ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್‌ಫೋನ್ (Smartphone) ಬಳಕೆ ವಿಪರೀತವಾಗಿ ಹೆಚ್ಚಾಗಿದೆ. ಮುಖ್ಯವಾಗಿ ಯುವಕರು ಸ್ಮಾರ್ಟ್‌ಫೋನ್‌ಗಳನ್ನು ಹೆಚ್ಚು ಬಳಕೆ ಮಾಡುತ್ತಿದ್ದಾರೆ. ಈ ಹಿಂದೆ ಕೇವಲ ಸಂದೇಶ ಕಳುಹಿಸಲು, ಕರೆಗಳಿಗಾಗಿ ಮಾತ್ರ ಬಳಸುತ್ತಿದ್ದ ಫೋನ್‌ಗಳು ಇಂದು ತಂತ್ರಜ್ಞಾನದ ಬೆಳವಣಿಗೆಯೊಂದಿಗೆ ಪ್ರತಿ ಸಣ್ಣ ಅಗತ್ಯಕ್ಕೂ ಅನಿವಾರ್ಯವಾಗಿವೆ. ಆದರೆ ಸ್ಮಾರ್ಟ್‌ಫೋನ್ ನಿರಂತರವಾಗಿ ಬಳಸಬೇಕಾದರೆ ಬ್ಯಾಟರಿ ಬಹುಮುಖ್ಯ ಪಾತ್ರವನ್ನು ವಹಿಸುತ್ತದೆ. ಆದರೆ ಈ ಬ್ಯಾಟರಿಯ ಬಗ್ಗೆ ಕೆಲವು ತಪ್ಪು ಕಲ್ಪನೆಗಳು ಸಾಮಾನ್ಯ ಮೊಬೈಲ್ ಫೋನ್ ಬಳಕೆದಾರರಲ್ಲಿದೆ. ವಿಶೇಷವಾಗಿ ನೀವು ರಾತ್ರಿಯಲ್ಲಿ ಮೊಬೈಲ್ ಫೋನ್ ಅನ್ನು ಚಾರ್ಜ್ ಮಾಡಿದರೆ, ಬ್ಯಾಟರಿ ಹಾಳಾಗುತ್ತದೆ ಎಂಬುದು.
ಸ್ಮಾರ್ಟ್‌ಫೋನ್ ಬ್ಯಾಟರಿ ಬಗ್ಗೆ ಇರುವ ತಪ್ಪು ಕಲ್ಪನೆಗಳು ಹಾಗೂ ಇದಕ್ಕೆ ತಜ್ಞರು ಕೆಲವು ಉತ್ತರಗಳನ್ನು ನೀಡಿದ್ದಾರೆ. ಅವರ ಪ್ರಕಾರ, ರಾತ್ರಿಯಿಡೀ ಸ್ಮಾರ್ಟ್‌ಫೋನ್ ಚಾರ್ಜ್ ಮಾಡುವುದರಿಂದ ಬ್ಯಾಟರಿ ಬೇಗನೆ ಖಾಲಿಯಾಗುತ್ತದೆ ಎಂಬುದು ತಪ್ಪು ಕಲ್ಪನೆ. ಸ್ಮಾರ್ಟ್‌ಫೋನ್ ಬ್ಯಾಟರಿಯೊಳಗೆ ಹೆಚ್ಚುವರಿ ಸಂರಕ್ಷಣಾ ಚಿಪ್‌ಗಳಿವೆ. ಆಂತರಿಕ ಲಿಥಿಯಂ ಐಯಾನ್ ಬ್ಯಾಟರಿಯು 100 ಪ್ರತಿಶತದಷ್ಟು ಚಾರ್ಜ್ ಆದಾಗ ಅಟೋಮೆಟಿಕ್ ಆಗಿ ಚಾರ್ಜ್ ಮಾಡುವುದನ್ನು ನಿಲ್ಲಿಸುತ್ತದೆ. ಅಂತೆಯೆ ನೀವು ರಾತ್ರಿಯಿಡೀ ಫೋನ್ ಅನ್ನು ಪ್ಲಗ್ ಇನ್ ಮಾಡಿದರೆ, ಬ್ಯಾಟರಿಯು ಪ್ರತಿ ಬಾರಿ 99 ಪ್ರತಿಶತಕ್ಕೆ ಇಳಿದಾಗ ತಕ್ಷಣವೇ ಚಾರ್ಜ್ ಆಗುತ್ತದೆ ಎಂದಿದ್ದಾರೆ.
ಭಾರತಕ್ಕೆ ಅಪ್ಪಳಿಸುತ್ತಿದೆ ರಿಯಲ್ ಮಿ 12 ಪ್ರೊ ಸರಣಿ: ರೋಚಕತೆ ಸೃಷ್ಟಿಸಿದ ಫೀಚರ್ಸ್
ರಾತ್ರಿಯಿಡೀ ಸ್ಮಾರ್ಟ್‌ಫೋನ್ ಚಾರ್ಜ್ ಮಾಡುವುದು ತಪ್ಪಲ್ಲ. ಆದರೆ, ಕೆಲವೊಂದು ವಿಚಾರಗಳನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು. ಬ್ಯಾಟರಿಯ ಮೇಲಿನ ಟ್ರಿಕಲ್ ಚಾರ್ಜ್ಗಳು ಸ್ವಲ್ಪ ಶಾಖವನ್ನು ಉಂಟುಮಾಡುತ್ತದೆ. ಹೀಗಾಗಿ ರಾತ್ರಿ ಚಾರ್ಜ್ ಮಾಡುವಾಗ ಫೋನ್ ಕೇಸ್‌ನಿಂದ ಫೋನ್ ಅನ್ನು ತೆಗೆದುಹಾಕಲು ಅನೇಕ ತಜ್ಞರು ಶಿಫಾರಸು ಮಾಡುತ್ತಾರೆ. ಅಂತೆಯೆ ಚಾರ್ಜಿಂಗ್ ಮಾಡುವಾಗ ಫೋನ್ ಅನ್ನು ಪುಸ್ತಕಗಳ ಮೇಲೆ ಅಥವಾ ಇತರ ಸಾಧನಗಳೊಂದಿಗೆ ಇಡಬಾರದು ಎಂದು ಹೇಳಿದ್ದಾರೆ. ಅಂದರೆ ನಿಮ್ಮ ಫೋನ್ ಅನ್ನು ದಿಂಬಿನ ಕೆಳಗೆ ಇಡಬೇಡಿ ಎಂದು ತಜ್ಞರು ಸಲಹೆ ನೀಡುತ್ತಾರೆ. ಏಕೆಂದರೆ ಹೀಗೆ ಮಾಡುವುದರಿಂದ ಫೋನ್ ಬಿಸಿಯಾಗುವ ಅಪಾಯವಿದೆ.
ಫೋನ್ ಚಾರ್ಜ್ ಮಾಡುವಾಗ ಬಳಸುವ ಕೇಬಲ್‌ಗಳು ಆಯಾ ಫೋನ್ ಕಂಪನಿಗಳು ಒದಗಿಸುವ ಕೇಬಲ್ಗಳೇ ಆಗಿರಬೇಕು. ಹೀಗೆ ಮಾಡುವುದರಿಂದ ಸರಾಗವಾಗಿ ಚಾರ್ಜ್ ಆಗುತ್ತದೆ. ನಿಮ್ಮ ಫೋನ್ ತಯಾರಕರು ತಯಾರಿಸಿದ ಚಾರ್ಜರ್‌ಗಳು ಲಭ್ಯವಿಲ್ಲದಿದ್ದರೆ ನೀವು ಆಯಾ ಮಾನದಂಡಗಳನ್ನು ಪೂರೈಸುವ ಚಾರ್ಜರ್‌ಗಳನ್ನು ಬಳಸಬೇಕು. ಬ್ಯಾಟರಿ ಕಾರ್ಯಕ್ಷಮತೆಯನ್ನು ಹೆಚ್ಚಿಸುವಲ್ಲಿ ಚಾರ್ಜಿಂಗ್ ಕೇಬಲ್‌ಗಳು ಪ್ರಮುಖ ಪಾತ್ರವಹಿಸುತ್ತವೆ.
ಲಿಥಿಯಂ-ಐಯಾನ್ ಬ್ಯಾಟರಿಗಳು ಎರಡು ಸಮಸ್ಯೆಯನ್ನು ಹೊಂದಿವೆ ಎಂಬುದನ್ನು ಗಮನಿಸಿ. ವಿಪರೀತ ಚಳಿ ಮತ್ತು ವಿಪರೀತ ಶಾಖ. ಇವೆರಡೂ ಬ್ಯಾಟರಿಗೆ ಸಮಸ್ಯೆಗಳನ್ನು ಉಂಟುಮಾಡುತ್ತವೆ. ಚಳಿ ತಾಪಮಾನದಲ್ಲಿ ಫೋನ್ ಅನ್ನು ಪದೇ ಪದೇ ಚಾರ್ಜ್ ಮಾಡುವುದರಿಂದ ಬ್ಯಾಟರಿ ಆನೋಡ್‌ನಲ್ಲಿ ಲೋಹದ ಲಿಥಿಯಂನಲ್ಲಿ ಸಮಸ್ಯೆ ಕಾಣಿಸಬಹುದು. ಇದರಿಂದ ಬ್ಯಾಟರಿ ಬೇಗ ಹಾಳಾಗುತ್ತದೆ. ಹಾಗೆಯೆ ಹೆಚ್ಚಿನ ತಾಪಮಾನವು ಬ್ಯಾಟರಿಗೆ ಮಾತ್ರವಲ್ಲದೆ ಫೋನ್‌ನ ಇತರ ಭಾಗಗಳಿಗೂ ಹಾನಿ ಮಾಡುತ್ತದೆ. ವಿಶೇಷವಾಗಿ ಫೋನ್ ಬಿಸಿಯಾಗುತ್ತಿರುವುದನ್ನು ನೀವು ಗಮನಿಸಿದಾಗ, ತಾಪಮಾನವನ್ನು ತಂಪಾಗಿಸುವ ವಿಧಾನಗಳನ್ನು ಅನುಸರಿಸಬೇಕು.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ