Viral Video: ಶಾಂತಿಮಂತ್ರದ ನಂತರವೇ ಊಟಮಾಡುವ ಸನಾತನ ಸಂಸ್ಕಾರದ ಶ್ವಾನ

Sanatan : “ಶಾಂತಿ ಮಂತ್ರವನ್ನು ತಪ್ಪಾಗಿ ಉಚ್ಚರಿಸಿದ್ದಾರೆ. ಇಷ್ಟಕ್ಕೂ ಇದನ್ನು ಭೋಜನದ ವೇಳೆಯಲ್ಲಿ ಹೇಳುವುದೇ? “ಇದು ಸಂಸ್ಕಾರವೂ ಅಲ್ಲ, ಏನೂ ಅಲ್ಲ, ಆ ನಾಯಿಯೇನು ತನ್ನ ಸಂತತಿಗೆ ಸನಾತನಧರ್ಮವನ್ನು ಕಲಿಸಿಕೊಡುವುದೇ?”

Viral Video: ಶಾಂತಿಮಂತ್ರದ ನಂತರವೇ ಊಟಮಾಡುವ ಸನಾತನ ಸಂಸ್ಕಾರದ ಶ್ವಾನ
ಓಂ ಶಾಂತಿಃ ಎಂದು ಹೇಳುವ ತನಕ ಊಟ ಮಾಡಬಾರದು!

Updated on: Jul 14, 2023 | 5:46 PM

Dog Lover : ಇಲ್ಲೊಂದು ವಿಶೇಷ ಊಟದ ಪಂಕ್ತಿಯಿದೆ. ಮನೆಯೊಂದರ ಪಡಸಾಲೆಯಂತೆ ಕಾಣುವ ಕೋಣೆಯಲ್ಲಿ ನೆಲದ ಮೇಲೆ ಇಬ್ಬಿಬ್ಬರಂತೆ ಎದುರಾಗಿ ನಾಲ್ವರು ಊಟದ ತಟ್ಟೆಯೆದುರು ಕೂತಿದ್ದಾರೆ. ಎಡಗಡೆ ಒಬ್ಬ ಎಳೆಯ ಹುಡುಗಿ ಹಾಗೂ ಹುಡುಗ, ಅಕ್ಕ ತಮ್ಮ ಇರಬೇಕು. ಅವರೆದುರು ಹದಿವಯದ ಅವರಣ್ಣ ಹಾಗೂ ಅವನ ಪಕ್ಕದಲ್ಲಿ ಪವಡಿಸಿದ ಒಂದು ನಾಯಿಮರಿ (Puppy). ಮೂವರೂ ಮಕ್ಕಳು ತಟ್ಟೆಯೆದುರು ಕೈಜೋಡಿಸಿ “ಓಂ ಸಹನಾವವತು ಸಹನೌಭುನಕ್ತು..” ಎಂದು ಹಿರಿಯರೊಬ್ಬರು ಹೇಳಿಕೊಡುತ್ತಿರುವ ಶಾಂತಿಮಂತ್ರವನ್ನು ಸ್ತುತಿಸುತ್ತಿದ್ದಾರೆ. ತನ್ನ ತಟ್ಟೆಯನ್ನು ಆಸೆಕಣ್ಣುಗಳಿಂದ ನೋಡುತ್ತ ನಾಯಿ ಮುಖವನ್ನು ನೆಲಕ್ಕೆ ಹಚ್ಚಿ ವಿಶ್ರಾಮ ಭಂಗಿಯಲ್ಲಿದೆ. ಕೊನೆಯ “ಶಾಂತಿಃ” ಕಿವಿಗೆ ಬಿದ್ದಕೂಡಲೇ ಚುರುಕಾದ ಅದು ಎದ್ದು ನಿಲ್ಲುತ್ತದೆ. “ಹಾಂ… ತಿನ್ನು..” ಎಂಬಪ್ಪಣೆ ಬಂದ ಕೂಡಲೇ ತನ್ನ ತಟ್ಟೆಗೆ ಬಾಯಿ ಹಾಕುತ್ತದೆ.

ಈ ವೈರಲ್ ವಿಡಿಯೋ ನೋಡಿದ ನೆಟ್ಟಿಗರು ಚಕಿತರಾಗಿದ್ದಾರೆ. “ವೈದಿಕ ಸಂಸ್ಕಾರ,” “ಒಂದು ಸನಾತನಿ ಕುಟುಂಬದ ಶಿಸ್ತು ಮತ್ತು ಪ್ರಭಾವವೆಂದರೆ ಇದೇ!” “ಜ್ಞಾನಿ ನಾಯಿ” ಎಂದೆಲ್ಲ ಹೊಗಳಿದ್ದಾರೆ. ಎಂದಿನಂತೆ ಕೆಲವರು ತಕರಾರನ್ನೂ ತೆಗೆದಿದ್ದಾರೆ. “ಶಾಂತಿ ಮಂತ್ರವನ್ನು ತಪ್ಪಾಗಿ ಉಚ್ಚರಿಸಿದ್ದಾರೆ. ಇಷ್ಟಕ್ಕೂ ಇದನ್ನು ಭೋಜನದ ವೇಳೆಯಲ್ಲಿ ಹೇಳುವುದೇ? ಛೇ ಛೇ..”, “ಇದು ಸಂಸ್ಕಾರವೂ ಅಲ್ಲ, ಏನೂ ಅಲ್ಲ, ಆ ನಾಯಿಯೇನು ತನ್ನ ಸಂತತಿಗೆ ಸನಾತನಧರ್ಮವನ್ನು ಕಲಿಸಿಕೊಡುವುದೇ?” “ಅಯ್ಯೋ, ಇದು ಪ್ರಾಣಿಸಹಜ ಪ್ರತಿಸ್ಪಂದನೆ. ಈ ಮಂತ್ರದ ಬದಲು ಮತ್ತೇನೋ ಹಾಳುಮೂಳು ದನಿ ತೆಗೆದಿದ್ದರೂ ಅದು ಹೀಗೆಯೇ ಮಾಡುತ್ತಿತ್ತು” ಎಂದು ಒಂದಿಬ್ಬರು ಅಧಿಕಪ್ರಸಂಗಿಗಳು ತಮ್ಮ ಅಗಾಧ ಪಾಂಡಿತ್ಯ ಪ್ರದರ್ಶನ ಮಾಡಿದ್ದಾರೆ.

ಏನೇ ಆಗಲಿ ನಾಯಿಯ ತಾಳ್ಮೆ, ಶಿಸ್ತು ಮೆಚ್ಚಬೇಕಾದದ್ಧೇ. ಈ ವಿಡಿಯೋದ ಬಗ್ಗೆ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 5:38 pm, Fri, 14 July 23