Artificial Intelligence : ‘ಈ ಕಾಲಘಟ್ಟದಲ್ಲಿ ಬದುಕಿದ್ದು ಒಂದು ಮಹಾ ಪರಿವರ್ತನೆಯ ಅಂಗವಾಗಿರುವುದೇ ಸಮ್ಮೋಹಕ. ಇದು ಒಳಿತೋ ಕೆಡಕೋ ಗೊತ್ತಿಲ್ಲ, ಆದರೆ ಆಗುತ್ತಿರುವುದಂತೂ ನಿಜ. ಜಗತ್ತು ಬದಲಾಗುತ್ತಿರುವುದಷ್ಟೇ ಅಲ್ಲ ಅತಿ ವೇಗದಿಂದ ಬದಲಾಗುತ್ತಿದೆ.’ ಇದು ಕೃತಕ ಬುದ್ಧಿಮತ್ತೆಯ (AI) ಹೊಸ ಬೆಳವಣಿಗೆಗಳನ್ನು ಗಮನಿಸುತ್ತಿರುವ ವೃತ್ತಿಪರ ಕಲಾವಿದರೊಬ್ಬರ ಒಕ್ಕಣೆ. ಟೆಸ್ಲಾ, ಸ್ಪೇಸ್‌ಎಕ್ಸ್, ಮತ್ತು ಇತ್ತೀಚೆಗೆ ಟ್ವಿಟರ್ ಖ್ಯಾತಿಯ ಎಲಾನ್ ಮಸ್ಕ್ (Elon Musk) ಉತ್ತರ ಭಾರತೀಯ ಶೈಲಿಯಲ್ಲಿ ಮದುವೆಯಾದರೆ ಯಾವ ರೀತಿಯ ಪೋಷಾಕು ಧರಿಸುತ್ತಾರೆ, ಹೇಗೆ ಕಾಣುತ್ತಾರೆ, ಊಹಿಸಬಲ್ಲಿರಾ? ಕೃತಕ ಬುದ್ಧಿಮತ್ತೆಯ ಹೊಸ ಬೆಳವಣಿಗೆಗಳಾದ ಜಿಪಿಟಿ ಮತ್ತು ಉತ್ಪಾದಕ ಕೃತಕ ಬುದ್ಧಿಮತ್ತೆ (Generative AI) ನಿಮ್ಮ ಕುತೂಹಲವನ್ನು ತಣಿಸುವುದಲ್ಲದೇ ನೀವು ಬೆಚ್ಚಿಬೀಳುವಂತೆಯೂ ಮಾಡಬಲ್ಲುವು.
‘ನನ್ನ ಕಲ್ಪನೆಯಲ್ಲಿ ಎಲಾನ್ ಮಸ್ಕ್‌ನ ಭಾರತೀಯ ವಿವಾಹ’ ಎಂಬ ಒಕ್ಕಣೆಯ ಇನ್ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಕಲಾವಿದರೊಬ್ಬರು AI ಸಹಾಯದಿಂದ ಮಸ್ಕ್‌ನನ್ನು ಶೇರವಾನಿಯಲ್ಲಿ ಸಿಂಗರಿಸಿ, ಮದುಮಗನಂತೆ ಕುದುರೆಯೇರಿಸಿ, ತಮ್ಮ ತಾಳಕ್ಕೆ ತಕ್ಕಂತೆ ಕುಣಿಸಿದ್ದಾರೆ. ಇದು ಸಾಮಾಜಿಕ ಜಾಲತಾಣಗಳಲ್ಲೆಲ್ಲ ವೈರಲ್ ಆಗಿ ಭಾರೀ ಮೋಡಿ ಮಾಡಿದೆ.
ಇದನ್ನೂ ಓದಿ : Viral: ನನ್ನನ್ನು ಮದುವೆಯಾಗುವೆಯಾ? ಡಬ್ಲಿನ್ ವಿಮಾನ ನಿಲ್ದಾಣದಲ್ಲಿ ಹೀಗೊಂದು ಪ್ರೇಮನಿವೇದನಾ ಪ್ರಸಂಗ
‘ಒಂದೊಮ್ಮೆ ನಮ್ಮ ಕಲ್ಪನೆಗಳನ್ನು ಕುಂಚದಿಂದ ಹಾಳೆಯಲ್ಲಿ ಮೂಡಿಸುತ್ತಿದ್ದೆವು, ಈಗ ನಮ್ಮ ಕನಸುಗಳನ್ನು AIಗೆ ಸಂವಹಿಸಿ ಅವನ್ನು ನನಸಾಗಿಸಬಹುದು’ ಎಂದು ತಮ್ಮ ಕಲಾಪಯಣವನ್ನು ವ್ಯಾಖ್ಯಾನಿಸಿದ್ದಾರೆ. ‘ಇದು ನಿಜವಾಗಿಯೂ AI ಸೃಷ್ಟಿಸಿದ್ದು ಎಂದು ನಂಬಲೇ ಆಗುತ್ತಿಲ್ಲ,’ ಎಂದಿದ್ದಾರೆ ಅನೇಕರು. ‘ನಮ್ಮ ಮುಂದಿರುವುದು ಯಾವುದು ಅಸಲಿ ಯಾವುದು ನಕಲಿ ಎಂದು ಗೊತ್ತಾಗದೇ ಹುಚ್ಚೆಬ್ಬಿಸುವ ಕಾಲ,’ ಎಂದು ಭವಿಷ್ಯ ನುಡಿದಿದ್ದಾರೆ ಕೆಲವರು.
ಇದನ್ನು ಓದಿ : Viral Video: 22 ವರ್ಷಗಳ ನಂತರ ಒಡಹುಟ್ಟಿದವರ ಪುನರ್ಮಿಲನ
ಸೋಶಿಯಲ್ ಮೀಡಿಯಾದ ಮಿತಿಮೀರಿದ ಬಳಕೆಯ, ಸುಳ್ಳುಸುದ್ದಿಗಳ ಸತತ ಹರಡುವಿಕೆಯ ಈ ಕಾಲದಲ್ಲಿ ಇಂಥ AI ತಂತ್ರಜ್ಞಾನಗಳು ಮಂಗನ ಕೈಯ್ಯಲ್ಲಿ ಕೊಟ್ಟ ಮಾಣಿಕ್ಯವಾಗುತ್ತವೋ? ಅಥವಾ ಮನುಷ್ಯನನ್ನು ಇನ್ನೂ ಹೆಚ್ಚಿನ ಪ್ರಗತಿಯತ್ತ ಒಯ್ಯುವ ದಾರಿದೀಪಗಳಾಗುತ್ತವೋ? ಉತ್ತರ ಯಾರಿಗೂ ಗೊತ್ತಿಲ್ಲ. ಸದ್ಯಕ್ಕೆ ಮೇಲಿನ ಚಿತ್ರಗಳನ್ನು ನೋಡಿ ನಿಮಗೇನನ್ನಿಸಿತು? ತಿಳಿಸಿ.
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 3:04 pm, Wed, 31 May 23