ಪ್ರಾಣಿಗಳಿಗೆ ಮನುಷ್ಯರಂತೆ ಮಾತು ಬಾರದೆ ಇದ್ದರೂ, ತಮ್ಮದೇ ಆದ ಭಾಷೆ-ಭಾವನೆಯಲ್ಲಿ ಅವರು ಪರಸ್ಪರ ಸಂವಹನಿಸಿಕೊಳ್ಳುತ್ತಾರೆ. ಪರಸ್ಪರ ರಕ್ಷಣೆ ಮಾಡಿಕೊಳ್ಳುತ್ತವೆ. ಪ್ರಾಕೃತಿಕವಾಗಿಯೇ ಪರಸ್ಪರ ವೈರತ್ವವಿರುವ ಪ್ರಾಣಿಗಳೂ ಕೂಡ ಸ್ನೇಹದಿಂದ ವರ್ತಿಸುವುದನ್ನೂ ನಾವು ನೋಡಿದ್ದೇವೆ. ಒಟ್ಟಾರೆ ಅವುಗಳ ಮೂಕಭಾಷೆ ಮನುಷ್ಯರಿಗೆ ಒಂದು ಕೌತುಕ. ಈಗಾಗಲೇ ಇಂಟರ್ನೆಟ್ನಲ್ಲಿ ನೀವು ಅನೇಕಾನೇಕ ಪ್ರಾಣಿಗಳಿಗೆ ಸಂಬಂಧಪಟ್ಟ ವಿಡಿಯೋಗಳನ್ನು ನೋಡಿರುತ್ತೀರಿ. ಅಂಥದ್ದೇ ಒಂದು ವಿಡಿಯೋ ಇದೀಗ ವೈರಲ್ ಆಗಿ, ಜನ ಮೆಚ್ಚುಗೆ ಗಳಿಸಿದೆ. ಹಾಗೇ. ಇದೀಗ ಎಮ್ಮೆಯೊಂದು, ಕಷ್ಟದಲ್ಲಿರುವ ಆಮೆಗೆ ಸಹಾಯ ಮಾಡಿದ ವಿಡಿಯೋ ಸಿಕ್ಕಾಪಟೆ ವೈರಲ್ ಆಗಿದೆ.
ವಿಡಿಯೋ ಎಲ್ಲಿ ಚಿತ್ರೀಕರಸಿಲ್ಪಟ್ಟಿದ್ದು ಎಂಬ ಬಗ್ಗೆ ಮಾಹಿತಿ ಇಲ್ಲ. ಆದರೆ ಇದನ್ನು ಪೋಸ್ಟ್ ಮಾಡಿದವರು ಐಎಫ್ಎಸ್ ಅಧಿಕಾರಿ ಸುಸಾಂತಾ ನಂದಾ. ಪ್ರತಿ ಜೀವಿಯಲ್ಲೂ ಕರುಣೆ ಇರುತ್ತದೆ. ಇಲ್ಲಿ ನೋಡಿ, ಮಗುಚಿ ಬಿದ್ದು ಕಷ್ಟಪಡುತ್ತಿದ್ದ ಆಮೆಯನ್ನು ಎಮ್ಮೆ ರಕ್ಷಣೆ ಮಾಡಿದೆ ಎಂದು ಕ್ಯಾಪ್ಷನ್ ಬರೆದಿದ್ದಾರೆ. ಅದು ಸತ್ಯ, ಆಮೆಯೊಂದು ಬೆನ್ನು ಕೆಳಗಾಗಿ ಬಿದ್ದಿತ್ತು. ಹೀಗಾದಾಗ ಆಮೆಗಳಿಗೆ ಉಳಿದ ಪ್ರಾಣಿಗಳಂತೆ ಬೇಗನೇ ಸರಿಯಾಗಲು ಸಾಧ್ಯವಾಗುವುದಿಲ್ಲ. ಆಗ ಅಲ್ಲಿಯೇ ಇದ್ದ ಆಮೆ, ತನ್ನ ಕೋಡನ್ನು ಆಮೆಯ ಬೆನ್ನ ಕೆಳಗೆ ಹಾಕಿ, ಅದನ್ನು ತಿರುಗಿಸಿದ್ದನ್ನು ವಿಡಿಯೋದಲ್ಲಿ ನೋಡಬಹುದು. ಬೇಲಿಯೊಂದರ ಬಳಿ ನಿಂತ ಎಮ್ಮೆ ಏನು ಮಾಡುತ್ತಿದೆ ಎಂಬುದು ಮೊದಲು ಗೊತ್ತಾಗುವುದಿಲ್ಲ. ಆದರೆ ವಿಡಿಯೋ ಝೂಮ್ ಆದ ತಕ್ಷಣೆ ಅದರ ಪರೋಪಕಾರತೆ ಗೊತ್ತಾಗುತ್ತದೆ.
Everyone can be kind…
Buffalo saving a tortoise by turning it around ?
(As shared) pic.twitter.com/Qs4mk8A2K8— Susanta Nanda IFS (@susantananda3) December 17, 2021
ವಿಡಿಯೋವನ್ನು ಸುಸಾಂತಾ ನಂದಾ ಡಿ.17ರಂದು ಪೋಸ್ಟ್ ಮಾಡಿದ್ದಾರೆ. ಮೂರು ದಿನಗಳಲ್ಲಿ 68 ಸಾವಿರಕ್ಕೂ ಅಧಿಕ ವೀವ್ಸ್ ಕಂಡಿದೆ. ಹಾಗೆ ಮೆಚ್ಚುಗೆಗಳ ಮಾಹಪೂರದ ಕಾಮೆಂಟ್ಗಳು ಬಂದಿವೆ. ಎಮ್ಮೆಯೊಂದು ತನ್ನ ಕೋಡನ್ನು ಚಿಕ್ಕ ಪ್ರಾಣಿಯ ಸಹಾಯಕ್ಕೆ ಹೇಗೆ ಬಳಸಿತು ಎಂಬುದನ್ನು ನೋಡಿ ಖುಷಿಯಾಗುತ್ತದೆ ಎಂದು ನೆಟ್ಟಿಗರೊಬ್ಬರು ಹೇಳಿದ್ದರೆ, ಇನ್ನೊಬ್ಬರು, ಆಮೆಗೆ ಏಳಲಾಗುತ್ತಿಲ್ಲ ಎಂಬುದನ್ನು ಎಮ್ಮೆ ಅರ್ಥ ಮಾಡಿಕೊಂಡಿತಲ್ಲ ! ಎಂದು ಉದ್ಘಾರ ತೆಗೆದಿದ್ದಾರೆ. ಒಟ್ಟಾರೆ ಈ ವಿಡಿಯೋ ನೋಡಿ ಮನುಷ್ಯ ಕಲಿಯುವುದು ತುಂಬ ಇದೆ ಎಂಬ ಅಭಿಪ್ರಾಯವನ್ನೂ ಜನರು ಹೊರಹಾಕಿದ್ದಾರೆ.