ಕೆಲವೇ ಕೆಲವು ಸೆಕೆಂಡ್​ ಮಾಸ್ಕ್ ಹಾಕದಿದ್ದಕ್ಕೆ ಬಿತ್ತು ₹ 2 ಲಕ್ಷ ದಂಡ; ಆಮೇಲೇನಾಯ್ತು?

| Updated By: shivaprasad.hs

Updated on: Feb 01, 2022 | 11:00 AM

ಬ್ರಿಟನ್​ನಲ್ಲಿ ಈ ಮೊದಲು ಕೊರೊನಾ ನಿಯಮಾವಳಿಗಳು ಕಠಿಣವಾಗಿತ್ತು. ಈ ಸಂದರ್ಭದಲ್ಲಿ ಕೆಲವೇ ಕೆಲವು ಸೆಕೆಂಡ್​ಗಳ ಕಾಲ ಮಾಸ್ಕ್ ಹಾಕದ ವ್ಯಕ್ತಿಗೆ ಭರ್ಜರಿ ದಂಡ ಬಿದ್ದಿದೆ. ಆಮೇಲೇನಾಯ್ತು? ಇಲ್ಲಿದೆ ವಿವರ.

ಕೆಲವೇ ಕೆಲವು ಸೆಕೆಂಡ್​ ಮಾಸ್ಕ್ ಹಾಕದಿದ್ದಕ್ಕೆ ಬಿತ್ತು ₹ 2 ಲಕ್ಷ ದಂಡ; ಆಮೇಲೇನಾಯ್ತು?
ಕೆಲವೇ ಕೆಲವು ಸೆಕೆಂಡ್ ಮಾಸ್ಕ್ ಧರಿಸದೇ ಇದ್ದಿದ್ದಕ್ಕೆ ವ್ಯಕ್ತಿಯೋರ್ವರಿಗೆ ದೊಡ್ಡ ಮೊತ್ತದ ದಂಡ ಹಾಕಲಾಗಿದೆ.
Follow us on

ಕೊರೊನಾ ವಿರುದ್ಧದ ಹೋರಾಟದಲ್ಲಿ ಮಾಸ್ಕ್ (Mask) ಹಾಗೂ ದೈಹಿಕ ಅಂತರ ಕಾಪಾಡುವುದು ಬಹಳ ಪ್ರಮುಖವಾಗಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಕೊವಿಡ್ ಕಾಣಿಸಿಕೊಂಡ ಆರಂಭದಲ್ಲೇ ಹೇಳಿತ್ತು. ಇದರ ಅನ್ವಯ ಎಲ್ಲಾ ದೇಶಗಳಲ್ಲಿ ಮಾಸ್ಕ್ ಹಾಗೂ ಅಂತರ ಪಾಲಿಸುವುದು ಕಡ್ಡಾಯವಾಯಿತು. ಆದರೆ ಅಮೇರಿಕಾ, ಬ್ರಿಟನ್ (UK) ಮೊದಲಾದ ಕಡೆ ಮಾಸ್ಕ್ ಧರಿಸುವುದಿಲ್ಲ ಎಂದು ಪ್ರತಿಭಟನೆಗಳೂ ನಡೆದಿದ್ದವು. ಜತೆಗೆ ಜನರು ಬೇಜವಾಬ್ದಾರಿಯುತವಾಗಿ ಮಾಸ್ಕ್ ಧರಿಸದೇ ಓಡಾಡುವುದೂ ಇತ್ತು. ಈ ಎಲ್ಲಾ ಕಾರಣದಿಂದ ಮಾಸ್ಕ್ ಧರಿಸದವರನ್ನು ಹಿಡಿದು ದಂಡ ವಿಧಿಸುವುದು, ಎಚ್ಚರಿಕೆ ನೀಡುವುದು ಮೊದಲಾದ ಕ್ರಮಗಳಿಗೆ ಭಾರತ ಸೇರಿದಂತೆ ಹಲವು ದೇಶಗಳು ಮುಂದಾಗಿದ್ದವು. ಇದೀಗ ಬ್ರಿಟನ್​ನಲ್ಲಿ ಮಾಸ್ಕ್ ಹಾಕದ ಯುವಕನೋರ್ವನಿಗೆ ಭಾರೀ ಮೊತ್ತದ ದಂಡ ವಿಧಿಸಿರುವ ಪ್ರಕರಣ ಬೆಳಕಿಗೆ ಬಂದಿದೆ. ಅದೂ ಕೂಡ ಕೆಲವೇ ಕೆಲವು ಸೆಕೆಂಡ್​ಗಳ ಕಾಲ ಮಾಸ್ಕ್ ಧರಿಸದೇ ಇದ್ದಿದ್ದಕ್ಕೆ! ಈ ಘಟನೆ ಪ್ರಸ್ತುತ ಹೆಚ್ಚು ಚರ್ಚೆಯಾಗುತ್ತಿದ್ದು, ನ್ಯಾಯಾಲಯದ (Court) ಮೆಟ್ಟಿಲನ್ನೂ ಏರಿದೆ.

ಏನಿದು ಘಟನೆ?
ಬ್ರಿಟನ್​ ಮೂಲದ ಕ್ರಿಸ್ಟೊಫರ್ ಒ‘ಟೂಲ್ ಎನ್ನುವ ವ್ಯಕ್ತಿ ತಮಗಾದ ಅನುಭವ ಹೇಳಿಕೊಂಡಿದ್ದಾರೆ. ಅವರು ಹೇಳಿರುವಂತೆ ಅಂಗಡಿಯ ಒಳಗೆ ಕೇವಲ 16 ಸೆಕೆಂಡ್​ಗಳ ಕಾಲ ಮಾಸ್ಕ್ ತೆಗೆದಿದ್ದಕ್ಕೆ ಬರೋಬ್ಬರಿ 2,000 ಯೂರೋ ಅರ್ಥಾತ್ ₹ 2 ಲಕ್ಷ ರೂ ದಂಡ ವಿಧಿಸಲಾಗಿದೆ. ಪ್ರೆಸ್ಕೊಟ್​ನ ಅಂಗಡಿಯೊಂದರಲ್ಲಿ ಕ್ರಿಸ್ಟೊಫರ್ ಶಾಪಿಂಗ್ ಮಾಡುತ್ತಿದ್ದರು. ಆಗ ಅವರಿಗೆ ಮುಖದಲ್ಲಿ ಏನೋ ಅಹಿತಕರ ಅನ್ನಿಸಿದೆ. ಆದ್ದರಿಂದ ಕೆಲ ಸೆಕೆಂಡ್ ಮಾಸ್ಕ್ ಬದಿಗೆ ಸರಿಸಿದ್ದಾರೆ.

ಆಗ ಅಂಗಡಿಯ ಒಳಗೇ ಇದ್ದ ಪೊಲೀಸ್ ಕ್ರಿಸ್ಟೋಫರ್​ ಮಾಸ್ಕ್ ಧರಿಸದ್ದನ್ನು ನೋಡಿದ್ದಾರೆ. ಈ ಘಟನೆ ನಡೆದಿದ್ದು 2021ರ ಫೆಬ್ರವರಿಯಲ್ಲಿ. ಆ ಸಂದರ್ಭದಲ್ಲಿ ಬ್ರಿಟನ್​ನಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯವಾಗಿತ್ತು. ಘಟನೆಯ ಕುರಿತು ಲಿವರ್​ಪೂರ್ ಎಕೊ ಜತೆ ಮಾತನಾಡಿರುವ ಕ್ರಿಸ್ಟೊಫರ್, ತಮಗೆ ಮಾಸ್ಕ್ ಧರಿಸಬಾರದು ಎನ್ನುವ ಯಾವುದೇ ಉದ್ದೇಶ ಇರಲಿಲ್ಲ. ಆದರೆ ಮುಖದಲ್ಲಿ ಅಹಿತಕರ ಅನುಭವ ಆಗಿದ್ದರಿಂದ ತುಸು ತೆಗೆದಿದ್ದಷ್ಟೇ ಎಂದು ನುಡಿದಿದ್ದಾರೆ.

ದಂಡ ವಿಧಿಸಿದ್ದು ಹೇಗೆ? ಆಮೇಲೇನಾಯ್ತು?
ಕೆಲ ಕಾಲದ ನಂತರ ಕ್ರಿಸ್ಟೊಫರ್​ಗೆ ಎಸಿಆರ್​ಒ ಕ್ರಿಮಿನಲ್ ರೆಕಾರ್ಡ್ಸ್ ಆಫೀಸ್​​ನಿಂದ ಮಾಸ್ಕ್ ಧರಿಸದ್ದಕ್ಕೆ 100 ಯೂರೋ ದಂಡ ಕಟ್ಟಬೇಕು ಎಂಬ ಸೂಚನೆ ಬಂದಿದೆ. ಇದಕ್ಕೆ ಫೈನ್ ಕಟ್ಟಲು ನಿರಾಕರಿಸಿದ ಕ್ರಿಸ್ಟೊಫರ್ ಅಧಿಕಾರಿಗಳಿಗೆ ಮೈಲ್ ಮಾಡಿದ್ದರು. ‘ನಾನು ಕೇವಲ 16 ಸೆಕೆಂಡ್ ಮಾಸ್ಕ್ ತೆಗೆದಿದ್ದಷ್ಟೇ. ಅದರಲ್ಲೂ ಮಾಸ್ಕ್ ಧರಿಸಬಾರದು ಎನ್ನುವ ಯಾವ ಉದ್ದೇಶವೂ ನನಗಿರಲಿಲ್ಲ. ದಂಡ ಕಟ್ಟುವುದಿಲ್ಲ’ ಎಂದು ಉತ್ತರಿಸಿದ್ದರು.

ಆದರೆ ಕ್ರಿಸ್ಟೊಫರ್ ಹೀಗೆ ಉತ್ತರಿಸಿದ್ದ ನಂತರದಲ್ಲಿ 100 ಯೂರೋ ದಂಡದ ಬದಲು ಬರೋಬ್ಬರಿ 2,000 ಯೂರೋ (ಸುಮಾರು ₹ 2 ಲಕ್ಷ ರೂ) ದಂಡ ವಿಧಿಸಿ ಡಿಸೆಂಬರ್​ನಲ್ಲಿ ಆದೇಶ ಹೊರಡಿಸಲಾಯಿತು. ಈ ಕುರಿತು ಪ್ರತಿಕ್ರಿಯಿಸಿದ್ದ ಅವರು ಅದು ಬಹಳ ಹೆಚ್ಚಾಯಿತು. ಅಷ್ಟೆಲ್ಲಾ ಕೊಡಲು ತಮ್ಮಲ್ಲಿ ಹಣವಿಲ್ಲ ಎಂದಿದ್ದರು.

ಇನ್ನೂ ಮುಗಿದಿಲ್ಲ ಪ್ರಕರಣ!
ಪ್ರಕರಣ ಇಷ್ಟಕ್ಕೇ ಮುಗಿಯಲಿಲ್ಲ. ಕ್ರಿಸ್ಟೊಫರ್ ಅಧಿಕಾರಿಗಳಿಗೆ ಪ್ರತ್ಯುತ್ತರ ಬರೆದಾಗ ಹೊಸ ಮಾಹಿತಿ ಲಭ್ಯವಾಯಿತು. ಘಟನೆಯಲ್ಲಿ ಭಾಗಿಯಾಗಿದ್ದ ಕ್ರಿಸ್ಟೊಫರ್​ಗೇ ತಿಳಿಯದಂತೆ ಪ್ರಕರಣ ಕೋರ್ಟ್ ಮೆಟ್ಟಿಲೇರಿತ್ತು. ಇದರ ಬಗ್ಗೆ ಈಗ ತಮಗೆ ಮಾಹಿತಿ ತಿಳಿದಿದೆ ಎಂದು ಕ್ರಿಸ್ಟೊಫರ್ ಹೇಳಿದ್ದಾರೆ. ನ್ಯಾಯಾಲಯದಲ್ಲಿ ಇನ್ನೂ ಪ್ರಕರಣ ನಡೆಯುತ್ತಿದ್ದು, ತೀರ್ಪು ಇನ್ನಷ್ಟೇ ಬರಬೇಕಿದೆ.

ಇದನ್ನೂ ಓದಿ:

ಫ್ಯಾಷನ್​ ಶೋ ವೇಳೆ ಪ್ರೇಕ್ಷಕನಿಗೆ ಕೋಟ್​ನಿಂದ ಹೊಡೆದ ರೂಪದರ್ಶಿ; ವಿಡಿಯೋ ವೈರಲ್​

Viral Video: ಗೋಲ್​ಗಪ್ಪ ಐಸ್ ಕ್ರೀಮ್ ತಿಂದಿದ್ದೀರಾ? ವೈರಲ್ ಆದ ಹೊಸ ರೆಸಿಪಿಯ ವಿಡಿಯೋ ನೋಡಿ