
ನಾಯಿ ಮತ್ತು ಬೆಕ್ಕುಗಳನ್ನು ಹೆಚ್ಚಿನವರು ಮನೆಗಳಲ್ಲಿ ಸಾಕಲು ಇಷ್ಟಪಡುತ್ತಾರೆ. ಅವುಗಳನ್ನು ಪುಟಾಣಿ ಮಕ್ಕಳಂತೆ ಮುದ್ದು ಮಾಡುತ್ತಾರೆ. ಅಷ್ಟೇ ಅಲ್ಲದೆ ಈ ಸಾಕು ಪ್ರಾಣಿಗಳೂ ಕೂಡಾ ಒಡೆಯನಿಗೆ ಯಾವಾಗಲೂ ನಿಷ್ಠೆಯನ್ನು ತೋರುತ್ತವೆ. ಹಾಗೇನೇ ಸಂಕಷ್ಟಗಳಿಂದ ಮನೆಯವರನ್ನು ಸಾಕು ಪ್ರಾಣಿಗಳು ಪಾರು ಮಾಡಿದ ಅನೇಕಾರು ಉದಾಹರಣೆಗಳಿದೆ. ಆದರೂ ಹೆಚ್ಚಿನವರು ಶ್ವಾನಗಳು ತೋರುವಷ್ಟು, ಪ್ರೀತಿ ಕಾಳಜಿ ಬೆಕ್ಕುಗಳು ತೋರಲ್ಲ, ಅವುಗಳಿಗೆ ಯಾವುದೇ ಭಾವನೆಗಳಿಲ್ಲ, ಅವುಗಳು ಬರೀ ಮನೆಯಲ್ಲಿ ತಿಂದು ಮಲಗುವುದಕ್ಕೆ ಸೀಮಿತ ಎಂದು ಹೇಳುತ್ತಿರುತ್ತಾರೆ. ಆದರೆ ಇದೀಗ ಇಲ್ಲೊಂದು ಬೆಕ್ಕು ಅನ್ನ ಹಾಕಿದ ಮನೆಯವರಿಗೆ ಕಷ್ಟ ಅಂತ ಬಂದ್ರೆ ನಾವು ಕೂಡಾ ಸಹಾಯ ಮಾಡಬಲ್ಲೇವು ಎಂಬುದನ್ನು ತೋರಿಸಿಕೊಟ್ಟಿದೆ. ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಬೆಕ್ಕಿನ ಸಮಯ ಪ್ರಜ್ಞೆಗೆ ನೆಟ್ಟಿಗರು ತಲೆ ಬಾಗಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಶ್ವಾನದ ದಾಳಿಯಿಂದ ಪುಟ್ಟ ಕಂದಮ್ಮನನ್ನು ಬೆಕ್ಕೊಂದು ರಕ್ಷಣೆ ಮಾಡಿರುವುದನ್ನು ಕಾಣಬಹುದು. ಈ ವಿಡಿಯೋವನ್ನು @gunsnrosesgirl3 ಎಂಬ ಹೆಸರಿನ X ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, “ಮಿಂಚಿನ ವೇಗದಲ್ಲಿ ಬಂದು ಮಗುವನ್ನು ರಕ್ಷಿಸಿದ ಬೆಕ್ಕು” ಎಂಬ ಶೀರ್ಷಿಕೆಯನ್ನು ಬರೆಯಲಾಗಿದೆ.
13 ಸೆಕೆಂಡುಗಳ ಈ ವೈರಲ್ ವಿಡಿಯೋದಲ್ಲಿ ಪುಟ್ಟ ಮಗುವೊಂದು ಅಂಗಳದಲ್ಲಿ ಆಟವಾಡುತ್ತಿರುವುದನ್ನು ಕಾಣಬಹುದು. ಆ ಸಂದರ್ಭದಲ್ಲಿ ಆ ಸ್ಥಳಕ್ಕೆ ಬಂದಂತಹ ಕಪ್ಪು ಬಣ್ಣದ ಬೀದಿ ನಾಯಿಯೊಂದು ಮಗುವಿನ ಮೇಲೆ ದಾಳಿ ಮಾಡಲು ಮುಂದಾಗುತ್ತದೆ. ಮಗುವಿನ ಅಳುವ ಸದ್ದನ್ನು ಕೇಳಿ ಅಂಗಳಕ್ಕೆ ಬಂದ ಬೆಕ್ಕು ಮಿಂಚಿನ ವೇಗದಲ್ಲಿ ಓಡಿ ಹೋಗಿ ಪುಟ್ಟ ಕಂದಮ್ಮನನ್ನು ಶ್ವಾನದ ದಾಳಿಯಿಂದ ರಕ್ಷಣೆ ಮಾಡಿದೆ. ಈ ದೃಶ್ಯವಾಳಿ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಇದನ್ನೂ ಓದಿ: ಮಕ್ಕಳನ್ನು ಮಕ್ಕಳಂತೆ ಇರಲು ಬಿಡಿ, ಈ ವಿಡಿಯೋ ನಿಮ್ಮ ಬಾಲ್ಯವನ್ನು ನೆನಪಿಸಬಹುದು
ಫೆಬ್ರವರಿ 15 ರಂದು ಹಂಚಿಕೊಳ್ಳಲಾದ ಈ ವಿಡಿಯೋ 42 ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಮೆಂಟ್ಸ್ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼವ್ಹಾವ್ ಬೆಕ್ಕಿನ ಸಾಹಸಕ್ಕೆ ನನ್ನದೊಂದು ಮೆಚ್ಚಗೆʼ ಎಂಬ ಕಮೆಂಟ್ ಬರೆದುಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼತುಂಬಾ ಬುದ್ಧಿವಂತ ಬೆಕ್ಕುʼ ಎಂದು ಕಮೆಂಟ್ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಸಾಕು ಪ್ರಾಣಿಗಳು ಅವುಗಳ ಮಾಲೀಕನ ಮೇಲೆ ತೋರುವ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವೇ ಇಲ್ಲʼ ಎಂದು ಹೇಳಿದ್ದಾರೆ. ಇನ್ನೂ ಅನೇಕರು ಈ ಬೆಕ್ಕು ನಿಜವಾದ ಸೂಪರ್ ಹೀರೋ ಎಂದು ಹೇಳಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ