ಮೆಟಾ (Meta) ಒಡೆತನದ ಪ್ರಸಿದ್ಧ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸ್ಆ್ಯಪ್ ಈ ವರ್ಷ ಸಾಕಷ್ಟು ಬೆಳವಣಿಗೆ ಕಂಡಿದೆ. ಅತಿ ಹೆಚ್ಚು ನೂತನ ಫೀಚರ್ಗಳನ್ನು 2022 ರಲ್ಲಿ ಬಿಡುಗಡೆ ಮಾಡಿದೆ. ಇದಕ್ಕಾಗಿಯೇ ಇಂದು ವಿಶ್ವದಲ್ಲಿ ವಾಟ್ಸ್ಆ್ಯಪ್ (WhatsApp) ಬಳಕೆದಾರರ ಸಂಖ್ಯೆ 2 ಬಿಲಿಯನ್ ದಾಟಿದೆ. ಭಾರತದಲ್ಲೇ ಸುಮಾರು 550 ಮಿಲಿಯನ್ ಜನರು ಉಪಯೋಗಿಸುತ್ತಿದ್ದಾರೆ. ಕಳೆದ ವಾರವಷ್ಟೆ ಕಮ್ಯೂನಿಟಿದ ಆಯ್ಕೆಯನ್ನು ನೀಡಿದ್ದ ವಾಟ್ಸ್ಆ್ಯಪ್ನಲ್ಲಿ ಇನ್ನೂ ಅನೇಕ ಫೀಚರ್ಗಳು ಬರುವುದರಲ್ಲಿದೆ. ಕೆಲವೊಂದು ಅಪ್ಡೇಟ್ಗಳು ಬೀಟಾ ವರ್ಷನ್ನಲ್ಲಿ ಲಭ್ಯವಾಗುತ್ತಿದೆ. ಹೀಗಿರುವಾಗ ಮತ್ತೊಂದು ಊಹಿಸಲಾಗದ ಫೀಚರ್ ಅನ್ನು ಕಂಪನಿ ನೀಡಲು ಮುಂದಾಗಿದೆ. ಅದುವೇ ಕಂಪ್ಯಾನಿಯನ್ ಮೋಡ್ (Companion Mode) ಆಯ್ಕೆ.
ವಾಟ್ಸ್ಆ್ಯಪ್ನ ಈ ಹೊಸ ಕಂಪ್ಯಾನಿಯನ್ ಮೋಡ್ ಎಂಬ ಫೀಚರ್ಸ್ ಮೂಲಕ ಬಳಕೆದಾರರು ಏಕಕಾಲದಲ್ಲಿ ಎರಡು ಅಥವಾ ಹೆಚ್ಚಿನ ಡಿವೈಸ್‌ಗಳಲ್ಲಿ ವಾಟ್ಸ್ಆ್ಯಪ್ ಬಳಸಬಹುದು. ಅಂದರೆ ನಿಮ್ಮ ವಾಟ್ಸ್ಆ್ಯಪ್ ಆಕೌಂಟ್ ಅನ್ನು ಎರಡು ಮೊಬೈಲ್‌ಗಳಲ್ಲಿ ಬಳಸಬಹುದು. ಇದು ಬಾರ್‌ಕೋಡ್ ಸ್ಕ್ಯಾನ್ ಮೂಲಕ ಕಾರ್ಯನಿರ್ವಹಿಸಲಿದೆ. ಒಂದೇ ಸಮಯದಲ್ಲಿ ನಾಲ್ಕು ಡಿವೈಸ್‌ಗಳಲ್ಲಿ ಅಕೌಂಟ್ ಲಿಂಕ್ ಮಾಡಿದರೆ ಲಿಂಕ್ ಮಾಡಲಾದ ಎಲ್ಲಾ ಫೋನ್‌ಗಳಲ್ಲಿಯೂ ಚಾಟ್‌ಗಳು ಮತ್ತು ಡೇಟಾವನ್ನು ಬಳಕೆದಾರ ಸ್ವೀಕರಿಸುತ್ತಾನೆ.
ಕಂಪ್ಯಾನಿಯನ್ ಮೋಡ್ ಅನ್ನು ಆಂಡ್ರಾಯ್ಡ್ ಡಿವೈಸ್‌ಗಳಲ್ಲಿ v2.22.23.18 ಬೀಟಾ ಆವೃತ್ತಿಯಲ್ಲಿ ಪರೀಕ್ಷಿಸಲಾಗುತ್ತಿದೆ. ಈ ಆಯ್ಕೆ ಎಂಡ್ ಟು ಎಂಡ್ ಎನ್‌ಕ್ರಿಪ್ಯನ್ ಮೂಲಕ ಕಾರ್ಯನಿರ್ವಹಿಸಲಿದೆ. ಸದ್ಯ ಈ ಹೊಸ ಆಂಡ್ರಾಯ್ಡ್‌ಗಾಗಿ ಬೀಟಾ ಬಿಲ್ಡ್‌ನಲ್ಲಿ ಮಾತ್ರ ಲಭ್ಯವಿದೆ. ಶೀಘ್ರದಲ್ಲೇ ಐಒಎಸ್ ಪ್ಲಾಟ್‌ಫಾರ್ಮ್‌ನಲ್ಲಿಯೂ ಪರೀಕ್ಷಿಸಲ್ಪಡುವ ನಿರೀಕ್ಷೆಯಿದೆ. ಇದು ಯಾವಾಗ ಲಭ್ಯವಾಗಲಿದೆ ಎಂಬುದರ ಬಗ್ಗೆ ಇನ್ನು ಯಾವುದೇ ಮಾಹಿತಿ ಬಹಿರಂಗವಾಗಿಲ್ಲ.
ಕಮ್ಯೂನಿಟಿ ಫೀಚರ್:
ವಾಟ್ಸ್ಆ್ಯಪ್ ಇತ್ತೀಚೆಗಷ್ಟೆ ತನ್ನ ಬಹುನಿರೀಕ್ಷಿತ ಕಮ್ಯೂನಿಟಿ ಫೀಚರ್ಸ್ ಪರಿಚಯಿಸಿದೆ. ಆಂಡ್ರಾಯ್ಡ್, ಐಒಎಸ್ ಮತ್ತು ವಾಟ್ಸ್ಆ್ಯಪ್ ವೆಬ್ ಬಳಕೆದಾರರಿಗೆ ಈ ನೂತನ ಫೀಚರ್ಸ್ ಲಭ್ಯವಾಗುತ್ತಿದೆ. ಈ ಫೀಚರ್ ಅನ್ನು ಗ್ರೂಪ್‌ಗಳ ಗ್ರೂಪ್ ಎಂದು ಹೇಳಬಹುದು. ಅಂದರೆ ವಾಟ್ಸ್ಆ್ಯಪ್ನಲ್ಲಿ ಆಡ್ಮಿನ್‌ಗಳು ನಿರ್ದಿಷ್ಟ ಗುಂಪುಗಳಿಗೆ ಅಥವಾ ಇಡೀ ಸಮುದಾಯಕ್ಕೆ ವಿಚಾರವನ್ನು ಗುಂಪಿನ ಮೂಲಕ ಸಂದೇಶಗಳನ್ನು ಕಳುಹಿಸಲು ಸಾಧ್ಯವಾಗುತ್ತದೆ. ವಾಟ್ಸ್ಆ್ಯಪ್ ಕಮ್ಯೂನಿಟಿಗಳು ಜನರಿಗೆ ಕೆಲಸ ಮಾಡುವ ರಚನೆಯೊಂದಿಗೆ ಪ್ರತ್ಯೇಕ ಗುಂಪುಗಳನ್ನು ಒಂದೇ ಸೂರಿನಡಿಯಲ್ಲಿ ತರಲು ಅನುವು ಮಾಡಿಕೊಡುತ್ತದೆ. ಇದೇ ರೀತಿಯಲ್ಲಿ ಕಮ್ಯೂನಿಟಿ ಕಳುಹಿಸುವ ಕಂಪ್ಲೀಟ್ ಅಪ್ಡೇಟ್‌ಗಳನ್ನು ಜನರು ಸ್ವೀಕರಿಸಬಹುದು. ಜೊತೆಗೆ ಕಮ್ಯೂನಿಟಿ ಗ್ರೂಪ್‌ನಲ್ಲಿ ಮುಖ್ಯವಾದವುಗಳ ಕುರಿತು ಸಣ್ಣ ಚರ್ಚಾ ಗುಂಪುಗಳನ್ನು ಸುಲಭವಾಗಿ ಸಂಘಟಿಸಬಹುದು. ಇದರಲ್ಲಿ, ಅನೇಕ ಗುಂಪುಗಳನ್ನು ಏಕಕಾಲದಲ್ಲಿ ಸೇರಿಸಬಹುದು ಮತ್ತು ನೀವು ಎಲ್ಲಾ ಗುಂಪುಗಳ ನವೀಕರಣಗಳನ್ನು ಒಂದೇ ಸ್ಥಳದಲ್ಲಿ ಪಡೆಯುತ್ತೀರಿ.