ಮೆಟಾ (Meta) ಮಾಲೀಕತ್ವದ ವಾಟ್ಸ್ಆ್ಯಪ್ ತನ್ನ ಬಳಕೆದಾರರಿಗೆ ಹೊಸ ಮಾದರಿಯ ಫೀಚರ್ಗಳನ್ನು ಪರಿಚಯಿಸುತ್ತಲೇ ಬಂದಿದೆ. ಕಳೆದ ಕೆಲವು ತಿಂಗಳುಗಳಿಂದ ಒಂದರ ಹಿಂದೆ ಒಂದರಂತೆ ಆಕರ್ಷಕ ಅಪ್ಡೇಟ್ಗಳನ್ನು ಬಿಡುಗಡೆ ಮಾಡುತ್ತಲೇ ಇದೆ. ಅಥವಾ ಈಗಾಗಲೇ ಇರುವ ಕೆಲ ಫೀಚರ್ಗಳಲ್ಲಿ ಮಹತ್ವದ ಬದಲಾವಣೆಗಳನ್ನು ಮಾಡುತ್ತಿದೆ. ಇದೀಗ ವಾಟ್ಸ್ಆ್ಯಪ್ (WhatsApp) ಮತ್ತೊಂದು ಪ್ರಮುಖ ಫೀಚರ್ಸ್‌ನಲ್ಲಿ ಹೊಸ ಬದಲಾವಣೆಗೆ ಮುಂದಾಗಿದೆ. ಬಹುತೇಕ ಎಲ್ಲ ಬಳಕೆದಾರರು ಉಪಯೋಗಿಸುತ್ತಿರುವ ಡಿಲೀಟ್ ಫಾರ್ ಎವರಿಒನ್ ಫೀಚರ್ನಲ್ಲಿ ಹೊಸ ಆಯ್ಕೆ ನೀಡುವ ಕೆಲಸದಲ್ಲಿ ನಿರತವಾಗಿದೆ. ಹೌದು, ವಾಟ್ಸ್ಆ್ಯಪ್ ಡಿಲಿಟ್ ಫಾರ್ ಎವರಿಒನ್ ಫೀಚರ್ನ ಲಿಮಿಟ್ ಅನ್ನು ಹೆಚ್ಚಿಸಲಾಗುತ್ತಿದೆ. ಅಂದರೆ ಮಾಡಿದ ಮೆಸೇಜ್ (Message) ಅನ್ನು ಯಾರಿಗೂ ಕಾಣದಂತೆ ಡಿಲೀಟ್ ಮಾಡಲು ಹೆಚ್ಚಿನ ಕಾಲವಕಾಶ ನೀಡಲಾಗುತ್ತಿದೆ.
ಪ್ರಸ್ತುತ ವಾಟ್ಸ್ಆ್ಯಪ್ ಬಳಕೆದಾರರು ಡಿಲೀಟ್ ಫಾರ್ ಎವರಿಒನ್ ಫೀಚರ್ನಲ್ಲಿ ತಾವು ಸೆಂಡ್ ಮಾಡಿದ ಸಂದೇಶವನ್ನು ಹಂಚಿಕೊಂಡ ಸಮಯದಿಂದ ಒಂದು ಗಂಟೆ ಎಂಟು ನಿಮಿಷಗಳು ಮತ್ತು 16 ಸೆಕೆಂಡುಗಳ ಅವಧಿಯಲ್ಲಿ ಡಿಲೀಟ್ ಮಾಡಬಹುದು. ಇದೀಗ ಇದರ ಟೈಂ ಲಿಮಿಟ್ ಅನ್ನು ಹೆಚ್ಚಿಸಲಾಗುತ್ತಿದೆ. ಮೆಟಾ ಕಂಪನಿ ಇದೀಗ ಈ ಸಮಯವನ್ನು ಬರೋಬ್ಬರಿ ಎರಡು ದಿನಗಳಿಗೆ ವಿಸ್ತರಿಸಲು ಮುಂದಾಗಿದೆ. ಇದರಿಂದ ನೀವು ಸಂದೇಶವನ್ನು ಕಳುಹಿಸಿದ ಎರಡು ದಿನಗಳ ನಂತರ ಡಿಲೀಟ್ ಫಾರ್ ಎವರಿಒನ್ ಬಳಸಿ ಡಿಲೀಟ್ ಮಾಡಬಹುದಾಗಿದೆ. Wabetainfo ಈ ಕುರಿತು ಸ್ಕ್ರೀನ್ಶಾಟ್ ಒಂದನ್ನು ಹಂಚಿಕೊಂಡಿದೆ.
ಸದ್ಯಕ್ಕೆ ಈ ಹೊಸ ಫೀಚರ್ ವಾಟ್ಸ್ಆ್ಯಪ್ ಬೀಟಾದ ಇತ್ತೀಚಿನ ಆವೃತ್ತಿಯನ್ನು ಬಳಸುತ್ತಿರುವ ಆಯ್ದ ಬಳಕೆದಾರರಿಗೆ ಲಭ್ಯವಿದೆ ಎನ್ನಲಾಗಿದೆ. ಅದರಂತೆ ಈ ಫೀಚರ್ಸ್ ಒಂದು ಗಂಟೆ, ಎಂಟು ನಿಮಿಷಗಳು ಮತ್ತು 16 ಸೆಕೆಂಡುಗಳಿಂದ ಎರಡು ದಿನಗಳು ಮತ್ತು 12 ಗಂಟೆಗಳವರೆಗೆ ಹೆಚ್ಚಿಸಲು ಪ್ಲಾನ್ ಮಾಡಿದೆ. ಆದಷ್ಟು ಬೇಗ ಆಂಡ್ರಾಯ್ಡ್ ಮತ್ತು ಐಒಎಸ್ ಬಳಕೆದಾರರಿಗೆ ಈ ಆಯ್ಕೆ ಸಿಗಲಿದೆಯಂತೆ.
ವಾಟ್ಸ್ಆ್ಯಪ್ ಸ್ಟೇಟಸ್ನಲ್ಲಿ ಹೊಸ ಆಯ್ಕೆ:
ಇನ್ನು ವಾಟ್ಸ್ಆ್ಯಪ್ ತನ್ನ ಸ್ಟೇಟಸ್ನಲ್ಲಿ ಹೊಸ ಫೀಚರ್ ಅನ್ನು ಅಳವಡಿಸಲು ಮುಂದಾಗಿದೆ. ಸದ್ಯಕ್ಕೆ ಸ್ಟೇಟಸ್ನಲ್ಲಿ ನಿಮಗೆ ಫೋಟೋಸ್, ಜಿಫ್ ಫೈಲ್, ವಿಡಿಯೋ ಮತ್ತು ಟೆಕ್ಸ್ಟ್ಗಳನ್ನು ಹಾಕಲು ಅನುಮತಿಯಿದೆ. ಇನ್ನು ಕೆಲವೇ ದಿನಗಳಲ್ಲಿ ಇವುಗಳ ಜೊತೆಗೆ ವಾಯ್ಸ್ ಮೆಸೇಜ್ ಅನ್ನು ಕೂಡ ಸ್ಟೇಟಸ್ ಹಾಕಬಹುದು. WABetaInfo ದಲ್ಲಿ ಈ ಬಗ್ಗೆ ವರದಿಯಾಗಿದ್ದು ಸದ್ಯದಲ್ಲೇ ನೂತನ ಅಪ್ಡೇಟ್ನಲ್ಲಿ ಬಳಕೆದಾರರಿಗೆ ಈ ಆಯ್ಕೆ ಸಿಗಲಿದೆಯಂತೆ. ಚಾಟ್ ಬಾಕ್ಸ್ನಲ್ಲಿ ನಿಮಗೆ ವಾಯ್ಸ್ ಮೆಸೇಜ್ ರೆಕಾರ್ಡ್ ಮಾಡಲು ಯಾವರೀತಿ ಆಯ್ಕೆ ಇದೆಯೋ ಅದೇರೀತಿ ಸ್ಟೇಟಸ್ನಲ್ಲೂ ಕಾಣಲಿದೆಯಂತೆ. ಇದರ ಜೊತೆಗೆ ಆಡಿಯೋ ಫೈಲ್ಗಳನ್ನು ಸ್ಟೇಟಸ್ಗೆ ಹಂಚಿಕೊಳ್ಳುವ ಆಯ್ಕೆ ಬರಲಿದೆ ಎಂಬ ಮಾತುಕೂಡ ಹರಿದಾಡುತ್ತಿದೆ.