Viral Video: ನ್ಯೂಯಾರ್ಕ್ ನಗರಕ್ಕೆ ಮುತ್ತಿಗೆ ಹಾಕಿದ ಜೇನು ಸಮೂಹ

| Updated By: ಅಕ್ಷಯ್​ ಪಲ್ಲಮಜಲು​​

Updated on: Jun 14, 2023 | 4:54 PM

ನ್ಯೂಯಾರ್ಕ್​ನ ಮ್ಯಾನ್ ಹ್ಯಾಟನ್ ನಗರದಲ್ಲಿ ಕೆಲವು ದಿನಗಳ ಹಿಂದೆ ಜೇನುನೊಣಗಳ ಹಾರಾಟವು ಕಾಣಿಸಿಕೊಂಡಿದ್ದು, ಜೇನುನೊಣಗಳು ನಗರದ ಕಟ್ಟಡವೊಂದರಲ್ಲಿ ಗೂಡು ಕೂಡಾ ಕಟ್ಟಿತ್ತು. ಅಲ್ಲಿನ ನಾಗರಿಕರು ಹಾಗೂ ಜೇನುನೊಣಗಳ ಸುರಕ್ಷತೆಯ ದೃಷ್ಟಿಯಿಂದ ಜೇನುಸಾಕಣೆದಾರರನ್ನು ಕರೆಸಿ ಗೂಡನ್ನು ಸುರಕ್ಷಿತವಾಗಿ ತೆರವುಗೊಳಿಸಲಾಯಿತು. ಈ ಘಟನೆಯ ಕುರಿತ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Viral Video: ನ್ಯೂಯಾರ್ಕ್ ನಗರಕ್ಕೆ ಮುತ್ತಿಗೆ ಹಾಕಿದ ಜೇನು ಸಮೂಹ
ವೈರಲ್​ ವೀಡಿಯೊ
Follow us on

ಎಲ್ಲಿಯಾದರು ಒಂದೆರಡು ಜೇನುನೊಣಗಳನ್ನು ಕಂಡರೆ ಜನರು ಭಯಪಟ್ಟು ಓಡಿ ಹೋಗುತ್ತಾರೆ. ಏಕೆಂದರೆ ಜೇನುನೊಣಗಳ ದಾಳಿಗೆ ತುತ್ತಾದರೆ ಅದರಿಂದ ಚೇತರಿಸಿಕೊಳ್ಳುವುದು ಕಷ್ಟಕರವಾಗಿರುತ್ತದೆ. ಆದರೆ ಜೇನುನೊಣಗಳು ಸುಖಾಸುಮ್ಮನೆ ಮನುಷ್ಯರ ಮೇಲೆ ದಾಳಿ ಮಾಡುವುದಿಲ್ಲ. ತಮ್ಮ ಗೂಡಿಗೆ ಮನುಷ್ಯರು ಅಥವಾ ಬೇರೆ ಯಾವುದಾದರೂ ಪ್ರಾಣಿ ಹಾನಿ ಮಾಡಿದರೆ, ಜೇನಿನ ಸಮೂಹವೇ ಗೂಡನ್ನು ಹಾನಿ ಮಾಡಿದವರ ಮೇಲೆ ದಾಳಿ ಮಾಡುತ್ತವೆ. ಕೆಲವೊಂದು ಬಾರಿ ಹೊಸ ಗೂಡನ್ನು ಕಟ್ಟುವ ಸಲುವಾಗಿ ಜೇನುನೊಣಗಳ ಗುಂಪು ಹೊಸ ಸ್ಥಳದ ಹುಡುಕಾಟ ನಡೆಸುತ್ತಾ ಹಾರಾಡುತ್ತಿರುತ್ತವೆ. ಆ ಸಂದರ್ಭದಲ್ಲಿ ಜನರು ಓಡಾಡುತ್ತಿದ್ದರೂ, ಆ ಜೇನುನೊಣಗಳು ಯಾವುದೇ ರೀತಿಯ ದಾಳಿಯನ್ನು ಮಾಡುವುದಿಲ್ಲ. ಇದೇ ರೀತಿಯ ಘಟನೆಯೊಂದು ನ್ಯೂಯಾರ್ಕ್ನ ಮ್ಯಾನ್ ಹ್ಯಾಟನ್ ನಗರದಲ್ಲಿ ನಡೆದಿದೆ. ನಗರದ ತುಂಬೆಲ್ಲಾ ಜೇನುನೊಣಗಳು ಹಾರಾಡುತ್ತಿದ್ದವು. ಇದೇನಿದು ವಿಚಿತ್ರ ಎಂದು ಅಲ್ಲಿನ ನಾಗರಿಕರೆಲ್ಲರೂ ದಿಗ್ಬ್ರಮೆಗೊಂಡು ನೋಡುತ್ತಿದ್ದರು. ಮಾತ್ರವಲ್ಲದೆ ಈ ಜೇನುನೊಣಗಳು ಟೈಮ್ ಸ್ಕ್ವೇರ್ ಕಟ್ಟದ ಗಾಜಿನ ಗೋಡೆಯ ಮೇಲೆ ಗೂಡನ್ನು ಕೂಡಾ ಕಟ್ಟಿತ್ತು. ಜನನಿಬಿಡ ಪ್ರದೇಶವಾಗಿರುವುದರಿಂದ ನಾಗರಿಕರ ಓಡಾಟಕ್ಕೆ ತೊಂದರೆಯಾಗಬಾರದು, ಹಾಗೇನೇ ಜೇನುನೊಣಗಳಿಗೂ ಯಾವುದೇ ರೀತಿಯ ಹಾನಿಯಾಗಬಾರದೆಂಬ ಕಾರಣಕ್ಕೆ ಮೈಕಲ್ ಬ್ಲಾಂಕ್ ಎಂಬ ಹೆಸರಿನ ಮಹಿಳೆಯೊಬ್ಬರು ಸಹಾಯವಾಣಿಗೆ ಕರೆ ಮಾಡಿ ಜೇನುಸಾಕಣೆದಾರರನ್ನು ಕರೆಸಿದರು. ಬಳಿಕ ಸುರಕ್ಷಿತವಾಗಿ ಕಟ್ಟಡದ ಮೇಲೆ ಗೂಡುಕಟ್ಟಿಕೊಂಡಿದ ಜೇನುನೊಣಗಳನ್ನು ಮರದ ಪೆಟ್ಟಿಗೆಯೊಳಗೆ ಹಾಕಿ ಸ್ಥಳಾಂತರಿಸಲಾಯಿತು.

ಈ ಘಟನೆಯ ಕುರಿತ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಡಿಜಿಟಲ್ ಕ್ರಿಯೆಟರ್ ಹಾಗೂ ಪ್ರಾಣಿಶಾಸ್ತ್ರಜ್ಞೆ ಮೈಕಲ್ ಬ್ಲಾಂಕ್ (@mickmicknyc) ವೀಡಿಯೋವನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವೀಡಿಯೋದಲ್ಲಿ ಕಣ್ಣು ಹಾಯಿಸಿದಲ್ಲೆಲ್ಲಾ, ಲೆಕ್ಕವಿಲ್ಲದಷ್ಟು ಜೇನುನೊಣಗಳು ಬೀದಿಯಲ್ಲಿ ಹಾರಾಡುತ್ತಿರುತ್ತವೆ. ಇತ್ತ ಕಡೆ ಕಟ್ಟಡವೊಂದರ ಗಾಜಿನ ಗೊಡೆಯ ಮೇಲೆ ಜೇನುನೊಣಗಳು ಗೂಡು ಕಟ್ಟಿದ್ದವು. ಜೇನುನೊಣಗಳು ಹಾಗೂ ನಾಗರಿಕರ ಸುರಕ್ಷತೆಯ ದೃಷ್ಟಿಯಿಂದ ಜೇನುಸಾಕಣೆದಾರರನ್ನು ಸ್ಥಳಕ್ಕೆ ಕರೆಸಿ ಜೇನುಗೂಡನ್ನು ಸುರಕ್ಷಿತವಾಗಿ ತೆರವುಗೊಳಿಸವುದನ್ನು ಕಾಣಬಹುದು.

ಇದನ್ನೂ ಓದಿ: Viral Video: ಬಿಸಿಲ ಝಳಕ್ಕೆ ಬಳಲಿ ದೇಹ ತಂಪಾಗಿಸಲು ಸಮುದ್ರದಲ್ಲಿ ಈಜಾಡಲು ಬಂದ ಕರಡಿ

ಈ ಜೇನುನೊಣಗಳು ಹೊಸ ಗೂಡನ್ನು ನಿರ್ಮಿಸಲು ಸ್ಥಳವನ್ನು ಹುಡುಕುವ ಸಲುವಾಗಿ ಹೀಗೆ ಹಾರಡುತ್ತಿರುತ್ತವೆ. ಇದಕ್ಕೆ ಭಯಪಡಬೇಕಾಗಿಲ್ಲ. ನಿಮ್ಮ ನಗರಗಳಲ್ಲಿಯೂ ಇದೇ ರೀತಿ ಕಂಡುಬಂದರೆ ಸಹಾಯವಾಣಿಗೆ ಕರೆ ಮಾಡಿ ಜೇನು ಸಾಕಣೆದಾರರನ್ನು ಕರೆಸಿ ಜೇನುನೊಣಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಬಹುದು. ಎಂದು ಮೈಕಲ್ ಬ್ಲಾಂಕ್ ಸಲಹೆಯನ್ನು ಕೂಡಾ ನೀಡಿದ್ದಾರೆ.

ವೀಡಿಯೋ 528 ಸಾವಿರ ವೀಕ್ಷಣೆಗಳನ್ನು ಹಾಗೂ 22.9 ಸಾವಿರ ಲೈಕ್ಸ್​​​ಗಳನ್ನು ಪಡೆದುಕೊಂಡಿದೆ. ಹಲವಾರು ಕಮೆಂಟ್ಸ್​​ಗಳೂ ಕೂಡಾ ಹರಿದುಬಂದಿವೆ. ಒಬ್ಬ ಬಳಕೆದಾರರು ‘ನ್ಯೂಯಾರ್ಕ್ ನಗರದಲ್ಲಿ ಇದೇನು ನಡೆಯುತ್ತಿದೆ’ ಎಂದು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು ‘ಜೇನುನೊಣಗಳನ್ನು ಸಂರಕ್ಷಿಸುವ ಕೆಲಸ ಅದ್ಭುತವಾಗಿತ್ತು’ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ‘ನಾವು ಜೇನುಗಳನ್ನು ಉಳಿಸಬೇಕಾಗಿದೆ. ಬಹುಶಃ ಅವುಗಳು ಯಾವುದೋ ಬೆಂಕಿ ಅವಘಡದಿಂದ ತಮ್ಮ ಗೂಡುಗಳನ್ನು ಕಳೆದುಕೊಂಡು ನಗರದಲ್ಲಿ ಹಾರಾಡಿರಬಹುದು. ನಾವು ಜೇನನ್ನು ರಕ್ಷಿಸಬೇಕಿದೆ. ಪ್ರಕೃತಿ ಇಲ್ಲದೆ ನಾವು ಇರಲು ಸಾಧ್ಯವಿಲ್ಲ’ ಎಂದು ಕಮೆಂಟ್ ಮಾಡಿದ್ದಾರೆ. ಇನ್ನು ಅನೇಕರು ಮೈಕಲ್ ಬ್ಲಾಂಕ್ ಅವರ ಈ ಉತ್ತಮ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ