ಪ್ರೇಮ ಕುರುಡು, ಅದಕ್ಕೆ ಕಣ್ಣಿಲ್ಲ, ಕಿವಿಯಿಲ್ಲ, ಮೂಗಿಲ್ಲ ಅಂತ ಹೇಳುವುದನ್ನು ನಾವು ಕೇಳುತ್ತಿರುತ್ತೇವೆ. ಪಾಕಿಸ್ತಾನದ (Pakistan) ಈ ದಂಪತಿ ವಿಷಯದಲ್ಲಿ ಇದು ಅಕ್ಷರಶಃ ಸತ್ಯ ಮಾರಾಯ್ರೇ. ಶ್ರೀಮಂತನೊಬ್ಬ ಅನಾಥೆ, ಬಡವಿಯನ್ನು ಮದುವೆಯಾಗೋದು ಸಿನಿಮಾಗಳಲ್ಲಿ ಮಾತ್ರ ನೋಡುತ್ತೇವೆ. ನೀವು ‘ರಾಜಾ ಹಿಂದುಸ್ತಾನಿ’ (Raja Hindustani) ಸಿನಿಮಾ ನೋಡಿದ್ದೀರಲ್ವಾ? ಆಗರ್ಭ ಶ್ರೀಮಂತನ ಮಗಳು ಕರಿಷ್ಮಾ ಕಪೂರ್ ಟ್ಯಾಕ್ಸಿ ಡ್ರೈವರ್ ಆಮಿರ್ ಖಾನ್ ನನ್ನು ಪ್ರೀತಿಸಿ ಮದುವೆಯಾಗುತ್ತಾಳೆ. ಪಾಕಿಸ್ತಾನದ ಕಿಶ್ವರ್ ಸಾಹಿಬಾ (Kishwar Sahiba) ಹೆಸರಿನ ವೈದ್ಯೆ ತಾನು ಕೆಲಸ ಮಾಡುತ್ತಿರುವ ಆಸ್ಪ್ರತೆಯಲ್ಲೇ ಹೌಸ್ ಕೀಪಿಂಗ್ ಸಿಬ್ಬಂದಿಯಾಗಿ ಕೆಲಸ ಮಾಡುವ ಶಹಜಾದ್ (Shahajad) ಎನ್ನುವ ವ್ಯಕ್ತಿಯನ್ನು ಲವ್ ಮಾಡಿ ಮದುವೆ ಕೂಡ ಆಗಿದ್ದಾರೆ.
ಅವರ ಮೊಹಬ್ಬತ್ ಕಿ ಕಹಾನಿ ರೋಚಕ ಅನಿಸುತ್ತಲ್ಲವೇ? ಈ ಅಪೂರ್ವ ಲವ್ ಸ್ಟೋರಿಯ ವಿಡಿಯೋ ವೈರಲ್ ಆಗಿದೆ ಮತ್ತು ನೆಟ್ಟಿಗರು ಅವರ ಕತೆ ಕೇಳಿ ಫಿದಾ ಆಗುತ್ತಿದ್ದಾರೆ.
ಮೇರಾ ಪಾಕಿಸ್ತಾನ ಹೆಸರಿನ ಯೂಟ್ಯೂಬ್ ಚ್ಯಾನೆಲ್ ನಲ್ಲಿ ಕಿಶ್ವರ್ ಮತ್ತು ಶಹಾಜಾದ್ ತಮ್ಮ ಸುಂದರ ಪ್ರೇಮ ಕತೆಯನ್ನು ಹೇಳಿಕೊಂಡಿದ್ದಾರೆ. ಪಾಕಿಸ್ತಾನದ ಒಕಾರಾ ತೆಹ್ಸಿಲ್ ವ್ಯಾಪ್ತಿಯಲ್ಲಿ ಬರುವ ದಿಪಾಲ್ ಪುರ್ ಎಂಬ ಊರಿನ ನಿವಾಸಿಗಳಾಗಿರುವ ದಂಪತಿಯು ಯೂಟ್ಯೂಬರ್ ಹರೀಶ್ ಭಟ್ಟಿ ಜೊತೆ ಮಾತಾಡಿದ್ದು ತಮ್ಮಿಬ್ಬರ ನಡುವೆ ಹಲವಾರು ಸಾಮಾಜಿಕ, ಆರ್ಥಿಕ ಮತ್ತು ಸ್ಥಾನಮಾನದ ಅಡೆತಡೆಗಳಿದ್ದರೂ ಪ್ರೀತಿ ತಮ್ಮನ್ನು ಬೆಸೆಯಿತು ಎಂದ ಹೇಳಿದ್ದಾರೆ.
ಇಂಥದೊಂದು ಘಟನೆ ತನ್ನ ಬದುಕಿನಲ್ಲಿ ನಡೆದೀತು ಅಂತ ಭಾವಿಸಿರಲಿಲ್ಲ ಎಂದು ಶಹಜಾದ್ ಹೇಳಿದ್ದಾರೆ. ಮತ್ತೊಂದೆಡೆ ಕಿಶ್ವರ್, ತಾನು ಶಹಜಾದ್ ವ್ಯಕ್ತಿತ್ವಕ್ಕೆ ಮಾರಿ ಹೋಗಿದ್ದೆ ಎಂದು ಹೇಳಿದ್ದಾರೆ.
ಸಾಮಾನ್ಯವಾಗಿ ಜನ ಆಸ್ತಿ ಅಂತಸ್ತು, ಸಾಮಾಜಿಕ ಸ್ಥಾನಮಾನಗಳನ್ನು ಗಮನದಲ್ಲಿಟ್ಟುಕೊಂಡು ಪ್ರೀತಿಸುತ್ತಾರೆ ಮತ್ತು ಮದುವೆಯೆಡೆ ಮುಂದುವರಿಯುತ್ತಾರೆ. ಆದರೆ ಕಿಶ್ವರ್ ಅವನ್ನೆಲ್ಲ ಬದಿಗೊತ್ತಿ ತಮ್ಮ ಹೃದಯವನ್ನು ತನಗೆ ನೀಡಿದರು ಎಂದು ಶಹಜಾದ್ ಹೇಳಿದ್ದಾರೆ.
ವಿಡಿಯೋನಲ್ಲಿ ತಾವು ಭೇಟಿಯಾಗಿದ್ದು ಹೇಗೆ, ಲವ್ ಪ್ರಸ್ತಾಪ ಮಾಡಿದ್ದು, ಲಗ್ನವಾಗಿದ್ದು ಮೊದಲಾದ ಎಲ್ಲ ಸಂಗತಿಗಳ ಬಗ್ಗೆ ಅವರಿಬ್ಬರು ಮಾತಾಡಿದ್ದಾರೆ.