Viral Video: ‘ಬೆಂಗಳೂರು ಅನ್ನೋ ತಾಯಿ ಯಾರನ್ನೂ ಬರೀಗೈಲೆ ಕಳಸೂದಿಲ್ಲ’

Woman Power : ಕುಷ್ಟಗಿಯ ಲಲಿತಮ್ಮ ಬೆಂಗಳೂರಿನಲ್ಲಿ ಇಟ್ಟಿಗೆ ಹೊತ್ತಿದ್ದಾರೆ, ರೋಗಿಗಳ ಸೇವೆ ಮಾಡಿದ್ದಾರೆ, ಹೋಟೆಲ್​ಗಳಲ್ಲಿ ದುಡಿದಿದ್ದಾರೆ. ನಂತರ ಸ್ವಂತ ಖಾನಾವಳಿಯ ಒಡತಿಯಾಗಿದ್ದಾರೆ. ದಿನಕ್ಕೆ 150 ಜನರು ಇವರ ಕೈರುಚಿಯನ್ನು ಉಣ್ಣುತ್ತಾರೆ.

Viral Video: 'ಬೆಂಗಳೂರು ಅನ್ನೋ ತಾಯಿ ಯಾರನ್ನೂ ಬರೀಗೈಲೆ ಕಳಸೂದಿಲ್ಲ'
ಬೆಂಗಳೂರಿನ ಬಸವೇಶ್ವರ ಖಾನಾವಳಿಯ ಒಡತಿ ಲಲಿತಮ್ಮ ಎಂ
Follow us
ಶ್ರೀದೇವಿ ಕಳಸದ
|

Updated on:Jul 12, 2023 | 5:58 PM

Bangalore: ಈ ಬೆಂಗಳೂರಿಗೆ ಬಂದು ಹಾಳಾದೆವು, ಈ ಜನ್ಮದಲ್ಲಿ ಇನ್ನೊಮ್ಮೆ ಇಲ್ಲಿ ಕಾಲಿಡುವುದಿಲ್ಲ. ಈ ಮಹಾನಗರವೆಂದರೆ ಎಂದರೆ ಬಕಾಸುರ, ಎಷ್ಟು ದುಡಿದರೂ ಸಾಲುವುದಿಲ್ಲ. ಈ ಬೆಂಗಳೂರು ನಮ್ಮಂಥವರಿಗಲ್ಲ, ಏನಿದ್ದರೂ ಮಾತಿನಲ್ಲಿ ಮನೆ ಕಟ್ಟುವವರಿಗೆ ಮಾತ್ರ… ಅಂತೆಲ್ಲ ಬೆಂಗಳೂರನ್ನು ಹಿಡಿಶಾಪ ಹಾಕುವ ಪರಊರಿಗರು ಅದೆಷ್ಟು ಕೋಟಿ ಇಲ್ಲ? ಆದರೆ ಬೆಂಗಳೂರನ್ನು ಎದೆಗಪ್ಪಿಕೊಳ್ಳುವವರು ಬೆರಳೆಣಿಕೆಯಷ್ಟು ಜನ ಮಾತ್ರ. ಉತ್ತರ ಕರ್ನಾಟಕದ (Uttara Karnataka) ಈ ಹೆಣ್ಣುಮಗಳೊಬ್ಬರು ಬೆಂಗಳೂರಿಗೆ ಕೈ ಎತ್ತಿ ಮುಗಿಯಬೇಕು ಎನ್ನುತ್ತಿದ್ದಾರೆ. ಯಾಕಿರಬಹುದು? ಈ ಕೆಳಗಿನ ಈ ವಿಡಿಯೋ ನೋಡಿ.

ಬೆಂಗಳೂರಿನ ಬನಶಂಕರಿ 3ನೇ ಹಂತದಲ್ಲಿರುವ ಕಾಮಾಕ್ಯ  ಚಿತ್ರಮಂದಿರದ ಎದುರಿಗೆ ಇವರ ಬಸವೇಶ್ವರ ಖಾನಾವಳಿ. ಈ ಪುಟ್ಟ ಖಾನಾವಳಿಯಲ್ಲಿ ಕಾಲಿಟ್ಟರೆ ತಾಯಿಹೃದಯದ ಈ ಲಲಿತಮ್ಮ ಎಂ ನಿಮ್ಮನ್ನು ಎದುರುಗೊಳ್ಳುತ್ತಾರೆ. ಕುಷ್ಟಗಿ ಮೂಲದ ಇವರು ಬೆಂಗಳೂರಿಗೆ ಬಂದು 15 ವರ್ಷಗಳಾದವು. ಆರಂಭದಲ್ಲಿ ಆರಂಭದಲ್ಲಿ ಗಾರೆ ಕೆಲಸ, ಆಸ್ಪತ್ರೆಯಲ್ಲಿ ಆಯಾ ಕೆಲಸ, ಹೋಟೆಲ್​ಗಳಲ್ಲಿ ಅಡುಗೆ ಕೆಲಸ ಮಾಡಿದರು. ನಂತರ ಮನೆಯಲ್ಲಿಯೇ ಉತ್ತರ ಕರ್ನಾಟಕದ ಅಡುಗೆ ತಯಾರಿಸಿ ಮಾರಾಟ ಮಾಡಿದರು. ನಾಲ್ಕು ವರ್ಷಗಳಿಂದೀಚೆಗೆ ಮಗ ಮತ್ತು ಗಂಡನೊಂದಿಗೆ ಸ್ವಂತ ಖಾನಾವಳಿ ತೆರೆದಿದ್ದಾರೆ.

ಇದನ್ನೂ ಓದಿ : Viral Video: ಕರುನಾಡ ಸರಸ್ವತಿ ಅಂಕಿತಾ ಕುಂಡುಗೆ ಅಭಿಮಾನಿಗಳಿಂದ ಖಡಕ್​ ಪತ್ರ 

‘ಅತ್ಕೊಂಡ ಬಂದಾಗ ಕಣ್ಣೀರು ಒರೆಸಿದ್ದು ಇದ ಬೆಂಗಳೂರು. ಈ ಬೆಂಗಳೂರಿಗೆ ಬರೀಗೈಲಿ ಯಾರರ ಬರಲಿ, ಈ ತಾಯಿ ಹಂಗೇ ಕಳಿಸೂದಿಲ್ಲ, ಅಕಿ ಒಂದು ತುತ್ತು ಅನ್ನಾ ಹಾಕೇ ಕಳಸ್ತಾಳ್ರೀ. ಹಿಂಗಾಗಿ ಬೆಂಗಳೂರಿಗೆ ಕೈ ಎತ್ತಿ ಮುಗೀಬೇಕ್ರಿ. ಬೆಂಗಳೂರಿಂದ ಹೊಟ್ಟಿಬಟ್ಟಿ ಕಂಡೆ, ನನ್ನ ಮಕ್ಕಳ ವಿದ್ಯಾಭ್ಯಾಸ ಆತು. ನನ್ನ ಜೀವನ ನೆಲಿಕಂಡ್ತು. ಇದು ದುಃಖದ ಕಣ್ಣೀರಲ್ರೀ, ಆನಂದಭಾಷ್ಪ’ ಎನ್ನುತ್ತಾರೆ ಲಲಿತಮ್ಮ.

‘ನನ್ನ ತಾಯಿ ಮತ್ತು ತಮ್ಮಂದಿರನ್ನು ಬಿಟ್ಟರೆ ನಾನು ಯಾರ ಹಂತೇಕನೂ ಸಹಾಯ ಮಾಡ್ರಿ ಅಂತ ಕೇಳ್ಕೋಲಿಲ್ಲ.  ನೀರ ಕುಡದು ಜೀವನಾ ಮಾಡೇನಿ ಆದ್ರ ಒಬ್ಬರ ಹತ್ರ ನನ್ನ ಸಪೋರ್ಟ್​ ಮಾಡ್ರಿ ಅಂತ ಕೇಳಿಲಿಲ್ಲ. ಲೋಕಾರೂಢೀನ ಐತಲ್ರೀ, ಹೊಸಾದೇನಲ್ಲ. ಎತ್ತಿ ಹಿಡಿಯಾಕ ಯಾರೂ ಬರೂದಿಲ್ಲ, ಎದ್ದ ನಿಂತಮ್ಯಾಲ ಎಲ್ಲಾರೂ ಬರ್ತಾರ. ಮಗನ ವಯಸ್ಸಿನವರು, ಅಮ್ಮನ ಪ್ರೀತಿ ತೋರಸ್ತೀರಿ ಅಂತಾರ್ರಿ. ದೊಡ್ಡವ್ರು, ನಿಮ್ಮ ಖಾನಾವಳಿಗೆ  ಬರೂದಕ್ಕ ಖುಷಿ ಆಗತೇತಿ, ಎಷ್ಟು ಛಂದ ಮಾತಾಡಸ್ತೀರಿ, ಬೇರೆ ಹೋಟೆಲ್​ದಾಗ ಹಿಂಗ ಮಾತಾಡ್ಸಾವ್ರು ಸಿಗೂದೇ ಇಲ್ರಿ ಅಂತಾರ್ರಿ. ಇನ್ನೇನ ಬೇಕ್ರಿ ಜೀವನದಾಗ?’ ಎನ್ನುತ್ತಾರೆ ಲಲಿತಮ್ಮ.

ಬೆಂಗಳೂರಿನಲ್ಲಿರುವವರಿಗೆ ಉತ್ತರ ಕರ್ನಾಟಕದ ಊಟ ಮಾಡಬೇಕೆನ್ನಿಸಿದರೆ ಖಂಡಿತ ಲಲಿತಮ್ಮನವರನ್ನು ಸಂಪರ್ಕಿಸಬಹುದು; 8660477654

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 5:51 pm, Wed, 12 July 23