Viral Video: ನನ್ನ ಈ ದೇಶವನ್ನು ಮತ್ತೆ ಕಟ್ಟುತ್ತೇನೆ; ನನಸಾದೀತೇ ಅಫ್ಘನ್ ಬಾಲೆಯ ಕನಸು?
Girl's Education: ಹೆಣ್ಣುಮಕ್ಕಳ ಶಿಕ್ಷಣ ಮತ್ತು ಗಂಡಸಿನ ಸರ್ವಾಧಿಕಾರಿ ಧೋರಣೆ ಕುರಿತು ಅಫ್ಘಾನಿಸ್ತಾನದ ಈ ಹೆಣ್ಣುಮಗು ತನ್ನ ಅಜ್ಜನೊಂದಿಗೆ ನಡೆಸಿದ ಅರ್ಥಪೂರ್ಣ ಸಂಭಾಷಣೆಯ ವಿಡಿಯೋ ಇಲ್ಲಿದೆ. ಈ ಕಿಡಿ ಕಿರಣವಾಗಿ ಹೊಮ್ಮಲಿ!
Afghanistan : ಶಿಕ್ಷಣ ಪ್ರತಿಯೊಬ್ಬರ ಹಕ್ಕು. ಆದರೆ ಪಿತೃಪ್ರಧಾನ ಮನಸ್ಥಿತಿ (Patriarchy) ಮತ್ತು ಸರ್ವಾಧಿಕಾರಿ ಧೋರಣೆಯಿಂದಾಗಿ ನಮ್ಮ ದೇಶವೂ ಒಳಗೊಂಡಂತೆ ಈಗಲೂ ಅನೇಕ ದೇಶಗಳಲ್ಲಿ ಪುಟ್ಟ ಹುಡುಗಿಯರು, ಹೆಣ್ಣುಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಅದರಲ್ಲೂ ಅಫ್ಘಾನಿಸ್ತಾನದಂಥ ದೇಶಗಳಲ್ಲಿ ‘ಗಂಡಸುತನ’ದ ಪ್ರಾಬಲ್ಯದಿಂದಾಗಿ ಹೆಣ್ಣುಜೀವಗಳು ದಿನವೂ ಸತ್ತು ಸತ್ತು ಹುಟ್ಟುತ್ತಿವೆ. ಇದೀಗ ವೈರಲ್ ಆಗಿರುವ ಈ ವಿಡಿಯೋ ನೋಡಿ. ಈ ಹೆಣ್ಣುಮಗುವಿನ ಸುಂದರವಾದ ಕಣ್ಣಲ್ಲಿ, ಧ್ವನಿಯಲ್ಲಿ ಅಲ್ಲಿಯ ಎಲ್ಲಾ ಹೆಣ್ಣುಮಕ್ಕಳ ನೋವು, ಸಂಕಟವೂ ಅಡಗಿದೆ ಜೊತೆಗೆ ಕಿಚ್ಚೂ ಕಿಡಿಯೂ. ತಾನು ಯಾಕೆ ಶಾಲೆಗೆ ಹೋಗಬಾರದು? ಹುಡುಗರಷ್ಟೇ ಯಾಕೆ ಶಾಲೆಗೆ ಹೋಗಬೇಕು? ಎಂದು ತನ್ನೆದುರಿಗಿನ ಪುರುಷನಿಗೆ (ಬಹುಶಃ ಅಜ್ಜ) ಪ್ರಶ್ನಿಸುತ್ತಾ ಹೋಗುತ್ತದೆ ಈ ಬಾಲೆ. ಈ ಪ್ರಶ್ನೆಗಳೂ ಉತ್ತರಗಳೂ ಒಡಲನ್ನು ಹಿಂಡುತ್ತವೆ.
These girl’s eyes reflect all the beauty and pain of Afghanistan. pic.twitter.com/EMGIFAqHiS
ಇದನ್ನೂ ಓದಿ— Velina Tchakarova (@vtchakarova) July 13, 2023
ಬಾಲಕಿ : ಹುಡುಗರಷ್ಟೇ ಶಾಲೆಗೆ ಹೋಗಬೇಕಾ? ನಾ ಯಾಕೆ ಹೋಗಬಾರದು? ಅದಕ್ಕೇ ನನಗೆ ಬೇಜಾರಾಗಿದೆ.
ಪುರುಷ : ಇಲ್ಲ ಹುಡುಗಿಯರು ಶಾಲೆಗೆ ಹೋಗುವಂತಿಲ್ಲ.
ಬಾಲಕಿ : ಇಲ್ಲ ಶಾಲೆ ಇರುವುದು ಹುಡುಗಿಯರಿಗೂ, ಹುಡುಗರಿಗಷ್ಟೇ ಅಲ್ಲ.
ಪುರುಷ : ಇಲ್ಲ ಹುಡುಗರನ್ನಷ್ಟೇ ಶಾಲೆಯಲ್ಲಿ ಸೇರಿಸಿಕೊಳ್ಳುತ್ತಾರೆ.
ಬಾಲಕಿ : ಈ ಹುಡುಗರದು ಬರೀ ನಾಶ ಮಾಡುವುದು ಮತ್ತು ಕೆಡಿಸುವುದೇ ಕೆಲಸ.
ಪುರುಷ : ಯಾರು ಹೀಗೆಲ್ಲ ಮಾಡಿದವರು, ಹೇಗೆ ಹೇಳುತ್ತೀ ನೀ ಇದನ್ನು?
ಬಾಲಕಿ : ಕಾಬೂಲ್ನಿಂದ ಕಂದಾಹಾರದ ದಾರಿಯನ್ನೊಮ್ಮೆ ನೋಡು. ಗಂಡಸರು ಅಲ್ಲಿಯ ಸ್ಥಳಗಳನ್ನು ಹೇಗೆ ಹಾಳುಗೆಡವಿದ್ಧಾರೆಂದು. ಆದರೆ ಹೆಣ್ಣುಮಕ್ಕಳು ಇಂಥ ಕೃತ್ಯಕ್ಕೆ ಕೈಹಾಕುವುದಿಲ್ಲ ಗೊತ್ತಾ?
ಪುರುಷ : ಅದ್ಹೇಗೆ ಹೇಳುತ್ತಿ, ಹೆಣ್ಣುಮಕ್ಕಳು ಇಂಥದ್ದೆಲ್ಲವನ್ನೂ ಮಾಡಲಾರರು ಎಂದು?
ಬಾಲಕಿ : ಇನ್ನೇನು ಮತ್ತೆ, ಅವರು ಯಾವಾಗಲೂ ಮನೆಯಲ್ಲಿಯೇ ಇರುತ್ತಾರಲ್ಲ.
ಪುರುಷ : ಹೌದು ಹೆಣ್ಣುಮಕ್ಕಳು ಮನೆಯಲ್ಲಿಯೇ ಇರಬೇಕು.
ಬಾಲಕಿ : ಆಯ್ತು ಹೆಣ್ಣುಮಕ್ಕಳು ಮನೆಯಲ್ಲಿಯೇ ಇರಲಿ, ಹುಡುಗಿಯರಂತೂ ಶಾಲೆಗೆ ಹೋಗಲೇಬೇಕು. ಇಲ್ಲಾ ಹೆಣ್ಣುಮಕ್ಕಳೂ ಶಾಲೆಗೆ ಹೋಗಬೇಕು.
ಪುರುಷ : ನೀ ಶಾಲೆಗೆ ಹೋಗಿ ಏನು ಮಾಡುತ್ತೀ?
ಬಾಲಕಿ : ಓದಿ ದೊಡ್ಡವಳಾಗಿ ಡಾಕ್ಟರ್, ಎಂಜಿನಿಯರ್, ಟೀಚರ್ ಆಗ್ತೀನಿ.
ಪುರುಷ : ಇಲ್ಲ ಶಾಲೆ ನಿನಗಲ್ಲ, ಅದು ಹುಡುಗರಿಗೆ ಮಾತ್ರ.
ಬಾಲಕಿ : ಇಲ್ಲ ನಾವು ಈ ದೇಶವನ್ನು ಮತ್ತೆ ಕಟ್ಟಬೇಕು, ಗಂಡಸರು ದೇಶವನ್ನು ಕಟ್ಟುವುದಿಲ್ಲ!
ಪುರುಷ : ಇಲ್ಲ ಅದು ಸಾಧ್ಯವಾಗುವುದಿಲ್ಲ.
ಬಾಲಕಿ : ಆಯ್ತು ನೀನು ಮನೆಯಲ್ಲಿಯೇ ಇರು. ನಾನು ಮತ್ತೆ ಈ ದೇಶವನ್ನು ಕಟ್ಟುತ್ತೇನೆ!
ಇದನ್ನೂ ಓದಿ : Viral: ಅಮೆರಿಕದ ವಕೀಲೆಗೆ ಗಂಡು ಹುಡುಕಿ ಕೊಟ್ಟವರಿಗೆ ರೂ. 4 ಲಕ್ಷ ಬಹುಮಾನ
ವಿಲೆನಾ ಚಾಕೋರೊವಾ (Geopolitical Strategist) ಎಂಬುವವರು ಈ ವಿಡಿಯೋ ಟ್ವೀಟ್ ಮಾಡಿದ್ದಾರೆ. ಈ ವಿಡಿಯೋ 1 ಲಕ್ಷಕ್ಕೂ ಹೆಚ್ಚು ಜನರನ್ನು ತಲುಪಿದೆ. ಸಾವಿರಾರು ಜನರು ಈ ವಿಡಿಯೋ ಲೈಕ್ ಮಾಡಿದ್ದಾರೆ. 260ಕ್ಕೂ ಹೆಚ್ಚು ಜನರು ರೀಟ್ವೀಟ್ ಮಾಡಿದ್ದಾರೆ. ಇದು ಹೃದಯವನ್ನು ಹಿಂಡುವಂತಿದೆ ಎಂದಿದ್ದಾರೆ ಅನೇಕರು. ಆನ್ಲೈನ್ ಟೀಚರುಗಳು ಸ್ವಯಂಪ್ರೇರಣೆಯಿಂದ ಆನ್ಲೈನ್ ಮೂಲಕವಾದರೂ ಅಲ್ಲಿಯ ಹುಡುಗಿಯರಿಗೆ, ಹೆಣ್ಣುಮಕ್ಕಳಿಗೆ ಶಿಕ್ಷಣ ದೊರೆಯುವಂತೆ ಮಾಡಬಹುದಲ್ಲವೆ? ಎಂದಿದ್ದಾರೆ ಒಬ್ಬರು.
ಇದನ್ನೂ ಓದಿ : Viral Video: ಬೆಂಗಳೂರು ಅನ್ನೋ ತಾಯಿ ಯಾರನ್ನೂ ಬರೀಗೈಲೆ ಕಳಸೂದಿಲ್ಲ
ಇದು ಹಣೆಗೆ ಬಿಂದಿ ಹಚ್ಚಿಕೊಂಡಿದೆ ಎಂದರೆ ಇದು ಹಿಂದೂ ಹುಡುಗಿ ಇರಬೇಕು! ಎಂದು ಹಿಂದೂ ನೀತಿಪಾಲಕರು ತಮ್ಮ ಮೂಗನ್ನು ಇಲ್ಲಿಯೂ ತೂರಿಸಿದ್ಧಾರೆ! ‘ನಾನು ಈಕೆಯನ್ನು ನನ್ನ ಸ್ವಂತ ಮಗಳಂತೆ ನನ್ನ ಕುಟುಂಬಕ್ಕೆ ಸೇರಿಸಿಕೊಂಡುಬಿಡುತ್ತೇನೆ, ಈ ವಿಷಯವಾಗಿ ಯಾರಾದರೂ ಸಹಾಯ ಮಾಡಬಹುದೆ? ಎಂದು ಕೇಳಿದ್ದಾರೆ ಹೆಣ್ಣುಮಗಳೊಬ್ಬರು. ಕೆಲವರು ಈ ವಿಡಿಯೋ ಪೂರ್ವಯೋಜಿತ ಎಂದಿದ್ದಾರೆ- ಇದ್ದರೆ ಇರಲಿ ಬಿಡಿ!
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 12:47 pm, Fri, 14 July 23