ಲಂಡನ್ನಲ್ಲಿ 40 ವರ್ಷಗಳ ಹಿಂದಿನ ಕೇಕ್ ಅನ್ನು ಹರಾಜಿಗೆ ಇಡಲಾಗಿದೆ. ಈ ಕೇಕ್ನ ಒಂದು ತುಂಡಿಗೆ ಬರೋಬ್ಬರಿ 19 ಲಕ್ಷ ರೂ. ನೀಡಲಾಗಿದೆ. 4 ದಶಕಗಳ ಹಿಂದಿನ ಕೇಕ್ಗೆ ಇಷ್ಟು ದೊಡ್ಡ ಮೊತ್ತವನ್ನು ನೀಡಲು ಕಾರಣವೇನು? ಎಂದು ನಿಮಗೆ ಅಚ್ಚರಿಯಾಗಬಹುದು. ಇದು ಅಂತಿಂಥಾ ಕೇಕ್ ಅಲ್ಲ. ಬ್ರಿಟನ್ ರಾಜಮನೆತನದ ಪ್ರಿನ್ಸ್ ಚಾರ್ಲ್ಸ್ ಮತ್ತು ರಾಜಕುಮಾರಿ ಡಯಾನಾ ಅವರ ಮದುವೆಯ ಕೇಕ್ ಎಂಬುದೇ ವಿಶೇಷ. 40 ವರ್ಷಗಳ ಹಿಂದೆ ಡಯಾನಾ ಹಾಗೂ ಚಾರ್ಲ್ಸ್ ಮದುವೆಯ ಸಂದರ್ಭದಲ್ಲಿ ಕಟ್ ಮಾಡಲಾಗಿದ್ದ ಕೇಕ್ ಅನ್ನು ಹರಾಜಿಗಿಡಲಾಗಿದೆ.
ಬ್ರಿಟನ್ ರಾಜ ಚಾರ್ಲ್ಸ್ ಮತ್ತು ಪ್ರಿನ್ಸೆಸ್ ಡಯಾನಾ ಅವರ ಮದುವೆಯ ನೆನಪಿಗಾಗಿ ಈ ಬೃಹತ್ ಕೇಕ್ ಅನ್ನು ಸಂರಕ್ಷಿಸಿ ಇಡಲಾಗಿತ್ತು. ಆ. 11ರಂದು ಈ ಕೇಕ್ ಅನ್ನು ಹರಾಜಿಗಿಡಲಾಗಿದ್ದು, 700 ಗ್ರಾಂಗಿಂತ ಹೆಚ್ಚು ಇರುವ ಕೇಕ್ ತುಂಡು ಸರಿಸುಮಾರು 19 ಲಕ್ಷ ರೂ.ಗೆ ಮಾರಾಟವಾಗಿದೆ. 1981ರ ಜುಲೈ 29ರಂದು ಚಾರ್ಲ್ಸ್ ಹಾಗೂ ಡಯಾನಾ ಅವರ ಮದುವೆ ನಡೆದಿತ್ತು. ಆ ಮದುವೆಯಲ್ಲಿ ಕಟ್ ಮಾಡಲಾಗಿದ್ದ ಕೇಕ್ ತುಂಡೊಂದನ್ನು ಮೊಯಿರಾ ಸ್ಮಿತ್ ಎಂಬ ವ್ಯಕ್ತಿಗೆ ನೀಡಲಾಗಿತ್ತು. ಅವರು ಡಯಾನಾ ಹಾಗೂ ಚಾರ್ಲ್ಸ್ ಮದುವೆಯ ನೆನಪಿಗಾಗಿ ಆ ಕೇಕ್ ಅನ್ನು ಸಂರಕ್ಷಿಸಿ ಇಟ್ಟಿದ್ದರು. ಬಳಿಕ 2008ರಲ್ಲಿ ಅದನ್ನು ಬೇರೆಯವರಿಗೆ ಮಾರಾಟ ಮಾಡಿದ್ದರು. ಆ ಕೇಕ್ ಅನ್ನು ಖರೀದಿಸಿದ ವ್ಯಕ್ತಿ ಆ ಕೇಕ್ ಅನ್ನು ಈಗ ಹರಾಜಿಗಿಟ್ಟಿದ್ದಾರೆ.
40 ವರ್ಷಗಳ ಹಿಂದೆ ಈ ಕೇಕ್ ತಯಾರಿಸಲು 14 ವಾರಗಳು ಬೇಕಾಗಿತ್ತು. ಕೇಕ್ ಮಾರ್ಜಿಪಾನ್ ಬೇಸ್ ಅನ್ನು ಹೊಂದಿರುವ ಈ ಕೇಕ್ ಅನ್ನು ಕೆಂಪು, ನೀಲಿ ಮತ್ತು ಬೆಳ್ಳಿಯಲ್ಲಿ ಚಿತ್ರಿಸಿದ ರಾಯಲ್ ಕೋಟ್ ಆಫ್ ಆರ್ಮ್ಸ್‌ನ ಸಕ್ಕರೆ ರೂಪದಲ್ಲಿ ಅಲಂಕರಿಸಲಾಗಿದೆ. ಈ ಕೇಕ್ ಅನ್ನು ಪಡೆದಿದ್ದ ಮೊಯಿರಾ ಸ್ಮಿತ್ ಕ್ಲಾರೆನ್ಸ್ ಹೌಸ್‌ನಲ್ಲಿರುವ ರಾಣಿ ಎಲಿಜಬೆತ್ ಕುಟುಂಬದ ಸದಸ್ಯರಾಗಿದ್ದರು. ಈ ಹಿನ್ನೆಲೆಯಲ್ಲಿ ಮದುವೆಯ ದಿನ ಅವರಿಗೆ ಕೇಕ್ ನೀಡಲಾಗಿತ್ತು.
ಮದುವೆಯಾದ 11 ವರ್ಷಗಳಲ್ಲೇ ಚಾರ್ಲ್ಸ್ ಹಾಗೂ ಡಯಾನಾ ದಾಂಪತ್ಯದಲ್ಲಿ ಬಿರುಕು ಬಿಟ್ಟಿತ್ತು. 1996ರಲ್ಲಿ ಅವರಿಬ್ಬರೂ ವಿಚ್ಛೇದನ ಪಡೆದಿದ್ದರು. 1997ರಲ್ಲಿ ಕಾರು ಅಪಘಾತದಲ್ಲಿ ಡಯಾನಾ ಸಾವನ್ನಪ್ಪಿದ್ದರು.
ಇದನ್ನೂ ಓದಿ: Viral News: ವಿಚಿತ್ರವಾದರೂ ಸತ್ಯ; ಚಲಿಸುತ್ತಿದ್ದ ಆಟೋ ಮೇಲೆ ಹಲಸಿನ ಹಣ್ಣು ಬಿದ್ದು ಆಸ್ಪತ್ರೆ ಸೇರಿದ ಚಾಲಕ!
Viral News: 2 ಲಕ್ಷ ರೂ.ಗೆ ಮಾರಾಟವಾಯ್ತು 90 ಪೈಸೆಯ ಚಮಚ! ಹರಾಜಿಗೆ ಹಾಕಿದ್ದ ಮಾಲೀಕನೇ ಶಾಕ್
(40-year-old piece of the wedding cake Piece of Prince Charles and Diana was auctioned with Large Amount)