12 ನೇ ತರಗತಿ ಪರೀಕ್ಷೆಗೆ ನೋಂದಣಿ ಮಾಡಿಸಿಕೊಂಡ 77 ವರ್ಷದ ವೃದ್ಧ

| Updated By: Pavitra Bhat Jigalemane

Updated on: Jan 13, 2022 | 5:58 PM

ನೀರಿನ ಇಲಾಖೆಯಲ್ಲಿ 4ನೇ ಹಂತದ ನೌಕರರಾಗಿ ನೇಮಕಗೊಂಡಿದ್ದರು. ಆದರೂ ಪ್ರಯತ್ನ ಬಿಡದೆ ಪರೀಕ್ಷೆಯನ್ನು ಬರೆಯುತ್ತಿದ್ದರು. ಕೊನೆಗೂ 2019 ರಲ್ಲಿ 10 ನೇ ತರಗತಿ ಪರೀಕ್ಷೆಯಲ್ಲಿ ಹುಕುಮ್​ದಾಸ್​ ಉತ್ತೀರ್ಣರಾಗಿದ್ದರು.

12 ನೇ ತರಗತಿ ಪರೀಕ್ಷೆಗೆ ನೋಂದಣಿ ಮಾಡಿಸಿಕೊಂಡ 77 ವರ್ಷದ ವೃದ್ಧ
ಹುಕುಮ್​ದಾಸ್​ ವೈಷ್ಣವ್​
Follow us on

ಕಲಿಯಬೇಕೆಂಬ ಹಠವಿದ್ದರೆ ವಯಸ್ಸು ಅಡ್ಡಿಯಲ್ಲ ಎಂದು ಹೇಳುವ ಹಲವಾರು ಘಟನೆಗಳನ್ನು ಕೇಳಿದ್ದೇವೆ. ಇದೀಗ ರಾಜಸ್ಥಾನದ 77 ವರ್ಷದ ವೃದ್ಧರೊಬ್ಬರು 12ನೇ ತರಗತಿ ಪರೀಕ್ಷೆ ಬರೆಯಲು ಹೊರಟಿದ್ದಾರೆ. ಈ ಸುದ್ದಿ ಈಗ ಎಲ್ಲರನ್ನೂ ಹುಬ್ಬೇರಿಸುವಂತೆ ಮಾಡಿದೆ. ರಾಜಸ್ಥಾನದ ಹುಕುಮ್​ದಾಸ್​ ವೈಷ್ಣವ್​ ಎನ್ನುವ ಮಾಜಿ ಸರ್ಕಾರಿ ನೌಕರ 12 ನೇ ತರಗತಿ ಪರೀಕ್ಷೆ ಬರೆಯಲು ತಯಾರಿ ನಡೆಸಿದ್ದಾರೆ. ಇನ್ನೊಂದು ಅಚ್ಚರಿಯ ಸಂಗತಿಯೆಂದರೆ ಇವರು 10 ನೇ ತರಗತಿಯನ್ನು ಬರೋಬ್ಬರಿ 56ನೇ ಬಾರಿ ಪರೀಕ್ಷೆ ಬರೆದು ಉತ್ತೀರ್ಣರಾಗಿದ್ದರು.

1945 ರಲ್ಲಿ ಜಲೋರ್‌ನ ಸರ್ದಾರ್‌ಗಢ ಗ್ರಾಮದಲ್ಲಿ ಜನಿಸಿದ ಇವರು 1ರಿಂದ 8 ನೇ ತರಗತಿಯನ್ನು ತೇಖಿ ಊರಿನಲ್ಲಿ ಕಲಿತಿದ್ದರು. 1962ರಲ್ಲಿ ಮೊದಲ ಬಾರಿಗೆ 10ನೇ ತರಗತಿ ಪರೀಕ್ಷೆಯನ್ನು ಬರೆದಿದ್ದರು ಆದರೆ ಉತ್ತೀರ್ಣರಾಗಿರಲಿಲ್ಲ. ಇದರಿಂದ 2ನೇ ಬಾರಿಗೆ ಪರೀಕ್ಷೆ ಬರೆದಿದ್ದರು ಅದರಲ್ಲೂ ಪಾಸ್​ ಆಗದ ಕಾರಣ ಅವರ ಸ್ನೇಹಿತರು ರೇಗಿಸಿದ್ದರು. ನಿನ್ನಿಂದ 10ನೇ ತರಗತಿ ಉತ್ತೀರ್ಣರಾಗಲು ಸಾಧ್ಯವಿಲ್ಲ ಎಂದಿದ್ದರು. ಆ ಬಳಿಕ ನೀರಿನ ಇಲಾಖೆಯಲ್ಲಿ 4ನೇ ಹಂತದ ನೌಕರರಾಗಿ ನೇಮಕಗೊಂಡಿದ್ದರು. ಆದರೂ ಪ್ರಯತ್ನ ಬಿಡದೆ ಪರೀಕ್ಷೆಯನ್ನು ಬರೆಯುತ್ತಿದ್ದರು. ಕೊನೆಗೂ 2019 ರಲ್ಲಿ 10 ನೇ ತರಗತಿ ಪರೀಕ್ಷೆಯಲ್ಲಿ ಹುಕುಮ್​ದಾಸ್​ ಉತ್ತೀರ್ಣರಾಗಿದ್ದರು.

ಈ ಬಾರಿ ಅದೇ ಆತ್ಮವಿಶ್ವಾಸದೊಂದಿಗೆ 2021-22ನೇ ಸಾಲಿನ 12 ನೇ ತರಗತಿ ಪರೀಕ್ಷೆ ಬರೆಯಲು ನೋಂದಣಿ ಮಾಡಿಸಿಕೊಂಡಿದ್ದಾರೆ. ತಮ್ಮೂರಿನ ಶಾಲೆಯಲ್ಲಿಯೇ ಪರೀಕ್ಷೆ ಬರೆಯಲು ಸಿದ್ಧತೆ ನಡೆಸುತ್ತಿದ್ದಾರೆ. ಅಚ್ಚರಿಯ ವಿಷಯವೆಂದರೆ ಹುಕುಮ್​ದಾಸ್​ ಮೊಮ್ಮಗ ಕೂಡ ಈ ಬಾರಿ 12 ನೇ ತರಗತಿ ಪರೀಕ್ಷೆ ಬರೆಯುತ್ತಿದ್ದಾರೆ. ಸದ್ಯ ಈ ಸಂಗತಿ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಹುಕುಮ್​ದಾಸ್​ ಪ್ರಯತ್ನಕ್ಕೆ ನೆಟ್ಟಿಗರು ಶ್ಲಾಘನೆ ವ್ಯಕ್ತಪಡಿಸಿದ್ದು, ಶುಭ ಹಾರೈಸಿದ್ದಾರೆ.

ಇದನ್ನೂ ಓದಿ:

Video: ಸಿನಿಮಾ ಶೈಲಿಯಲ್ಲಿ ಕಳ್ಳನನ್ನು ಬೆನ್ನಟ್ಟಿ ಸೆರೆಹಿಡಿದ ಮಂಗಳೂರು ಪೊಲೀಸರು