ಇಂದಿನ ಡಿಜಿಟಲ್ ಜಗತ್ತಿನಲ್ಲಿ ಕೃತಕ ಬುದ್ಧಿಮತ್ತೆ (Artificial Intelligence) ಪ್ರತಿಯೊಬ್ಬರ ಬದುಕಿನ ಭಾಗವಾಗಿ ಹೋಗಿದೆ. ಆರ್ಟಿಫಿಶಿಯಲ್ ಇಂಟಲಿಜನ್ಸ್ ಎನ್ನುವುದು ಕಂಪ್ಯೂಟರ್ ಪ್ರೋಗಾಮ್ ಆಗಿದ್ದು, ಮನುಷ್ಯ ದೈಹಿಕ ಅಥವಾ ಬೌದ್ಧಿಕವಾಗಿ ನಿರ್ವಹಿಸಬಹುದಾದ ಕೆಲಸವನ್ನು ತಂತ್ರಜ್ಞಾನ ಆಧಾರಿತವಾದ ಸಾಧನಗಳ ಮೂಲಕ ಮಾಡಿಸುವಂತಹ ಅವಿಷ್ಕಾರವನ್ನೇ ಕೃತಕ ಬುದ್ಧಿಮತ್ತೆ ಎಂದು ಕರೆಯಬಹುದು. ಈ ಕೃತಕ ಬುದ್ಧಿ ಮತ್ತೆ ಇಂದು ಪ್ರತಿಯೊಂದು ಕ್ಷೇತ್ರದಲ್ಲೂ ತನ್ನ ಪ್ರಾಬಲ್ಯ ಸ್ಥಾಪಿಸುತ್ತಿದೆ. ಇಂಗ್ಲೀಷ್ ಮಾತ್ರವಲ್ಲದೆ ಸ್ಥಳೀಯ ಭಾಷೆಗಳಲ್ಲೂ ಈ ತಂತ್ರಜ್ಞಾನವನ್ನು ಬಳಸಲು ಜನರಿಗೆ ಸುಲಭವಾಗಬೇಕೆಂದು ಮೈಕ್ರೋಸಾಫ್ಟ್ ಎ.ಐ ಟೂಲ್ ಗಳಿಗೆ ಮರಾಠಿ ಭಾಷೆಯನ್ನು ಕಲಿಸುವ ಮೂಲಕ ಮಹಿಳೆಯೊಬ್ಬರು ಗಂಟೆಗೆ 400 ರೂ. ಗಳಿಸುತ್ತಿದ್ದಾರೆ.
ಹೌದು ಮಹಾರಾಷ್ಟ್ರದ ಪುಣೆಯ ಖರಾಡಿ ಪ್ರದೇಶದ ನಿವಾಸಿಯಾಗಿರುವ 53 ವರ್ಷ ವಯಸ್ಸಿನ ಬೇಬಿ ರಾಜಾರಾಮ್ ಬೋಕಲೆ ಎಂಬ ಮಹಿಳೆ ಮನೆ ಕೆಲಸಗಳನ್ನು ನಿರ್ವಹಿಸುತ್ತಾ, ಮಸಾಲೆ ವ್ಯಾಪಾರಗಳನ್ನು ಮಾಡುತ್ತಲೇ ಮೈಕ್ರೋಸಾಫ್ಟ್ ಕೃತಕ ಬುದ್ಧಿಮತ್ತೆ ಉಪಕರಣಗಳಿಗೆ ಮರಾಠಿ ಭಾಷೆ ಕಲಿಸುವ ಮೂಲಕ ಗಂಟೆಗೆ 400 ರೂ. ಗಳನ್ನು ಗಳಿಸುತ್ತಿದ್ದಾರೆ.
ತನ್ನ ಎಲ್ಲಾ ಕೆಲಸ ಮುಗಿದ ಬಳಿಕ ರಾತ್ರಿ 10 ಗಂಟೆಯ ಸುಮಾರಿಗೆ ಆಕೆ 1 ಗಂಟೆಗಳ ಸಮಯ ತೆಗೆದುಕೊಂಡು ಮೈಕ್ರೋಸಾಫ್ಟ್ ಎ.ಐ ಟೂಲ್ ಗಳಿಗೆ ಮರಾಠಿ ಭಾಷೆಯನ್ನು ಕಲಿಸುವ ಕಾರ್ಯವನ್ನು ಮಾಡುತ್ತಾರೆ. ಹಾಸಿಗೆ ಮೇಲೆ ಕುಳಿತು, ತನ್ನ ಸ್ಮಾರ್ಟ್ ಫೋನ್ ಅಲ್ಲಿ ಒಂದು ಆಪ್ ಒಂದನ್ನು ತೆರೆದು ಬೇಬಿ ರಾಜಾರಾಮ್ ತನ್ನ ಮಾತೃಭಾಷೆಯಾದ ಮರಾಠಿಯಲ್ಲಿ ಕಥೆಯೊಂದನ್ನು ಜೋರಾಗಿ, ಸುಲಲಿತವಾಗಿ ಓದುತ್ತಾರೆ. ಇವರು ಉಚ್ಚರಿಸುವ ಮರಾಠಿ ಭಾಷೆಯ ಪದಗಳನ್ನು ಮತ್ತು ಅದರ ಅರ್ಥಗಳನ್ನು ದಾಖಲಿಸಿ ಗ್ರಹಿಸುವ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಭಾಷೆಯ ಕಲಿಕೆಯಲ್ಲಿ ತೊಡಗಿದೆ. ಬ್ಯಾಂಕಿಂಗ್, ಉಳಿತಾಯ, ವಂಚನೆಗಳು ಮತ್ತು ವಂಚನೆಗಳನ್ನು ತಪ್ಪಿಸುವಂತಹ ವಿಷಯಗಳನ್ನು ಒಳಗೊಂಡಿರುವ ಪ್ರಾಯೋಗಿಕ ಜ್ಞಾನವನ್ನು ಜನರಿಗೆ ಸ್ಥಳೀಯ ಭಾಷೆಯಲ್ಲಿಯೇ ತಿಳಿಸಲು ಅವರು ವಿವರಿಸುವ ಕಥೆಗಳನ್ನು ವಿನ್ಯಾಸಗೊಳಿಸಲಾಗಿದೆ.
ಇದನ್ನೂ ಓದಿ: ಅಮ್ಮನ ಮಮತೆಯಲ್ಲಿ ಯಾವುದೇ ಭೇದವಿಲ್ಲ, ತನ್ನ ಮರಿಗಳೊಂದಿಗೆ ಬೆಕ್ಕಿನ ಮರಿಗೂ ಹಾಲುಣಿಸಿದ ಶ್ವಾನ…
“ಈ ಕಾರ್ಯದಿಂದ ನನಗೆ ತುಂಬಾನೇ ಖುಷಿಯಿದೆ. ಇದರಿಂದ ಹಣ ಸಂಪಾದನೆಯ ಜೊತೆಗೆ ಜೀವನವನ್ನು ಸುಲಭ ಮಾಡಿಕೊಳ್ಳುವುದನ್ನು ಕಲಿಯಲು ಸಾಧ್ಯವಾಗಿದೆ. ಯುಪಿಐ ಮೂಲಕ ಡಿಜಿಟಲ್ ಹಣ ಪಾವತಿ ವಿಧಾನವನ್ನು ಇದರಿಂದಲೇ ಕಲಿತಿದ್ದೇನೆ. ಅಷ್ಟೇ ಅಲ್ಲದೆ ಸ್ಮಾರ್ಟ್ ಫೋನ್ ಬಳಕೆಯಿಂದ ಹೆಚ್ಚು ಆಸಕ್ತಿದಾಯಕ ವಿಷಯಗಳನ್ನು ಕೂಡಾ ಕಲಿಯುತ್ತಿದ್ದೇನೆ” ಎಂದು ಬೇಬಿ ರಾಜರಾಮ್ ಹೇಳಿದ್ದಾರೆ.
2017 ರಲ್ಲಿ ಬೆಂಗಳೂರಿನಲ್ಲಿ ಮೈಕ್ರೋಸಾಫ್ಟ್ ರಿಸರ್ಚ್ ಪ್ರಾಜೆಕ್ಟ್ ಆಗಿ ಜನಿಸಿದ “ಕಾರ್ಯ” ಎಂಬ ಪ್ರೋಜೆಕ್ಟ್ ಈ ಉಪಕ್ರಮದ ಮೂಲವಾಗಿದೆ. ಇದು ಮೈಕ್ರೋಸಾಫ್ಟ್ ಎ.ಐ ಮಾದರಿಗಳಿಗೆ ತರಬೇತಿ ನೀಡಲು ಮತ್ತು ಸಂಶೋಧನೆ ನಡೆಸಲು ವಿವಿಧ ಭಾರತೀಯ ಭಾಷೆಗಳಲ್ಲಿ ಡೇಟಾ ಸೆಟ್ ಗಳನ್ನು ರಚಿಸುವುದರ ಮೇಲೆ “ಕಾರ್ಯಾ” ಕೇಂದ್ರೀಕರಿಸುತ್ತದೆ. ಜೊತೆಗೆ ಇದು ಭಾರತದಲ್ಲಿನ ಗ್ರಾಮೀಣ ಪ್ರದೇಶದ ಜನರಿಗೆ ಉದ್ಯೋಗಾವಕಾಶವನ್ನು ಸೃಷ್ಟಿಸಿದೆ. ಇದಕ್ಕೆ ಉತ್ತಮ ಉದಾಹರಣೆ ಬೇಬಿ ರಾಜಾರಾಮ್ ಬೋಕಲೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ