ದೇಶದಲ್ಲಿ ಇತ್ತೀಚೆಗೆ ಸೈಬರ್ ದರೋಡೆಕೋರರ (Cyber Fraud) ಪ್ರಕರಣಗಳು ಹೆಚ್ಚಾಗಿವೆ. ಮೋಸ ಮಾಡಲು ಒಂದಲ್ಲ ಒಂದು ಹೊಸ ಮಾರ್ಗಗಳನ್ನು ಕಂಡುಹಿಡಿಯುತ್ತಿದ್ದಾರೆ. ಅನಾಮಿಕರ ಮಾತು ನಂಬಿ ಒಟಿಪಿ (OTP) ನಂಬರ್ ಹೇಳುತ್ತಿದ್ದಂತೆ ಬ್ಯಾಂಕ್ ಖಾತೆಯಲ್ಲಿದ್ದ ಹಣ ಮಂಗ ಮಾಯವಾದ ಸುದ್ದಿ ಹರಿದಾಡುತ್ತಲೇ ಇರುತ್ತದೆ. ಇತ್ತೀಚೆಗಷ್ಟೆ ವಿದ್ಯುತ್ ಬಿಲ್ ಹೆಸರಲ್ಲಿ ನಡೆಯುತ್ತಿದ್ದ ಸೈಬರ್ ಕ್ರೈಮ್ (Cyber Crime) ಬೆಳಕಿಗೆ ಬಂದಿತ್ತು. ವೈಯಕ್ತಿಕ ಮತ್ತು ಸೂಕ್ಷ್ಮ ಮಾಹಿತಿಯನ್ನು ಹೊರತೆಗೆಯುವ ಮೂಲಕ ಸೈಬರ್ ಕಳ್ಳರು ಜನರ ಖಾತೆಯಿಂದ ಹಣವನ್ನು ನಿರ್ಭಯವಾಗಿ ಕದಿಯುತ್ತಿದ್ದಾರೆ. ಈ ಬಗ್ಗೆ ಎಷ್ಟೇ ಎಚ್ಚರಿಕೆ ನೀಡಿದರೂ ಪ್ರಕರಣಗಳು ದಾಖಲಾಗುತ್ತಲೇ ಇದೆ. ಸೈಬರ್ ವಂಚಕರ ಇಂಥ ಮೋಸದ ಜಾಲಕ್ಕೆ ಬಿದ್ದು ಹಣ ಕಳೆದುಕೊಂಡವರ ಸಂಖ್ಯೆಗೆ ಕಡಿಮೆ ಇಲ್ಲ. ನೀವು ಕೂಡ ಈ ಮೋಸದ ಜಾಲಕ್ಕೆ ಬಿದ್ದು ಹಣ ಕಳೆದುಕೊಂಡರೆ ಅದನ್ನು ವಾಪಸು ಪಡೆಯಲು ಸಾಧ್ಯವಿದೆಯೇ?.
ಸಾಧ್ಯವಿದೆ. ಬೆಂಗಳೂರು ಪೊಲೀಸರು ಇತ್ತೀಚೆಗಷ್ಟೆ ಪರಿಚಯಿಸಿರುವ “ಗೋಲ್ಡನ್ ಅವರ್” ಎಂಬ ಸೌಲಭ್ಯ ಬಳಿಸಿದರೆ ಸೈಬರ್ ವಂಚಕರ ಜಾಲದಿಂದ ಕಳೆದುಕೊಂಡ ಹಣವನ್ನು ವಾಪಸು ಪಡೆಯಬಹುದು. ಈಗಾಗಲೇ ಈ ಗೋಲ್ಡನ್ ಅವರ್ ಸೌಲಭ್ಯ ಬಳಿಸಿಕೊಂಡು ಸಾವಿರಾರು ಜನರು ಸೈಬರ್ ವಂಚಕ ಜಾಲದಿಂದ ಕಳೆದುಕೊಂಡಿದ್ದ ಹಣವನ್ನು ಮರಳಿ ವಾಪಸು ಪಡೆದಿದ್ದಾರೆ. ಕೊರೊನ ಲಾಕ್‌ಡೌನ್ ಸಮಯದಲ್ಲಿ, ಆನ್‌ಲೈನ್ ವಂಚನೆಯಂತಹ ಸೈಬರ್ ಅಪರಾಧ ಪ್ರಕರಣಗಳಲ್ಲಿ ಗಮನಾರ್ಹ ಹೆಚ್ಚಳ ಕಂಡುಬಂದಿತ್ತು. ಈ ಕಾರಣಕ್ಕಾಗಿ ಗೋಲ್ಡನ್ ಅವರ್ ಸೌಲಭ್ಯ ತರಲಾಗಿದೆ.
ಏನಿದು ಗೋಲ್ಡನ್ ಅವರ್?:
ಹೆಚ್ಚಿನ ಸಮಯದಲ್ಲಿ ಸೈಬರ್ ವಂಚಕರು ಹಣ ಕದಿಯುವ ಉದ್ದೇಶದಿಂದ ಮೆಸೇಜ್ ಕಳುಹಿಸುವುದು, ಗಿಫ್ಟ್ ಆಫರ್, ಕ್ರೆಡಿಟ್ ಕಾರ್ಡ್ ಪಾಸ್ ವರ್ಡ್ ಚೇಂಜ್ ಎಂಬ ಆಫರ್ ಸಂದೇಶ ಅಥವಾ ಕರೆಗಳನ್ನು ಸ್ವೀಕರಿಸುತ್ತಾರೆ. ಆಗ ಆಕಸ್ಮಿಕವಾಗಿ ಗೊತ್ತಿಲ್ಲದೇ ಸೈಬರ್ ವಂಚಕರ ಜಾಲಕ್ಕೆ ಬಿದ್ದು ಹಣ ಕಳೆದಕೊಂಡರೆ, ಕಳೆದುಕೊಂಡ ಒಂದು ಗಂಟೆಯ ಒಳಗೆ ಪೊಲೀಸ್ ಕಂಟ್ರೋಲ್ ರೂಮ್ 1930 ಗೆ ಕರೆ ಮಾಡಿ. ಹಣ ಕಳೆದುಕೊಂಡ ಬಗ್ಗೆ ಪೊಲೀಸ್ ನಿಯಂತ್ರಣ ಕೊಠಡಿ ಸಿಬ್ಬಂದಿ ಕೇಳುವ ಪೂರ್ಣ ವಿವರ ನೀಡಬೇಕು. ಇದನ್ನೇ ಗೋಲ್ಡನ್ ಅವರ್ ಎಂದು ಕರೆಯುತ್ತಾರೆ.
ಯಾರಾದರೂ ಸೈಬರ್ ವಂಚನೆ ಮೂಲಕ ಹಣ ಕಳೆದುಕೊಂಡರೆ ತಕ್ಷಣ ಪೊಲೀಸ್ ಕಂಟ್ರೋಲ್ ರೂಂ ಸಂಖ್ಯೆಯಾದ 1930ಕ್ಕೆ ಕರೆ ಮಾಡಿ ವಿಷಯ ತಿಳಿಸಿದರೆ ಸೈಬರ್ ಕ್ರೈಂ ವಿಭಾಗದ ಸಿಬ್ಬಂದಿ ಪ್ರಕರಣ ದಾಖಲಿಸಿಕೊಂಡು, ಕೆಲವೇ ನಿಮಿಷಗಳಲ್ಲಿ ನಿಮ್ಮ ಮಾಹಿತಿಯನ್ನು ಆಧರಿಸಿ ನಿಮ್ಮ ಬ್ಯಾಂಕ್ ಖಾತೆಯನ್ನು ಬ್ಲಾಕ್ ಮಾಡುತ್ತಾರೆ. ಇದರಿಂದ ನಿಮ್ಮ ಖಾತೆಯಿಂದ ಬೇರೆಯವರಿಗೆ ಹಣ ಡ್ರಾ ಮಾಡಲು ಸಾಧ್ಯವಾಗುವುದಿಲ್ಲ. ಈ ಮೂಲಕ ಸೈಬರ್ ವಂಚಕರ ಮೋಸದ ಜಾಲ ನಿಯಂತ್ರಣಕ್ಕೆ ಮಹತ್ವದ ಅವಕಾಶ ಕಲ್ಪಿಸಲಾಗಿದೆ.
ಆರ್‌ಬಿಐ ಏನು ಹೇಳುತ್ತದೆ?:
ಆರ್‌ಬಿಐ ಹೇಳುವ ಪ್ರಕಾರ, ನೀವು ಆನ್‌ಲೈನ್ ಮೋಸಕ್ಕೆ ಒಳಗಾದರೆ ತಕ್ಷಣ ಬ್ಯಾಂಕಿಗೆ ಈ ಬಗ್ಗೆ ಮಾಹಿತಿ ನೀಡಿದರೆ, ನಿಮಗೆ ಆಗಬಹುದಾದ ನಷ್ಟವನ್ನು ತಪ್ಪಿಸಬಹುದು. ಹೆಚ್ಚಿನ ಬ್ಯಾಂಕುಗಳು ತಮ್ಮ ಗ್ರಾಹಕರಿಗೆ ಹಣಕಾಸು ವಂಚನೆ ವಿಮೆಯನ್ನು ಹೊಂದಿವೆ. ಹಣ ವರ್ಗಾವಣೆಯ ಸಮಯದಲ್ಲಿ ವಂಚನೆಯಾಗಿದ್ದರೆ, ಗ್ರಾಹಕರು ತಕ್ಷಣವೇ ತಮ್ಮ ಬ್ಯಾಂಕ್‌ಗೆ ಮಾಹಿತಿ ನೀಡಬೇಕು. ಬ್ಯಾಂಕಿಗೆ ಸೂಚನೆ ನೀಡಿದ ನಂತರ, ವಂಚನೆಯ ಬಗ್ಗೆ ತಕ್ಷಣವೇ ವಿಮಾ ಕಂಪನಿಗೆ ವರದಿ ಮಾಡಲಾಗುತ್ತದೆ. ಈ ರೀತಿಯಾಗಿ ಕೂಡ ನಿಮ್ಮ ಹಣವನ್ನು ಪಡೆಯಬಹುದು.
Published On - 2:26 pm, Mon, 14 November 22