Video: 12 ಲಕ್ಷ ರೂ ಸಾಲ ತೀರಿಸಲು ಹಣ ನೀಡಿದ ಮಗ, ಕಣ್ಣೀರು ಹಾಕಿದ ತಾಯಿ

ಹೆತ್ತವರು ಮಕ್ಕಳ ಸಂತೋಷಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಡುತ್ತಾರೆ. ಆದರೆ ಇಲ್ಲೊಬ್ಬ 17 ವರ್ಷದ ಮಗನೊಬ್ಬ ತನ್ನ ತಾಯಿಯ ಲಕ್ಷಾನುಗಟ್ಟಲೇ ಸಾಲ ತೀರಿಸಿ ಅಚ್ಚರಿ ಮೂಡಿಸಿದ್ದಾನೆ. ಈ ಹೃದಯ ಸ್ಪರ್ಶಿ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ನೆಟ್ಟಿಗರಿಂದ ಮೆಚ್ಚುಗೆಗೆ ಪಾತ್ರವಾಗಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

Video: 12 ಲಕ್ಷ ರೂ ಸಾಲ ತೀರಿಸಲು ಹಣ ನೀಡಿದ ಮಗ, ಕಣ್ಣೀರು ಹಾಕಿದ ತಾಯಿ
ವೈರಲ್‌ ವಿಡಿಯೋ
Image Credit source: Instagram

Updated on: Jan 05, 2026 | 1:00 PM

ಸಾಲ ಮಾಡಿಯಾದ್ರು ಮಕ್ಕಳಿಗೆ ಒಂದೊಳ್ಳೆ ಬದುಕು ಕಟ್ಟಿಕೊಡಲು ಹೆತ್ತವರು ಶ್ರಮಿಸುತ್ತಾರೆ. ಕಷ್ಟ ಪಟ್ಟು ಓದಿ ಒಂದೊಳ್ಳೆ ಉದ್ಯೋಗ ಪಡೆದು ಕೊಂಡು ಹೆತ್ತವರಿಗೆ (Parents) ಹೆಗಲಾದರೆ ಅದಕ್ಕಿಂತ ಖುಷಿ ಬೇರೇನಿದೆ. ಆದರೆ ಇಲ್ಲೊಬ್ಬ 17 ವರ್ಷದ ಬಾಲಕನು (young man) ತನ್ನ ತಾಯಿಗೆ ಸರ್ಪ್ರೈಸ್ ನೀಡಿದ್ದಾನೆ. ಹೌದು, ತನ್ನ ತಾಯಿಯ 10,000 ಪೌಂಡ್ (ಸುಮಾರು 12 ಲಕ್ಷ ರೂ) ಸಾಲವನ್ನು ತೀರಿಸುವ ಮೂಲಕ ಅಚ್ಚರಿ ಮೂಡಿಸಿದ್ದಾನೆ. ಒಂದಿಷ್ಟು ಹಣವನ್ನು ತಾಯಿಯ ಕೈಯಲ್ಲಿಟ್ಟು ಸಾಲ ತೀರಿಸಲು ಹೇಳಿದ್ದಾನೆ. ಈ ವಿಡಿಯೋ ಸದ್ಯ ವೈರಲ್ ಆಗಿದ್ದು, ನೆಟ್ಟಿಗರು ಕಾಮೆಂಟ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಅಮನ್ ದುಗ್ಗಲ್ (@aman.jkd) ಇನ್ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡ ಈ ಕ್ಲಿಪ್ ಇದಾಗಿದೆ. ಈ ವಿಡಿಯೋದ ಶೀರ್ಷಿಕೆಯಲ್ಲಿ ನನ್ನ ಅಮ್ಮ ನನಗಾಗಿ ತನ್ನಿಂದ ಸಾಧ್ಯವಾದ ಎಲ್ಲವನ್ನೂ ನೀಡಿದ್ದಾರೆ ಹಾಗೂ ಮಾಡಿದ್ದಾರೆ. ನಾನು ಅಂತಿಮವಾಗಿ ಅವಳನ್ನು ನೋಡಿಕೊಳ್ಳಲು ಸಾಧ್ಯವಾಗಿರುವುದಕ್ಕೆ ನನಗೆ ತುಂಬಾ ಸಂತೋಷ ಮತ್ತು ಹೆಮ್ಮೆ ಇದೆ. ಈ ಭಾವನೆಯನ್ನು ಪದಗಳಿಂದ ವಿವರಿಸಲು ಸಾಧ್ಯವಿಲ್ಲ, ಈ ರೀತಿ ಕ್ಷಣವನ್ನು ಸೃಷ್ಟಿಸಲು ತುಂಬಾ ಪ್ರಯತ್ನ ಪಟ್ಟೆ. ಒಂದು ವರ್ಷದ ಬಳಿಕ ಅದು ಸಂಭವಿಸಿತು. ನಾನು ನಂಬಲಾಗದಷ್ಟು ಕೃತಜ್ಞನಾಗಿದ್ದೇನೆ. ದೇವರಿಗೆ, ನನ್ನ ಅಮ್ಮನಿಗೆ ಮತ್ತು ನನಗೂ ಸಹ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದು ಬರೆದುಕೊಂಡಿದ್ದಾನೆ.

ವೈರಲ್ ವಿಡಿಯೋ ಇಲ್ಲಿದೆ

17ರ ಹರೆಯದ ಬಾಲಕ ತನ್ನ ತಾಯಿಗೆ ತಾನು ಮಾಡಿದ ಕೆಲಸವನ್ನು ರಿವೀಲ್ ಮಾಡುವ ಮೊದಲು ತಾಯಿಯ ಮೇಲಿನ ತನ್ನ ಪ್ರೀತಿ ಮತ್ತು ಕೃತಜ್ಞತೆಯನ್ನು ವ್ಯಕ್ತಪಡಿಸುವುದನ್ನು ಕಾಣಬಹುದು. ತನ್ನ ಜೀವನದ ಅತ್ಯಂತ ವಿಶೇಷ ಮಹಿಳೆ ಎನ್ನುತ್ತಾ ನಾನು ಏನನ್ನೋ ಹೇಳಲು ಬಯಸುತ್ತೇನೆ ಎಂದು ಮಗನು ಹೇಳುತ್ತಾನೆ. ತಾಯಿಯೂ ನಾನೂ ನಿನ್ನನ್ನು ಪ್ರೀತಿಸುತ್ತೇನೆ ಆದರೆ ನಾನು ಯಾಕೆ ಅಳುತ್ತಿದ್ದೇನೆಂದು ನನಗೂ ತಿಳಿದಿಲ್ಲ” ಎಂದು ಹೇಳುವುದನ್ನು ನೋಡಬಹುದು. ನಂತರ ಅಮನ್ ಅಮ್ಮನ ಬಳಿ ಕಣ್ಣು ತೆರೆಯಲು ಹೇಳಿ ತನ್ನ ಕೈಯಲ್ಲಿದ್ದ ಹಣವನ್ನು ಅವಳಿಗೆ ನೀಡುತ್ತಾನೆ. ಈ ಹಣ ನಿನ್ನ ಎಲ್ಲಾ ಸಾಲಗಳಿಗೆ. ಹಾಗೂ ಇಂದಿನಿಂದ ಪ್ರತಿ ತಿಂಗಳು, ನಾನು ನಿನ್ನ ಎಲ್ಲಾ ಬಿಲ್‌ಗಳನ್ನು ಪಾವತಿಸಬಲ್ಲೆ. ನಾನು ಭರವಸೆ ನೀಡುತ್ತೇನೆ ಎಂದು ಮಗ ಹೇಳುತ್ತಿದ್ದಂತೆ ತಾಯಿ ಕಣ್ಣೀರು ಸುರಿಸುತ್ತಾ ಅವನನ್ನು ಬಿಗಿಯಾಗಿ ಅಪ್ಪಿಕೊಳ್ಳುವುದನ್ನು ಕಾಣಬಹುದು.

ಇದನ್ನೂ ಓದಿ:ಮಗಳ ಕಾಳಜಿಯುತ ಮಾತು ಕೇಳಿ ಭಾವುಕನಾದ ತಂದೆ

ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ ಈ ವಿಡಿಯೋ ಅದ್ಭುತವಾಗಿದೆ. ಈ ಕ್ಷಣವನ್ನು ಹಂಚಿಕೊಂಡದ್ದಕ್ಕೆ ಧನ್ಯವಾದಗಳು ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ನಾನು ಕೇವಲ 7 ವರ್ಷದವನಿದ್ದಾಗ ನನ್ನ ತಾಯಿಯನ್ನು ಕಳೆದುಕೊಂಡೆ. ಇಂತಹದ್ದನ್ನು ಮಾಡಲು ನಾನು ಏನು ಬೇಕಾದರೂ ಮಾಡುತ್ತೇನೆ ಎಂದು ಹೇಳಿದ್ದಾರೆ. ಮತ್ತೊಬ್ಬರು, ನೀವು ತಾಯಿಯ ಸಾಲಕ್ಕೆ ಹೆಗಲಾಗಿರುವುದು ಖುಷಿ ತಂದಿದೆ ಎಂದಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Published On - 12:58 pm, Mon, 5 January 26