ಮುಂಬೈ: ಭಾರತದಲ್ಲಿ ಕೊರೊನಾ ಎರಡನೇ ಅಲೆ ನಿರೀಕ್ಷೆಗೂ ಮೀರಿದ ಉಪಟಳ ನೀಡುತ್ತಿದೆ. ದೇಶದ ಹಲವು ರಾಜ್ಯಗಳು ಸೋಂಕು ನಿಯಂತ್ರಣಕ್ಕಾಗಿ ಕಳೆದ ಬಾರಿಯಂತೆಯೇ ಕಠಿಣ ನಿಯಮಾವಳಿಗಳ ಮೊರೆ ಹೋಗಿವೆ. ಆದರೆ, ಈ ಬಾರಿ ಜನರು ಕೊರೊನಾ ಬಗ್ಗೆ ನಿರ್ಲಕ್ಷ್ಯ ತೋರುತ್ತಿರುವುದು ಭಾರೀ ಚಿಂತೆಯನ್ನು ಉಂಟುಮಾಡಿದ್ದು, ಹೀಗೆ ನಿಯಮ ಉಲ್ಲಂಘಿಸುವವರನ್ನು ನಿಯಂತ್ರಿಸಲು ಬಾಂಬೆ ಹೈ ಕೋರ್ಟ್ ಮಹತ್ವದ ಆದೇಶವೊಂದನ್ನು ಹೊರಡಿಸಿದೆ. ಮಾಸ್ಕ್ ಧರಿಸದವರ ವಿರುದ್ಧ, ಕೊರೊನಾ ಕರ್ಫ್ಯೂ ಉಲ್ಲಂಘನೆ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಮಹಾರಾಷ್ಟ್ರ ರಾಜ್ಯದ ಪ್ರಮುಖ ಜಿಲ್ಲೆಗಳ ಪೊಲೀಸರಿಗೆ ಹೈಕೋರ್ಟ್ ಸೂಚನೆ ನೀಡಿದೆ.
ಗಲ್ಲದ ಕೆಳಗೆ ಮಾಸ್ಕ್ ಧರಿಸುವವರು, ಮೂಗು ತೋರಿಸಿಕೊಂಡು ಓಡಾಡುವವರನ್ನು ಕೊರೊನಾ ಸೂಪರ್ ಸ್ಪ್ರೆಡರ್ಸ್ ಎಂದೇ ಪರಿಗಣಿಸಬೇಕು. ಅಂತಹವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ನ್ಯಾಯಮೂರ್ತಿ ರವೀಂದ್ರ ಘುಜೆ ಮತ್ತು ಬಿಯು ದೇಬಡ್ವಾರ್ ಅವರನ್ನೊಳಗೊಂಡ ವಿಭಾಗೀಯ ಪೀಠ ಆದೇಶ ನೀಡಿದೆ.
ಇಷ್ಟೇ ಅಲ್ಲದೇ, ನಿಯಮ ಉಲ್ಲಂಘನೆ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಲು ಅಡ್ಡಿಪಡಿಸುವ ಯಾವುದೇ ರಾಜಕಾರಣಿ ಅಥವಾ ಜನಪ್ರತಿನಿಧಿಗಳ ವಿರುದ್ಧವೂ ಕಾರ್ಯಕ್ಕೆ ಅಡ್ಡಿಪಡಿಸಿದ ಆಧಾರದ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು. ಯಾವುದೇ ಸಚಿವ ಅಥವಾ ಚುನಾಯಿತ ಪ್ರತಿನಿಧಿಗಳು ಈ ಕಾರ್ಯಕ್ಕೆ ಅಡ್ಡಿಪಡಿಸಕೂಡದು ಎಂದು ಬಾಂಬೆ ಹೈಕೋಟ್ ನಿರ್ದೇಶನ ನೀಡಿದೆ.
ಇದೇ ವಿಚಾರದಲ್ಲಿ ಮುಂದುವರೆದು ಅಭಿಪ್ರಾಯ ವ್ಯಕ್ತಪಡಿಸಿದ ನ್ಯಾಯಮೂರ್ತಿ ರವೀಂದ್ರ ಘುಜೆ, ನಾನು ಜಾಗಿಂಗ್ ಹೋಗುವಾಗಲೂ ಮಾಸ್ಕ್ ಧರಿಸುವುದನ್ನು ಮರೆಯುವುದಿಲ್ಲ. ಆದರೆ, ಎಷ್ಟೋ ಜನ ಯುವಕರು ಮಾಸ್ಕ್ ಇಲ್ಲದೇ, ಹೆಲ್ಮೆಟ್ ಕೂಡಾ ಇಲ್ಲದೇ ಮೂವರು, ನಾಲ್ವರು ಬೈಕ್ನಲ್ಲಿ ಕುಳಿತು ಹೋಗುವುದು ಕಾಣಿಸುತ್ತದೆ. ಜನರು ನಿಯಮ ಪಾಲಿಸುವತ್ತ ಗಮನ ನೀಡಲೇಬೇಕಿದೆ. ಈ ವಿಚಾರದಲ್ಲಿ ಶಿಸ್ತು ಅಗತ್ಯ ಎಂದು ಹೇಳಿದ್ದಾರೆ.
ಇನ್ನು ಇದೇ ವೇಳೆ ಮರಾಠವಾಡ ಜಿಲ್ಲೆಯಲ್ಲಿ ಕೊರೊನಾ ನಿರ್ವಹಣೆಯ ಕುರಿತಾಗಿ ದಿನಪತ್ರಿಕೆಗಳಲ್ಲಿ ಪ್ರಕಟವಾಗಿದ್ದ ವರದಿ ಆಧರಿಸಿ ದಾಖಲಿಸಿಕೊಂಡ ಸ್ವಯಂಪ್ರೇರಿತ ದೂರಿನಲ್ಲಿ ಕೆಲ ನಿರ್ದೇಶನಗಳನ್ನು ನ್ಯಾಯಾಲಯ ನೀಡಿದೆ. ಜತೆಗೆ, ಇದರಲ್ಲಿ ಕೊರೊನಾ ಸೋಂಕಿತರ ಅಂತ್ಯಕ್ರಿಯೆ, ಕಾಳಸಂತೆಯಲ್ಲಿ ಮಾರಾಟವಾಗುತ್ತಿರುವ ರೆಮ್ಡೆಸಿವಿರ್, ಆ್ಯಂಟಿ ವೈರಲ್ ಡ್ರಗ್, ಆಮ್ಲಜನಕ ಕೊರತೆ ಬಗ್ಗೆಯೂ ನ್ಯಾಯಾಲಯದ ಗಮನಕ್ಕೆ ತರಲಾಗಿದೆ.
ವಿಚಾರಣೆಯ ಹೊತ್ತಿನಲ್ಲಿ ವಿಭಾಗೀಯ ಪೀಠವು ದ್ವಿಚಕ್ರದಲ್ಲಿ ಹೆಲ್ಮೆಟ್ ಧರಿಸದೇ ಓಡಾಡುವವರು ಹಾಗೂ ಸ್ವಂತ ವಾಹನದಲ್ಲಿದ್ದ ಕಾರಣಕ್ಕೆ ಮಾಸ್ಕ್ ಧರಿಸದೇ ಹೋಗುವವರ ವಿರುದ್ಧ ಕ್ರಮ ಕೈಗೊಳ್ಳಲು ಸೂಚಿಸಿದೆ. ಅಲ್ಲದೇ ಸರ್ಕಾರ ಸೂಚಿಸಿದ ಸಮಯದ ಹೊರತಾಗಿ ಹೊರಗೆ ಓಡಾಡುವವರು ಸೂಕ್ತ ಕಾರಣ ತಿಳಿಸಬೇಕಾಗಿದ್ದು, ಆಧಾರ್ ಕಾರ್ಡ್ ತೋರಿಸಿ ಪ್ರಯಾಣಿಸಬೇಕೆಂದು ಅಭಿಪ್ರಾಯಪಟ್ಟಿದೆ.
ಇದನ್ನೂ ಓದಿ:
ಮನೆಯೊಳಗೆ ಮಾಸ್ಕ್ ಧರಿಸಿರುವುದು ಎಷ್ಟರ ಮಟ್ಟಿಗೆ ಪರಿಣಾಮಕಾರಿ? ಅಧ್ಯಯನಗಳು ಏನು ಹೇಳುತ್ತವೆ?
ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯವಲ್ಲ; ಅಚ್ಚರಿಯ ನಿಲುವು ತಳೆದ ಇಸ್ರೇಲ್ ದೇಶ