Viral Video: ಕರುನಾಡ ಸರಸ್ವತಿ ಅಂಕಿತಾ ಕುಂಡುಗೆ ಅಭಿಮಾನಿಗಳಿಂದ ಖಡಕ್​ ಪತ್ರ

Singers : ''ಏಯ್ ತಂಗೀ, ಲತಮ್ಮನ್ನ ನೋಡು, ಜಾನಕಮ್ಮನ್ನ ನೋಡು, ಚೈತ್ರಮ್ಮನ್ನ ನೋಡು, ಸುಶೀಲಮ್ಮನ್ನ ನೋಡು... ಯಾಕ್ ಇಂಗೆ ಅರೆಬರೆ ಬಟ್ಟೆ ಹಾಕ್ಕಂಡ ಕುಣೀತೀಯಾ? ನಿನ್ನನ್ನ ಸರಸ್ವತಿ ಅನ್ಕಂಡಿದೀವಿ.''

Viral Video: ಕರುನಾಡ ಸರಸ್ವತಿ ಅಂಕಿತಾ ಕುಂಡುಗೆ ಅಭಿಮಾನಿಗಳಿಂದ ಖಡಕ್​ ಪತ್ರ
ಸ್ನೇಹಿತೆ ಅಶ್ವಿನಿಯೊಂದಿಗೆ ಗಾಯಕಿ ಅಂಕಿತಾ ಕುಂಡು.
Follow us
ಶ್ರೀದೇವಿ ಕಳಸದ
|

Updated on:Jul 12, 2023 | 2:04 PM

Reel: ಪ್ರಿಯ ಅಂಕಿತಾ ಕುಂಡು (Ankita Kundu), ನಿಮ್ಮ ಅಭಿಮಾನಿಗಳ ಪರವಾಗಿ ಈ ಪತ್ರವನ್ನು ಬರೆಯಲಾಗುತ್ತಿದೆ. ಇನ್ನುಮುಂದೆ ನೀವು ನಿಮ್ಮ ಶ್ರೋತೃಗಳು ನಿಮ್ಮನ್ನು ಯಾವ ರೀತಿ ನೋಡಲು ಬಯಸುತ್ತಾರೆಯೋ ಅದೇ ರೀತಿ ನೀವು ಇರತಕ್ಕಂಥದ್ದು. ಐವತ್ತು ವರ್ಷಗಳ ಹಿಂದೆ ಗಾಯಕಿಯರು ಹೇಗೆ ಉಡುಗೆತೊಡುಗೆ ತೊಡುತ್ತಿದ್ದರೋ ಹಾಗೆಯೇ ನೀವು ಈಗಲೂ ಇರತಕ್ಕಂಥದ್ದು. ತಲೆಗೆ ಎಣ್ಣೆ ಹಚ್ಚಿ ಜಡೆ ಹಾಕಬೇಕು. ಮುಡಿತುಂಬಾ ಮಲ್ಲಿಗೆ ಮುಡಿಯಬೇಕು. ಹಣೆಯ ಮೇಲೆ ಕಾಸಗಲ ಕುಂಕುಮ ಹಚ್ಚಿಕೊಳ್ಳಬೇಕು. ಮೈತುಂಬಾ ಸೆರಗು ಹೊದ್ದಿರಬೇಕು. ಅಪ್ಪಿತಪ್ಪಿಯೂ ನೀವು ನಿಮ್ಮ ಮೈ ಕುಣಿಸುವಂತಿಲ್ಲ. ಜೋರಾಗಿ ನಗುವಂತಿಲ್ಲ. ಏಕೆಂದರೆ ನೀವು ಕನ್ನಡಿಗರ ಕಣ್ಣಲ್ಲಿ ಸಾಕ್ಷಾತ್​ ಸರಸ್ವತೀ. ಇದೇ ನಿಮ್ಮ ಕೊನೆಯ ರೀಲ್​ ಆದಲ್ಲಿ ಒಳ್ಳೆಯದು!

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!
View this post on Instagram

A post shared by Ashwini Sharma (@ashwinioninsta)

ನೀವು ಪ್ರದರ್ಶನ ಕಲೆಗಳಲ್ಲಿ ಡಿಗ್ರೀ ಓದುತ್ತಿರಬಹುದು. ಅಲ್ಲಿ ಏನೇನೋ ಕಲೆ, ನೃತ್ಯ ಅಂತೆಲ್ಲ ಅಭ್ಯಾಸ ಮಾಡುತ್ತಿರಬಹುದು. ಹಾಗೆಂದು ನೀವು ಹೀಗೆಲ್ಲಾ ನಿಮ್ಮಿಷ್ಟ ಬಂದಂತೆ ರಸ್ತೆಯಲ್ಲಿ, ಟೆರೇಸಿನಲ್ಲಿ ಪಾಶ್ಚಾತ್ಯ ಹಾಡುಗಳಿಗೆ ಮನಬಂದಂತೆ ಕುಣಿಯುವಂತಿಲ್ಲ. ನಿಮ್ಮ ಗೆಳೆಯ ಗೆಳತಿಯರೊಂದಿಗೆ ನೀವು ಸಲಿಗೆಯಿಂದ ಇರುವಂತಿಲ್ಲ. ಇದು ನಮ್ಮ ರಾಜ್ಯದ ಘನತೆಯ ಪ್ರಶ್ನೆ. ಇನ್ನು ಮುಂದೆ ನೀವು ರಾತ್ರಿ ತುಂಡುಬಟ್ಟೆ ಹಾಕಿಕೊಂಡು ಲೈವ್​ ಬಂದರೆ ನಾವು ಸಿಡಿದೇಳಬೇಕಾಗುತ್ತದೆ. ಏಕೆಂದರೆ ನೀವು ನಮ್ಮ ನಾಡಿನ ಅಮೂಲ್ಯ ಆಸ್ತಿ. ನಾವಿದ್ದರೆ ನೀವು,  ನಾವು ಹೇಳಿದಂತೆ ನೀವು ಕೇಳದಿದ್ದರೆ ನಿಮ್ಮೊಳಗಿನ ಸರಸ್ವತಿ ಓಡಿಹೋಗಿಬಿಡುತ್ತಾಳೆ, ಎಚ್ಚರವಿರಲಿ!

ಇದನ್ನೂ ಓದಿ : Viral Video: ಸ್ವಾಮಿ ವಿವೇಕಾನಂದರನ್ನು ಗೇಲಿ ಮಾಡಿದ ಅಮೋಘ ಲೀಲಾ ದಾಸ್; ಇಸ್ಕಾನ್​ ಖಂಡನೆ

ಇತ್ತೀಚೆಗೆ ಹರೇ ರಾಮ ಹರೇ ಕೃಷ್ಣ ಅಂತೆಲ್ಲ ಶುರುಮಾಡಿದ್ದೀರಾ. ಪರ್ವಾಗಿಲ್ಲ ರಾಮ, ಕೃಷ್ಣ, ರಾಧೆಯನ್ನು ಭಜಿಸಿ, ಯಕ್ಷಗಾನದ ವೇಷ ಹಾಕುತ್ತೀರಾ, ಹಾಕಿ. ಆದರೆ ಮಕೇಬಾ ಗಿಕೇಬಾ ಅಂತೆಲ್ಲ ಹುಚ್ಚು ಹಿಡಿಸಿಕೊಂಡಿರೋ, ನಿಮ್ಮನ್ನು ನಿಮ್ಮ ರಾಜ್ಯಕ್ಕೆ ವಾಪಾಸ್​ ಕಳಿಸಲಾಗುವುದು. ಇನ್ನು ಬೀದಿಗಳಲ್ಲಿ ಕುಳಿತು ನಾಯಿ, ಬೆಕ್ಕಿನ ಮರಿಗಳನ್ನೆಲ್ಲ ಮುದ್ದಿಸುತ್ತೀರಿ, ವೀಣಾಪಾಣಿಗೆ ಇದೆಲ್ಲ ಶೋಭಿಸದು. ಬೇಕಿದ್ದರೆ ಒಂದಲ್ಲ ಎರಡಲ್ಲ ಸಾವಿರಾರು ಜೀವಂತ ನವಿಲುಗಳನ್ನೇ ನಿಮಗೆ ಉಡುಗೊರೆಯಾಗಿ ಕೊಡುವೆವು!

ಇದನ್ನೂ ಓದಿ : Viral Video: ಭಕ್ತಕಳ್ಳ; ಹನುಮಾನ್ ಚಾಲೀಸಾ ಪಠಿಸಿ ಕಾಣಿಕೆ ಡಬ್ಬಿಯಿಂದ ರೂ. 5,000 ಕದ್ದ ಕಳ್ಳ 

ಇನ್ನುಮುಂದೆ ನೀವು ಕೈಯಲ್ಲಿ ಟೊಂಯ್​ ಟೊಂಯ್ ಎಂದು ಗಿಟಾರ್ ಹಿಡಿದು ಹಾಡುವುದನ್ನು ನಾವು ಉಗ್ರವಾಗಿ ಖಂಡಿಸುತ್ತೇವೆ. ಸಾಕ್ಷಾತ್​ ಸರಸ್ವತಿಯು ನಮ್ಮ ಮಡಿಲಿಗೆ ಹಾಕಿರುವ ನಮ್ಮ ಕೈಗೂಸು ನೀವು. ಆ ಮಾತೆಯ ಹಾಗೆಯೇ ನೀವು ವೀಣೆ ನುಡಿಸಿಕೊಂಡು ಹಾಡಬೇಕು. ನೀವು ಹೂಂ ಎನ್ನಿ, ಆ ವೀಣೆಯ ಅಪ್ಪನಂಥ ವೀಣೆಯನ್ನು ನಾವು, ಅಂದರೆ ನಿಮ್ಮ ಅಭಿಮಾನಿಗಳು ದೊಡ್ಡಬಳ್ಳಾಪುರದ ಸಿಂಪಾಡಿಪುರದಿಂದ ತರಿಸಿ ಕೊಡುತ್ತೇವೆ! ನಿಮ್ಮ ಉತ್ತರದ ನಿರೀಕ್ಷೆಯಲ್ಲಿ…

ಇಂತಿ ನಿಮ್ಮ ಉಗ್ರ ಅಭಿಮಾನಿಗಳು, ಕರ್ನಾಟಕ ರಾಜ್ಯ, ಭಾರತ ದೇಶ (ಎಣಿಕೆಗೆ ಸಿಗದಷ್ಟು ಸಹಿಗಳು ಸಂಗ್ರಹವಾಗಿವೆ)

ಮತ್ತಷ್ಟು ವೈರಲ್​ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 1:58 pm, Wed, 12 July 23