ನವದೆಹಲಿ: ಗೂಗಲ್ ಸಿಇಒ ಸುಂದರ್ ಪಿಚೈ (Sundar Pichai), ಬಾಲಿವುಡ್ ನಟ ಸಲ್ಮಾನ್ ಖಾನ್ (Salman Khan), ಭಾರತದ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಸೇರಿದಂತೆ 40 ಕೋಟಿ ಟ್ವಿಟರ್ (Twitter) ಬಳಕೆದಾರರ ವೈಯಕ್ತಿಕ ದತ್ತಾಂಶ (Personal Data) ಸೋರಿಕೆಯಾಗಿದೆ. ಇದು ಡಾರ್ಕ್ವೆಬ್ನಲ್ಲಿ (Dark Web) ಮಾರಾಟಕ್ಕಿದೆ ಎಂದು ಇಸ್ರೇಲ್ನ ಸೈಬರ್ ಗುಪ್ತಚರ ಕಂಪನಿ ಹಡ್ಸನ್ ರಾಕ್ (Hudson Rock) ವರದಿ ತಿಳಿಸಿದೆ. ಇ-ಮೇಲ್, ಯೂಸರ್ನೇಮ್, ಫಾಲೋವರ್ಸ್, ದೂರವಾಣಿ ಸಂಖ್ಯೆಗಳನ್ನೂ ಮಾರಾಟಕ್ಕಿಡಲಾಗಿದೆ. 40 ಕೋಟಿ ಬಳಕೆದಾರರ ಸಂಪೂರ್ಣ ಖಾಸಗಿ ಮಾಹಿತಿಯನ್ನು ಮಾರಾಟ ಮಾಡಲಿದ್ದೇನೆ ಎಂದು ಹ್ಯಾಕರ್ ಹೇಳಿರುವುದಾಗಿ ವರದಿ ಉಲ್ಲೇಖಿಸಿದೆ. ಉದ್ಯಮಿ ಎಲಾನ್ ಮಸ್ಕ್ ಅವರು ಟ್ವಿಟರ್ ಮಾಲೀಕತ್ವ ವಹಿಸಿಕೊಂಡ ಕೆಲವೇ ದಿನಗಳಲ್ಲಿ 54 ಲಕ್ಷ ಟ್ವಿಟರ್ ಬಳಕೆದಾರರ ದತ್ತಾಂಶ ಸೋರಿಕೆಯಾಗಿತ್ತು. ಈ ಬಗ್ಗೆ ಐರಿಷ್ ದತ್ತಾಂಶ ಸಂರಕ್ಷಣಾ ಆಯೋಗ ತನಿಖೆ ನಡೆಸುತ್ತಿದೆ.
ಹ್ಯಾಕರ್ ಟ್ವಿಟರ್ ಮಾಲೀಕ ಎಲಾನ್ ಮಸ್ಕ್ಗೇ ಸವಾಲು ಹಾಕಿ ಸಂದೇಶ ಪ್ರಕಟಿಸಿದ್ದಾನೆ. ‘ಮಸ್ಕ್ ಅವರೇ, ನೀವು ಈ ಸಂದೇಶವನ್ನು ಓದುತ್ತಿದ್ದರೆ ಗಮನಿಸಿ. ಈಗಾಗಲೇ 54 ಲಕ್ಷ ಬಳಕೆದಾರರ ದತ್ತಾಂಶ ಸೋರಿಕೆಯಾಗಿ ಸಂಕಷ್ಟಕ್ಕೆ ಸಿಲುಕಿದ್ದೀರಿ. ಈಗ 40 ಕೋಟಿ ಬಳಕೆದಾರರ ದತ್ತಾಂಶ ಸೋರಿಕೆಯಾಗಿದೆ. ನಿಮ್ಮ ಮುಂದಿರುವ ಉತ್ತಮ ಆಯ್ಕೆಯೆಂದರೆ ನೀವೇ ಹಣ ಪಾವತಿ ಮಾಡಿ ಈ ದತ್ತಾಂಶಗಳನ್ನು ಖರೀದಿಸುವುವುದು’ ಎಂದು ಉಲ್ಲೇಖಿಸಿದ್ದಾನೆ.
ಇದನ್ನೂ ಓದಿ: Twitter Gold Checkmark: ಟ್ವಿಟರ್ನಲ್ಲಿ ಬ್ಲೂ ಜತೆಗೆ ಗ್ರೇ, ಗೋಲ್ಡ್ ಟಿಕ್; ಏನಿದರ ಒಳಮರ್ಮ? ಇಲ್ಲಿದೆ ನೋಡಿ
ಮಧ್ಯವರ್ತಿಗಳ ಮೂಲಕ ವ್ಯವಹಾರ ಕುದುರಿಸುವುದಕ್ಕೂ ಸಹಮತ ಇದೆ ಎಂದು ಹ್ಯಾಕರ್ ಹೇಳಿರುವುದಾಗಿ ಹಡ್ಸನ್ ರಾಕ್ ವರದಿ ತಿಳಿಸಿದೆ. ವ್ಯವಹಾರ ಅಂತಿಮಗೊಂಡರೆ ಈ ಸಂದೇಶವನ್ನು ಅಳಿಸಿಹಾಕಲಿದ್ದೇನೆ ಮತ್ತು ಮತ್ತೊಂದು ಬಾರಿ ದತ್ತಾಂಶವನ್ನು ಮಾರಾಟ ಮಾಡುವುದಿಲ್ಲ ಎಂದು ಹ್ಯಾಕರ್ ಭರವಸೆ ನೀಡಿದ್ದಾನೆ ಎಂದು ವರದಿಯಲ್ಲಿ ಹೇಳಲಾಗಿದೆ.