ಆನೆಗಳು ಬಲು ಬುದ್ಧಿವಂತ ಪ್ರಾಣಿಗಳು. ಅವುಗಳು ನಮ್ಮಂತೆಯೇ ಆಲೋಚಿಸುವ ಹಾಗೂ ಇತರರ ಭಾವನೆಗಳನ್ನು ಅರ್ಥೈಸಿಕೊಳ್ಳುವ ಸಾಮಾರ್ಥ್ಯವನ್ನು ಹೊಂದಿವೆ. ಅಷ್ಟೇ ಅಲ್ಲದೆ ಅವುಗಳು ಮನುಷ್ಯರಿಗಿಂತ ಹೆಚ್ಚಾಗಿಯೇ ಸಂಬಂಧಗಳಿಗೆ ಬೆಲೆ ಕೊಡುತ್ತವೆ. ಹಾಗೂ ಆನೆಗಳು ತಮ್ಮ ಬಳಗವನ್ನು ಅತ್ಯಂತ ಪ್ರೀತಿಯಿಂದ, ಕಾಳಜಿಯಿಂದ ಮತ್ತು ಅಷ್ಟೇ ಜವಬ್ದಾರಿಯಿಂದ ನೋಡಿಕೊಳ್ಳುತ್ತವೆ. ಅದರಲ್ಲೂ ಆನೆಗಳ ಬಳಗದಲ್ಲಿ ಮರಿಯಾನೆ ಇದ್ದರಂತೂ ಆನೆಗಳು ಇನ್ನಷ್ಟು ಜಾಗರೂಕವಾಗಿರುತ್ತವೆ. ಆನೆಗಳು ತಮ್ಮ ಬಳಗದಲ್ಲಿರುವ ಮರಿಯಾನೆಗಳನ್ನು ಜೋಪಾನವಾಗಿ ನೋಡಿಕೊಳ್ಳುವ ರೀತಿಯೇ ಸುಂದರ. ಈ ಮುಗ್ಧ ಪ್ರಾಣಿಗಳ ನಿಷ್ಕಲ್ಮಶ ಪ್ರೀತಿ, ಕಾಳಜಿ ನಿಜಕ್ಕೂ ನಮ್ಮ ಹೃದಯ ತುಂಬುವಂತೆ ಮಾಡುತ್ತವೆ. ಈಗ ಅದೇ ರೀತಿಯ ಹೃದಯಸ್ಪರ್ಶಿ ವಿಡಿಯೋವೊಂದು ವೈರಲ್ ಆಗಿದ್ದು, ಆನೆಗಳ ಹಿಂಡೊಂದು ಕೆಸರಲ್ಲಿ ಬಿದ್ದಂತಹ ಮರಿಯಾನೆಯನ್ನು ರಕ್ಷಿಸಲು ಒಗ್ಗಟ್ಟಾಗಿ ನಿಂತಿವೆ. ಈ ಹೃದಯಸ್ಪರ್ಶಿ ವಿಡಿಯೋ ನೆಟ್ಟಿಗರನ್ನು ಭಾವುಕರನ್ನಾಗಿಸಿದೆ.
ಮನುಷ್ಯರು ತಮ್ಮ ಬಳಗದವರಿಗೆ ಏನಾದರೂ ಕಷ್ಟ ಬಂದ್ರೆ ಜೊತೆಯಾಗಿ ನಿಲ್ಲುತ್ತಾರೋ ಗೊತ್ತಿಲ್ಲ, ಆದ್ರೆ ಇಲ್ಲೊಂದು ಗಜ ಪಡೆ ಎಂತಹ ಕಷ್ಟದ ಸಂದರ್ಭದಲ್ಲಿಯೂ ತಮ್ಮ ಬಳಗದವರನ್ನು ಬಿಟ್ಟು ಕೊಡದೆ, ಒಗ್ಗಟ್ಟಾಗಿ ನಿಲ್ಲಬೇಕು, ಈ ಒಗ್ಗಟ್ಟಿನಲ್ಲಿ ಬಲವಿದೆ ಎಂಬುದನ್ನು ತೋರಿಸಿಕೊಟ್ಟಿವೆ. ಈ ವೈರಲ್ ವಿಡಿಯೋವನ್ನು Cute Thing ಎಂಬ ಯೂಟ್ಯೂಬ್ ಚಾನೆಲ್ ಅಲ್ಲಿ ಹಂಚಿಕೊಳ್ಳಲಾಗಿದ್ದು, ಕೆಸರಲ್ಲಿ ಸಿಲುಕಿರುವ ಮರಿಯನ್ನು ರಕ್ಷಿಸಲು ಇಡೀ ಆನೆ ಕುಟುಂಬವೇ ಒಗ್ಗಟ್ಟಾಗಿ ಕೆಲಸ ಮಾಡಿದೆʼ ಎಂಬ ಶೀರ್ಷಿಕೆಯನ್ನು ಬರೆದುಕೊಳ್ಳಲಾಗಿದೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ:
ವೈರಲ್ ವಿಡಿಯೋದಲ್ಲಿ ಯಾವುದೋ ಕಾಡಿನಲ್ಲಿ ಆನೆಯ ಬಳಗ ಜೊತೆಯಾಗಿ ಆಹಾರವನ್ನರಸುತ್ತಿರುತ್ತವೆ. ಅಷ್ಟರಲ್ಲಿ ತಾಯಿ ಆನೆಯ ಜೊತೆ ತುಂಟಾಟವಾಡುತ್ತಿದ್ದಂತಹ ಮರಿಯಾನೆ ಅಲ್ಲೇ ಇದ್ದ ಕೆಸರಲ್ಲಿ ಬೀಳುತ್ತದೆ, ಪಾಪ ಆ ಪುಟಾಣಿ ಆನೆಗೆ ಏನು ಮಾಡಿದರು ಕೆಸರಿನಿಂದ ಮೇಲೇಳಲು ಸಾಧ್ಯವಾಗಲಿಲ್ಲ. ಆ ಸಂದರ್ಭದಲ್ಲಿ ತಾಯಿ ಆನೆ ಮತ್ತು ಇನ್ನೂ ಒಂದೆರಡು ಆನೆಗಳು ಪುಟಾಣಿ ಆನೆಯನ್ನು ಕೆಸರಿನಿಂದ ಏಳಿಸಲು ಸಹಾಯ ಮಾಡುತ್ತವೆ. ಆದರೆ ಏನೂ ಮಾಡಿದ್ರೂ ಮರಿಯಾನೆಗೆ ಕೆಸರಿನಿಂದ ಏಳಲು ಸಾಧ್ಯವಾಗಲ್ಲ. ಮತ್ತು ಮರಿಯಾನೆ ಜೋರಾಗಿ ಅಳಲು ಪ್ರಾರಂಭಿಸುತ್ತದೆ. ಈ ಅಳುವ ಸದ್ದನ್ನು ಕೇಳಿದ ತಕ್ಷಣ ಅಲ್ಲಿದ್ದ ಎಲ್ಲಾ ಆನೆಗಳು ಜೊತೆಯಾಗಿ ಸೇರಿ, ಮರಿಯಾನೆಯನ್ನು ರಕ್ಷಿಸಿ ಕೆಸರಿನಿಂದ ಮೇಲಕ್ಕೆತ್ತಿ ತರುವ ಹೃದಯಸ್ಪರ್ಶಿ ದೃಶ್ಯವನ್ನು ಕಾಣಬಹುದು.
ಇದನ್ನೂ ಓದಿ: ತಮ್ಮ ಪ್ರತಿಬಿಂಬ ಕಂಡ ಕೋಳಿ ಹಾಗೂ ಶ್ವಾನದ ಪ್ರತಿಕ್ರಿಯೆ ಹೇಗಿತ್ತು ನೋಡಿ?
ಎರಡು ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ ಎಂಟು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದೆ ಹಾಗೂ ಹಲವಾರು ಕಮೆಂಟ್ಸ್ಗಳೂ ಹರಿದುಬಂದಿವೆ. ಒಬ್ಬ ಬಳಕೆದಾರರು ʼಆನೆಗಳ ಬಳಗದ ಒಗ್ಗಟ್ಟಿನ ಬಲ ನಿಜಕ್ಕೂ ತುಂಬಾ ಶಕ್ತಿಯುತವಾಗಿದೆʼ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼಈ ಹೃದಯಸ್ಪರ್ಶಿ ದೃಶ್ಯವನ್ನು ನೋಡಲು ಎರಡು ಕಣ್ಣುಗಳು ಸಾಲದುʼ ಎಂದು ಕಮೆಂಟ್ ಮಾಡಿದ್ದಾರೆ. ಇನ್ನೂ ಅನೇಕರು ಈ ಒಂದು ಭಾವನಾತ್ಮಕ ವಿಡಿಯೋಗೆ ತಮ್ಮ ಮೆಚ್ಚುಗೆಯನ್ನು ಸೂಚಿಸಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:03 am, Mon, 29 January 24