ಪ್ರಸಿದ್ಧ ಸಾಮಾಜಿಕ ಜಾಲತಾಣ ಟ್ವಿಟರ್ ಅನ್ನು (Twitter) ತನ್ನ ತೆಕ್ಕೆಗೆ ತೆಗೆದುಕೊಂಡಿರುವ ಟೆಸ್ಲಾ ಸಿಇಒ ಎಲಾನ್ ಮಸ್ಕ್ ಇದರ ಕಾರ್ಯನಿರ್ವಹಣೆಯ ಸ್ವರೂಪದಲ್ಲಿ ಸಂಪೂರ್ಣ ಬದಲಾವಣೆ ತರುವುದರಲ್ಲಿ ನಿರತರಗಿದ್ದಾರೆ. ಪ್ರತಿದಿನ ಒಂದಲ್ಲ ಒಂದು ವಿಚಾರದಿಂದ ಸುದ್ದಿಯಲ್ಲಿರುವ ಟ್ವಿಟರ್ ಇತ್ತೀಚೆಗಷ್ಟೆ ಕೆಲಸದಿಂದ ಅನೇಕರನ್ನು ವಜಾಗೊಳಿಸಿತ್ತು. ಅಲ್ಲದೆ ಇನ್ಮುಂದೆ ಟ್ವಿಟರ್ನ ಬ್ಲೂ ಸಬ್ಸ್ಕ್ರಿಪ್ಷನ್ (Twitter Verification) ಪಡೆಯಬೇಕಾದರೆ ಹಣ ಪಾವತಿಸಬೇಕಾಗುತ್ತದೆ ಎಂಬ ಸುದ್ದಿ ಹೊರಬಿದ್ದಿತ್ತು. ಇದೀಗ ಟ್ವಿಟರ್ ಬ್ಲೂ ಶುಲ್ಕ ಚಂದಾದಾರಿಕೆ ಭಾರತಕ್ಕೆ ಬಂದಿದೆ. ಭಾರತದಲ್ಲಿ ಕೆಲವು ಜನರು ತಿಂಗಳಿಗೆ ರೂ. 719ಕ್ಕೆ, ಅಂದರೆ ಸುಮಾರು $8.9ಕ್ಕೆ ಸಮನಾಗಿ ಪಾವತಿಸಿ, ಟ್ವಿಟರ್ ಬ್ಲೂ ಟಿಕ್‌ಗೆ (Blue Tick) ಸಂಪರ್ಕ ಪಡೆಯುತ್ತಿದ್ದಾರೆ.
ಭಾರತದಲ್ಲಿ ಗೌರವ್ ಅಗರ್ವಾಲ್ ಎಂಬವರು 719 ರೂ. ಹಣ ಪಾವತಿಸಿ ‘ಟ್ವಿಟರ್ ಬ್ಲೂ’ ಚಂದಾದಾರಿಕೆ ಜೊತೆಗೆ ‘ಬ್ಲೂ ಟಿಕ್’ ಪಡೆದಿದ್ದಾರೆ. ಈ ಬಗ್ಗೆ ಅವರು ಟ್ವೀಟ್ ಮಾಡುವ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ. ಟ್ವಿಟ್ಟರ್ ಬ್ಲೂ ಚಂದಾದಾರಿಕೆ ಪಡೆದ ಗ್ರಾಹಕರು 42 ನಿಮಿಷಗಳವರೆಗೆ ದೊಡ್ಡ ವಿಡಿಯೋಗಳನ್ನು ಅಪ್‌ಲೋಡ್ ಮಾಡಲು ಸಾಧ್ಯವಾಗುತ್ತದೆ. ಜೊತೆಗೆ ಇವರು ಹಂಚಿಕೊಂಡ ಪೋಸ್ಟ್‌ಗಳು ಹೆಚ್ಚು ಆದ್ಯತೆಯ ಶ್ರೇಯಾಂಕವನ್ನು ಪಡೆಯಲಿವೆ. ಮತ್ತು ಟ್ವಿಟ್ಟರ್ ಖಾತೆಗಳಲ್ಲಿ ಜಾಹಿರಾತು ವೀಕ್ಷಣೆ ಪ್ರಮಾಣ ಕಡಿಮೆ ಇರಲಿದ್ದು ಏನೇ ಹೊಸ ಅಪ್‌ಡೇಟ್‌ಗಳು ಬಂದರೆ ಟ್ವಿಟರ್ ಬ್ಲೂ ಗ್ರಾಹಕರಿಗೆ ಮೊದಲು ಸಿಗಲಿದೆ.
Twitter Blue in india costs 719/- per month. pic.twitter.com/HKTtBbO00p
— Gaurav Agrawal (@Agrawalji_Tech) November 10, 2022
ವಿಶೇಷ ಎಂದರೆ ಟ್ವಿಟರ್ ಬ್ಲೂ ಚಂದಾದಾರಿಕೆಯನ್ನು ಯಾವ ವ್ಯಕ್ತಿ ಬೇಕಾದರೂ ಖರೀದಿಸಬಹುದು. ಇದಕ್ಕೆ ಸೆಲೆಬ್ರಿಟಿಗಳೇ ಗಬೇಕು ಅಥವ ಕಂಪನಿಗಳು ಮತ್ತು ರಾಜಕಾರಣಿಗಳೇ ಆಗಬೇಕಂತಿಲ್ಲ. ಓರ್ವ ಸಾಮಾನ್ಯ ವ್ಯಕ್ತಿ ಕೂಡ ಟ್ವಿಟ್ಟರ್ ಬ್ಲೂ ಚಂದಾದಾರಿಕೆಯನ್ನು ಖರೀದಿಸಲು ಎಲಾನ್ ಮಸ್ಕ್ ಅವಕಾಶ ನೀಡಲಿದ್ದಾರೆ. ಅಮೆರಿಕದಲ್ಲಿ ಬ್ಲೂಟಿಕ್ಗೆ 7.99 ಡಾಲರ್ ಶುಲ್ಕ ವಿಧಿಸಲಾಗುತ್ತಿದೆ. ಐಒಎಸ್ ಬಳಕೆದಾರರಿಗೆ ಆ್ಯಪ್ನ ಅಪ್ಡೇಟೆಡ್ ವರ್ಷನ್ ಬಳಕೆಗೆ ದೊರೆತಿದೆ. ಆದರೆ, ಹೊಸ ಆಯ್ಕೆ ಇನ್ನೂ ಪೂರ್ಣಪ್ರಮಾಣದಲ್ಲಿ ಕಾರ್ಯಾರಂಭ ಮಾಡಿಲ್ಲ ಎನ್ನಲಾಗಿದೆ.
ಅಕ್ಷರಗಳ ಮಿತಿ ಏರಿಕೆ:
ಟ್ವಿಟರ್ನಲ್ಲಿ ಹೊಸ ಹೊಸ ಫೀಚರ್ಗಳನ್ನು ತರುವ ಬಗ್ಗೆ ಕೆಲಸಗಳು ನಡೆಯುತ್ತಿದೆ. ಮುಖ್ಯವಾಗಿ ಪದಗಳ ಮಿತಿಯನ್ನು ವಿಸ್ತರಿಸುವ ಬಗ್ಗೆ ವರದಿಯಾಗಿದೆ. ನಾವು ಅಕ್ಷರ ಮಿತಿಯನ್ನು ಸಂಪೂರ್ಣವಾಗಿ ತೆಗೆದುಹಾಕಬಹುದೇ ಅಥವಾ ಕನಿಷ್ಠ ಅದನ್ನು ವಿಸ್ತರಿಸಬಹುದೇ ಎಂಬುದರ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ ಎಂದು ಎಲಾನ್ ಮಸ್ಕ್ ತಿಳಿಸಿದ್ದಾರೆ. ಟ್ವಿಟರ್ ಪ್ರಸ್ತುತ ಜನರಿಗೆ 280 ಅಕ್ಷರಗಳಲ್ಲಿ ಪೋಸ್ಟ್ ಮಾಡಲು ಅನುಮತಿಸುತ್ತದೆ. ಟ್ವಿಟರ್ ಪ್ರಾರಂಭದ ಸಮಯದಲ್ಲಿ, ಒಂದು ಟ್ವೀಟ್‌ಗೆ 140 ಅಕ್ಷರಗಳ ಮಿತಿಯನ್ನು ನಿಗದಿಪಡಿಸಿತ್ತು, ಆದರೆ ನವೆಂಬರ್ 2017 ರಲ್ಲಿ, ಕಂಪನಿಯು ಅದನ್ನು 280 ಅಕ್ಷರಗಳಿಗೆ ಹೆಚ್ಚಿಸಿತು.
Published On - 1:11 pm, Fri, 11 November 22