Maharashtra : ಧೋ ಎಂದು ಸುರಿಯುವ ಮಳೆಯಲ್ಲೂ, ರಣಬಿಸಿಲಿನಲ್ಲೂ, ಕಡುಚಳಿಯಲ್ಲೂ, ಬಿರುಗಾಳಿಯಲ್ಲೂ ಡೆಲಿವರಿ ಏಜೆಂಟರುಗಳು ಶಕ್ತಿಮಾನ್ನಂತೆ, ಸೂಪರ್ಮ್ಯಾನ್ನಂತೆ ಗೋಚರಿಸುತ್ತಾರೆ. ಸಮಯಕ್ಕೆ ಸರಿಯಾಗಿ ಬಿಸಿಬಿಸಿ ತಿಂಡಿ ತಿನಿಸುಗಳನ್ನು ಮನೆಮನೆಗೆ ತಲುಪಿಸುವ ಇವರೂ ಮನುಷ್ಯರೇ. ಇವರಿಗೂ ಬಾಯಾರಿಕೆ, ಹಸಿವೆ ಎನ್ನುವುದಿದೆ ಮತ್ತು ತುಸು ಹೊತ್ತಾದರೂ ವಿಶ್ರಮಿಸಬೇಕು ಎನ್ನಿಸುತ್ತಿರುತ್ತದೆ. ಆದರೆ ಇವರ ಆಸರ ಬೇಸರವನ್ನು ಕೇಳುವವರು ಮತ್ತು ವಿಶ್ರಾಂತಿಗಾಗಿ ಅನುಕೂಲ ಕಲ್ಪಿಸುವವರು ಯಾರಿದ್ದಾರೆ? ಇದ್ದಾರೆ. ಇವರಿಗಾಗಿಯೇ ರಿಲ್ಯಾಕ್ಸ್ ಸ್ಟೇಷನ್ (Relax Station) ಶುರುಮಾಡಿದ ಸಿದ್ಧೇಶ ಲೋಕರೆ (Siddhesh Lokare) ಎಂಬ ಸೋಶಿಯಲ್ ಮೀಡಿಯಾ ಇನ್ಫ್ಲ್ಯೂಯೆನ್ಸರ್ ಇದೀಗ ಸಾಮಾಜಿಕ ಜಾಲತಾಣಿಗರ ಮನಸೂರೆಗೊಳ್ಳುತ್ತಿದ್ದಾರೆ.
”ಮಳೆಯಲ್ಲಿ ನೆನೆದುಕೊಂಡು ಕೆಲಸ ಮಾಡುತ್ತಿದ್ದ ಡೆಲಿವರಿ ಏಜೆಂಟರುಗಳನ್ನು ನೋಡಿ ಬೇಸರವಾಗುತ್ತಿತ್ತು. ಹಾಗಾಗಿ ಅವರು ದಣಿವಾರಿಸಿಕೊಳ್ಳಲು ಏನಾದರೂ ಮಾಡಬೇಕೆಂದಾಗ ಈ ಆಲೋಚನೆ ಹೊಳೆಯಿತು. ಸಮೋಸಾ, ಭಜ್ಜಿ ಮುಂತಾದ ತಿನಿಸುಗಳನ್ನು ಮತ್ತು ಚಹಾ, ಕಾಫಿ, ನೀರನ್ನು ಅವರಿಗೆ ಉಚಿತವಾಗಿ ಕೊಡುವುದೆಂದು ನಿರ್ಧರಿಸಿದೆ” ಎನ್ನುತ್ತಾರೆ ಮುಂಬೈನ ಸಿದ್ಧೇಶ.
ಇದನ್ನೂ ಓದಿ : Viral: ಚಂದ್ರನೊಡೆಯನಾಗಬೇಕೆ? ಸದ್ಯಕ್ಕೆ ಓಡುತ್ತಿರುವ ಬೆಲೆ ಎಕರೆಗೆ ಬರೀ ಇಷ್ಟೇ!
ಈ ಪೋಸ್ಟ್ ಅನ್ನು ಎರಡು ದಿನಗಳ ಹಿಂದೆ ಇನ್ಸ್ಟಾನಲ್ಲಿ ಹಂಚಿಕೊಳ್ಳಲಾಗಿದೆ. 5 ಮಿಲಿಯನ್ನಷ್ಟು ಮಂದಿ ಇದನ್ನು ನೋಡಿದ್ದಾರೆ. 6 ಲಕ್ಷಕ್ಕೂ ಹೆಚ್ಚು ಜನರು ಇದನ್ನು ಲೈಕ್ ಮಾಡಿದ್ದಾರೆ. ಸಾವಿರಾರು ಜನರು ಇವರ ಈ ಕಾರ್ಯವನ್ನು ಶ್ಲಾಘಿಸುತ್ತಿದ್ದಾರೆ. ಖಂಡಿತ ಡೆಲಿವರಿ ಏಜೆಂಟರನ್ನು ನಾವು ಗೌರವಿಸಬೇಕು ಮತ್ತು ಅವರ ಅನುವು ಆಪತ್ತುಗಳಿಗೆ ಹೆಗಲು ಕೊಡಬೇಕು. ಕೊರೊನಾ ಸಮಯದಲ್ಲಿ ಇವರ ಸಹಾಯವನ್ನು ಮರೆಯುವಂತಿಲ್ಲ ಎಂದು ಅನೇಕರು ಹೇಳುತ್ತಿದ್ದಾರೆ.
ಇದನ್ನೂ ಓದಿ : Viral Video: ನನ್ನ ಈ ದೇಶವನ್ನು ಮತ್ತೆ ಕಟ್ಟುತ್ತೇನೆ; ನನಸಾದೀತೇ ಅಫ್ಘನ್ ಬಾಲೆಯ ಕನಸು?
ಡೆಲಿವರಿ ಏಜೆಂಟರುಗಳ ಬಗ್ಗೆ ನಮ್ಮ ಸರ್ಕಾರಗಳಂತೂ ಯೋಚಿಸುವುದಿಲ್ಲ, ಈ ಯುವಕನಾದರೂ ಕಾಳಜಿ ವಹಿಸುತ್ತಿದ್ದಾನಲ್ಲ, ಸರ್ಕಾರಕ್ಕಿಂತಲೂ ಈ ವ್ಯವಸ್ಥೆಯನ್ನು ಈತ ಚೆನ್ನಾಗಿ ಮಾಡುತ್ತಾನೆ ಎನ್ನುವ ಭರವಸೆ ಇದೆ ಅನೇಕರು ಹೇಳಿದ್ದಾರೆ.
ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 3:18 pm, Fri, 14 July 23