Twitter Verification: ಟ್ವಿಟರ್ನಲ್ಲಿ ಮಹತ್ವದ ಬದಲಾವಣೆ: ಬ್ಲೂಟಿಕ್ ಬೇಕಾದಲ್ಲಿ ಹಣ ಪಾವತಿಸಬೇಕು
Elon Musk: ಟ್ವಿಟರ್ ಪ್ರಸ್ತುತ ಹೊಸ ಚಂದಾದಾರಿಕೆಗಾಗಿ 19.99 ಡಾಲರ್ (ಸುಮಾರು 1600 ರೂಪಾಯಿ) ಶುಲ್ಕ ವಿಧಿಸಲು ಯೋಜಿಸುತ್ತಿದೆ. ಈ ಯೋಜನೆಯಡಿಯಲ್ಲಿ ಪರಿಶೀಲನೆಗೆ ಒಳಪಟ್ಟ ಬಳಕೆದಾರರು ಚಂದಾದಾರರಾಗಲು ಅಥವಾ ತಮ್ಮ ನೀಲಿ ಟಿಕ್‌ಮಾರ್ಕ್ ಅನ್ನು ಕಳೆದುಕೊಳ್ಳಲು 90 ದಿನಗಳ ಕಾಲಾವಧಿ ಹೊಂದಿರುತ್ತಾರೆ.
ಪ್ರಸಿದ್ಧ ಸಾಮಾಜಿಕ ಜಾಲತಾಣ ಟ್ವಿಟರ್ ಅನ್ನು (Twitter) ತನ್ನ ತೆಕ್ಕೆಗೆ ತೆಗೆದುಕೊಂಡಿರುವ ಟೆಸ್ಲಾ ಸಿಇಒ ಎಲಾನ್ ಮಸ್ಕ್ ಇದರ ಕಾರ್ಯನಿರ್ವಹಣೆಯ ಸ್ವರೂಪದಲ್ಲಿ ಸಂಪೂರ್ಣ ಬದಲಾವಣೆ ತರಲು ಮುಂದಾಗಿದ್ದಾರೆ. ‘ದಿ ವರ್ಜ್’ನಲ್ಲಿನ ವರದಿಯ ಪ್ರಕಾರ, ಟ್ವಿಟರ್ನ ಬ್ಲೂ ಸಬ್ಸ್ಕ್ರಿಪ್ಷನ್ (Twitter Verification) ಪಡೆಯಬೇಕಾದರೆ ಇನ್ನು ಮುಂದೆ ಹಣ ಪಾವತಿಸಬೇಕಾಗುತ್ತದೆ ಎಂದು ಹೇಳಿದೆ. ಈ ಮೂಲಕ ಟ್ವಿಟರ್ ಬಳಕೆದಾರರ ಪರಿಶೀಲನಾ ಪ್ರಕ್ರಿಯೆ ಸಂಪೂರ್ಣವಾಗಿ ಬದಲಾಗಲಿದೆ. ಆದರೆ, ಮಸ್ಕ್ (Elon Musk) ಯಾವ ರೀತಿಯ ಬದಲಾವಣೆ ಎಂಬುದರ ಕುರಿತು ಹೆಚ್ಚಿನ ಮಾಹಿತಿ ನೀಡಿಲ್ಲ.
ಟ್ವಿಟರ್ ಪ್ರಸ್ತುತ ಹೊಸ ಚಂದಾದಾರಿಕೆಗಾಗಿ 19.99 ಡಾಲರ್ (ಸುಮಾರು 1600 ರೂಪಾಯಿ) ಶುಲ್ಕ ವಿಧಿಸಲು ಯೋಜಿಸುತ್ತಿದೆ. ಈ ಯೋಜನೆಯಡಿಯಲ್ಲಿ ಪರಿಶೀಲನೆಗೆ ಒಳಪಟ್ಟ ಬಳಕೆದಾರರು ಚಂದಾದಾರರಾಗಲು ಅಥವಾ ತಮ್ಮ ನೀಲಿ ಟಿಕ್‌ಮಾರ್ಕ್ ಅನ್ನು ಕಳೆದುಕೊಳ್ಳಲು 90 ದಿನಗಳ ಕಾಲಾವಧಿ ಹೊಂದಿರುತ್ತಾರೆ. ಬ್ಲೂ ಸಬ್ಸ್ಕ್ರಿಪ್ಷನ್ ಇದು ಟ್ವೀಟ್‌ಗಳನ್ನು ಎಡಿಟ್ ಮಾಡುವುದು ಮತ್ತು ಅನ್ಡು ಮಾಡುವಂಥ ಹೆಚ್ಚುವರಿ ವೈಶಿಷ್ಟ್ಯಗಳನ್ನು ನೀಡುತ್ತದೆ. ನವೆಂಬರ್ 7ರ ಒಳಗೆ ಈ ಫೀಚರ್ ಅನ್ನು ಜಾರಿಗೊಳಿಸುವಂತೆ ಈ ಯೋಜನೆಯ ಮೇಲೆ ಕೆಲಸ ಮಾಡುತ್ತಿರುವ ಉದ್ಯೋಗಿಗಳಿಗೆ ತಿಳಿಸಲಾಗಿದೆ. ಆದಾಗ್ಯೂ ಎಲಾನ್ ಮಸ್ಕ್ ಈ ಬಗ್ಗೆ ಅಂತಿಮ ನಿರ್ಧಾರವನ್ನು ತೆಗೆದುಕೊಂಡಿಲ್ಲ. ಈ ಯೋಜನೆಯನ್ನು ರದ್ದುಗೊಳಿಸುವ ಸಾಧ್ಯತೆಯೂ ಇದೆ.
The whole verification process is being revamped right now
— Elon Musk (@elonmusk) October 30, 2022
ಯೂಸರ್ ವೆರಿಫಿಕೇಶನ್ ಪ್ರಕ್ರಿಯೆಯನ್ನು ಮರುಪರಿಶೀಲಿಸಲಾಗುವುದು ಎಂದು ಎಲೋನ್ ಮಸ್ಕ್ ತಮ್ಮ ಟ್ವೀಟ್ನಲ್ಲಿ ಹೇಳಿದ ಒಂದು ದಿನದ ನಂತರ ಟ್ವಿಟರ್ ಬ್ಲೂ ಟಿಕ್ ಸಬ್ಸ್ಕ್ರಿಪ್ಷನ್ ನಿಯಮ ಬದಲಾವಣೆಯ ಬಗ್ಗೆ ವರದಿಗಳು ಬಂದಿವೆ. ಒಂದು ವರ್ಷದ ಹಿಂದೆ ಟ್ವಿಟರ್ ಬ್ಲೂ ಸಬ್ಸ್ಕ್ರಿಪ್ಷನ್ ಆರಂಭಿಸಲಾಗಿತ್ತು. ಜಾಹೀರಾತು ಇಲ್ಲದೇ ಕೆಲ ಪ್ರಕಾಶಕರ ಲೇಖನಗಳನ್ನು ಓದಲು ಮತ್ತು ಹೋಮ್ ಸ್ಕ್ರೀನ್ ಬಣ್ಣ ಬದಲಾಯಿಸುವುದು ಮುಂತಾದ ಫೀಚರ್ಗಳು ಇದರಲ್ಲಿವೆ.
ಅಕ್ಷರಗಳ ಮಿತಿ ಏರಿಕೆ:
ಟ್ವಿಟರ್ನಲ್ಲಿ ಪದಗಳ ಮಿತಿಯನ್ನು ವಿಸ್ತರಿಸುವ ಬಗ್ಗೆ ಕೆಲಸಗಳು ನಡೆಯುತ್ತಿದೆ. ನಾವು ಅಕ್ಷರ ಮಿತಿಯನ್ನು ಸಂಪೂರ್ಣವಾಗಿ ತೆಗೆದುಹಾಕಬಹುದೇ ಅಥವಾ ಕನಿಷ್ಠ ಅದನ್ನು ವಿಸ್ತರಿಸಬಹುದೇ ಎಂಬುದರ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ ಎಂದು ಎಲಾನ್ ಮಸ್ಕ್ ತಿಳಿಸಿದ್ದಾರೆ. ಟ್ವಿಟರ್ ಪ್ರಸ್ತುತ ಜನರಿಗೆ 280 ಅಕ್ಷರಗಳಲ್ಲಿ ಪೋಸ್ಟ್ ಮಾಡಲು ಅನುಮತಿಸುತ್ತದೆ. ಟ್ವಿಟರ್ ಪ್ರಾರಂಭದ ಸಮಯದಲ್ಲಿ, ಒಂದು ಟ್ವೀಟ್‌ಗೆ 140 ಅಕ್ಷರಗಳ ಮಿತಿಯನ್ನು ನಿಗದಿಪಡಿಸಿತ್ತು, ಆದರೆ ನವೆಂಬರ್ 2017 ರಲ್ಲಿ, ಕಂಪನಿಯು ಅದನ್ನು 280 ಅಕ್ಷರಗಳಿಗೆ ಹೆಚ್ಚಿಸಿತು. ಅಂದಿನಿಂದ 280 ಅಕ್ಷರಗಳ ಮಿತಿಯು ಇಲ್ಲಿಯವರೆಗೆ ಚಾಲನೆಯಲ್ಲಿದೆ. ಇದೀಗ ಈ ಆಯ್ಕೆಯಲ್ಲಿ ಬದಲಾವಣೆ ತರಲು ಮುಂದಾಗಿದೆ.
Published On - 2:30 pm, Mon, 31 October 22