ವಿಶ್ವ ದಾಖಲೆಗಳನ್ನು ರಚಿಸಲು ಜನರು ವಿವಿಧ ರೀತಿಯ ಸಾಹಸಗಳನ್ನು ಮಾಡುತ್ತಾರೆ. ಕೆಲವರು ತಮ್ಮ ಕೂದಲುಗಳನ್ನು ಅತೀ ಉದ್ದವಾಗಿ ಬೆಳೆಸಿಕೊಂಡರೆ, ಕೆಲವರು ಶಸ್ತ್ರ ಚಿಕಿತ್ಸೆಯ ಮೂಲಕ ದೇಹವನ್ನು ವಿಚಿತ್ರ ರೂಪಕ್ಕೆ ಪರಿವರ್ತಿಸುತ್ತಾರೆ. ಇನ್ನೂ ಕೆಲವರು ಬೃಹದಾಕಾರದ ಕೇಕ್, ಪಿಜ್ಜಾ ಇತ್ಯಾದಿ ಆಹಾರ ಪದಾರ್ಥಗಳನ್ನು ತಯಾರಿಸುತ್ತಾರೆ. ಇಂತಹ ಚಿತ್ರವಿಚಿತ್ರ ವಿಶ್ವ ದಾಖಲೆಗಳ ಸುದ್ದಿಗಳನ್ನು ನಾವು ಆಗಾಗ್ಗೆ ಕೇಳಿರುತ್ತೇವೆ. ಆದರೆ ಇಲ್ಲೊಬ್ಬಳು 13 ವರ್ಷ ವಯಸ್ಸಿನ ಪುಟ್ಟ ಪೋರಿ ನೀರಿನೊಳಗೆ ಸ್ಕೂಬಾ ಡೈವಿಂಗ್ ಮಾಡುತ್ತಲೇ, ಜಾದು ಪ್ರದರ್ಶನವನ್ನು ಮಾಡಿ ಗಿನ್ನೆಸ್ ವಿಶ್ವ ದಾಖಲೆಯನ್ನು ಮಾಡಿದ್ದಾಳೆ.
ಗಿನ್ನೆಸ್ ವರ್ಲ್ಡ್ ರೆಕಾರ್ಡ್ ತನ್ನ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ಬಾಲಕಿಯ ಮ್ಯಾಜಿಕ್ ಶೋ ವಿಡಿಯೋವನ್ನು ಹಂಚಿಕೊಂಡಿದ್ದು, ಆಕೆ ನೀರಿನೊಳಗೆ 3 ನಿಮಿಷಗಳಲ್ಲಿ ಸುಮಾರು 38 ಬಗೆಯ ಜಾದು ತಂತ್ರಗಳನ್ನು ಪ್ರದರ್ಶಿಸುವ ಮೂಲಕ 2020 ರಲ್ಲಿ ಬ್ರಿಟನ್ನ ಜಾದೂಗಾರ ಮಾರ್ಟಿನ್ ರೀಸ್ ನಿರ್ಮಿಸಿದ ದಾಖಲೆಯನ್ನು ಮುರಿದಿದ್ದಾಳೆ.
ವೈರಲ್ ವೀಡಿಯೋದಲ್ಲಿ ಪುಟ್ಟ ಬಾಲಕಿ ಸ್ಕೂಬಾ ಡೈವಿಂಗ್ ಸೂಟ್, ಗೇರ್ಗಳನ್ನು ಧರಿಸಿ ನೀರಿನೊಳಗೆ ಹಲವು ಬಗೆಯ ಜಾದು ಕೌಶಲ್ಯಗಳನ್ನು ಪ್ರದರ್ಶಿಸುತ್ತಿರುವುದನ್ನು ಕಾಣಬಹುದು. ಚಿಕ್ಕ ವಯಸ್ಸಿನಲ್ಲಿಯೇ ಈಕೆಯ ಈ ಕಲೆ ಮತ್ತು ಸಾಹಸವನ್ನು ಕಂಡು ಹಲವರು ಬೆರಗಾಗಿದ್ದಾರೆ.
13 ವರ್ಷ ವಯಸ್ಸಿನ ಈ ಪುಟ್ಟ ಬಾಲಕಿಯ ಹೆಸರು ಆವೆರಿ ಎಮರ್ಸನ್ ಫಿಶರ್. ಅಮೇರಿಕಾ ಮೂಲದವಳಾದ ಈಕೆ 10 ವರ್ಷ ವಯಸ್ಸಿನವಳಾಗಿದ್ದಾಗ ಅಂದರೆ ಕೊರೋನಾ ಲಾಕ್ಡೌನ್ ಸಮಯದಲ್ಲಿ, ಜಾದೂ ಕಲೆಯನ್ನು ಅಭ್ಯಾಸ ಮಾಡಲು ಪ್ರಾರಂಭಿಸಿದಳು. ಅಲ್ಲದೆ ಆಕೆ ಸ್ಕೂಬಾ ಡೈವಿಂಗ್ನಲ್ಲಿಯೂ ಬಹಳ ಆಸಕ್ತಿ ಹೊಂದಿದ್ದಳು. ಸ್ಕೂಬಾ ಡೈವಿಂಗ್ ಸಾಹಸದಲ್ಲಿ ಹಲವು ದಾಖಲೆಗಳನ್ನು ಕೂಡಾ ಈಕೆ ಮಾಡಿದ್ದಾಳೆ. ತನ್ನ ಈ ಎರಡೂ ಕಲೆಯನ್ನು ಒಟ್ಟಿಗೆ ಪ್ರದರ್ಶನ ಮಾಡಬೇಕೆಂದು ಇದೀಗ ನೀರಿನೊಳಗೆ ಸ್ಕೂಬಾ ಡೈವಿಂಗ್ ಮಾಡುತ್ತಲೇ, ಮೂರು ನಿಮಿಷಗಳಲ್ಲಿ 38 ಜಾದೂ ತಂತ್ರಗಳನ್ನು ಪ್ರದರ್ಶನ ಮಾಡಿ, ಇದೀಗ ವಿಶ್ವ ದಾಖಲೆಯನ್ನು ಬರೆದಿದ್ದಾಳೆ.
ಇದನ್ನೂ ಓದಿ: ಕೃಷ್ಣ ಭಕ್ತರೊಂದಿಗೆ ಕುಣಿದ ಸ್ಪೈಡರ್ ಮ್ಯಾನ್
ಗಿನ್ನೆಸ್ ವರ್ಲ್ಡ್ ರೆಕಾರ್ಡ್ ಅಧೀಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ಪುಟ್ಟ ಬಾಲಕಿಯ ವಿಡಿಯೋ 310 ಸಾವಿರ ವೀಕ್ಷಣೆಗಳನ್ನು 7.6 ಸಾವಿರ ಲೈಕ್ಸ್ಗಳನ್ನು ಪಡೆದುಕೊಂಡಿದೆ. ಈಕೆಯ ಕಲೆ ಮತ್ತು ಸಾಹಸವನ್ನು ಕಂಡು ಹಲವರು ನಿಬ್ಬೆರಗಾಗಿದ್ದಾರೆ. ಇನ್ನೂ ಅನೇಕರು ಚಿಕ್ಕ ವಯಸ್ಸಿನಲ್ಲಿಯೇ ಈಕೆಯ ಈ ಸಾಧನೆಗೆ ಅಭಿನಂಧನೆಗಳನ್ನು ಸಲ್ಲಿಸಿದ್ದಾರೆ.
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 3:19 pm, Sat, 18 November 23