ಬೆಂಕಿಯಿಂದ ಹೊತ್ತಿ ಉರಿಯುತ್ತಿರುವ ಕಟ್ಟಡದಿಂದ ಇಬ್ಬರು ಮಕ್ಕಳನ್ನು, 6 ಮಂದಿ ಸೇರಿ, ಮಾನವ ಏಣಿ ನಿರ್ಮಿಸಿಕೊಂಡು ರಕ್ಷಿಸಿದ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾಗಳಲ್ಲಿ ಸಿಕ್ಕಾಪಟೆ ವೈರಲ್ ಆಗುತ್ತಿದೆ. ಹಾಗೇ, ಆರು ಮಂದಿಯ ಧೈರ್ಯ ಮತ್ತು ಮಕ್ಕಳನ್ನು ಅವರು ರಕ್ಷಿಸಿದ ರೀತಿಗೆ ನೆಟ್ಟಿಗರು ಮೆಚ್ಚುಗೆ ನೀಡಿದ್ದಾರೆ. ಈ ಘಟನೆ ನಡೆದದ್ದು ಚೀನಾದಲ್ಲಿ ಎಂದು ವರದಿಯಾಗಿದೆ.
ಚೀನಾದ ಹುನಾನ್ ಪ್ರಾಂತ್ಯದ ಕ್ಸಿಂಟಿಯಾನ್ ಎಂಬಲ್ಲಿ ಈ ಘಟನೆ ನಡೆದಿದೆ. ಅಲ್ಲಿನ ಕಟ್ಟಡವೊಂದಕ್ಕೆ ಬೆಂಕಿ ಬಿದ್ದಿತ್ತು. ಅದರ ಮೂರನೇ ಅಂತಸ್ತಿನಲ್ಲಿದ್ದ ಒಂದು ಮನೆಯಲ್ಲಿ ಇಬ್ಬರು ಪುಟ್ಟ ಹೆಣ್ಣುಮಕ್ಕಳು ಸಿಲುಕಿದ್ದರು. ಬೆಂಕಿ ಬಿದ್ದ ಕಟ್ಟಡದಿಂದ ಅವರನ್ನು ರಕ್ಷಿಸುವುದು ಸವಾಲಾಗಿತ್ತು. ಆದರೆ ಆರು ಮಂದಿ ಸೇರಿ, ಕಟ್ಟಡದ ಗ್ರಿಲ್ ಮೇಲೆ ನಿಂತು..ಮಾನವ ಏಣಿ ರಚಿಸಿಕೊಂಡು ಇಬ್ಬರನ್ನೂ ಯಶಸ್ವಿಯಾಗಿ ರಕ್ಷಿಸಿದ್ದಾರೆ. ಅದೂ ಕೂಡ ಆ ಮಕ್ಕಳನ್ನು ಕಿಟಕಿಯಿಂದ ಹೊರಗೆ ತೆಗೆದಿದ್ದಾರೆ.
ಟ್ರೆಂಡಿಂಗ್ ಇನ್ ಚೀನಾ ಎಂಬ ಫೇಸ್ಬುಕ್ ಅಕೌಂಟ್ನಲ್ಲಿ ವಿಡಿಯೋ ಶೇರ್ ಆಗಿದೆ. ಈ ಆರು ಮಂದಿ ಖಾಲಿ ಕೈಯಲ್ಲಿ ಕಟ್ಟಡಕ್ಕೆ ಹಾಕಿದ್ದ ಗ್ರಿಲ್ ಹತ್ತಿದ್ದಾರೆ. ಒಬ್ಬರ ಕೆಳಗೆ ಒಬ್ಬರಂತೆ ನಿಂತು..ಮಕ್ಕಳನ್ನು ಕೆಳಗೆ ಇಳಿಸಿದ್ದಾರೆ. ವಿಡಿಯೋದ ಕೊನೆಯಲ್ಲಿ, ಕೆಲವು ಅಗ್ನಿಶಾಮಕ ದಳದ ಸಿಬ್ಬಂದಿ ಇಲ್ಲಿಗೆ ಬರುವುದನ್ನು ನೋಡಬಹುದು. ನೆಟ್ಟಿಗರು ಈ ದೃಶ್ಯ ನೋಡಿ ಸಿಕ್ಕಾಪಟೆ ಖುಷಿ ಪಟ್ಟಿದ್ದಾರೆ.