ಮೆಟಾ ಒಡೆತನದ ಪ್ರಸಿದ್ಧ ಮೆಸೇಜಿಂಗ್ ಪ್ಲಾಟ್‌ಫಾರ್ಮ್ ವಾಟ್ಸ್‌ಆ್ಯಪ್ (WhatsApp) ಕಳೆದ ಜುಲೈ ತಿಂಗಳಲ್ಲಿ ಬರೋಬ್ಬರಿ 72 ಲಕ್ಷಕ್ಕೂ ಅಧಿಕ ಭಾರತೀಯರ ಖಾತೆಗಳನ್ನು ನಿರ್ಬಂಧಿಸಿದೆ. 2021 ಬಳಕೆದಾರರ ಸುರಕ್ಷತ ಕಾಯಿದೆ 4(1)(D) ಅಡಿಯಲ್ಲಿ ವಾಟ್ಸ್‌ಆ್ಯಪ್ ಈ ನಿರ್ಧಾರವನ್ನು ತೆಗೆದುಕೊಂಡಿದೆ. ಜುಲೈ 01-31ರ ಅವಧಿಯಲ್ಲಿ ಅನೇಕ ದೂರುಗಳನ್ನು ಸ್ವೀಕರಿಸಲಾಗಿದೆ. ವಾಟ್ಸ್‌ಆ್ಯಪ್ ಸೇವಾ ಷರತ್ತುಗಳ ಉಲ್ಲಂಘನೆ ಮತ್ತು ಬಳಕೆದಾರರ ದೂರುಗಳನ್ನು ಆಧರಿಸಿ ಈ ಕ್ರಮ ಕೈಗೊಳ್ಳಲಾಗಿದ್ದು, ಅದರಂತೆ 7,228,000 ವಾಟ್ಸ್‌ಆ್ಯಪ್ ಖಾತೆಗಳನ್ನು ಬ್ಯಾನ್ ಮಾಡಲಾಗಿದೆ ಎಂದು ಮೆಟಾ ತಿಳಿಸಿದೆ. ಈ ಹಿಂದೆ ಮೇ ತಿಂಗಳಲ್ಲಿ ಕೂಡ ಭಾರತದಲ್ಲಿ 6,508,000 ಖಾತೆಗಳನ್ನು ನಿಷೇಧಿಸಿದೆ ಎಂದು ವಾಟ್ಸ್‌ಆ್ಯಪ್ ಹೇಳಿತ್ತು.
ಬ್ಯಾನ್ ಆಗಿರುವ ಖಾತೆಗಳು ಕಿರುಕುಳ, ನಕಲಿ ಮಾಹಿತಿಯನ್ನು ಫಾರ್ವರ್ಡ್ ಮಾಡುವುದು, ಇತರ ಬಳಕೆದಾರರನ್ನು ವಂಚಿಸಿರುವುದು ಕಂಡುಬಂದಿದೆ. ಇದಲ್ಲದೆ ಹಾನಿಕಾರಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಕ್ಕಾಗಿ ಈ ಖಾತೆಗಳನ್ನು ನಿಷೇಧಿಸಲಾಗಿದೆ. ಮೇ 26 ರಂದು ಜಾರಿಗೆ ಬಂದ ಹೊಸ ಐಟಿ ನಿಯಮಗಳ ಪ್ರಕಾರ ದೊಡ್ಡ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳು (5 ಮಿಲಿಯನ್‌ಗಿಂತಲೂ ಹೆಚ್ಚು ಬಳಕೆದಾರರು) ಪ್ರತಿ ತಿಂಗಳು ವರದಿಗಳನ್ನು ಪ್ರಕಟಿಸಬೇಕು. ಈ ವರದಿಯಲ್ಲಿ ಸ್ವೀಕರಿಸಿದ ದೂರುಗಳು ಹಾಗೂ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಸ್ಪಷ್ಟನೆ ನೀಡಬೇಕು.
ಬಹುನಿರೀಕ್ಷಿತ ರಿಯಲ್ ಮಿ ನಾರ್ಜೊ 60x ಫೋನ್ ಬಿಡುಗಡೆ ದಿನಾಂಕ ಪ್ರಕಟ: ಯಾವಾಗ?, ಬೆಲೆ ಎಷ್ಟು?
ವಾಟ್ಸ್‌ಆ್ಯಪ್ ತನ್ನ ಬಳಕೆದಾರರ ಸುರಕ್ಷತೆಗೆ ಹೆಚ್ಚು ಗಮನ ಹರಿಸುತ್ತಿದೆ. ಆದರೆ ಇದಕ್ಕೆ ವಿರುದ್ಧವಾಗಿ ಕಾರ್ಯನಿರ್ವಹಿಸುವ ಚಂದಾದಾರರ ಮೇಲೆ ವಿಷೇಧ ವಿಧಿಸುತ್ತದೆ. ಈ ಬಗ್ಗೆ ವಕ್ತಾರರೊಬ್ಬರು ಮಾತನಾಡಿ, ವಾಟ್ಸ್‌ಆ್ಯಪ್ ನಿಂದನೆಯನ್ನು ತಡೆಗಟ್ಟುವ ಉದ್ಯಮದ ಮುಂಚೂಣಿಯಲ್ಲಿದೆ, ಎಂಡ್-ಟು-ಎಂಡ್ ಎನ್‌ಕ್ರಿಪ್ಟ್ ಮಾಡಿದ ಸಂದೇಶ ಸೇವೆಗಳ ಬಗ್ಗೆ ಹೆಚಚಿನ ಗಮನ ಹರಿಸುತ್ತಿದೆ ಎಂದಿದ್ದಾರೆ. ವಾಟ್ಸ್‌ಆ್ಯಪ್ ನಿಯಮಗಳು ಮತ್ತು ಷರತ್ತುಗಳ ಪ್ರಕಾರ, ಕಾನೂನು ಬಾಹಿರ, ಅಶ್ಲೀಲ, ಮಾನಹಾನಿಕರ, ಬೆದರಿಕೆಯ, ಕಿರುಕುಳದ, ದ್ವೇಷಪೂರಿತ ಸಂದೇಶಗಳನ್ನು ಕಳುಹಿಸಿದರೆ ನಿಮ್ಮನ್ನು ವಾಟ್ಸ್‌ಆ್ಯಪ್ ಬ್ಯಾನ್ ಮಾಡುತ್ತದೆ. ಹಿಂಸಾತ್ಮಕ ಅಪರಾಧಗಳನ್ನು ಪ್ರಚೋದಿಸುವ ಅಥವಾ ಉತ್ತೇಜಿಸುವ ಸಂದೇಶಗಳನ್ನು ಕಳುಹಿಸಿದರೂ ವಾಟ್ಸ್‌ಆ್ಯಪ್ ನಿಮ್ಮನ್ನು ಬ್ಯಾನ್ ಮಾಡಬಹುದು.
ಸದ್ಯದಲ್ಲೇ ಬಳಕೆದಾರರು ವಾಟ್ಸ್ಆ್ಯಪ್ನಲ್ಲಿ ಹೊಸ ಇ-ಮೇಲ್ ವೆರಿಫಿಕೇಷನ್ ಫೀಚರ್ನ ಪ್ರಯೋಜನ ಪಡೆಯಲಿದ್ದಾರೆ. WABetaInfo ವರದಿ ಮಾಡಿದಂತೆ, ವಾಟ್ಸ್‌ಆ್ಯಪ್ ಇ-ಮೇಲ್ ಐಡಿಯನ್ನು ಬಳಸಿಕೊಂಡು ನಿಮ್ಮ ಖಾತೆಯನ್ನು ರಕ್ಷಿಸಲು ಹೊಸ ಭದ್ರತಾ ವೈಶಿಷ್ಟ್ಯದ ರೂಪದಲ್ಲಿ ಈ ಆಯ್ಕೆಯನ್ನು ನೀಡಲು ಮುಂದಾಗಿದೆ. ಇದರಿಂದ ನಿಮ್ಮ ಖಾತೆ ಮತ್ತಷ್ಟು ಭದ್ರತೆಯಿಂದ ಕೂಡಿರುತ್ತದೆ. ಈ ವೈಶಿಷ್ಟ್ಯವು ಪರೀಕ್ಷಾ ಹಂತದಲ್ಲಿದೆ ಮತ್ತು ಇದು ಆಂಡ್ರಾಯ್ಡ್ನ ಬೀಟಾ ಪರೀಕ್ಷಕರಿಗೆ ಲಭ್ಯವಿದೆ. ಈ ಫೀಚರ್ ಅನ್ನು ವಾಟ್ಸ್‌ಆ್ಯಪ್ ಬೀಟಾ ಆವೃತ್ತಿ ಸಂಖ್ಯೆ 2.23.18.19 ರ ಮೂಲಕ ಪ್ರವೇಶಿಸಬಹುದು.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ