟರ್ ಖಾತೆಗಳಲ್ಲಿ ಜಾಹಿರಾತು ವೀಕ್ಷಣೆ ಪ್ರಮಾಣ ಕಡಿಮೆ ಇರಲಿದ್ದು ಏನೇ ಹೊಸ ಅಪ್‌ಡೇಟ್‌ಗಳು ಬಂದರೆ ಟ್ವಿಟ್ಟರ್ ಬ್ಲೂ ಗ್ರಾಹಕರಿಗೆ ಮೊದಲು ಸಿಗಲಿದೆ. ವಿಶೇಷ ಎಂದರೆ ಟ್ವಿಟ್ಟರ್ ಬ್ಲೂ ಚಂದಾದಾರಿಕೆಯನ್ನು ಯಾವ ವ್ಯಕ್ತಿ ಬೇಕಾದರೂ ಖರೀದಿಸಬಹುದು. ಇದಕ್ಕೆ ಸೆಲೆಬ್ರಿಟಿಗಳೇ ಆಗಬೇಕು ಅಥವಾ ಕಂಪನಿಗಳು ಮತ್ತು ರಾಜಕಾರಣಿಗಳೇ ಆಗಬೇಕಂತಿಲ್ಲ. ಓರ್ವ ಸಾಮಾನ್ಯ ವ್ಯಕ್ತಿ ಕೂಡ ಟ್ವಿಟ್ಟರ್ ಬ್ಲೂ ಚಂದಾದಾರಿಕೆಯನ್ನು ಖರೀದಿಸಲು ಎಲಾನ್ ಮಸ್ಕ್ ಅವಕಾಶ ನೀಡಿದ್ದಾರೆ.